ಸೋತಾಗ ಮಾತ್ರ ಕನ್ನಡ, ಕನ್ನಡಿಗ, ಕನ್ನಡತನ ನೆನಪಾಗಬಾರದು …

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ನಾವ್ಯಾಕೆ ಹೊಸ ಪ್ರಯೋಗಗಳನ್ನು ಒಪ್ಪಿಕೊಳ್ಳುತ್ತಿಲ್ಲ? ಹೊಸ ಮನಸ್ಥಿತಿಗೆ ಯಾಕೆ ತೆರೆದುಕೊಳ್ಳುತ್ತಿಲ್ಲ?

ಕನ್ನಡಿಗರು ಹೊಸ ಪ್ರಯೋಗಗಳನ್ನು ಮಾಡಿದಾಗ ಯಾಕೆ ಸಹಿಸಿಕೊಳ್ಳುವುದಿಲ್ಲ?

ಕನ್ನಡಿಗರಿಗೆ ಸ್ವಾಭಿಮಾನ ಇಲ್ಲವಾ? ನಮ್ಮ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲವಾ?

‘ಟಾಕ್ಸಿಕ್’ ಚಿತ್ರ ಬಿಡುಗಡೆಯಾಗಿ ಕಳೆದ ನಾಲ್ಕು ದಿನಗಳಲ್ಲಿ ಇಂತಹ ಸಾಕಷ್ಟು ಪ್ರಶ್ನೆಗಳು ಕೇಳಿ ಬರುತ್ತಿವೆ. ಚಿತ್ರ ಚೆನ್ನಾಗಿದೆ ಎಂದವರ ತಲೆ ಸರಿ ಇಲ್ಲ ಎಂದು ತೀರ್ಮಾನಿಸಲಾಗುತ್ತಿದೆ. ಚಿತ್ರ ಚೆನ್ನಾಗಿಲ್ಲ ಎಂದವರನ್ನು ಕನ್ನಡ ದ್ರೋಹಿಗಳು ಅಥವಾ ಹೊಸ ಪ್ರಯೋಗಗಳನ್ನು ಇಷ್ಟಪಡದವರು ಎಂದು ಬಿಂಬಿಸಲಾಗುತ್ತಿದೆ. ಏನು ಅಭಿಪ್ರಾಯ ಹೇಳಿದರೆ, ಏನಾಗುತ್ತದೋ ಎಂದು ಭಯಪಡುವವರು ಇದ್ದಾರೆ. ಏನೋ ಹೇಳಿ, ಇನ್ನೇನೋ ಇಕ್ಕಟ್ಟಿಗೆ ಸಿಲುಕುವುದೇ ಬೇಡ ಎಂದು, ಚಿತ್ರ ಇಷ್ಟವಾಗದಿದ್ದರೂ ಇಷ್ಟವಾಯ್ತು ಎಂದು ತೇಲಿಸುವವರಿದ್ದಾರೆ.

‘ಟಾಕ್ಸಿಕ್‍’, ಕನ್ನಡದ ಮೊದಲ ಚಿತ್ರವಲ್ಲ. ಕೊನೆಯ ಚಿತ್ರವೂ ಅಲ್ಲ. ಆಯಾ ಕಾಲಕ್ಕೆ ತಕ್ಕಂತೆ ಎಲ್ಲಾ ಭಾಷೆಗಳಲ್ಲೂ ದೊಡ್ಡ ಬಜೆಟ್‍ನ ಚಿತ್ರಗಳನ್ನು ಚಿತ್ರರಂಗದವರು ಮತ್ತು ಪ್ರೇಕ್ಷಕರು ಇಬ್ಬರೂ ನೋಡಿದ್ದಾರೆ. ಹಾಗೆ ಬಿಡುಗಡೆಯಾದ ಅಸಂಖ್ಯಾತ ಚಿತ್ರಗಳ ಪೈಕಿ ‘ಟಾಕ್ಸಿಕ್‍’ ಸಹ ಒಂದು ಅಷ್ಟೇ. ಸುಮಾರು ನಾಲ್ಕು ವರ್ಷಗಳ ನಂತರ ಯಶ್‍ ಅಭಿನಯದ ಚಿತ್ರವೊಂದು ಬಿಡುಗಡೆ ಆಗಿದೆ ಮತ್ತು ಅವರ ಹಿಂದಿನ ಚಿತ್ರ ‘ಕೆಜಿಎಫ್‍ 2’ ದೊಡ್ಡ ಯಶಸ್ಸು ಕಂಡಿತ್ತು ಎಂಬ ಕಾರಣಕ್ಕೆ ‘ಟಾಕ್ಸಿಕ್‍’ ಸಾಕಷ್ಟು ಹೈಪ್‍ ಪಡೆದಿತ್ತು. ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳೊಂದಿಗೆ ಚಿತ್ರ ಬಿಡುಗಡೆ ಆಗಿತ್ತು. ಆದರೆ, ಚಿತ್ರ ಆ ಕುತೂಹಲ ಮತ್ತು ನಿರೀಕ್ಷೆಗಳಿಗೆ ತಕ್ಕ ಹಾಗೆ ನಿಲುಕಲಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ‍್ಳಬೇಕು.

ಹಾಗಂತ ಅದು ಅಪರಾಧವೇನಿಲ್ಲ. ದೊಡ್ಡ ಪ್ರಯತ್ನವೊಂದಕ್ಕೆ ಕೈ ಹಾಕಿದಾಗ, ಸಹಜವಾಗಿಯೇ ಕೆಲವು ಎಡವಟ್ಟುಗಳಾಗುತ್ತವೆ. ಎಲ್ಲೋ ಅಂದುಕೊಂಡಿದ್ದು ತೆರೆಗೆ ತರುವುದಕ್ಕೆ ಸಾಧ್ಯವಾಗುವುದಿಲ್ಲ. ‘ಟಾಕ್ಸಿಕ್‍’ ಚಿತ್ರದಲ್ಲೂ ಒಳ್ಳೆಯ ಅಂಶಗಳಿವೆ. ಅದು ಸರಿಯಾಗಿ ಅಭಿವ್ಯಕ್ತಿಗೊಳಿಸುವುದಕ್ಕೆ ಸಾಧ್ಯವಾಗಿಲ್ಲ ಅಷ್ಟೇ. ಚಿತ್ರದ ಯೋಚನೆ, ಮೇಕಿಂಗ್‍, ಯಶ್‍ ಅಭಿನಯ, ಕಲಾ ನಿರ್ದೇಶನ, ಛಾಯಾಗ್ರಹಣ ಇವೆಲ್ಲಾ ಚೆನ್ನಾಗಿದೆಯಾದರೂ, ಚಿತ್ರ ಬಹಳ ಸುಧೀರ್ಘವಾಗಿದೆ, ಒಂದು ಹಂತದಲ್ಲಿ ಬೋರ್‍ ಹೊಡೆಸುತ್ತದೆ, ಹಿಂಸೆ-ಕ್ರೌರ್ಯ ವಿಪರೀತವಾಗಿದೆ, ಒಟ್ಟಾರೆ ಚಿತ್ರವೇ ಗೊಂದಲಮಯವಾಗಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ದೊಡ್ಡ ಗ್ಯಾಂಗ್‍ಸ್ಟರ್‍ ಒಬ್ಬನ ಮಾನಸಿಕ ತೊಳಲಾಟದ ಬಗ್ಗೆ ಹೇಳುವ ಪ್ರಯತ್ನ ಮಾಡಲಾಗಿದೆಯಾದರೂ, ಅದು ತೆರೆಯ ಮೇಲೆ ಸರಿಯಾಗಿ ತರುವುದಕ್ಕೆ ಸಾಧ್ಯವಾಗಿಲ್ಲ. ಹೆಣ್ಣು, ಹೆಂಡ, ಅತಿಯಾದ ಬಿಲ್ಡಪ್‍, ಹೊಡೆದಾಟ, ಅದ್ದೂರಿತನದ ಮಧ್ಯೆ ಚಿತ್ರದ ಆತ್ಮವೇ ಕಳೆದು ಹೋಗಿದೆ. ಮುಖ್ಯವಾಗಿ ಏನು ಹೇಳಬೇಕಿತ್ತೋ ಅದನ್ನು ಬಿಟ್ಟು, ಬೇಡದ ವಿಷಯಗಳಿಗೆ ಹೆಚ್ಚು ಸಮಯ ವ್ಯಯಿಸಲಾಗಿದೆ. ಇದೆಲ್ಲದರಿಂದ ಚಿತ್ರ ಪ್ರೇಕ್ಷಕರಿಗೆ ನಿರಾಶಸೆಯಾಗಿದೆ, ಅವರಿಗೆ ಇಷ್ಟವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುವ ಧೈರ್ಯ ಬೇಕು. ಅದು ಬಿಟ್ಟು ಸೋಲಿಗೆ ನೂರೆಂಟು ಕಾರಣಗಳನ್ನು ಹುಡುಕುವುದನ್ನು ನಿಲ್ಲಿಸಬೇಕು.

ಈಗಾಗುತ್ತಿರುವುದೂ ಅದೇ. ಬುಧವಾರ ಬೆಳ್ಳಿಗೆ ಮುಂಚೆ ಚಿತ್ರದ ಮೊದಲ ಪ್ರದರ್ಶನ ಶುರುವಾಗಿತ್ತು. 9.30-10 ಗಂಟೆಗೆಲ್ಲಾ ಚಿತ್ರದ ಹಣೆಬರಹ ಗೊತ್ತಾಗಿತ್ತು. ಕೆಲವರು ಚಿತ್ರ ಚೆನ್ನಾಗಿದೆ ಎಂದರು. ಕೆಲವರಿಗೆ ಹಿಡಿಸಲಿಲ್ಲ. ಅದನ್ನು ಹಲವರು ಚಿತ್ರಮಂದಿರಗಳ ಎದುರು ಮೈಕು ಹಿಡಿದವರ ಮುಂದೆ ತೋಡಿಕೊಂಡರೆ, ಇನ್ನೂ ಕೆಲವರು ಸೋಷಿಯಲ್‍ ಮೀಡಿಯಾದಲ್ಲಿ ಹೇಳಿಕೊಂಡರು. ಹೀಗೆ ಬಹಿರಂಗವಾದ ಹಲವು ವಿಶ್ಲೇಷಣೆ, ವಿಮರ್ಶೆಗಳು ಚಿತ್ರವು ಚೆನ್ನಾಗಿಲ್ಲ ಎಂದು ಹೇಳಿದವು. ಅದು ಅವರವರ ಅಭಿಪ್ರಾಯವಾಗಿತ್ತು. ಆದರೆ, ಕೆಲವರು ಬೇಕೆಂತಲೆ ಚಿತ್ರದ ಬಗ್ಗೆ ನೆಗೆಟಿವ್‍ ಮಾತುಗಳನ್ನು ಹರಡುತ್ತಿದ್ದಾರೆ ಎಂಬಂತಹ ಮಾತುಗಳು ಕೇಳಿಬಂದವು. ಈ ವಿಷಯವನ್ನು ಸಂಪೂರ್ಣ ಅಲ್ಲಗೆಳೆಯುವುದಕ್ಕೆ ಸಾಧ್ಯವಿಲ್ಲ. ಆದರೂ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಹಲವರಿಗೆ ನಿರಾಸೆಯಾಗಿದೆ ಮತ್ತು ಅವರು ಅದನ್ನು ಹೇಳಿಕೊಂಡಿದ್ದಾರೆ.

ಅದಕ್ಕೆ ಸರಿಯಾಗಿ ಆಂಧ್ರ-ತೆಲಂಗಾಣದಲ್ಲಿ ಒಂದು ಘಟನೆ ನಡೆಯಿತು. ರವಿತೇಜ ಅಭಿನಯದ ‘ಇರುಮುಡಿ’ ಎಂಬ ತೆಲುಗು ಚಿತ್ರ ಆಗಸ್ಟ್ 21ರಂದು ಬಿಡುಗಡೆಯಾಗಿತ್ತು. ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಮೂಡಿಬಂದಿದ್ದು, ಚಿತ್ರ ಮೊದಲ ಕೆಲವು ದಿನಗಳಲ್ಲಿ 100 ಕೋಟಿ ರೂ. ಗಳಿಕೆ ಮಾಡಿತ್ತು. ಆದರೆ, ‘ಟಾಕ್ಸಿಕ್‍’ನಂತಹ ನಿರೀಕ್ಷಿತ ಚಿತ್ರ ಬಿಡುಗಡೆಯಾದ ಕಾರಣ, ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರವನ್ನು ಹಲವು ಚಿತ್ರಮಂದಿರಗಳಲ್ಲಿ ‘ಇರುಮುಡಿ’ಯನ್ನು ಕಿತ್ತುಹಾಕಲಾಯಿತು. ಕನ್ನಡದ ಡಬ್ಬಿಂಗ್‍ ಚಿತ್ರದಿಂದ ತೆಲುಗಿನ ಮೂಲ ಚಿತ್ರಕ್ಕೆ ಸಮಸ್ಯೆ ಆಗುತ್ತಿದೆ ಎಂದು ಅಲ್ಲಿ ಗಲಾಟೆ ಎದ್ದಿತು. ಯಾವಾಗ ತೆಲುಗು ಚಿತ್ರಕ್ಕೆ ಸಮಸ್ಯೆ ಎದುರಾಯಿತೋ, ಆಗ ಅಲ್ಲಿನ ಜನಪ್ರಿಯ ನಟರು ಚಿತ್ರಕ್ಕೆ ಸೋಷಿಯಲ್‍ ಮೀಡಿಯಾದಲ್ಲಿ ಬೆಂಬಲ ಸೂಚಿಸಿದರು.

ಅದಕ್ಕೆ ಸರಿಯಾಗಿ, ‘ಟಾಕ್ಸಿಕ್’ ಚಿತ್ರಕ್ಕೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆಗಳು ಸಿಗಲಿಲ್ಲ. ಯಾವಾಗ ಜನರಿಂದ ‘ಟಾಕ್ಸಿಕ್‍’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲವೋ, ಆಗ ಅಲ್ಲಿನ ಚಿತ್ರಮಂದಿರದವರು ‘ಟಾಕ್ಸಿಕ್‍’ ಚಿತ್ರವನ್ನು ಕಿತ್ತು ಹಾಕಿ, ಮತ್ತೆ ‘ಇರುಮುಡಿ’ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಶುರು ಮಾಡಿದರು. ‘ಟಾಕ್ಸಿಕ್‍’ ಚಿತ್ರಕ್ಕೆ ‘ಇರುಮುಡಿ’ ಚಿತ್ರದಿಂದ ಅನ್ಯಾಯ ಎಂಬ ಇನ್ನೊಂದು ಪ್ರಚಾರ ಶುರುವಾಯಿತು. ಕರ್ನಾಟಕದಲ್ಲಿ ಮಾತ್ರ ತೆಲುಗು ಚಿತ್ರಗಳಿಗೆ ಅದ್ದೂರಿ ಸ್ವಾಗತ ಸಿಗುವಾಗ ಕನ್ನಡದ ಚಿತ್ರಗಳಿಗೇಕೆ ಆಂಧ್ರ ಮತ್ತು ತೆಲಂಗಾಣದಲ್ಲಿ ತಾರತಮ್ಯ ಎಂಬ ಪ್ರಶ್ನೆ ಶುರುವಾಯಿತು. ಇಂಥ ಸಂದರ್ಭದಲ್ಲಿ ಕನ್ನಡದ ನಟರು ಏನು ಮಾಡುತ್ತಿದ್ದಾರೆ? ಅವರ ಭಾಷಾ ಪ್ರಜ್ಞೆ ಎಲ್ಲಿ ಹೋಗಿದೆ? ಎಂಬ ಪ್ರಶ್ನೆಗಳು ಸೋಷಿಯಲ್‍ ಮೀಡಿಯಾದಲ್ಲಿ ಕೇಳಿ ಬಂದಾಗ, ಕನ್ನಡದ ಹೀರೋಗಳು ಕ್ರಮೇಣ ‘ಟಾಕ್ಸಿಕ್‍’ ಪರ ಮಾತನಾಡುವುದಕ್ಕೆ ಶುರು ಮಾಡಿದರು. ಸುದೀಪ್, ಉಪೇಂದ್ರ, ರಿಷಭ್‍ ಶೆಟ್ಟಿ, ರಕ್ಷಿತಾ ಪ್ರೇಮ್‍ ಮುಂತಾದವರು ಚಿತ್ರದ ಬಗ್ಗೆ ಹೊಗಳಿ ಬರೆದರು. ಇದೊಂದು ಬೇರೆ ರೀತಿಯ ಪ್ರಯತ್ನ, ಎಲ್ಲಾ ಚಿತ್ರಗಳ ರೀತಿ ಇದನ್ನು ನೋಡಬಾರದು, ವಿಶ್ಲೀಷಿಸಬಾರದು ಎಂಬರ್ಥದಲ್ಲಿ ಮಾತನಾಡಿದರು.

ಇಷ್ಟೆಲ್ಲಾ ಆದ್ದರಿಂದ ಚಿತ್ರಕ್ಕೇನಾದರೂ ಪ್ರಯೋಜನವಾಯಿತಾ? ಚಿತ್ರದ ದಿನದಿಂದ ದಿನಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಕುಸಿಯುತ್ತಲೇ ಇದೆ. ಬಾಕ್ಸ್ ಆಫೀಸ್‍ ಟ್ರಾಕರ್‍ ಸಕ್ನಿಲ್ಕ್ ಡಾಟ್‍ಕಾಮ್‍ ಪ್ರಕಾರ, ಚಿತ್ರದ ಮೊದಲ ದಿನ ಗಳಿಕೆ 101.10 ಕೋಟಿ ರೂ. ಆಗಿತ್ತು. ಆದರೆ, ಚಿತ್ರಕ್ಕೆ ಸಾಕಷ್ಟು ನೆಗೆಟಿವ್‍ ಪ್ರತಿಕ್ರಿಯೆಗಳು ಸಿಕ್ಕಿದ್ದರಿಂದ, ಸಂಜೆಯ ಹೊತ್ತಿಗೆ ಚಿತ್ರದ ಗಳಿಕೆಯಲ್ಲಿ ಇಳಿಕೆ ಕಂಡಿತ್ತು. ಎರಡನೆಯ ದಿನ ಪರಿಸ್ಥಿತಿ ಸುಧಾರಿಸಿಬಹುದು ಅಂದುಕೊಂಡರೆ, ಅದು ಸುಳ್ಳಾಯಿತು. ಮೊದಲ ದಿನ 101.10 ಕೋಟಿ ಇದ್ದ ಗಳಿಕೆ, ಎರಡನೆಯ ದಿನಕ್ಕೆ 37.65 ಕೋಟಿಯಾಗಿತ್ತು. ಅಂದರೆ, ಒಂದೇ ದಿನದ ಅಂತರದಲ್ಲಿ ಗಳಿಕೆಯಲ್ಲಿ ಶೇ. 70ರಷ್ಟು ಗಳಿಕೆ ಕಡಿಮೆಯಾಗಿತ್ತು. ಮೂರನೆಯ ದಿನ (ಶುಕ್ರವಾರ) ಚಿತ್ರವು 26.60 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದ್ದು, ಶನಿವಾರ 24.50 ಕೋಟಿ ಗಳಿಕೆ ಆಗಿದೆಯಂತೆ. ಒಟ್ಟಾರೆ ನಾಲ್ಕು ದಿನಗಳಲ್ಲಿ ಚಿತ್ರವು 190 ಕೋಟಿ ಗಳಿಕೆ ಮಾಡಿದೆ. ಇದು ಭಾರತದ ಗಳಿಕೆ ಅಷ್ಟೇ. ಜಗತ್ತಿನಾದ್ಯಂತ 50 ಕೋಟಿಯಷ್ಟಾಗಿದ್ದು, ಒಟ್ಟಾರೆ ಚಿತ್ರ 250 ಕೋಟಿಯಷ್ಟು ಗಳಿಕೆಯಾಗಿರಬಹುದು ಎಂಬ ಅಂದಾಜಿದೆ. ಭಾನುವಾರ ರಜಾ ದಿನವಾದ್ದರಿಂದ 20ರಿಂದ 30 ಕೋಟಿಯಷ್ಟು ಗಳಿಕೆ ಆಗಬಹುದು. ಸತತ ರಜಾದಿನಗಳಿದ್ದರೂ, ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳಿದ್ದರೂ ಈ ಗಳಿಕೆಯಾಗಿದೆ. ಈ ಗಳಿಕೆ ಚಿತ್ರ ಎತ್ತ ಸಾಗತ್ತಿದೆ ಎಂಬುದನ್ನು ಸೂಚಿಸುತ್ತಿದೆ.

ಇಲ್ಲಿ ಒಂದು ವಿಷಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಒಂದು ಚಿತ್ರಕ್ಕೆ ಎಷ್ಟೇ ಕಷ್ಟಪಟ್ಟಿರಬಹುದು, ಎಷ್ಟೇ ತಲೆ ಮತ್ತು ಹಣ ಖರ್ಚು ಮಾಡಿರಬಹುದು, ಎಷ್ಟೇ ಸಮಯ ಇಟ್ಟಿರಬಹುದು … ಅದು ಜನರಿಗೆ ಎಷ್ಟು ಇಷ್ಟವಾಗುತ್ತದೆ, ಎಷ್ಟು ಹಿಡಿದಿಟ್ಟುಕೊಳ್ಳುತ್ತದೆ ಎಂಬುದಷ್ಟೇ ಮುಖ್ಯ. ಚಲನಚಿತ್ರ ಮಾಧ್ಯಮವೆಂಬುದನ್ನು ನಾವೇ ಮನರಂಜನಾ ಮಾಧ್ಯಮ ಎಂದು ಎಷ್ಟೇ ಹೇಳಿದರೂ, ಇಲ್ಲಿ Entertainment ಜೊತೆಗೆ Engagement ಸಹ ಅಷ್ಟೇ ಮುಖ್ಯ. ಚಿತ್ರತಂಡದವರು ಎಷ್ಟೇ ಕಸರತ್ತು ಮಾಡಿರಬಹುದು, ಎಷ್ಟೇ ತಲೆ ಕೆಡಿಸಿಕೊಂಡಿರಬಹುದು, ಅದು ಜನರಿಗೆ ಅರ್ಥವಾಗಲಿಲ್ಲ, ಇಷ್ಟವಾಗಲಿಲ್ಲವೆಂದರೆ ಏನು ಉಪಯೋಗ? ಹಾಗಾಗಿ, ಇಲ್ಲಿ ನೋಡಿಸಿಕೊಳ್ಳುವ ಗುಣ ಬಹಳ ಮುಖ್ಯ. ‘ಟಾಕ್ಸಿಕ್‍’ ಚಿತ್ರಕ್ಕೆ ಆ Engagement Value ಕಡಿಮೆ ಇದೆ ಎಂಬ ಮಾತು ಸಾರ್ವತ್ರಿಕವಾಗಿ ಕೇಳಿಬರುತ್ತಿದೆ.

ಆದರೆ, ಇಡೀ ಪ್ರಕರಣವನ್ನು ಹೇಗ್ಹೇಗೋ ಮನಸ್ಸಿಗೆ ಬಂದ ಹಾಗೆ ತಿರುಚಲಾಗುತ್ತಿದೆ. ಮೊದಲು ಹೊಸ ಪ್ರಯೋಗಗಳಿಗೆ ಜನ ಬೆಂಬಲ ಕೊಡುತ್ತಿಲ್ಲ ಎಂದಾಯಿತು, ನಂತರ ಕನ್ನಡಿಗರಿಗೆ ಸ್ವಾಭಿಮಾನವಿಲ್ಲ ಎಂದು ಹೇಳಲಾಯ್ತು, ಚಿತ್ರ ಚೆನ್ನಾಗಿಲ್ಲ ಎಂದಾಗ ಕನ್ನಡ ದ್ರೋಹಿ ಎಂಬ ಪಟ್ಟ ಕಟ್ಟಿದ್ದಾಯ್ತು … ವಿಚಿತ್ರವೆಂದರೆ ಚಿತ್ರ ಸೋತಾಗ ಮಾತ್ರ ಕನ್ನಡ, ಕನ್ನಡತನ, ಕನ್ನಡಿಗ ಎಂಬುದೆಲ್ಲಾ ನೆನಪಾಗುತ್ತದೆ. ಈ ವರ್ಷ ಕನ್ನಡದಲ್ಲಿ 140ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಆ ಚಿತ್ರಗಳು ಬಿಡುಗಡೆಯಾದಾಗ ಯಾಕೆ ಕನ್ನಡದ ಸೆಂಟಿಮೆಂಟ್‍ ಇರಲಿಲ್ಲ? ಮಿಕ್ಕ ಚಿತ್ರಗಳು ಏನು ಅನ್ಯಾಯ ಮಾಡಿದ್ದವು? ಆ ಚಿತ್ರಗಳ ಬಗ್ಗೆ ಏಕೆ ಇದೇ ಪ್ರೀತಿ, ಆಸಕ್ತಿ ಕಾಣಲಿಲ್ಲ? ಎಂಬ ಪ್ರಶ್ನೆಗಳು ಸಹಜ. ಆದರೆ, ಯಾವ ಚಿತ್ರವನ್ನು ಯಾಕೆ ನೋಡಬೇಕು ಎಂಬುದು ಅವರವರಿಗೆ ಬಿಟ್ಟ ವಿಷಯ. ‘ಟಾಕ್ಸಿಕ್’ ಬಗ್ಗೆ ಅಂಥ ವಿಶೇಷ ಪ್ರೀತಿ ಇತ್ತು ಎನ್ನುವುದು ಖುಷಿಯ ವಿಷಯ. ಅದೇ ನಿರೀಕ್ಷೆಯಿಂದ ಜನ ಬಂದರು. ಆದರೆ, ಅವರಿಗೆ ಇಷ್ಟವಾಗಲಿಲ್ಲ ಅಷ್ಟೇ.

ಕನ್ನಡದ ನಿರೀಕ್ಷಿತ ಚಿತ್ರವೊಂದು ಜನರಿಗೆ ಇಷ್ಟವಾಗದೇ ಇದ್ದಿದ್ದು, ಸೋತಿದ್ದು ಇದು ಮೊದಲೇನಲ್ಲ. ಕೆಲವು ತಿಂಗಳ ಹಿಂದೆ ಅದೇ KVN Productions ಸಂಸ್ಥೆಯಿಂದ ನಿರ್ಮಾಣವಾದ ‘ಕೆಡಿ – ದಿ ಡೆವಿಲ್‍’ ಚಿತ್ರ ಬಿಡುಗಡೆಯಾದಾಗ ಯಾಕೆ ಕನ್ನಡ ಪ್ರೀತಿ ಜಾಗೃತವಾಗಲಿಲ್ಲ. ಆ ಚಿತ್ರವನ್ನೂ ಕನ್ನಡಿಗರೇ ಸೇರಿ ಮಾಡಿದ್ದರು. ರೈತನೊಬ್ಬ ಚಿತ್ರ ನಿರ್ದೇಶಿಸಿದ್ದಾರೆ ಎಂಬ ಸೆಂಟಿಮೆಂಟ್‍ನಿಂದ ಜನ ಯಾಕೆ ಚಿತ್ರ ನೋಡಲಿಲ್ಲ? ಅದಕ್ಕೂ ಮೊದಲು ಬಿಡುಗಡೆಯಾದ ‘ಮಾರ್ಟಿನ್‍’ ಚಿತ್ರವನ್ನು ಯಾಕೆ ಕನ್ನಡಿಗರು ಗೆಲ್ಲಿಸಲಿಲ್ಲ. ‘UI’, ‘ವಿಕ್ರಾಂತ್ ರೋಣ’ ಚಿತ್ರಗಳು ಬಿಡುಗಡೆಯಾದಾಗ ಯಾಕೆ ಕನ್ನಡ, ಕನ್ನಡತನ, ಕನ್ನಡಿಗ ಸೆಂಟಿಮೆಂಟ್ workout ಆಗಲಿಲ್ಲ. ಇದೆಲ್ಲಾ ಬರೀ ಒಂದು ಸಿನಿಮಾಗೆ ಅಥವಾ ಸಿನಿಮಾಗೆ ಮಾತ್ರ ಸೀಮಿತವಾಗಬಾರದು. ಕನ್ನಡ ಮತ್ತು ಕನ್ನಡಿಗರಿಗೆ ಬೇರೆ ಹಲವು ಕ್ಷೇತ್ರಗಳಲ್ಲಿ ಅನ್ಯಾಯವಾಗುತ್ತಿದೆ. ಅವೆಲ್ಲವನ್ನೂ ಬಿಟ್ಟು ಒಂದು ಸಿನಿಮಾಗೆ ಸೀಮಿತ್ರ ಮಾಡುತ್ತಿರುವ ಯೋಚನೆಯೇ ಸರಿಯಲ್ಲ.

‘ಟಾಕ್ಸಿಕ್‍’ ಚಿತ್ರವನ್ನು ಯಾರೇ ಮಾಡಿದರೂ, ಎಷ್ಟೇ ಕಷ್ಟಪಟ್ಟಿದ್ದರೂ ಅದೊಂದು ಚಿತ್ರ ಮತ್ತು ಅದನ್ನು ಹಾಗೆಯೇ ತೆಗೆದುಕೊಳ್ಳಬೇಕು. ಮೊದಲೇ ಹೇಳಿದಂತೆ, ಪ್ರೇಕ್ಷಕರಿಗಾಗಲೀ, ಚಿತ್ರರಂಗಕ್ಕಾಗಲೀ ಇದು ಹೊಸ ವಿಷಯವಲ್ಲ. ಯಶ್‍ಗೆ ಮಾತ್ರ ಹೊಸದು. ಅವರು ತಮ್ಮ ವೃತ್ತಿಜೀವನದಲ್ಲಿ ಇಷ್ಟು ದೊಡ್ಡ ಚಿತ್ರವನ್ನು ಇದುವರೆಗೂ ಮಾಡಿರಲಿಲ್ಲ. ಹಾಗಾಗಿ, ಈ ಸೋಲು ಮತ್ತು ಟೀಕೆಗಳನ್ನು ಅರಗಿಸಿಕೊಳ್ಳುವುದು ಕಷ್ಟವಾಗಬಹದು. ಆದರೆ, ಇದರಿಂದ ತಲೆ ಕೆಡಿಸಿಕೊಂಡು ಕೂರುವ ವ್ಯಕ್ತಿ ಅವರು ಅಂತನಿಸುವುದಿಲ್ಲ. ಇನ್ನೇನೋ ದೊಡ್ಡದೊಂದು ಸಾಹಸಕ್ಕೆ ಕೈ ಹಾಕಿರುತ್ತಾರೆ. ಅದಕ್ಕೆ ‘ಟಾಕ್ಸಿಕ್’ನಿಂದ ಸ್ವಲ್ಪ ಹಿನ್ನೆಡೆಯಾಗಬಹುದು ಅಷ್ಟೇ. The storm will pass; the Spring will come ಎಂದು ಮುನ್ನಡೆಯುತ್ತಿರಬೇಕಷ್ಟೇ.

ಹಿಂಸೆಗಿದೋ ಕಾಲ, ಕ್ರೌರ್ಯದ ಮಾಯಾಜಾಲ …

Discover more from KannadaScreens

Subscribe now to keep reading and get access to the full archive.

Continue reading