ಕರ್ನಾಟಕದ ಹುಡುಗ ಲವ್ಸ್ ತಮಿಳು ನಾಡಿನ ಹುಡುಗಿ …

ಚಂದನವನ, ಸಿನಿ ಸುದ್ದಿ

ಕಳೆದ ವರ್ಷ, ‘ಎಲ್ಲೋ ಜೋಗಪ್ಪ ನಿನ್ನರಮನೆ …’ ಎಂದು ಹುಡುಕಿಕೊಂಡು ಹೋಗಿದ್ದ ‘ಕಂಬ್ಳಿಹುಳ’ ಖ್ಯಾತಿಯ ಅಂಜನ್‍ ನಾಗೇಂದ್ರ, ಈಗ ಸದ್ದಿಲ್ಲದೆ ಹೊಸ ಚಿತ್ರವೊಂದರೊಂದಿಗೆ ಬಂದಿದ್ದಾರೆ. ಈ ಬಾರಿ ಅವರು ಗಡಿಭಾಗದ ಪ್ರೇಮಕಥೆಗೆ ಹೀರೋ ಆಗಿದ್ದಾರೆ. ಅಂಜನ್‍ ಅಭಿನಯದ ಹೊಸ ಚಿತ್ರದ ಹೆಸರು ‘ಬಾರ್ಡರ್‍ ಡೈರೀಸ್‍’.

ನೈಜ ಘಟನೆ ಹಾಗೂ ಜೀವಂತ ಪಾತ್ರಗಳ ಹಿನ್ನೆಲೆಯಲ್ಲಿ ರೂಪುಗೊಂಡಿರುವ ‘ಬಾರ್ಡರ್‍ ಡೈರೀಸ್‍’ ಚಿತ್ರವನ್ನು ಹೊಯ್ಸಳ ಫಿಲಂಸ್ ಬ್ಯಾನರ್‌ನಡಿಯಲ್ಲಿ ಹೊಯ್ಸಳ ಕೊಣನೂರು ಈ ಚಿತ್ರವನ್ನು ನಿರ್ಮಿಸಿದ್ದು, ಎ.ಎಸ್‌.ಜಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಕರ್ನಾಟಕದ ಹುಡುಗ ಮತ್ತು ತಮಿಳುನಾಡಿನ ಹುಡುಗಿಯ ಪ್ರೇಮಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ.

ಈ ಚಿತ್ರದ ದ ‘ಯಾರೋ ನೀನು ಯಾರೋ ನೀನು …’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿರುವ, ಎ.ಎಸ್‌.ಜಿ ಸಾಹಿತ್ಯವಿರುವ ಈ ಹಾಡಿಗೆ ಸಿದ್ಧಾರ್ಥ ಬೆಳ್ಮಣ್ಣು ಮತ್ತು ಶ್ರೀಲಕ್ಷ್ಮಿ ಬೆಳ್ಮಣ್ಣು ಧ್ವನಿಯಾಗಿದ್ದಾರೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದ ಗೀತರಚನೆಕಾರ ಕವಿರಾಜ್, ‘ಕನ್ನಡ ಚಿತ್ರರಂಗದಲ್ಲಿ ನೂರಾರು ಕೋಟಿ ಬಜೆಟ್‌ನ ಕಮರ್ಷಿಯಲ್ ಸಿನಿಮಾಗಳ ಜೊತೆಗೆ, ಹೊಸ ಕನಸುಗಳನ್ನು ಹೊತ್ತು ಬರುವ ಪ್ರತಿಭಾವಂತರ ಇಂತಹ ಕಡಿಮೆ ಬಜೆಟ್‌ನ ಸಿನಿಮಾಗಳೂ ಗೆಲ್ಲಬೇಕು. ಪೋಸ್ಟರ್ ನೋಡಿದಾಗಲೇ ಗಡಿ ಭಾಗದ ಸೂಕ್ಷ್ಮ ಕಥೆ ಹೇಳುವಂತೆ ಭರವಸೆ ಮೂಡಿಸುತ್ತದೆ. ಚಿತ್ರರಂಗದ ಬೆಳವಣಿಗೆಗೆ ಪರಸ್ಪರ ಕಾಲೆಳೆಯುವುದನ್ನು ಬಿಟ್ಟು ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು’ ಎಂದರು.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಎಎಸ್‌ಜಿ, ‘ನನ್ನ ನಿಜವಾದ ಹೆಸರು ಶಶಿಕುಮಾರ್. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಆಲದಹಳ್ಳಿ ನನ್ನ ಊರು. ಸಿನಿಮಾ ಪಯಣದಲ್ಲಿ ಎಎಸ್‌ಜಿ ಎಂಬ ಪೆನ್ ನೇಮ್ ಇಟ್ಟುಕೊಂಡಿದ್ದೇನೆ. ಇದು ಕರ್ನಾಟಕದ ಹುಡುಗ ಮತ್ತು ತಮಿಳುನಾಡಿನ ಹುಡುಗಿಯ ಪ್ರೇಮಕಥೆ. ಅತ್ತಿಬೆಲೆಯ ಆಚೆಗಿನ ಗಡಿ ಭಾಗದ ಪ್ರದೇಶಗಳಲ್ಲಿ ಕಂಡುಬರುವ ವಿಶಿಷ್ಟ ಜೀವನಶೈಲಿ ಮತ್ತು ಅಲ್ಲಿ ನಾನು ಕಂಡ ನೈಜ ಪಾತ್ರಗಳನ್ನು ಆಧರಿಸಿ ಈ ಕಥೆ ಹೆಣೆದಿದ್ದೇನೆ’ ಎಂದರು.

10 ವರ್ಷಗಳ ಹಿಂದೆ ಅವರು ಓಡಾಡುತ್ತಿದ್ದ ಜಾಗದ ನೆನಪುಗಳು ಈ ಕಥೆಯನ್ನು ಬರೆಯಲು ಪ್ರೇರಣೆ ನೀಡಿತಂತೆ. ‘ಕಥಾನಾಯಕಿ ಆ ಜಾಗಕ್ಕೆ ಬಂದ ನಂತರ ಅಲ್ಲಿನ ಪ್ರಪಂಚ ಹೇಗೆ ತೆರೆದುಕೊಳ್ಳುತ್ತದೆ ಎಂಬುದೇ ಚಿತ್ರದ ಮೂಲ ತಿರುಳು. ಮೇಲ್ನೋಟಕ್ಕೆ ಇದೊಂದು ಪ್ರೇಮಕಥೆಯಂತೆ ಕಂಡರೂ, ಒಳಗೆ ತೀವ್ರವಾದ ಡ್ರಾಮಾ, ಕ್ರೈಮ್ ಮತ್ತು ಸಾಮಾಜಿಕ ವಾಸ್ತವತೆಗಳ ಸಂಕೀರ್ಣತೆಯಿದೆ’ ಎಂದು ತಿಳಿಸಿದರು.

ಈ ಚಿತ್ರದ ಬಹುತೇಕ ಭಾಗ ಹೊಸೂರು ಮತ್ತು ತಮಿಳುನಾಡಿನ ಗಡಿ ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ಉಳಿದ ಭಾಗಗಳನ್ನು ಚನ್ನಪಟ್ಟಣ, ಮಾಗಡಿ ಹಾಗೂ ಬೆಂಗಳೂರಿನಲ್ಲಿ ಶೂಟ್ ಮಾಡಲಾಗಿದೆ. ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಮತ್ತು ಸೆನ್ಸಾರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.

‘ಬಾರ್ಡರ್‍ ಡೈರೀಸ್‍’ ಚಿತ್ರದಲ್ಲಿ ಅಂಜನ್ ನಾಗೇಂದ್ರ ಮತ್ತು ಅಶ್ವಿತಾ ಹೆಗ್ಡೆ ನಾಯಕ-ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ಗೋಪಾಲಕೃಷ್ಣ ದೇಶಪಾಂಡೆ, ಶಿವರಾಜ್ ಕೆ.ಆರ್. ಪೇಟೆ, ಶರತ್‍ ಲೋಹಿತಾಶ್ವ, ವೀಣಾ ಸುಂದರ್, ತಬಲಾ ನಾಣಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಚ್ಯುತ್ ಬಿ.ಎಸ್. ಛಾಯಾಗ್ರಹಣ ಮತ್ತು ಆಕಾಶ್ ಹಿರೇಮಠ ಅವರ ಸಂಕಲನ ಚಿತ್ರಕ್ಕಿದೆ.

ಚಿತ್ರ ವಿಮರ್ಶೆ: ಸ್ವಾಭಿಮಾನಿ ರೈತನೆಂಬ ‘ವಾರಿಯರ್’ನ ಕಥೆ

Discover more from KannadaScreens

Subscribe now to keep reading and get access to the full archive.

Continue reading