1 ‘ಕೋಟಿ’ಯಿಂದ ಇನ್ನಷ್ಟು ಕೋಟಿಗಳವರೆಗೂ …

ಚಂದನವನ, ಸಿನಿ ಸುದ್ದಿ

  • ಚೇತನ್‍ ನಾಡಿಗೇರ್

 

ಧನಂಜಯ್‍ ಅಭಿನಯದ ‘ಕೋಟಿ’ ಚಿತ್ರವು ಇದೇ ಜೂನ್‍ 14ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರ ಜೋರಾಗಿ ನಡೆಯುತ್ತಿದೆ. ಚಿತ್ರದ ಬಗ್ಗೆ ಒಂದಿಷ್ಟು ಕುತೂಹಲವೇನೋ ಇದೆ. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಏನಾಗುತ್ತದೋ ಗೊತ್ತಿಲ್ಲ. ಕನ್ನಡ ಚಿತ್ರರಂಗ ಆರು ತಿಂಗಳಲ್ಲಿ ಒಂದು ದೊಡ್ಡ ಹಿಟ್‍ ನೋಡಿಲ್ಲ. ಹಾಗಾಗಿ, ಚಿತ್ರ ಗೆಲ್ಲಬೇಕು ಎಂದು ಹೇಳುವವರು ಒಂದು ಕಡೆಯಾದರೆ, ಇನ್ನೊಂದು ದೃಷ್ಟಿಯಲ್ಲಿ ‘ಕೋಟಿ’ ಗೆದ್ದರೆ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಕೋಟಿಗಳ ಬಂಡವಾಳ ಹರಿದುಬರುವ, ಇನ್ನಷ್ಟು ಚಿತ್ರಗಳು ನಿರ್ಮಾಣವಾಗುವ ಸಾಧ್ಯತೆ ಇದೆ.

‘ಕೋಟಿ’ ಚಿತ್ರವನ್ನು ನಿರ್ಮಿಸಿರುವುದು ಮುಂಬೈನ ಜಿಯೋ ಸ್ಟುಡಿಯೋಸ್‍. ಬೇರೆ ಭಾಷೆಯ ಚಿತ್ರರಂಗಗಳ ಜನಪ್ರಿಯ ನಿರ್ಮಾಣ ಸಂಸ್ಥೆಗಳು ಕನ್ನಡ ಚಿತ್ರರಂಗದಲ್ಲಿ ಆಗಾಗ ಚಿತ್ರಗಳನ್ನು ನಿರ್ಮಿಸಿವೆ. ಎ.ವಿ.ಎಂ ಸ್ಟುಡಿಯೋಸ್‍, ಪಕ್ಷಿರಾಜ ಸ್ಟುಡಿಯೋಸ್‍, ಪದ್ಮಾಲಯ ಸ್ಟುಡಿಯೋಸ್‍, ಸುರೇಶ್‍ ಪ್ರೊಡಕ್ಷನ್ಸ್, ವಿಜಯ ಪ್ರೊಡಕ್ಷನ್ಸ್, ಗೀತಾ ಆರ್ಟ್ಸ್, ಉಷಾಕಿರಣ್‍ ಮೂವೀಸ್ ಮುಂತಾದ ತೆಲುಗು-ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆಗಳು ಕನ್ನಡದಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡಿವೆ. ಈ ಪೈಕಿ ರಾಮೋಜಿ ರಾವ್‍ ಅವರ ಉಷಾಕಿರಣ್‍ ಮೂವೀಸ್‍, ಕನ್ನಡದಲ್ಲಿ ಎಂಟು ಸಿನಿಮಾಗಳನ್ನು ನಿರ್ಮಿಸುವುದು ಬಿಟ್ಟರೆ, ಬೇರೆ ಯಾರು ಸಹ ದೊಡ್ಡ ಮಟ್ಟದಲ್ಲಿ ಕನ್ನಡ ಚಿತ್ರ ನಿರ್ಮಾಣ ಮಾಡಿಲ್ಲ.

ಇನ್ನು, ಬಾಲಿವುಡ್‍ನಲ್ಲಿ ಅಷ್ಟೊಂದು ಬಹುರಾಷ್ಟ್ರೀಯ ಸ್ಟುಡಿಯೋ ಮತ್ತು ಜನಪ್ರಿಯ ನಿರ್ಮಾಣ ಸಂಸ್ಥೆಗಳಿದ್ದರೂ, ಅವು ತೆಲುಗು, ತಮಿಳು, ಬಂಗಾಲಿ, ಮರಾಠಿ ಸೇರಿದಂತೆ ಬೇರೆ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಿದರೂ, ಕನ್ನಡದಿಂದ ದೂರವೇ ಉಳಿದಿವೆ. ಕೆಲವು ವರ್ಷಗಳ ಹಿಂದೆ ರಿಲಿಯನ್ಸ್ ಎಂಟರ್‍ಟೈನ್‍ಮೆಂಟ್ ಸಂಸ್ಥೆಯು ಕನ್ನಡದಲ್ಲಿ ಎಂ.ಎಸ್‍. ಸತ್ಯು ನಿರ್ದೇಶನದಲ್ಲಿ ‘ಇಜ್ಜೋಡು’ ಎಂಬ ಚಿತ್ರ ನಿರ್ಮಿಸಿತು. ಗಿರೀಶ್‍ ಕಾಸರವಳ್ಳಿ ಸೇರಿದಂತೆ ಇನ್ನೊಂದಿಷ್ಟು ನಿರ್ದೇಶಕರ ಜೊತೆಗೆ ಚಿತ್ರ ಮಾಡುವುದಕ್ಕೆ ಮುಂದಾಯಿತು. ಆದರೆ, ಅದ್ಯಾವ ಚಿತ್ರಗಳೂ ಕಾರ್ಯರೂಪಕ್ಕೆ ಬರಲಿಲ್ಲ ಮತ್ತು ‘ಇಜ್ಜೋಡು’ ಸಹ ಗೆಲ್ಲಲ್ಲಿಲ್ಲ.

ಜೀ ಸ್ಟುಡಿಯೋಸ್‍ ಸಹ ಕೆಲವು ವರ್ಷಗಳ ಹಿಂದೆ ಕನ್ನಡಕ್ಕೆ ಬಂದಿತ್ತು. ಸ್ವತಂತ್ರವಾಗಿ ಅಲ್ಲದಿದ್ದರೂ, ರಾಕ್‍ಲೈನ್‍ ವೆಂಕಟೇಶ್‍ ಅವರ ಜೊತೆಗೆ ಪಾಲುದಾರಿಕೆಯಲ್ಲಿ ‘ಮನಸು ಮಲ್ಲಿಗೆ’ ಎಂಬ ಚಿತ್ರ ನಿರ್ಮಿಸಿತು. ಇದು ಮರಾಠಿಯ ‘ಸೈರಾತ್‍’ ಚಿತ್ರದ ರೀಮೇಕ್‍ ಆಗಿತ್ತು. ಈ ಚಿತ್ರವೂ ಸೋತು ಹೋಗಿದ್ದರಿಂದ, ಜೀ ಸ್ಟುಡಿಯೋಸ್‍ ಚಿತ್ರ ನಿರ್ಮಾಣ ಮುಂದುವರೆಸಲಿಲ್ಲ. 2007ರಲ್ಲಿ ತಮಿಳಿನ ಪಿರಮಿಡ್‍ ಸಾಯ್ಮಿರಾ ಸಂಸ್ಥೆಯು ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್‍ ರಾಜಕುಮಾರ್ ಅಭಿನಯದಲ್ಲಿ ‘ಓಂ’ ಚಿತ್ರ ನಿರ್ಮಿಸುವುದಾಗಿ, ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ಘೋಷಿಸಿತ್ತು. ರವಿ ಶ್ರೀವತ್ಸ ಈ ಚಿತ್ರವನ್ನು ನಿರ್ಮಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಈ ಚಿತ್ರ ಶುರುವಾಗಲೇ ಇಲ್ಲ. ಮಿಕ್ಕಂತೆ ಜೀ ಸ್ಟುಡಿಯೋಸ್‍, ರಿಲಯನ್ಸ್ ಸೇರಿದಂತೆ ಕೆಲವು ದೊಡ್ಡ ಬಹುರಾಷ್ಟ್ರೀಯ ಚಿತರರ ನಿರ್ಮಾಣ ಮತ್ತು ವಿತರಣಾ ಸಂಸ್ಥೆಗಳು ಕನ್ನಡ ಚಿತ್ರಗಳ ವಿತರಣೆ ಮಾಡಿವೆಯಾದರೂ, ನಿರ್ಮಾಣದಲ್ಲಿ ಮುಂದುವರೆಯಲಿಲ್ಲ.

ಹೀಗಿರುವಾಗಲೇ ಜಿಯೋ ಸ್ಟುಡಿಯೋಸ್‍, ಕನ್ನಡದಲ್ಲಿ ಒಂದಿಷ್ಟು ಚಿತ್ರಗಳನ್ನು ನಿರ್ಮಿಸಬೇಕು ಎಂಬ ಉದ್ದೇಶದೊಂದಿಗೆ ‘ಕೋಟಿ’ ಚಿತ್ರದ ಮೂಲಕ ಕಾಲಿಟ್ಟಿದೆ. ಜಿಯೋ ಸ್ಟುಡಿಯೋಸ್‍ ಸಹ ರಿಲಯನ್ಸ್ ಎಂಟರ್‍ಟೈನ್‍ಮೆಂಟ್‍ ಲಿಮಿಟಿಡ್‍ನ ಒಂದು ಅಂಗಸಂಸ್ಥೆಯೇ. ಈ ಚಿತ್ರವನ್ನು ಜ್ಯೋತಿ ದೇಶಪಾಂಡೆ ಮುನ್ನಡೆಸುತ್ತಿದ್ದು, ಈ ವರ್ಷ ಹಿಂದಿಯಲ್ಲಿ ಬಿಡುಗಡೆಯಾದ ‘ತೇರಿ ಬಾತೋಂ ಮೇ ಐಸಾ ಉಲ್ಜಾ ಜಿಯಾ’, ‘ಆರ್ಟಿಕಲ್‍ 370’, ‘ಲಾಪತಾ ಲೇಡೀಸ್‍’, ‘ಶೈತಾನ್‍’ ಮುಂತಾದ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿಯಲ್ಲದೆ ಗುಜರಾತಿ, ಮರಾಠಿ ಮತ್ತು ಬಂಗಾಲಿ ಚಿತ್ರಗಳನ್ನು ಇತ್ತೀಚಿನ ದಿನಗಳಲ್ಲಿ ನಿರ್ಮಿಸಿದ್ದಾರೆ.

ದಕ್ಷಿಣದ ಬೇರೆ ಮೂರು ಭಾಷೆಗಳನ್ನು ಬಿಟ್ಟು ಜಿಯೋ ಸ್ಟುಡಿಯೋಸ್‍ ಮತ್ತು ಜ್ಯೋತಿ ದೇಶಪಾಂಡೆ ಅವರು ಕನ್ನಡಕ್ಕೆ ಏಕೆ ಬಂದಿರಬಹುದು ಎಂದರೆ, ಅದಕ್ಕೆ ಎರಡು ಕಾರಣಗಳಿರಬಹುದು. ಒಂದು ನಿರ್ದೇಶಕ ಪರಮೇಶ್ವರ್‍ ಗುಂಡ್ಕಲ್‍ ಅದೇ ರಿಲಯನ್ಸ್ನ ಇನ್ನೊಂದು ಅಂಗಸಂಸ್ಥೆಯಾದ ಕಲರ್ಸ್ ಕನ್ನಡವನ್ನು ಒಂದು ದಶಕದ ಕಾಲ ಮುನ್ನಡೆಸಿದವರು. ಹಲವು ಕಾರ್ಯಕ್ರಮಗಳನ್ನು ರೂಪಿಸಿ, ವಾಹಿನಿಯನ್ನು ಜನಪ್ರಿಯಗೊಳಿಸಿ, ಮುನ್ನಲೆಗೆ ತಂದವರು. ಸಹಜವಾಗಿಯೇ, ಪರಮ್‍ ನಿರ್ದೇಶನದ ಚಿತ್ರವಾದ್ದರಿಂದ ನಿರ್ಮಾಣಕ್ಕೆ ಮುಂದಾಗಿರಬಹುದು. ಇನ್ನು, ಅನಾದಿ ಕಾಲದಿಂದಲೂ ಕನ್ನಡದಲ್ಲಿ ಒಂದು ಪ್ರಯೋಗ ಗೆದ್ದರೆ, ಅದು ಎಲ್ಲ ಕಡೆ ಗೆಲ್ಲುತ್ತದೆ ಎಂಬ ನಂಬಿಕೆ ಇದೆ. ‘ಕೋಟಿ’ ಚಿತ್ರ ಸಹ ಕಮರ್ಷಿಯಲ್ ಚಿತ್ರವಾದರೂ, ಅಂಥದ್ದೇ ಒಂದು ವಿಭಿನ್ನ ಪ್ರಯೋಗ ಎಂದು ಚಿತ್ರತಂಡದವರು ಹೇಳಿಕೊಂಡು ಬಂದಿರುವುದರಿಂದ, ಕನ್ನಡದಿಂದಲೇ ಶುರು ಮಾಡುವ ಯೋಚನೆ ಇರಬಹುದು. ಹಾಗಾಗಿ, ‘ಕೋಟಿ’ ಇವತ್ತು ಒಂದು ಚಿತ್ರವಾಗಿ ರೂಪುಗೊಂಡಿದೆ.

ಇದಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳನ್ನು ಮತ್ತು ವೆಬ್‍ಸರಣಿಗಳನ್ನು ನಿರ್ಮಿಸಿಬೇಕೆಂದು ಜಿಯೋ ಸ್ಟುಡಿಯೋಸ್‍ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕವಾಗಿ ಒಂದಿಷ್ಟು ಕೆಲಸಗಳು ಸಹ ತೆರೆಮರೆಯಲ್ಲಿ ನಡೆಯುತ್ತಿವೆ. ಅವೆಲ್ಲವೂ ‘ಕೋಟಿ’ಯ ಯಶಸ್ಸಿನ ಮೇಲೆ ನಿಂತಿದೆ. ಈಗಾಗಲೇ ಜಿಯೋದ ಮೊದಲ ಕನ್ನಡ ವೆಬ್‍ ಸರಣಿ ‘ಲವ್‍ ಯೂ ಅಭಿ’ ಅಷ್ಟೇನೂ ಯಶಸ್ವಿಯಾಗಲಿಲ್ಲ. ಹಾಗಾಗಿ, ‘ಕೋಟಿ’ ಚಿತ್ರದ ಮೇಲೆ ಒತ್ತಡ ಸಹಜವಾಗಿಯೇ ಹೆಚ್ಚಿದೆ. ‘ಕೋಟಿ’ ಗೆದ್ದರೆ ಜಿಯೋ ಸ್ಟುಡಿಯೋಸ್‍, ಕನ್ನಡದಲ್ಲಿ ಇನ್ನಷ್ಟು ಚಿತ್ರಗಳನ್ನು ನಿರ್ಮಿಸುವ ಮತ್ತು ಕನ್ನಡಕ್ಕೆ ಇನ್ನಷ್ಟು ಕೋಟಿ ಬಂಡವಾಳ ಹೂಡುವ ನಿರೀಕ್ಷೆ ಇದೆ. ಇದರಿಂದ ಒಂದಿಷ್ಟು ಪ್ರತಿಭೆಗಳಿಗೆ ಅವಕಾಶ ಸಿಗಲಿವೆ. ಚಿತ್ರನಿರ್ಮಾಣಕ್ಕೊಂದು ವೃತ್ತಿಪರತೆ ಬರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದಲ್ಲಿ ಮಾರುಕಟ್ಟೆಯೇ ಇಲ್ಲ ಎಂಬ ಮಾತನ್ನು ಸುಳ್ಳಾಗಿಸಬೇಕಾಗಿದೆ. ಆ ನಿಟ್ಟಿನಲ್ಲಿ ‘ಕೋಟಿ’ ಬಹಳ ಮುಖ್ಯ ಎಂದರೆ ತಪ್ಪಿಲ್ಲ. ಚಿತ್ರದ ಮೇಲೆ ಇರುವ ನಿರೀಕ್ಷೆಗಳಿಗೆ ‘ಕೋಟಿ’ ನಿಲುಕುತ್ತಾನಾ? ಈ ಪ್ರಶ್ನೆಗೆ ಜೂನ್‍ 14ರಂದು ಉತ್ತರ ಸಿಗಬೇಕಿದೆ.

ಮುಂದುವರೆಯುತ್ತದೆ …

‘ಕೋಟಿ’ ಚಿತ್ರದ ಮೊದಲ‌ ಟಿಕೇಟ್ ‘ಕಿಚ್ಚ’ ಸುದೀಪ್‍ಗೆ …