ಮೊದಲು 30 ML ಹೆಸರಿನಲ್ಲಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದ ‘ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರತಂಡ, ಅದರ ಮುಂದುವರೆದ ಭಾಗವಾಗಿ ಇದೀಗ 60 ML ಹೆಸರಿನಲ್ಲಿ ಟೀಸರ್ ಬಿಡುಗಡೆ ಮಾಡಿದೆ. ನಟ ಮತ್ತು ರಾಜ್ಯ ಸಭಾ ಸದಸ್ಯ ಜಗ್ಗೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಕೋಮಲ್ ಕುಮಾರ್, ಮೇಘನಾ ರಾಜ್, ಅನುಷಾ ರೈ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ʼಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ʼ ಚಿತ್ರವನ್ನು ಸಂದೇಶ್ ಶೆಟ್ಟಿ ಆಜ್ರಿ ಕಥೆ ಬರೆದು ನಿರ್ದೇಶಿಸಿದ್ದು, ವಿಕಾಸ್ ಶೆಟ್ಟಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೋಮಲ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಟ ಜಗ್ಗೇಶ್, ‘ನಾನು ಈ ಚಿತ್ರದ ಕೆಲವು ತುಣುಕುಗಳನ್ನು ನೋಡಿದ್ದೇನೆ. ನಿರ್ದೇಶಕ ಸಂದೇಶ್ ಶೆಟ್ಟಿ ಹಾಗೂ ಅವರ ತಂಡದ ಪರಿಶ್ರಮ ಪ್ರತಿಯೊಂದು ಫ್ರೇಮ್ನಲ್ಲೂ ಎದ್ದು ಕಾಣುತ್ತದೆ. ಸಂದೇಶ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮುತ್ತಾರೆ ಎಂಬ ವಿಶ್ವಾಸ ನನಗಿದೆ. ಒಂದು ಚಿತ್ರದ ಕಥಾವಸ್ತು ಅರ್ಥಪೂರ್ಣ ಚರ್ಚೆಗಳಿಗೆ ನಾಂದಿ ಹಾಡಿದರೆ ಅದು ಒಳ್ಳೆಯ ಬೆಳವಣಿಗೆ’ ಎಂದರು. ನಿರ್ದೇಶಕ ಸಂದೇಶ್ ಅವರ ಕೆಲಸವನ್ನು ಉಪೇಂದ್ರರಿಗೆ ಹೋಲಿಸಿದರು.

‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದ ಬಿಡುಗಡೆಯಾಗಿರುವ ಟೀಸರ್ನಲ್ಲಿ ಲವ್ ಜಿಹಾದ್, ಧಾರ್ಮಿಕ ಮತಾಂತರ, ದೇವಸ್ಥಾನಗಳ ಮೇಲಿನ ದಾಳಿ ಹಾಗೂ ಹಿಂದೂ-ಮುಸ್ಲಿಂ ಧಾರ್ಮಿಕ ವಿಚಾರಗಳನ್ನು ಟೀಸರ್ನಲ್ಲಿ ಪ್ರಸ್ತಾಪಿಸಲಾಗಿದೆ. ಟೀಸರ್ನಲ್ಲಿ ತೋರಿಸಿರುವ ವಿಷಯಕ್ಕೂ ಚಿತ್ರದ ಶೀರ್ಷಿಕೆಗೂ ಏನು ಸಂಬಂಧ ಎಂಬ ಪ್ರಶ್ನೆಯನ್ನು ಹಲವರು ಎತ್ತುತ್ತಿದ್ದಾರೆ.
ವಿಶೇಷವೆಂದರೆ, ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಎಂಬ ಶೀರ್ಷಿಕೆ ಹೊಂದಿದ್ದರೂ, ಒಂದೇ ಸಿನಿಮಾದಲ್ಲಿ ಎರಡು ಶೀರ್ಷಿಕೆಗಳಿವೆ ಎಂದು ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ಬಹಿರಂಗಪಡಿಸಿದ್ದಾರೆ. ‘ಮೊದಲಾರ್ಧ ಬಾರ್ನಲ್ಲಿ ಆರಂಭವಾಗಿ ಅದರ ಸುತ್ತವೇ ಕಥೆ ಸಾಗಿದರೆ, ದ್ವಿತೀಯಾರ್ಧ ದೈವಿಕ ಕ್ಷೇತ್ರವೊಂದರಲ್ಲಿ ಆರಂಭವಾಗಿ ಅಲ್ಲಿಯೇ ಮುಕ್ತಾಯಗೊಳ್ಳುತ್ತದೆ. ‘ಹೀಗಾಗಿ ಮೊದಲಾರ್ಧಕ್ಕೆ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಎಂಬ ಶೀರ್ಷಿಕೆಯಿದ್ದರೆ, ದ್ವಿತೀಯಾರ್ಧಕ್ಕೆ ‘ದೇವರ ತಾಣ’ ಎಂಬ ಹೆಸರಿದೆ. ವಾಸ್ತವವಾಗಿ ಈ ಎರಡೂ ನಮ್ಮ ಚಿತ್ರದ ಶೀರ್ಷಿಕೆಗಳೇ. ಆದರೆ ಸೆನ್ಸಾರ್ ನಿಯಮಗಳ ಪ್ರಕಾರ ಒಂದು ಸಿನಿಮಾಕ್ಕೆ ಒಂದೇ ಶೀರ್ಷಿಕೆ ಇರಬೇಕು. ಹಾಗಾಗಿ, ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಹೆಸರಿನಲ್ಲಿ ಚಿತ್ರವನ್ನು ಚಿತ್ರಮಂದಿರಗಳಿಗೆ ತರುತ್ತಿದ್ದೇವೆ” ಎಂದು ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ವಿವರಿಸಿದರು.
ಈ ಚಿತ್ರಕ್ಕಾಗಿ ಎರಡು ಹಂತಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕುಂದಾಪುರ, ಶಿವಮೊಗ್ಗ ಹಾಗೂ ತೀರ್ಥಹಳ್ಳಿ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಚಿತ್ರೀಕರಣ ನಡೆದಿದೆ. ಈ ಚಿತ್ರದ ವಿಶೇಷ ಆಕರ್ಷಣೆ ಎಂದರೆ, ಕುಂದಾಪುರದ ಅಂಪಾರು ಸಮೀಪದ ವಾಲ್ತೂರು ಗ್ರಾಮದಲ್ಲಿ ಚಿತ್ರೀಕರಣಕ್ಕಾಗಿ ವಿಭಿನ್ನ ವಿನ್ಯಾಸಗಳ ಏಳು ಬೃಹತ್ ಸೆಟ್ಗಳನ್ನು ನಿರ್ಮಿಸಿರುವುದು. ಕಥೆಯ ಅಗತ್ಯಕ್ಕೆ ಅನುಗುಣವಾಗಿ ಎರಡು ಎಕರೆ ವಿಶಾಲ ಪ್ರದೇಶದಲ್ಲಿ ಏಳು ವಿಭಿನ್ನ ಸೆಟ್ಗಳನ್ನು ನಿರ್ಮಿಸಲಾಗಿತ್ತು. ಚಿತ್ರದ ಬಹುಪಾಲು ಚಿತ್ರೀಕರಣ ಇದೇ ಸೆಟ್ಗಳಲ್ಲಿ ನಡೆದಿದೆ.

‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ನಾಯಕ ಕೋಮಲ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡು ವಿಭಿನ್ನ ಕಾಲಘಟ್ಟಗಳನ್ನು ಪ್ರತಿನಿಧಿಸುವ ಈ ಪಾತ್ರಗಳಲ್ಲಿ ಒಂದು ಐತಿಹಾಸಿಕ ಹಿನ್ನೆಲೆಯದ್ದಾದರೆ, ಮತ್ತೊಂದು ಸಮಕಾಲೀನ ಕಾಲಘಟ್ಟಕ್ಕೆ ಸೇರಿದೆ. ಒಂದು ಪಾತ್ರದಲ್ಲಿ ರಾಜದರ್ಬಾರಿನ ಚಿತ್ರಕಾರನಾಗಿ ಕಾಣಿಸಿಕೊಂಡರೆ, ಮತ್ತೊಂದು ಪಾತ್ರದಲ್ಲಿ ಸಿನಿಮಾ ನಿರ್ದೇಶಕನಾಗಿ ಅಭಿನಯಿಸಿದ್ದಾರೆ. ಇನ್ನು, ‘ದೇವರ ತಾಣ’ ಭಾಗದಲ್ಲಿ ಮೇಘನಾ ರಾಜ್ ರಾಣಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ‘ಸಂಗೀತ’ ಬಾರ್ಗೆ ಸಂಬಂಧಿಸಿದ ಭಾಗಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಲ್ಲದೆ, ಮೇಘನಾ ರಾಜ್ ಅವರ 200 ವರ್ಷಗಳ ಹಿಂದಿನ ಕಾಲಘಟ್ಟವನ್ನು ಪ್ರತಿನಿಧಿಸುವ ಗೆಟಪ್ನಲ್ಲೂ ಕಾಣಿಸಿಕೊಂಡಿದ್ದಾರೆ.
‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ʼ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ವಜ್ರಧೀರ್ ಜೈನ್, ರಾಘು ರಾಮನಕೊಪ್ಪ, ಎಂ. ಕೆ. ಮಠ, ಪ್ರಶಾಂತ್ ಸಿದ್ದಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಚಿತ್ರ ಬಿಡುಗಡೆ ಆಗಲಿದೆ.


