ಜ.27ಕ್ಕೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರದಾನ …

ಚಂದನವನ, ಸಿನಿ ಸುದ್ದಿ

ಕನ್ನಡ ಚಿತ್ರರಂಗದಲ್ಲಿ ವರ್ಷದ ಆರಂಭದಲ್ಲೇ ನಡೆಯುವ ಮೊದಲ ಪ್ರಶಸ್ತಿ ಪ್ರದಾನ ಸಮಾರಂಭವೆಂದರೆ ಅದು ಶ್ರೀ ರಾಘವೇಂದ್ರ ಚಿತ್ರವಾಣಿ  ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಡಿ.ವಿ. ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ  ಸಂದರ್ಭದಲ್ಲಿ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಆ ಪ್ರಶಸ್ತಿ ಪ್ರದಾನ ಸಮಾರಂಭ 23ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಪರಂಪರೆಯನ್ನು ಡಿ.ಜಿ. ವೆಂಕಟೇಶ್‍, ಡಿ.ಜಿ. ವಾಸುದೇವ ಮತ್ತು ಡಿ.ಎಸ್. ಸುನೀಲ್‍ ಮುಂದುವರೆಸಿದ್ದಾರೆ.

ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 27ರ ಶನಿವಾರ ಸಂಜೆ ನಡೆಯಲಿದೆ. ಎರಡು ಪ್ರಶಸ್ತಿಗಳಿಂದ ಶುರುವಾದ ಸಮಾರಂಭ, ಇಂದು ಚಿತ್ರರಂಗದ ವಿವಿಧ ವಿಭಾಗಗಳ 11 ಪ್ರಶಸ್ತಿಗಳಿಗೇರಿವೆ. ಸಂಸ್ಥೆಯು ನೀಡುವ ಎರಡು ಪ್ರಶಸ್ತಿಗಳ ಜೊತೆಗೆ ಚಿತ್ರರಂಗದವರು 9 ಪ್ರಶಸ್ತಿಗಳನ್ನು ಸಂಸ್ಥೆಯಡಿ ನೀಡುತ್ತಿದ್ದಾರೆ.

ಈ ಪೈಕಿ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ನಿರ್ಮಾಪಕರು ಮತ್ತು ಚಲನಚಿತ್ರ ಪತ್ರಕರ್ತರಿಗೆ ನೀಡುವ ಪ್ರಶಸ್ತಿಯನ್ನು ದಿ. ರಾಮು (ರಾಮು ಎಂಟರ್ ಪ್ರೈಸಸ್) ಮತ್ತು ಮುರಳಿಧರ ಖಜಾನೆ ತಮ್ಮದಾಗಿಸಿಕೊಂಡಿದ್ದಾರೆ.

ಡಾ. ರಾಜಕುಮಾರ್‍ ಕುಟುಂಬದವರು ಹಿನ್ನೆಲೆ ಗಾಯಕರಿಗೆ ಪ್ರಶಸ್ತಿಯನ್ನು ಹೇಮಂತ್‍ ಕುಮಾರ್, ಭಾರತಿ ವಿಷ್ಣುವರ್ಧನ್‍ ಅವರು ನೀಡುವ ಆರ್‍. ಶೇಷಾದ್ರಿ ಪ್ರಶಸ್ತಿಯನ್ನು ನಾಗತಿಹಳ್ಳಿ ಚಂದ್ರಶೇಖರ್‍, ಹಿರಿಯ ಪೋಷಕ ನಟಿಗೆ ಡಾ. ಜಯಮಾಲ ನೀಡುವ ಪ್ರಶಸ್ತಿಯನ್ನು ಪಿ. ಜಯಲಕ್ಷ್ಮೀ, ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಪ್ರಶಸ್ತಿಯನ್ನು ‘ಹೊಂದಿಸಿ ಬರೆಯಿರಿ’ಗಾಗಿ ಜೋ ಕೋಸ್ಟ, ಮೀನಾಕ್ಷಿ ಜಯರಾಂ ತಮ್ಮ ಪತಿ ದಿವಂಗತ ಕೆ.ವಿ. ಜಯರಾಂ ಅವರ ಹೆಸರಿನಲ್ಲಿ ಅತ್ಯುತ್ತಮ ಕಥಾಲೇಖಕರಿಗೆ ನೀಡುವ ಪ್ರಶಸ್ತಿಯನ್ನು ‘ಸಪ್ತ ಸಾಗರದಾಚೆ ಎಲ್ಲೋ’  ಚಿತ್ರಕ್ಕಾಗಿ ಹೇಮಂತ್‍ ರಾವ್‍, ಅತ್ಯುತ್ತಮ ಸಂಭಾಷಣೆಗಾಗಿ ಡಾ.ಎಚ್‍.ಕೆ. ನರಹರಿ ಅವರು ನೀಡುವ ಖ್ಯಾತ ಚಿತ್ರ ಸಾಹಿತಿ ಶ್ರೀಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿಯನ್ನು ‘ವಿರಾಟಪುರದ ವಿರಾಗಿ’ ಚಿತ್ರದ ಸಂಭಾಷಣೆಗಾಗಿ ಬಿ.ಎಸ್. ಲಿಂಗದೇವರು ಹಾಗೂ ಶರಣು ಹುಲ್ಲೂರು, ಚೊಚ್ಚಲ ಅತ್ಯುತ್ತಮ ನಿರ್ದೇಶನಕ್ಕಾಗಿ ಬಿ.ಸುರೇಶ ನೀಡುವ  ಪ್ರಶಸ್ತಿಯನ್ನು’ಆಚಾರ್‍ ಅಂಡ್‍ ಕೋ’ ಚಿತ್ರದ ನಿರ್ದೇಶನಕ್ಕೆ ಸಿಂಧು ಶ್ರೀನಿವಾಸಮೂರ್ತಿ, ಹಿರಿಯ ಪತ್ರಕರ್ತ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಹೆಸರಿನಲ್ಲಿ ಅತ್ಯುತ್ತಮ ಗೀತರಚನೆಗಾಗಿ ವಿನಾಯಕ ರಾಮ್‍ ಕಲಗಾರು ಅವರು ನೀಢುವ ಪ್ರಶಸ್ತಿಯನ್ನು ‘ಟಗರು ಪಲ್ಯ’ ಚಿತ್ರದ ಗೀತರಚನೆಗಾಗಿ ಡಾಲಿ ಧನಂಜಯ್ ಮತ್ತು ಹಿರಿಯ ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿಯನ್ನು ಹಿರಿಯ ನಟ ಸುಂದರರಾಜ್‍ ಅವರಿಗೆ ನೀಡಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಕಳೆದ ವರ್ಷ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ತಂದುಕೊಟ್ಟ ಹಿರಿಯ ಪತ್ರಕರ್ತ ಬಿ.ಎನ್. ಸುಬ್ರಹ್ಮಣ್ಯ, ರಕ್ಷಿತ್ ಶೆಟ್ಟಿ ಹಾಗೂ ಅನಿರುದ್ಧ್ ಜತಕರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ.

ಪರಭಾಷಾ ಚಿತ್ರಗಳ ಭಯ; ಈ ವಾರ ಕನ್ನಡ ಸಿನಿಮಾ ಇಲ್ಲ