ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿರುವ ಎರಡು ಚಿತ್ರಗಳೆಂದರೆ ಅದು ಚಂಪಾ ಶೆಟ್ಟಿ ನಿರ್ದೇಶನದ ‘ಕೋಳಿ ಎಸ್ರು’ ಹಾಗೂ ಪೃಥ್ವಿ ಕೊಣನೂರು ನಿರ್ದೇಶಿಸಿರುವ ‘ಹದಿನೇಳೆಂಟು’. ಈ ಎರಡೂ ಚಿತ್ರಗಳು ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದರ ಜೊತೆಗೆ, ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ಈಗ ಎರಡು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಆದರೆ, ಇವತ್ತಿನ ಪರಿಸ್ಥಿತಿಯಲ್ಲಿ ಹೊಸ ಅಲೆಯ ಚಿತ್ರಗಳನ್ನು ಜನರಿಗೆ ತಲುಪಿಸುವುದು ಕಷ್ಟ ಎಂದು ಗೊತ್ತಿರುವುದರಿಂದ ಎರಡೂ ತಂಡಗಳು ಒಂದಾಗಿವೆ. ಒಟ್ಟಾಗಿ ತಮ್ಮ ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ ಮುಂದಾಗಿವೆ. ಈ ನಿಟ್ಟಿನಲ್ಲಿ ಪರಸ್ಪರ.ಲೈವ್ ಎಂಬ ವೆಬ್‍ಸೈಟ್ ಶುರು ಮಾಡಿರುವ ಎರಡೂ ತಂಡಗಳು, ಆ ವೆಬ್‍ಸೈಟ್ ಮೂಲಕ ಚಿತ್ರದ ಟಿಕೇಟ್‍ಗಳನ್ನು ಮಾರಾಟ ಮಾಡುವುದಕ್ಕೆ ಮುಂದಾಗಿವೆ. ಎರಡೂ ಚಿತ್ರಗಳು ಜ.26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಎರಡೂ ಚಿತ್ರಗಳಿಗೆ 400 ರೂ. ದರವನ್ನು ನಿಗದಿಪಡಿಸಲಾಗಿದ್ದು, ಪ್ರೇಕ್ಷಕರು ವೆಬ್‍ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿ ಚಿತ್ರಗಳನ್ನು ನೋಡಬಹುದಾಗಿದೆ. ಬಿಡುಗಡೆಯ ಹಿಂದಿನ ದಿನ ಪ್ರೇಕ್ಷಕರಿಗೆ ಯಾವ ಮಲ್ಟಿಪ್ಲೆಕ್ಸ್ ಅನುಕೂಲವಾಗುತ್ತದೆಯೋ ಅಲ್ಲಿ ಟಿಕೇಟ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಈಗಾಗಲೇ 1,57,000 ಮೌಲ್ಯದ ಟಿಕೆಟ್‍ಗಳು ಮಾರಾಟವಾಗಿವೆ.
ಇತ್ತೀಚೆಗೆ ಒಂದೇ ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ‘ಕೋಳಿ ಎಸ್ರು’ ಚಿತ್ರದ ಟ್ರೇಲರ್ ಹಾಗೂ ಜನಪ್ರಿಯ ಲೇಖಕ ಮತ್ತು ಪತ್ರಕರ್ತ ಜೋಗಿ ಅವರು ‘ಹದಿನೇಳೆಂಟು’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಎರಡೂ ತಂಡಗಳಿಗೆ ಶುಭ ಕೋರಿದ್ದಾರೆ.
‘ಈ ಚಿತ್ರಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ಸಲುವಾಗಿ ನಾವು ಎರಡು ತಂಡದವರು ಸೇರಿ ಹೊಸ ಯೋಜನೆ ಹಾಕಿಕೊಂಡಿದ್ದೇವೆ. ಪರಸ್ಪರ.ಲೈವ್ ಎಂಬ ವೆಬ್ ಸೈಟ್ ಮೂಲಕ ಎರಡು ಚಿತ್ರಗಳ ಟಕೇಟ್ ಗಳನ್ನು ಮಾರಾಟ ಮಾಡಲು ಆರಂಭಿಸಿದ್ದೇವೆ. 400 ರೂಪಾಯಿ ಪಾವತಿಸಿ ಎರಡು ಚಿತ್ರಗಳ ಒಂದೊಂದು ಟಿಕೆಟ್ ಪಡೆಯಬಹುದು. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಿರ್ದೇಶಕರಾದ ಚಂಪಾ ಶೆಟ್ಟಿ ಹಾಗೂ ಪೃಥ್ವಿ ಕೋಣನೂರು ತಿಳಿಸಿದರು.
‘ಕೋಳಿ ಎಸ್ರು’ ಚಿತ್ರದಲ್ಲಿ ಅಭಿನಯಿಸಿರುವ ಅಕ್ಷತಾ ಪಾಂಡವಪುರ, ಅಪೇಕ್ಷ ನಾಗರಾಜ್ ಹಾಗೂ ‘ಹದಿನೇಳೆಂಟು’ ಚಿತ್ರದಲ್ಲಿ ನಟಿಸಿರುವ ನೀರಜ್ ಮ್ಯಾಥ್ಯೂ, ಶೆರ್ಲಿನ್ ಈ ಸಂದರ್ಭದಲ್ಲಿ ಹಾಜರಿದ್ದರು.


