‘ಓ ಮನಸೇ’ ಎಂದರೆ ಕನ್ನಡಿಗರಿಗೆ ಮೊದಲು ನೆನಪಾಗುವುದು ಪತ್ರಕರ್ತ ರವಿ ಬೆಳಗೆರೆ ಕೆಲವು ವರ್ಷಗಳ ಹಿಂದೆ ತರುತ್ತಿದ್ದ ಜನಪ್ರಿಯ ನಿಯತಕಾಲಿಕೆ. ಈ ಮ್ಯಾಗಜೀನ್ ದೊಡ್ಡ ಮಟ್ಟದ ಓದುಗವರ್ಗವೊಂದನ್ನು ಸೃಷ್ಟಿಸಿಕೊಂಡಿತ್ತು.
ಇದೀಗ ಸ್ಟಾರ್ ಸುವರ್ಣ ವಾಹಿನಿಯು ‘ಓ ಮನಸೇ’ ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಎರಡು ವಿಭಿನ್ನ ವ್ಯಕ್ತಿತ್ವಗಳ ಬದುಕಿನ ಪಯಣವನ್ನು ಈ ಧಾರಾವಾಹಿಯಲ್ಲಿ ತೆರೆದಿಡಲಾಗಿದೆ.
ಈ ಧಾರಾವಾಹಿಯ ಕುರಿತಾಗಿ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ತಂಡದವರು ಧಾರಾವಾಹಿಯ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಧಾರಾವಾಹಿ ಯಶಸ್ವಿಯಾಗಲೆಂದು ಹಾರೈಸಿದರು.

ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಕಥಾ ನಾಯಕಿ ರಾಗಾಗೆ ಶಿಕ್ಷಣವೆಂದರೆ ಜೀವ. ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ಸ್ವಾತಂತ್ರ್ಯದ ಹಾದಿಯೆಂದು ನಂಬಿರುವವಳು. ಇನ್ನೊಂದು ಕಡೆ ಶ್ರೀಮಂತ ಕುಟುಂಬದಲ್ಲಿ ಬೆಳೆದಿರುವ ಕಥಾನಾಯಕ ರಿಷಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ. ಪ್ರೀತಿ ಎಂಬ ಪದದ ಮೇಲೆ ರಿಷಿಗೆ ನಂಬಿಕೆಯಿಲ್ಲ. ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುವ ರಾಗಾ-ರಿಷಿಯ ಬದುಕಿನ ಪಯಣದಲ್ಲಿ ಏನೇನಾಗುತ್ತದೆ ಎಂಬುದನ್ನು ಧಾರಾವಾಹಿಯಲ್ಲೇ ನೋಡಬೇಕು.
ನಾಯಕ ರಿಷಿ ಪಾತ್ರದಲ್ಲಿ ನಟ ದರ್ಶಕ್ ಗೌಡ ಹಾಗೂ ನಾಯಕಿ ರಾಗಾ ಪಾತ್ರದಲ್ಲಿ ನಟಿ ಮಧುಮಿತಾ ಗೌಡ ನಟಿಸುತ್ತಿದ್ದಾರೆ. ಜೊತೆಗೆ ಅಶ್ವಿನಿ ಗೌಡ, ಅಜಿತ್ ಹಂದೆ, ರೇಖಾ ಕೃಷ್ಣಪ್ಪ, ರಮೇಶ್ ಪಂಡಿತ್, ಸಹನಾ, ಪ್ರಮೋದ್ ರಾಜ್, ದೀಪಾ ಕಟ್ಟೆ, ನಿಸರ್ಗ ಅಣ್ಣಪ್ಪ ಸೇರಿದಂತೆ ಇನ್ನೂ ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ.
ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಎಂಬ ಸಂಸ್ಥೆಯಡಿ ನಿರ್ಮಾಪಕ ಗಣಪತಿ ಭಟ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಬಿ. ಮಧುಸೂದನ್ ಅವರು ನಿರ್ದೇಶಿಸುತ್ತಿದ್ದಾರೆ. ’ಓ ಮನಸೇ’ ಇದೇ ನವೆಂಬರ್ 10, ಮಂಗಳವಾರದಿಂದ ಪ್ರತಿದಿನ ರಾತ್ರಿ 8.30 ಕ್ಕೆ ಸ್ಟಾರ್ ಸುವರ್ಣ ಹಾಗೂ JioHotstar ನಲ್ಲಿ ಪ್ರಸಾರವಾಗಲಿದೆ.


