ಚಿತ್ರ: ಭಾವಾಂತರ
ನಿರ್ದೇಶನ: ಕಾರ್ತಿಕ್ ಶರ್ಮಸ
ನಿರ್ಮಾಣ: ಕಾರ್ತಿಕ್ ಶರ್ಮಾ, ಪ್ರತಾಪ್ ಕೃಷ್ಣ ಮತ್ತು ಮನೋಜ್ ಕುಮಾರ್
ತಾರಾಗಣ: ಕಾರ್ತಿಕ್ ಶರ್ಮ, ತನ್ವಿ ರಾವ್, ಪ್ರಣವ್ ಶ್ರೀಧರ್, ಶ್ರೀ ವೈಷ್ಣವ್, ವೇದಾ ರಾವ್ ಮುಂತಾದವರು
ಆಕೆ ಏನೋ ಕಳೆದುಕೊಂಡಿದ್ದಾಳೆ. ಆ ನೋವು, ಭಾರ ಅವಳ ಮುಖದಲ್ಲಿ ಮತ್ತು ಆಕೆಯ ಮಾತುಗಳಲ್ಲಿ ಎದ್ದು ಕಾಣುತ್ತದೆ. ಆದರೆ, ಅದನ್ನು ಯಾರ ಬಳಿಯೂ ಹೇಳಿಕೊಳ್ಳಳು ಅವಳು. ಆ ನೋವಿನಲ್ಲೇ ದಿನಗಳನ್ನು ಕಳೆಯುವ ಅವಳಿಗೆ, ಸಾಕ್ಷ್ಯಚಿತ್ರವೊಂದನ್ನು ರೂಪಿಸುವುದಕ್ಕಾಗಿ ತಮಿಳು ನಾಡಿನ ವಿಲ್ಲುಪುರಂ ಎಂಬ ಊರಿಗೆ ಹೋಗಬೇಕಾಗುತ್ತದೆ. ಅಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಂಗಳಮುಖಿಯರ ಉತ್ಸವವನ್ನು ಸೆರೆಹಿಡಿಯುವ ಅವಕಾಶ ಸಿಗುತ್ತದೆ. ಆ ಒಂದು ಉತ್ಸವ ಅವಳ ಜೀವನವನ್ನೇ ಬದಲಿಸುತ್ತದೆ. ಇಷ್ಟಕ್ಕೂ ಅಂಥದ್ದೇನಾಗುತ್ತದೆ ಎಂದು ಗೊತ್ತಾಗಬೇಕಿದ್ದರೆ ‘ಭಾವಾಂತರ’ ನೋಡಬೇಕು.
ಕನ್ನಡದಲ್ಲಿ ಇದುವರೆಗೂ ಮಂಗಳಮುಖಿಯರ ಬದುಕು-ಬವಣೆಗಳ ಕುರಿತು ಕೆಲವು ಚಿತ್ರಗಳು ಬಂದಿವೆ. ಈ ವಾರ ಬಿಡುಗಡೆಯಾಗಿರುವ ಕಾರ್ತಿಕ್ ಶರ್ಮ ನಿರ್ದೇಶನದ ‘ಭಾವಾಂತರ’, ಆ ಎಲ್ಲಾ ಕಥೆಗಳಿಗಿಂತ ವಿಭಿನ್ನವಾಗಿರುವುದರ ಜೊತೆಗೆ ಬಹಳಷ್ಟು ಜನರಿಗೆ ತಿಳಿಯದ ಒಂದು ಆಚರಣೆ ಹಾಗೂ ವಾಸ್ತವ ಸಂಗತಿಗಳನ್ನು ತೆರೆದಿಟ್ಟಿದೆ.
ಹಾಗಂತ ‘ಭಾವಂತರ’, ಬರೀ ಮಂಗಳಮುಖಿಯರ ಬದುಕು-ಬವಣೆಯ ಸುತ್ತವೇ ಸಾಗುವ ಕಥೆಯಲ್ಲ. ಅದೊಂದು ಕಥೆಯ ಭಾಗವಷ್ಟೇ. ಅದರಾಚೆ ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯೊಂದಿದೆ. ಅದರ ಜೊತೆಗೆ ಮಂಗಳಮುಖಿಯರ ಸಮುದಾಯದ ಬದುಕು, ಭಾವನೆಗಳು, ನೋವು, ಹತಾಶೆ ಹಾಗೂ ಹೋರಾಟವನ್ನು ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ.
ಹಲವು ವರ್ಷಗಳ ಹಿಂದೆ ಬಾಲನಟನಾಗಿ ಗುರುತಿಸಿಕೊಂಡಿದ್ದ, ಆ ನಂತರ ಗಾಯಕ-ಸಂಗೀತ ನಿರ್ದೇಶಕರಾದ ಕಾರ್ತಿಕ್ ಶರ್ಮ, ‘ಭಾವಾಂತರ’ ಮೂಲಕ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಂಗೀತ ಸಂಯೋಜಿಸುವುದರ ಜೊತೆಗೆ ನಟನೆ, ನಿರ್ದೇಶನವನ್ನೂ ಮಾಡಿದ್ದಾರೆ. ಈ ತರಹದ್ದೊಂದು ಚಿತ್ರ ಮಾಡುವುದು ಸವಾಲಿನ ಕೆಲಸ. ಅದನ್ನು ಮೊದಲೇ ಪ್ರಯತ್ನದಲ್ಲೇ ಸ್ವೀಕರಿಸುವುದರ ಜೊತೆಗೆ ಗಮನಸೆಳೆಯುತ್ತಾರೆ ಕಾರ್ತಿಕ್.
ಕಾರ್ತಿಕ್ಗೆ ಈ ಕಥೆಯಲ್ಲಿ ಏನು ಹೇಳಬೇಕು ಮತ್ತು ಎಷ್ಟು ಹೇಳಬೇಕು ಎಂಬ ಸ್ಪಷ್ಟತೆ ಇದೆ. ಹಾಗಾಗಿ, ಅವರು ಒಂದುಮುಕ್ಕಾಲು ತಾಸಿನಲ್ಲಿ ಹೆಚ್ಚು ಎಳೆಯದೆ, ಕಥೆಯನ್ನು ಕಟ್ಟಿ ಕೊಟ್ಟಿದ್ದಾರೆ. ಅದರ ಹೊರತಾಗಿಯೂ ಚಿತ್ರ ನಿಧಾನವೆನಿಸಬಹುದು. ಇಂಥ ಚಿತ್ರಗಳ ದೊಡ್ಡ ಸಮಸ್ಯೆಯೆಂದರೂ, ಸ್ವಲ್ಪ ಆಚೀಚೆಯಾದರೂ ಅದು ಸಾಕ್ಷ್ಯಚಿತ್ರವಾಗಿಬಿಡುತ್ತದೆ. ಆದರೆ, ಇದನ್ನು ಸಾಕ್ಷ್ಯಚಿತ್ರವನ್ನಾಗಿಸದೆ, ಭಾವನೆಗಳನ್ನು ತುಂಬಿ, ಮನಮುಟ್ಟುವಂತೆ ನಿರೂಪಿಸಿದ್ದಾರೆ. ಇಲ್ಲಿ ಪ್ರೀತಿ, ತ್ಯಾಗ, ತೊಳಲಾಟ, ದ್ರೋಹ, ನೋವು ಎಲ್ಲವೂ ಬೆರೆತಿದೆ. ಮನರಂಜನೆ ಮತ್ತು ಹೀರೋಯಿಸಂ ನಿರೀಕ್ಷಿಸುವವರಿಗೆ ಈ ಚಿತ್ರ ನಿರಾಸೆ ಮೂಡಿಸಬಹುದು.
ನಾಯಕನಾಗಿ ನಟಿಸಿರುವ ಮೊದಲ ಚಿತ್ರದಲ್ಲೇ ಎರಡು ಶೇಡ್ಗಳ ಪಾತ್ರವನ್ನು ಕಾರ್ತಿಕ್ ಚೆನ್ನಾಗಿ ನಿಭಾಯಿಸಿದ್ದಾರೆ. ಇನ್ನು, ಚಿತ್ರದ ಹೈಲೈಟ್ ಎಂದರೆ ಅದು ತನ್ವಿ ರಾವ್ ಅಭಿನಯ. ರಾಧೆ ಪಾತ್ರದಲ್ಲಿ ಅವರು ಹಲವು ಭಾವನೆಗಳನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಇಬ್ಬರಲ್ಲೊಬ್ಬರಿಗೆ ಪ್ರಶಸ್ತಿ ಗ್ಯಾರಂಟಿ ಎನ್ನುವಂತೆ ಕಾರ್ತಿಕ್ ಮತ್ತು ತನ್ವಿಯ ಅಭಿನಯ ಪೈಪೋಟಿಯಿಂದ ಕೂಡಿದೆ.
‘ಭಾವಾಂತರ’ ಚಿತ್ರದಲ್ಲಿ ಕಾರ್ತಿಕ್ ಮತ್ತು ತನ್ವಿ ಜೊತೆಗೆ ಪ್ರಣವ್ ಶ್ರೀಧರ್, ಶ್ರೀ ವೈಷ್ಣವ್, ವೇದಾ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲರೂ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಛಾಯಾಗ್ರಾಹಕ ಸಾಗರ್ ಆಥಡ್ಕರ್ ಇಡೀ ಚಿತ್ರವನ್ನು ಬಹಳ ಕಟ್ಟಿಕೊಟ್ಟಿದ್ದಾರೆ. ಹಾಡುಗಳ ಪೈಕಿ ‘ಮೊದಮೊದಲು …’ ಹೆಚ್ಚು ಆಪ್ತವೆನಿಸುತ್ತದೆ.


