ಬೈಂದೂರು ಮೂಲದ ಶ್ರೀಷ ಇದೀಗ ‘ತರಂಗಾಂತರಂಗ’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ಆ ಚಿತ್ರದ ನಿರ್ದೇಶನವನ್ನೂ ಮಾಡಿದ್ದಾರೆ. ಈ ಚಿತ್ರದ ಮೊದಲ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಇದೀಗ ಚಿತ್ರದ ಹಾಡು ಬಿಡುಗಡೆ ಆಗಿದೆ.
ಕುಂದಾಪುರದ ವಿಶಿಷ್ಟ ಸಂಸ್ಕೃತಿ ಹಾಗೂ ಆಡುಭಾಷೆಯ ಸೊಗಡನ್ನು ಒಳಗೊಂಡ ಸಸ್ಪೆನ್ಸ್ ಥ್ರಿಲ್ಲರ್ ‘ತರಂಗಾಂತರಂಗ’ ಚಿತ್ರವನ್ನು ವಿಷ್ಣು ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಸಸ್ಪೆನ್ಸ್, ವಿಧಿ ಹಾಗೂ ಪೂರ್ವಜನ್ಮದ ರಹಸ್ಯಗಳನ್ನು ಬೆಸೆಯುವ ಕುತೂಹಲಕಾರಿ ಕಥಾಹಂದರವನ್ನು ಚಿತ್ರ ಹೊಂದಿದೆ.
ಕರಾವಳಿ ಕರ್ನಾಟಕದ, ಅದರಲ್ಲೂ ವಿಶೇಷವಾಗಿ ಕುಂದಾಪುರ ಕನ್ನಡದ ಸೊಗಡನ್ನು ಬಿಂಬಿಸುವ ಹಾಡುಗಳು ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ. ‘ಜೀವನ ಬೋರು ಆದ್ರೂ ಉಪ್ಪು ಸ್ವಲ್ಪ ಕಡಿಮೆ ಆದ್ರೂ …’ ಹಾಗೂ ‘ಸಮ ಕೂಡುವ …’ ಸೇರಿದಂತೆ ಹಾಡುಗಳು ಪ್ರಾದೇಶಿಕ ಭಾಷೆಯ ಸೊಗಡನ್ನು ಪ್ರತಿಬಿಂಬಿಸುತ್ತದೆ. ಈ ಚಿತ್ರಕ್ಕೆ ಪ್ರವೀಣ್ ಮತ್ತು ಪ್ರದೀಪ್ ಸಂಗೀತ ಸಂಯೋಜಿಸಿದ್ದಾರೆ.

‘ತರಾಂಗಾಂತರಂಗ’ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಹಾಗೂ ನಾಯಕ ನಟ ಶ್ರೀಷ, ‘ಚಿತ್ರದ ಕೆಲಸಗಳು ಮುಗಿದದ್ದು, ಆದಷ್ಟು ಬೇಗ ಬಿಡುಗಡೆ ಮಾಡುವ ಯೋಚನೆ ಇದೆ. ‘ಸಮ ಕೊಡುವ …’ ಹಾಡು ಕುಂದಾಪುರದ ನೇಟಿವಿಟಿಗೆ ತಕ್ಕ ಹಾಗೆ ಮಾಡಲಾಗಿದೆ. ಇನ್ನು, ಚಿತ್ರದ ಬಗ್ಗೆ ಹೇಳುವುದಾದರೆ, ದಿನನಿತ್ಯ ಬದುಕಿನ ಸಾಮಾನ್ಯ ಘಟನೆಗಳನ್ನು ಮೀರಿದ ವಿಶಿಷ್ಟ ಕಥಾಹಂದರ ಹೊಂದಿರುವ ಸಸ್ಪೆನ್ಸ್ ಥ್ರಿಲ್ಲರ್ ಇದಾಗಿದೆ’ ಎಂದರು.
ಚಿತ್ರದ ಕುರಿತು ಮಾತನಾಡಿದ ನಾಯಕಿ ಯಶಸ್ವಿನಿ ಕೆ. ಸ್ವಾಮಿ,’ಪೂರ್ವಜನ್ಮದ ಪರಿಕಲ್ಪನೆ ಹಾಗೂ ಮನುಷ್ಯನ ಬದುಕಿನಲ್ಲಿ ವಿಧಿಯ ಪಾತ್ರವನ್ನು ಅನ್ವೇಷಿಸುವ ರೋಚಕ ಮತ್ತು ವಿಭಿನ್ನ ಕಥೆ ಇದಾಗಿದೆ’ ಎಂದು ಹೇಳಿದರು.
‘ತರಂಗಾಂತರಂಗ’ ಚಿತ್ರದಲ್ಲಿ ಶ್ರೀಷ ಅವರಿಗೆ ಚೆರಿಕಾ ಮೂರ್ತಿ ಮತ್ತು ಯಶಸ್ವಿನಿ ಸ್ವಾಮಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ರಮೇಶ್ ಪಂಡಿತ್, ಪ್ರಭಾಕರ ಕುಂದರ್, ಲಿಖಿತಾ ಶೆಟ್ಟಿ, ಮುರಳಿ ಮತ್ತಿತರರು ಇತರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿವಂಗತ ದಿನೇಶ್ ಮಂಗಳೂರು ಮತ್ತು ದಿವಂಗತ ರಾಕೇಶ್ ಪೂಜಾರಿ ಅಭಿನಯದ ಕೊನೆಯ ಚಿತ್ರ ಇದಾಗಲಿದೆ.


