ನಾವು 15 ದಿನ ಕೇರ್ ಆಫ್‍ ಫುಟ್‍ಪಾತ್‍ ಆಗಿದ್ವಿ: ಅಚ್ಯುತ್‍

ಚಂದನವನ, ಸಿನಿ ಸುದ್ದಿ

ಪರಂವಾ ಸ್ಟುಡಿಯೋಸ್‍ನಡಿ ರಕ್ಷಿತ್‍ ಶೆಟ್ಟಿ ನಿರ್ಮಿಸಿರುವ ‘ಬ್ಯಾಚಲರ್‍ ಪಾರ್ಟಿ’ ಚಿತ್ರ ಜನವರಿ 26ಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಮಂಗಳವಾರ, ಶಂಕರ್‍ ನಾಗ್‍ ಚಿತ್ರಮಂದಿರದಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.

ಈ ಸಮಾರಂಭಕ್ಕೆ ತಡವಾಗಿ ಬಂದರು ಅಚ್ಯುತ್‍ ಕುಮಾರ್. ತಡವಾದರೂ ಅವರು ತಮ್ಮ ಮಾತುಗಳಿಂದ ನೆರೆದಿದ್ದವರನ್ನೆಲ್ಲಾ ರಂಜಿಸಿದರು. ಥಾಯ್ಲೆಂಡ್‍ಗೆ ಚಿತ್ರೀಕರಣಕ್ಕೆ ಹೋಗಿದ್ದ ಸಂದರ್ಭದಲ್ಲಿ ಏನೆಲ್ಲಾ ಆಯಿತು ಎಂದು ಹೇಳಿ ಎಲ್ಲರನ್ನೂ ನಗಿಸಿದರು.

‘ಚಿತ್ರೀಕರಣ ಬಹಳ ಮಜವಾಗಿತ್ತು. ದಿಗಂತ್‍ ಮತ್ತು ಯೋಗಿ ಪಾರ್ಟಿ ಮೂಡ್‍ನಲ್ಲೇ ಇದ್ದರು. ನಿರ್ದೇಶಕರು ಬಹಳ ಗಂಭೀರ ಸ್ವಭಾವದವರು. ಆದರೆ, ಕಾಮಿಡಿ ಚಿತ್ರ ಮಾಡಿದ್ದಾರೆ. ನಾನು ನಟಿಸಿದ್ದಕ್ಕಿಂತ ಹೆಚ್ಚಾಗಿ ಅವರನ್ನು ಸಂತೋಷವಾಗಿಡೋಕೆ ಪ್ರಯತ್ನ ಮಾಡಿದ್ದೇ ಹೆಚ್ಚು. ಅರವಿಂದ್ ಪ್ಯಾನ್‍ ಇಂಡಿಯಾ ಕ್ಯಾಮೆರಾಮ್ಯಾನ್‍ ಆಗಿರೋದ್ರಿಂದ ಅವರು ಇನ್ನೂ ಗಂಭೀರ. ಇಬ್ಬರದ್ದೂ ಬಹಳ ಒಳ್ಳೆಯ ಜೋಡಿ. ನಾನು ಎಲ್ಲಿ ಬಂದು ಲಾಕ್‍ ಆದೆನಪ್ಪಾ ಅನಿಸೋದು. ಆದರೆ, ಬಹಳ ಚೆನ್ನಾಗಿ ಕೆಲಸ ಮಾಡಿಸಿದ್ದಾರೆ’ ಎಂದು ಹೇಳಿಕೊಂಡರು.

ನಿರ್ಮಾಪಕರಿಗೆ ಹೊರೆ ಆಗದ ಹಾಗೆ ನಾವೆಲ್ಲ ಸಹಕಾರ ಕೊಟ್ಟಿದ್ದೇವೆ ಎಂದ ಅವರು, ‘ನಾವು ಚಿತ್ರೀಕರಣ ಮಾಡಿದ್ದು ಹೊರದೇಶ ಬೇರೆ. ಅಲ್ಲಿ ನಮಗೆ ಮನೆ ಇಲ್ಲ, ಮಠ ಇಲ್ಲ, ಯಾರ ಪರಿಚಯವೂ ಇಲ್ಲ. ಬೆಳಿಗ್ಗೆ ಆರಕ್ಕೆ ಎಬ್ಬಿಸಿ ಕರೆದುಕೊಂಡು ಹೋಗೋರು. ರಾತ್ರಿ 12 ಆದರೂ ಆಯ್ತು, ಒಂದಾದರೂ ಆಯ್ತು, ಎರಡಾದರೂ ಆಯ್ತು. ಒಟ್ಟಾರೆ ದಿನ ಚಿತ್ರೀಕರಣ ಮಾಡುತ್ತಿದ್ದರು. ಒಬ್ಬ ಮ್ಯಾನೇಜರ್‍ ಬಂದಿದ್ದರು. ಆ ದೇಶದಲ್ಲೇ ಕ್ಯಾರಾವಾನ್‍ ಇಲ್ಲ ಎಂದು ಹೇಳಿದ್ದರು. ನಾವು 15 ದಿನ ಕೇರ್‍ ಆಫ್‍ ಫುಟ್‍ಪಾತ್‍ ಆಗಿದ್ದೆವು. ಇಡೀ ದಿನ ರೋಡ್‍ನಲ್ಲಿ ನಿಲ್ಲಿಸಿ ಚಿತ್ರೀಕರಣ ಮಾಡಿದ್ದಾರೆ. ಆ ಲೆವೆಲ್‍ನ ಸಹಕಾರ ಕೊಟ್ಟಿದ್ದೇವೆ. ಮ್ಯಾನೇಜರ್‍ ದಾರಿತಪ್ಪಿಸಿದ್ದರಿಂದ ಹೀಗಾಯ್ತೇ ಹೊರತು ಪ್ರೊಡಕ್ಷನ್‍ ಕಡೆಯಿಂದ ಯಾವುದೇ ಸಮಸ್ಯೆ ಆಗಲಿಲ್ಲ’ ಎಂದರು.

‘ಬ್ಯಾಚಲರ್‍ ಪಾರ್ಟಿ’ ಚಿತ್ರದಲ್ಲಿ ದಿಗಂತ್, ‘ಲೂಸ್ ಮಾದ’ ಯೋಗಿ, ಅಚ್ಯುತ್‍ ಕುಮಾರ್, ಬಾಲಾಜಿ ಮನೋಹರ್‍, ಸಿರಿ ರವಿಕುಮಾರ್‍ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‍ ರಾಮ್‍ ಸಂಗೀತ ಮತ್ತು ಅರವಿಂದ್‍ ಕಶ್ಯಪ್‍ ಛಾಯಾಗ್ರಹಣವಿದೆ.

‘ಬ್ಯಾಚಲರ್ ಪಾರ್ಟಿ’ ಟ್ರೇಲರ್ ಬಂತು; ಚಿತ್ರ ಜ.26ಕ್ಕೆ