ಜ.12ಕ್ಕೆ ಬಿಡುಗಡೆ ಆಗಲಿದೆ ಪುನೀತ್‍ ನಟಿಸಬೇಕಿದ್ದ ಚಿತ್ರ

ಚಂದನವನ, ಸಿನಿ ಸುದ್ದಿ

ಪುನೀತ್‍ ರಾಜಕುಮಾರ್‍ ಹಲವು ಚಿತ್ರಗಳಲ್ಲಿ ಪೂರ್ಣಪ್ರಮಾಣದ ಹೀರೋ ಆಗುವುದರ ಜೊತೆಗೆ, ಚಿತ್ರದ ವಿಷಯ ಚೆನ್ನಾಗಿದೆ ಎಂದನಿಸಿದಾಗ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲೂ ಅಭಿನಯಿಸಿದ್ದರು. ಈ ಮೂಲಕ ಹೊಸಬರ ತಂಡಗಳಿಗೆ ಪ್ರೋತ್ಸಾಹಿಸಿದ್ದರು. ಪುನೀತ್‍ ನಟಿಸಬೇಕಿದ್ದ ಚಿತ್ರಗಳ ಪೈಕಿ ‘ರಂಗ ಸಮುದ್ರ’ ಚಿತ್ರವೂ ಒಂದು. ಈ ಚಿತ್ರದಲ್ಲಿ ಪುನೀತ್‍ ಜಿಲ್ಲಾಧಿಕಾರಿಯಾಗಿ ಅತಿಥಿ ಪಾತ್ರದಲ್ಲಿ ನಟಿಸಬೇಕಿತ್ತಂತೆ. ಚಿತ್ರದಲ್ಲಿ ನಟಿಸುವುದಕ್ಕೆ ಅವರು ಒಪ್ಪಿಕೊಂಡಿದ್ದರಂತೆ. ಆದರೆ, ಅದು ಸಾಧ್ಯವಾಗಲಿಲ್ಲ. ಈಗ ಆ ‘ರಂಗ ಸಮುದ್ರ’ ಇದೇ ಜನವರಿ 12ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ರಂಗಾಯಣ ರಘು, ರಾಘವೇಂದ್ರ ರಾಜಕುಮಾರ್, ಸಂಪತ್‍ ರಾಜ್‍ ಮುಂತಾದವರು ಅಭಿನಯಿಸಿರುವ ಈ ಚಿತ್ರದ ಟ್ರೇಲರ್‍ ಇತ್ತೀಚೆಗೆ ಬಿಡುಗಡೆಯಾಯಿತು. ರಾಘವೇಂದ್ರ ರಾಜಕುಮಾರ್ ಟ್ರೇಲರ್‍ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. ಇಂಥದ್ದೊಂದು ಕಥಾವಸ್ತು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಿದರು. ಶಿಕ್ಷಣ ಎನ್ನುವುದು ಅನಿವಾರ್ಯತೆಯಾ ಅಥವಾ ಅವಶ್ಯಕತೆಯಾ ಎಂಬುದನ್ನು ಹೇಳುವ ಚಿತ್ರವಿದು ಎಂದರು. ಇಂಥದ್ದೊಂದು ಚಿತ್ರದಲ್ಲಿ ಅಭಿನಯಿಸಿರುವುದು ತಮ್ಮ ಭಾಗ್ಯ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಂತರ ಮಾತನಾಡಿದ ರಘು, ‘ನಿರ್ದೇಶಕ ರಾಜಕುಮಾರ್ ಅಸ್ಕಿ ಅವರು ಹೇಳಿದ ಕಥೆ ಇಷ್ಟವಾಯಿತು. ತಕ್ಷಣ ಒಪ್ಪಿಕೊಂಡೆ. ಜನಪದ ಸೊಗಡಿನ ಈ ಚಿತ್ರದ ಚಿತ್ರೀಕರಣ ಕರ್ನಾಟಕ, ಮಹಾರಾಷ್ಟ್ರ ಮುಂತಾದ ಕಡೆ ನಡೆದಿದೆ. ಪುನೀತ್ ರಾಜಕುಮಾರ್ ಅವರು ಈ ಚಿತ್ರದಲ್ಲಿ ನಟಿಸಬೇಕಿತ್ತು, ಆದರೆ, ಆಗಲಿಲ್ಲ. ಈಗ ಅದೇ ಮನೆಯ ರಾಘವೇಂದ್ರ ರಾಜಕುಮಾರ್ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ನೋಡಿ ಹಾರೈಸಿ’ ಎಂದರು.

‘’ರಂಗ ಸಮುದ್ರ’ ಎಂದರೆ ಊರಿನ ಹೆಸರು. ಈ ಕಥೆಯನ್ನು ನಿರ್ಮಾಪಕ ಹೊಯ್ಸಳ ಕೊಣನೂರು ಅವರ ಮುಂದೆ ಹೇಳಿದಾಗ ಅವರು, ರಂಗಾಯಣ ರಘು ಅವರು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸದರೆ ಚೆನ್ನಾಗಿರುತ್ತದೆ ಎಂದರು. ನನಗೂ ಅವರ ಬಳಿ ಈ ಪಾತ್ರ ಮಾಡಿಸಬೇಕೆಂಬ ಆಸೆಯಿತ್ತು. ನಮ್ಮ ಆಸೆಯಂತೆ ರಘು ಅವರು ಅಭಿನಯಿಸಲು ಒಪ್ಪಿಗೆ ನೀಡಿದರು. ಈ ಚಿತ್ರವನ್ನು ಮೊದಲು ನೋಡಿದವರು ಪುನೀತ್ ರಾಜಕುಮಾರ್. ಚಿತ್ರವನ್ನು ನೋಡಿ, ಅವರು ಜಿಲ್ಲಾಧಿಕಾರಿ ಪಾತ್ರದಲ್ಲಿ(ಅತಿಥಿ ಪಾತ್ರದಲ್ಲಿ) ನಟಿಸುವುದಾಗಿ ಹೇಳಿದ್ದರು. ಆದರೆ, ವಿಧಿಯಾಟದಿಂದ ಅದು ಆಗಲಿಲ್ಲ.  ಕಲಾವಿದರ ಹಾಗೂ ತಂತ್ರಜ್ಞರ ಸಹಾಕರದಿಂದ ಚಿತ್ರ ಚೆನ್ನಾಗಿ ಬಂದಿದೆ’ ಎಂದು ನಿರ್ದೇಶಕ ರಾಜಕುಮಾರ್ ಅಸ್ಕಿ ಹೇಳಿದರು.

ಹೊಯ್ಸಳ ಕೊಣನೂರು ನಿರ್ಮಿಸಿರುವ ಈ ಚಿತ್ರಕ್ಕೆ ದೇಸಿ ಮೋಹನ್‍ ಅವರ ಸಂಗೀತ, ಆರ್‍. ಗಿರಿ ಅವರ ಛಾಯಾಗ್ರಹಣ, ವಾಗೀಶ್‍ ಚನ್ನಗಿರಿ ಅವರ ಸಾಹಿತ್ಯವಿದೆ.

ಎರಡು ಪ್ರಶಸ್ತಿ ವಿಜೇತ ಚಿತ್ರಗಳ ‘ಪರಸ್ಪರ’ ಸಹಕಾರ

Latest Posts

Discover more from KannadaScreens

Subscribe now to keep reading and get access to the full archive.

Continue reading