ಈ ಬಾರಿ ಅಭಿಮಾನಿಗಳೊಂದಿಗೆ ಸುದೀಪ್‍ ಹುಟ್ಟುಹಬ್ಬವಿಲ್ಲ …

ಚಂದನವನ, ಸಿನಿ ಸುದ್ದಿ

ಕಳೆದ ವರ್ಷ ಸುದೀಪ್‍ ತಮ್ಮ ಹುಟ್ಟುಹಬ್ಬವನ್ನು ನಂದಿ ಲಿಂಕ್‍ ಗ್ರೌಂಡ್ಸ್ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆ, ಜಯನಗರದ MES Groundsನಲ್ಲಿ ಆಚರಿಸಿಕೊಂಡಿದ್ದರು. ಸುದೀಪ್ ಹುಟ್ಟುಹಬ್ಬಕ್ಕೆ ನಾಲ್ಕು ದಿನಗಳಷ್ಟೇ ಇವೆ. ಈ ಮಧ್ಯೆ, ಸುದೀಪ್‍ ತಾವು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿರುವ ಅವರು, ‘ನಮಸ್ಕಾರ ಸ್ನೇಹಿತರೆ, ಹೇಗಿದ್ದೀರಿ? 02ನೇ ಸೆಪ್ಟೆಂಬರ್‍ ಎಂಬುದು ಒಂದು ದಿನಾಂಕ ಅಷ್ಟೇ. ಅದನ್ನು ಸಂಭ್ರಮವನ್ನಾಗಿ 30 ವರ್ಷಗಳಿಂದ ಪರಿವರ್ತಿಸಿದ ಅಪಾರ ಪ್ರೀತಿ ನಿಮ್ಮದು. ನಿಮ್ಮ ಅಭಿಮಾನ, ಹುಚ್ಚು ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಕಳೆದ 30 ವರ್ಷಗಳಲ್ಲಿ ನಿಮ್ಮ ಚಪ್ಪಾಳೆ, ಶಿಳ್ಳೆಗಳಲ್ಲಿ ಇನ್ನು ಹೆಚ್ಚು ಹೆಚ್ಚು ಪ್ರೋತ್ಸಾಹ ಪ್ರೀತಿ ಕಂಡುಕೊಂಡಿದ್ದೇನೆ. ಪ್ರತಿ ಸಿನಿಮಾ ಇರಲಿ, ‘ಬಿಗ್‍ ಬಾಸ್‍’ ಇರಲಿ ಜೊತೆಗೆ ಯಾವುದೇ ಕಾರ್ಯಕ್ರಮಕ್ಕೆ ಮುಂದಾದಾಗ ನೀವು ತೋರಿಸಿದ ಪ್ರೀತಿ ಅಪರಿಮಿತ. ಅದೇ ನನಗೆ ಶ್ರೀರಕ್ಷೆ …’ ಎಂದಿದ್ದಾರೆ.

ಮುಂದುವರೆದು, ‘ಆದರೆ, ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಬಲವಾದ ಮತ್ತು ವೈಯಕ್ತಿಕ ಕಾರಣಗಳಿವೆ. ಸಂಭ್ರಮಗಳನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ ಅದು ಸಂಭ್ರಮವೇ ಅಲ್ಲ ನನಗೆ. ನಿಮ್ಮ ನಿಮ್ಮ ಊರು, ಭಾಗಗಳಲ್ಲಿ ನೀವು ನಡೆಸುವ ಕಾರ್ಯಕ್ರಮಗಳೇ ಆಶೀರ್ವಾದ, ಅದು ಸದಾ ಮುಂದುವರೆಯಲಿ, ಮತ್ತೆ ಭೇಟಿ ಆಗೋಣ. ನನ್ನನ್ನು ನಿಮ್ಮನ್ನು ಎಂದಾದರೂ ಬೇರ್ಪಡಿಸಲು ಸಾಧ್ಯವೇ? ಅಂದು ಮನೆಯ ಬಳಿಯೂ ಯಾರಿಗೂ ಲಭ್ಯವಾಗುತ್ತಿಲ್ಲ. ಸತ್ಕಾರಗಳು ಗದ್ದಲವಾಗಬಾರದು ಎಂಬುದನ್ನು ನಿಮ್ಮಲ್ಲಿ ಪದೇಪದೇ ಅರಿಕೆ ಮಾಡಿಕೊಂಡಿದ್ದೇನೆ. ನಿಮ್ಮ ಉಡುಗೊರೆಗಳು ಸಮಾಜಕ್ಕೆ ಸದ್ವಿನಿಯೋಗವಾಗಲಿ. ನಿಮ್ಮ ಪ್ರೀತಿ ಹಾರೈಕೆಗಳಿಗಿಂತ ಮತ್ತೊಂದು ಶ್ರೀರಕ್ಷೆ, ಆಶೀರ್ವಾದ ಇರಲು ಸಾಧ್ಯವೇ?’ ಎಂದು ಬರೆದುಕೊಂಡಿದ್ದಾರೆ.

ಶಿವಣ್ಣ ಹೊಸ ಚಿತ್ರ ‘OM’; ಮುಂಬೈನಲ್ಲಿ ಮೋಷನ್ ಪೋಸ್ಟರ್ ಅನಾವರಣ

Discover more from KannadaScreens

Subscribe now to keep reading and get access to the full archive.

Continue reading