‘ಜನರಿಂದ ನಾನು ಮೇಲೆ ಬಂದ’ವರ ಕಥೆ ಇದು …

ಚಂದನವನ, ಸಿನಿ ಸುದ್ದಿ

ಡಾ. ರಾಜಕುಮಾರ್‍ ಅಭಿನಯದ ಜನಪ್ರಿಯ ಹಾಡುಗಳ ಪೈಕಿ ‘ಶಬ್ಧವೇಧಿ’ ಚಿತ್ರದ ‘ಜನರಿಂದ ನಾನು ಮೇಲೆ ಬಂದೆ …’ ಸಹ ಒಂದು. ಈಗ ಇದೇ ಹಾಡು ಚಿತ್ರದ ಶೀರ್ಷಿಕೆಯಾಗಿದ್ದು, ಸದ್ಯದಲ್ಲೇ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ.

ನೈಜ ಘಟನೆಯನ್ನಾಧರಿಸಿ ನವಿಲುಗರಿ ನವೀನ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ ’ಜನರಿಂದ ನಾನು ಮೇಲೆ ಬಂದೆ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಆಗಿದೆ. ಹಿರಿಯ ನಿರ್ದೇಶಕ ಸುನಿಲ್‌ಕುಮಾರ್ ಸಿಂಗ್ ಟ್ರೇಲರ್‍ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ’ಗಜ’ ನಿರ್ಮಾಪಕ ಸುರೇಶ್‌ಗೌಡ ಉಪಸ್ತಿತರಿದ್ದರು.

ನೆಟ್ಟಿಗೆರೆ ಬೋಳಾರ ಗ್ರಾಮದ ಬಿ.ಹೇಮಾವತಿ ಅವರು ಮಂಜುನಾಥ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರವ ಈ ಚಿತ್ರದಲ್ಲಿ ಗಂಧರ್ವರಾಜ್ ಶಂಕರ್ ನಾಯಕನಾಗಿ ಅಭಿನಯಿಸಿದರೆ, ಮಂಗಳೂರು ಮೂಲದ ಅಪ್ತಿ ಪಟವರ್ಧನ್ ಮತ್ತು ಮೈಸೂರಿನ ಕೃತಿಕಾ ದಿವಾಕರ್ ನಾಯಕಿಯರಾಗಿದ್ದಾರೆ. ಹಿರಿಯ ಕಲಾವಿದರಾದ ವಿನೋದ್‌ ರಾಜ್, ಅಭಿಜಿತ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಚೆನ್ನೈದಲ್ಲಿ ನಡೆದ ಘಟನೆ ಮತ್ತು ಮಂಗಳೂರಿನಲ್ಲಿ ನೋಡಿದಂತಹ ಘಟನೆಯನ್ನು ಪ್ರೇರಣೆಯಾಗಿ ತೆಗೆದುಕೊಂಡು ನಿರ್ದೇಶಕರು ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಎರಡು ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ.

ಈ ಕುರಿತು ಮಾತನಾಡುವ ನವೀನ್‍, ‘ಇದೊಂದು ಡ್ಯಾನ್ಸ್ ಆಧಾರಿತ ಕಥೆಯಾಗಿದ್ದು, ಸ್ಲಂನಲ್ಲಿ ಜೀವನ ಸಾಗಿಸುತ್ತಾ ನೃತ್ಯಪಟು ಆಗಬೇಕೆಂದು ಕಷ್ಟಪಡುವ ಹುಡುಗ, ಇನ್ನೊಂದು ಕಡೆಗೆ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟು, ನೃತ್ಯವೇ ಪ್ರಪಂಚ ಅಂದುಕೊಂಡಿರುವ ವಿದ್ಯಾವಂತ ಯುವಕರ. ಒಂದು ಹಂತದಲ್ಲಿ ಭೇಟಿಯಾಗುವ ಇಬ್ಬರ ಗುರಿ ಒಂದೇ ಆಗಿರುತ್ತದೆ. ಮುಂದೆ ಜನರಿಂದ ಯಾವ ರೀತಿ ಪ್ರೋತ್ಸಾಹ ಸಿಗುತ್ತದೆ? ಅಂದುಕೊಂಡಂತೆ ಸಾಧನೆ ದಾರಿ ತಲುಪಿ ಯಶಸ್ವಿಯಾಗುತ್ತಾರಾ? ಎಂಬುದನ್ನು ಈ ಚಿತ್ರದ ಮೂಲಕ ಹೇಳಿದ್ದೇವೆ’ ಎಂದರು.

ಪ್ರಣವ್‍ ಸತೀಶ್‍ ಸಂಗೀತ, ಟಿ.ಆರ್.ಗೌತಮ್ ಛಾಯಾಗ್ರಹಣ ಹಾಗೂ ಸಂಕಲನವಿರುವ ‘ಜನರಿಂದ ನಾನು ಮೇಲೆ ಬಂದೆ’ ಚಿತ್ರಕ್ಕೆ ಬೆಂಗಳೂರು, ಮೇಲುಕೋಟೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

‘ಸಂಗೀತಾ ಬಾರ್’ನಿಂದ 60 ML ಟೀಸರ್ ಬಂತು; ಎಂಜಾಯ್ ಮಾಡಿ