ಪರಂವಾ ಸ್ಟುಡಿಯೋಸ್ನ ‘ಬ್ಯಾಚಲರ್ ಪಾರ್ಟಿ’ ಮತ್ತು ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಗಳಿಗೆ ಒಂದೇ ದಿನ ಮುಹೂರ್ತವಾಗಿ, ಒಂದೇ ದಿನ ಕುಂಬಳಕಾಯಿ ಒಡೆಯಲಾಗಿತ್ತು. ಈ ಪೈಕಿ ‘ಬ್ಯಾಚಲರ್ ಪಾರ್ಟಿ’ ಚಿತ್ರವು ಮೊದಲು ಬಿಡುಗಡೆಯಾಗುತ್ತಿದೆ. ಜನವರಿ 26ಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಮಂಗಳವಾರ, ಶಂಕರ್ ನಾಗ್ ಚಿತ್ರಮಂದಿರದಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.
ರಕ್ಷಿತ್ ಕಿರುಚಿತ್ರ ಮಾಡುತ್ತಿದ್ದ ದಿನಗಳಿಂದಲೇ ಅಭಿಜಿತ್ ಪರಿಚಯವಿತ್ತಂತೆ. ‘’ಕಿರಿಕ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳಲ್ಲಿ ಒನ್ ಲೈನ್ ಪಂಚಿಂಗ್ ಡೈಲಾಗ್ ಗಳು ಅಭಿಜಿತ್ ಅವರ ಕೊಡುಗೆ. ತುಂಬಾ ದಿನಗಳಿಂದ ನಾನು ಅಭಿಜಿತ್ ಅವರಿಗೆ ನಿರ್ದೇಶನ ಮಾಡಲು ಹೇಳುತ್ತಿದ್ದೆ. ಈಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನೂ ದಿಗಂತ್ ಹಾಗೂ ಯೋಗಿ ಇಬ್ಬರು ಅದ್ಭುತ ಕಲಾವಿದರು. ನಾನು ಅವರಿಬ್ಬರ ಚಿತ್ರಗಳನ್ನು ನೋಡಿ ಬಹಳ ಇಷ್ಟಪಟ್ಟಿದ್ದೇನೆ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ’ ಎಂದರು ನಿರ್ಮಾಪಕ ರಕ್ಷಿತ್ ಶೆಟ್ಟಿ.
ಲಾಕ್ ಡೌನ್ ಸಮಯದಲ್ಲಿ ಈ ಸಿನಿಮಾದ ಕಥೆ ಹುಟ್ಟಿದ್ದು ಎಂದು ಮಾತನಾಡಿದ ನಿರ್ದೇಶಕ ಅಭಿಜಿತ್ ಮಹೇಶ್, ‘ಇದೊಂದು ಪಕ್ಕಾ ಎಂಟರ್ ಟೈನರ್ ಸಿನಿಮಾ. ಪ್ರೇಕ್ಷಕರು ಕೊಡುವ ದುಡ್ಡಿಗೆ ಖಂಡಿತ ಮೋಸ ಆಗುವುದಿಲ್ಲ. ನಿರ್ದೇಶನ ಮಾಡಲು ಅವಕಾಶ ನೀಡಿದ ರಕ್ಷಿತ್ ಶೆಟ್ಟಿ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ’ ಎಂದರು.
ಯೋಗಿ ಪಾತ್ರವನ್ನು ಮೊದಲು ರಿಷಭ್ ಮಾಡಬೇಕಿರುವುದು ಗೊತ್ತಿರುವ ವಿಷಯವೇ. ಈ ವಿಷಯವನ್ನು ಹೇಳಿಕೊಂಡ ಯೋಗಿ, ‘ನನ್ನ ಪಾತ್ರ ರಿಷಭ್ ಶೆಟ್ಟಿ ಅವರು ಮಾಡಬೇಕಿತ್ತು. ಅವರು ‘ಕಾಂತಾರ’ದಲ್ಲಿ ಬ್ಯುಸಿಯಾದ ಕಾರಣ ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಪಾತ್ರ ತುಂಬಾ ಚೆನ್ನಾಗಿದೆ. ನಾನು ಹಾಗೂ ದಿಗಂತ್ 15 ವರ್ಷಗಳ ಸ್ನೇಹಿತರು. ಆದರೆ, ಒಂದು ಚಿತ್ರದಲ್ಲೂ ಒಟ್ಟಿಗೆ ನಟಿಸಿರಲಿಲ್ಲ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿರುವುದು ಖುಷಿಯಾಗಿದೆ’ ಎಂದರು ‘ಲೂಸ್ ಮಾದ’ ಯೋಗಿ.
ದಿಗಂತ್ ಇದಕ್ಕೂ ಮುನ್ನ ರಕ್ಷಿತ್ ನಿರ್ಮಾಣದ ‘ಕನಸೊಂದು ಶುರುವಾಗಿದೆ’ ಚಿತ್ರದಲ್ಲಿ ನಟಿಸಿದ್ದರು. ‘ಪರಂವಾ ಸ್ಟುಡಿಯೋಸ್ನಲ್ಲಿ ನನ್ನದು ಇದು ಎರಡನೇ ಚಿತ್ರ. ಯೋಗಿ ಹಾಗೂ ನಾನು ಒಟ್ಟಿಗೆ ನಟಿಸಿರುವ ಮೊದಲ ಚಿತ್ರ. ಅಭಿಜಿತ್ ಮಹೇಶ್ ಅವರ ನಿರ್ದೇಶನದಲ್ಲಿ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರೀಕರಣದ ಸಮಯ ಬಹಳ ಚೆನ್ನಾಗಿತ್ತು’ ಎಂದರು ದಿಗಂತ್.
ಜಿ.ಎಸ್. ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚಲರ್ ಪಾರ್ಟಿ’ ಚಿತ್ರದಲ್ಲಿ ದಿಗಂತ್, ‘ಲೂಸ್ ಮಾದ’ ಯೋಗಿ, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಸಿರಿ ರವಿಕುಮಾರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ರಾಮ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.


