ಚಿತ್ರ: ವಾರಿಯರ್
ನಿರ್ಮಾಣ: ಉಮೇಶ್ ಹೆಬ್ಬಾಳ
ನಿರ್ದೇಶನ: ಉಮೇಶ್ ಹೆಬ್ಬಾಳ
ತಾರಾಗಣ: ಉಮೇಶ್ ಹೆಬ್ಬಾಳ, ಬಲ ರಾಜ್ ವಾಡಿ, ಮಂಡ್ಯ ಸಿದ್ದು, ರಾಜೇಶ್ವರಿ, ಮಾಧುರಿ ರಾಯ್ ಬಡಿಗೇರ್ ಮುಂತಾದವರು
ಅವರಿಬ್ಬರೂ ಸ್ವಂತ ಅಣ್ಣ-ತಂಗಿಯಲ್ಲ. ಅವರಿಬ್ಬರದ್ದು ರಾಖಿ ಬಾಂಧವ್ಯ. ಅದೊಂದು ದಿನ ಅವಳು ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಅದಕ್ಕೂ ಮೊದಲು ಸಹ ಆ ಊರಿನಲ್ಲಿ ಆ ತರಹದ ಘಟನೆಗಳಾಗಿರುತ್ತವೆ. ಅವಳಿಗಾಗಿ ಅವನು ಮತ್ತು ಊರ ಜನರು ಹುಡುಕದ ಜಾಗವಿಲ್ಲ. ಮಾರನೆಯ ದಿನ ಅವಳು ಗದ್ದೆಯೊಂದರಲ್ಲಿ ಹೆಣವಾಗಿ ಬಿದ್ದಿರುತ್ತಾಳೆ. ಮೇಲ್ನೋಟಕ್ಕೆ ಆಕೆಯನ್ನು ಚಿರತೆ ಸಾಯಿಸಿರುವುದಾಗಿ ಬೆಳಕಿಗೆ ಬರುತ್ತದೆ. ಆದರೆ, ಅವನ ತನಿಖೆ ಇನ್ನೇನೋ ಹೇಳುತ್ತದೆ. ನಿಜಕ್ಕೂ ಆ ತಂಗಿಯ ಸಾವಿಗೆ ಕಾರಣ ಏನು? ಅಣ್ಣ ಈ ವಿಷಯದಲ್ಲಿ ಏನು ಮಾಡುತ್ತಾನೆ?
ಇಷ್ಟು ಓದಿದರೆ, ಇದೊಂದು ಅಣ್ಣ-ತಂಗಿಯ ಸೆಂಟಿಮೆಂಟ್ ಕಥೆ ಎಂದನಿಸಬಹುದು. ‘ವಾರಿಯರ್’ ಒಬ್ಬ ಪ್ರಗತಿಪರ ರೈತನ ಕುರಿತಾದ ಚಿತ್ರ. ಇಲ್ಲೊಬ್ಬ ಪ್ರಗತಿಪರ ರೈತನಿದ್ದಾನೆ. ಡಬ್ಬಲ್ ಡಿಗ್ರಿ ಪಡೆದಿದ್ದರೂ, ಇನ್ನೊಬ್ಬರ ಚಾಕರಿ ಬೇಡ ಎಂದು ತೀರ್ಮಾನಿಸಿ ಹಳ್ಳಿಗೆ ಬಂದು ಉಳುಮೆ ಮಾಡಿ ಸ್ವಾಭಿಮಾನದಿಂದ ಬದುಕುತ್ತಿರುತ್ತಾನೆ. ಅವನ ಜೀವನದಲ್ಲಿ ನಡೆಯುವ ಒಂದಿಷ್ಟು ಘಟನೆಗಳ ಜೊತೆಗೆ, ರಾಮನಾಥಪುರ ಎಂಬ ಅವನ ಹಳ್ಳಿಯಲ್ಲಿ ನಡೆಯುವ ಹಲವು ಘಟನೆಗಳ ಸುತ್ತ ‘ವಾರಿಯರ್’ ಸುತ್ತುತ್ತದೆ. ಅದೇನು ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು.
‘ವಾರಿಯರ್’ ಮೇಲ್ನೋಟಕ್ಕೆ ಒಬ್ಬ ರೈತನ ಕಥೆ ಎಂದನಿಸಿದರೂ ಈ ಚಿತ್ರದ ಮೂಲಕ ಹಲವು ವಿಷಯಗಳನ್ನು ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಉಮೇಶ್ ಹೆಬ್ಬಾಳ. ಸದ್ಯ ಚರ್ಚೆಯಾಗುತ್ತಿರುವ ರೈತರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ವಿಷಯದಿಂದ ಪ್ರಾರಂಭಿಸಿ, ಹೆಣ್ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಭ್ರಷ್ಟಾಚಾರದ ವಿರುದ್ಧ ಸಾಮಾನ್ಯರ ಹೋರಾಟ, ರೈತರ ಸ್ವಾಭಿಮಾನ, ಹಳ್ಳಿಗಳಲ್ಲಿ ಸರ್ಕಾರದ ಶಾಲೆಗಳಿಲ್ಲದಿರುವುದು ಮುಂತಾದ ಹಲವು ವಿಷಯಗಳು ಚರ್ಚೆಯಾಗಿವೆ. ಇಲ್ಲಿ ಹಲವು ವಿಷಯಗಳು ಚರ್ಚೆಯಾಗಿವೆಯಾದರೂ, ಯಾವುದರ ಬಗ್ಗೆಯೂ ಆಳವಾಗಿ ಇಳಿಯುವುದಿಲ್ಲ ಮತ್ತು ಯಾವ ವಿಷಯವೂ ಆಳವಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ.
ಚಿತ್ರದಲ್ಲೊಂದು ಗಟ್ಟಿ ಕಥೆ ಇಲ್ಲದೆ, ಹಲವು ವಿಷಯಗಳಿರುವುದರಿಂದ, ಚಿತ್ರ ಆಗಾಗ ಪಥ ಬದಲಿಸುತ್ತಿರುತ್ತದೆ. ಮೊದಲಾರ್ಧದ ಬಹುತೇಕ ರೈತನಿಗೆ ಹೆಣ್ಣು ಸಿಗುತ್ತಿಲ್ಲ ಮತ್ತು ಹುಡುಗಿಗೆ ಆದರ್ಶ ಯುವಕ ಸಿಗುವ ವಿಷಯದ ಸುತ್ತ ಚಿತ್ರ ಸುತ್ತುತ್ತದೆ. ಆಗಾಗ ಹಳ್ಳಿಯಿಂದ ಹೆಣ್ಮಕ್ಕಳು ಕಣ್ಮರೆಯಾಗುವ ದೃಶ್ಯಗಳು ಬರುತ್ತವಾದರೂ, ಅದಕ್ಕೊಂದು ಸ್ಪಷ್ಟತೆ ಸಿಗುವುದು ಕೊನೆಯ ಅರ್ಧ ಗಂಟೆಯಲ್ಲಿ ಮಾತ್ರ. ದ್ವಿತೀಯಾರ್ಧದಲ್ಲಿ ಊರಲ್ಲೊಂದು ಶಾಲೆ ಇಲ್ಲದಿದ್ದರೆ ಏನೆಲ್ಲಾ ಆಗುತ್ತದೆ ಎಂದು ತೋರಿಸಲಾಗಿದೆ. ಹಲವು ವಿಷಯಗಳ ಬಗ್ಗೆ ಹೇಳುವ ಬದಲು, ಮುಖ್ಯ ವಿಷಯದ ಬಗ್ಗೆ ಗಮನಹರಿಸಿದ್ದರೆ, ಆಗ ಚಿತ್ರಕ್ಕೊಂದು ಹದ ಸಿಕ್ಕಿರುತ್ತಿತ್ತು. ಎಲ್ಲವನ್ನೂ ಒಂದೇ ಚಿತ್ರದಲ್ಲಿ ತುರುಕುವುದಕ್ಕೆ ಹೋಗಿ, ಚಿತ್ರ ಜಾಕ್ ಆಫ್ ಆಲ್ ಆಗಿದೆ.
ಉಮೇಶ್ ಹೆಬ್ಬಾಳ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮತ್ತು ನಟನೆ ಮಾಡಿದ್ದಾರೆ. ಚಿತ್ರದ ಮೂಲ ಅಂದರೆ ಬರವಣಿಗೆಯಲ್ಲೇ ಕೆಲವು ಸಮಸ್ಯೆಗಳಿವೆ. ಉಮೇಶ್ ಅವರ ಆಶಯ, ಯೋಚನೆಗಳು ಒಳ್ಳೆಯದೇ. ಆದರೆ, ಅದನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಇನ್ನಷ್ಟು ಶ್ರಮ ಪಡಬೇಕಿತ್ತು. ಇನ್ನು, ಅವರಿಲ್ಲಿ ಧ್ರುವ ಎಂಬ ನಾಯಕನ ಪಾತ್ರ ಮಾಡಿದ್ದಾರೆ. ಹೆಚ್ಚು ಅಬ್ಬರ-ಆಡಂಬರವಿಲ್ಲದ ಪಾತ್ರವನ್ನು ಅಷ್ಟೇ ಸರಳವಾಗಿ ಮಾಡಿದ್ದಾರೆ. ಪಾತ್ರಧಾರಿಗಳ ಪೈಕಿ ಗಮನಸೆಳೆಯುವುದು ಎಂದಿನಂತೆ ಬಲ ರಾಜ್ ವಾಡಿ. ಊರ ಗೌಡನಾಗಿ ಅವರ ಇಷ್ಟವಾಗುತ್ತಾರೆ. ಮಂಡ್ಯ ಸಿದ್ದು ನಗಿಸುವುದಕ್ಕೆ ಸಾಕಷ್ಟು ಶ್ರಮಪಟ್ಟಿದ್ದಾರೆ. ಹಳಿಯ ಪರಿಸರವನ್ನು ಪ್ರಶಾಂತ್ ಸಾಗರ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.


