ಚಿತ್ರ ವಿಮರ್ಶೆ: ಹಳೆಯ ಗಾದೆಗೊಂದು ಹೊಸ ದೃಷ್ಟಿಕೋನ

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

ಚಿತ್ರ: ಹೆಗ್ಗಣ ಮುದ್ದು
ನಿರ್ಮಾಣ: ಧನಂಜಯ
ನಿರ್ದೇಶನ: ಅವಿನಾಶ್ ಬಳೆಕ್ಕಳ
ತಾರಾಗಣ: ಪೂರ್ಣಚಂದ್ರ ಮೈಸೂರು, ಅದಿತಿ ಸಾಗರ್‍, ಶೋಭರಾಜ್‍ ಪಾವೂರು ಮುಂತಾದವರು

ಅದು ಬರೀ ಗೆಳೆತನವಾ? ಅಥವಾ ಇನ್ನೇನಾದರೂನಾ? ಅಥವಾ ತನ್ನ ಹೆಂಡತಿಗೆ ಬೇರೇನಾದರೂ ಅಫೇರ್‍ ಇದೆಯಾ? ಇಂಥದ್ದೊಂದು ಪ್ರಶ್ನೆ ಅಜಿತನ ನಿದ್ದೆ ಗೆಡಿಸುತ್ತದೆ. ಸರಿ, ಈ ಬಗ್ಗೆ ತಿಳಿದುಕೊಳ್ಳಲು ಹೆಂಡತಿ ಮೇಲೆ ಪತ್ತೆದಾರಿಕೆ ಮಾಡುವುದಕ್ಕೆ ಮುಂದಾಗುತ್ತಾನೆ. ಅವಳು ಕೆಲಸ ಮಾಡುವ ಚಿನ್ನದ ಅಂಗಡಿಯ ಸುತ್ತಮುತ್ತ ಇಣುಕಿ, ಅವಳ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕುವುದಕ್ಕೆ ಪ್ರಯತ್ನಿಸುತ್ತಾನೆ. ಅವನ ಸಂಶಯ ನಿಜವಾ? ಪ್ರೇರಣಾಗೆ ಇನ್ನೊಂದು ಅಫೇರ್‍ ಇರುತ್ತದಾ?

ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಮೂಲಕ ‘ಟಗರುಪಲ್ಯ’, ‘ವಿದ್ಯಾಪತಿ’, ‘ಮದರ್‍ ಪ್ರಾಮಿಸ್‍’ ಮುಂತಾದ ವಿಭಿನ್ನ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದಾರೆ. ‘ಹೆಗ್ಗಣ ಮುದ್ದು’ ಸಹ ಬೇರೆಯದೇ ರೀತಿಯ ಪ್ರಯೋಗ ಮತ್ತು ಪ್ರಯತ್ನ. ಇಬ್ಬರು ಬೇರೆಬೇರೆ ಮನಸ್ಥಿತಿಯ ಮತ್ತು ಯೋಚನೆಯವರು ಮದುವೆಯಾದಾಗ, ಅವರ ನಡುವೆ ಏನೆಲ್ಲಾ ಆಗಬಹುದು, ಯಾವೆಲ್ಲಾ ಅತಿರೇಕಕ್ಕೆ ಹೋಗಬಹುದು ಎಂದು ಹೇಳುವ ಚಿತ್ರ.

ಇಲ್ಲಿ ಪ್ರೇರಣಾ ತನ್ನದೇ ಪ್ರಪಂಚದಲ್ಲಿ ಮುಳುಗಿ ಹೋದವಳು. ಯಾವುದನ್ನೂ ಹೇಳಿಕೊಳ್ಳಲಾಗದೇ ಎಲ್ಲವನ್ನೂ ಮನಸ್ಸಿನಲ್ಲಿ ನುಂಗುವವಳು. ಇನ್ನೊಂದು ಕಡೆ, ಅಜಿತ್ ಭಯಂಕರ ವಾಚಾಳಿ. ಸಾಲದ್ದಕ್ಕೆ ಸಿಕ್ಕಾಪಟ್ಟೆ ಪೊಸೆಸಿವ್‍. ಜಾನ್‍ ಅಬ್ರಹಾಂ ಮತ್ತು ಇಮ್ರಾನ್ ಹಶ್ಮಿ ತರಹದ ನಟರು ಅರಬೆತ್ತಲೆಯಾಗಿ ನಟಿಸುವುದರ ಜೊತೆಗೆ ಅವರ ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಕಿಸ್ಸಿಂಗ್‍ ದೃಶ್ಯಗಳು ಇರುವುದರಿಂದ, ಅಂಥವರ ಚಿತ್ರಗಳನ್ನು ನೋಡಬಾರದು ಎಂದು ಹೆಂಡತಿಗೆ ತಾಕೀತು ಮಾಡುತ್ತಿರುತ್ತಾನೆ. ಅಷ್ಟೇ ಅಲ್ಲ, ತಾನು ಮಾಡಿದ್ದೇ ಸರಿ ಎಂದು ವಾದಿಸುವುದರ ಜೊತೆಗೆ, ಯಾವುದೇ ಪಶ್ಚಾತ್ತಾಪವಿಲ್ಲದ ವ್ಯಕ್ತಿತ್ವ ಅವನದು. ಸೇಡು ತೀರಿಸಿಕೊಳ್ಳಬೇಕೆಂದು ತೀರ್ಮಾನಿಸಿಬಿಟ್ಟರೆ, ಯಾವ ಹಂತಕ್ಕೆ ಬೇಕಾದರೂ ಹೋಗುವವ. ಹೀಗೆ ಎರಡು ವಿಭಿನ್ನ ಧ್ರುವಗಳು ಒಂದಾಗುವಾಗ, ಸಂಬಂಧದಲ್ಲಿ ಏನೆಲ್ಲಾ ಆಗುತ್ತದೆ ಎಂದು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅವಿನಾಶ್ ಬಳೆಕ್ಕಳ.

ಮೊದಲ ಪ್ರಯತ್ನದಲ್ಲೇ ಒಂದು ಸಂಕೀರ್ಣವಾದ ಕಥೆಯೊಂದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ಅವಿನಾಶ್. ಅದರಲ್ಲಿ ಅರ್ಧ ಗೆದ್ದಿದ್ದಾರೆ ಕೂಡಾ. ಮೊದಲಾರ್ಧ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರ ಪಥ ಬದಲಿಸುತ್ತದೆ. ಚಿತ್ರ ಹೇಗೆ ಮುಗಿಸಬೇಕು ಎಂಬ ಗೊಂದಲ ನಿರ್ದೇಶಕರನ್ನು ಕಾಡಿರುವುದ ಸ್ಪಷ್ಟವಾಗುತ್ತದೆ. ದಾಂಪತ್ಯದ ಆಚೆಗೆ ಇನ್ನೇನೋ ಆಗುತ್ತದೆ. ಒಂದೊಳ್ಳೆಯ ಫ್ಯಾಮಿಲಿ ಡ್ರಾಮಾ ಆಗಬಹುದಾಗಿದ್ದ ಚಿತ್ರ, ಕ್ರೈಂ ಥ್ರಿಲ್ಲರ್‍ ಆಗುತ್ತದೆ. ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದೆಲ್ಲದರಿಂದ ಚಿತ್ರ ಸ್ವಲ್ಪ ಕುಗ್ಗುತ್ತದೆ.

ಇಡೀ ಚಿತ್ರ ಪೂರ್ಣ ಮತ್ತು ಅದಿತಿ ಪಾತ್ರಗಳ ಸುತ್ತ ಸುತತುತ್ತದೆ ಮತ್ತು ಇಬ್ಬರ ಅಭಿನಯ ಚಿತ್ರದ ಹೈಲೈಟ್‍ ಎಂದರೆ ತಪ್ಪಿಲ್ಲ. ಪೂರ್ಣ ತಮಗೆ ಸಿಕ್ಕ ಪಾತ್ರಗಳಲ್ಲಿ ಮಿಂಚುತ್ತಲೇ ಬಂದಿದ್ದಾರೆ. ಆದರೆ, ‘ಹೆಗ್ಗಣ ಮುದ್ದು’ ಮೂಲಕ ಸಿಕ್ಸರ್‍ ಬಾರಿಸಿದ್ದಾರೆ. ದೊಡ್ಡ ತಪ್ಪು ಮಾಡಿ ಬಂದು, ಅದನ್ನ ಸಮರ್ಥಿಸಿಕೊಳ್ಳುವ ಒಂದು ದೃಶ್ಯ ಅವರ ಪ್ರತಿಭೆಗೆ ಸಾಕ್ಷಿ. ಇನ್ನು, ಏನನ್ನೂ ಹೇಳದೆ, ಎಲ್ಲವನ್ನೂ ಮುಖದಲ್ಲೇ ಅಭಿವ್ಯಕ್ತಿಗೊಳಿಸುವ ಅದಿತಿ ಸಹ ಇಷ್ಟವಾಗುತ್ತಾರೆ. ಅಜಿತನ ಪಾತ್ರಕ್ಕೆ ಹೋಲಿಸಿದರೆ, ಪ್ರೇರಣಾ ಪಾತ್ರಕ್ಕೆ ಸ್ಕೋಪ್‍ ಕಡಿಮೆಯಾಯಿತು ಎಂದನಿಸುವುದು ಹೌದು.

‘ಹೆತ್ತೋರಿಗೆ ಹೆಗ್ಗಣ ಮುದ್ದು’ ಎಂಬ ಗಾದೆ ಎಲ್ಲರಿಗೂ ಗೊತ್ತಿದೆ. ಇಲ್ಲಿ ಹೆತ್ತವರು ಎನ್ನುವುದಕ್ಕಿಂತ, ಒಂದು ಸಂಬಂಧ ಉಳಿಯಬೇಕು, ಗಟ್ಟಿಯಾಗಿರಬೇಕು ಎಂದರೆ ಕ್ಷಮೆ ಮತ್ತು ರಾಜಿ ಬಹಳ ಮುಖ್ಯ. ಒಂದು ತಪ್ಪನ್ನು ಕ್ಷಮಿಸಿದರೆ, ರಾಜಿ ಮಾಡಿಕೊಂಡರೆ ಆಗ ಎಂಥಾ ದಾಂಪತ್ಯ ಬೇಕಾದರೂ ಉಳಿಯುತ್ತದೆ ಎಂಬ ಹೊಸ ದೃಷ್ಟಿಕೋನದಲ್ಲಿ ಹೇಳಲಾಗಿದೆ. ಹಳೆಯ ಗಾದೆಗೊಂದು ಹೊಸ ದೃಷ್ಟಿಕೋನಕೊಟ್ಟಿರುವ ಚಿತ್ರವನ್ನು ಒಮ್ಮೆ ಖಂಡಿತಾ ನೋಡಬಹುದು.

ಚಿತ್ರ ವಿಮರ್ಶೆ: ಚಿನ್ನದ ಕಿರೀಟಕ್ಕಾಗಿ ರಕ್ತಾಭಿಷೇಕಂ

Discover more from KannadaScreens

Subscribe now to keep reading and get access to the full archive.

Continue reading