83 ವರ್ಷಗಳ ಹಿಂದಿನ ಮಾತಿದು. ಅಶೋಕ್ ಕುಮಾರ್ ಅಭಿನಯದ ‘ಕಿಸ್ಮತ್’ ಎಂಬ ಚಿತ್ರ ಬಿಡುಗಡೆಯಾಗಿತ್ತು. ಅದೇ ಮೊದಲ ಬಾರಿಗೆ ಭಾರತೀಯ ಚಿತ್ರರಂಗದಲ್ಲಿ ಚಿತ್ರದ ನಾಯಕನನ್ನು ಪ್ರತಿನಾಯಕನನ್ನಾಗಿ (Anti-Hero) ತೋರಿಸಲಾಗಿತ್ತು. ಅಶೋಕ್ ಕುಮಾರ್ ಈ ಚಿತ್ರದಲ್ಲಿ ಒಬ್ಬ ಕಳ್ಳನ ಪಾತ್ರದಲ್ಲಿ ನಟಿಸಿದ್ದರು. ಒಬ್ಬ ನಯವಂಚಕ ತನ್ನ ಬುದ್ಧಿ ಉಪಯೋಗಿಸಿ ಬೇರೆಯವರನ್ನು ಮೋಸ ಮಾಡುವ ಪಾತ್ರವದು. ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆಗಿನ ‘ಫಿಲ್ಮ್ ಇಂಡಿಯಾ’ ಪತ್ರಿಕೆಯ ಸಂಪಾದಕರಾಗಿದ್ದ ಬಾಬು ರಾವ್ ಪಟೇಲ್, ಈ ಚಿತ್ರದಲ್ಲಿ ಅಪರಾಧವನ್ನು ವೈಭವೀಕರಿಸುವ ಬಗ್ಗೆ, ಅಪರಾಧಿಯೊಬ್ಬನು ವಿಜೃಂಭಿಸುವ ಬಗ್ಗೆ ಟೀಕಿಸಿ ಬರೆದಿದ್ದರು. ಇಂತಹ ಚಿತ್ರಗಳು ಸಮಾಜಕ್ಕೆ ಮಾರಕವಾಗಬಹುದು ಎಂದು ಬೇಸರ ವ್ಯಕ್ತಪಡಿಸಿದ್ದರು. ಒಬ್ಬ ಕಳ್ಳನನ್ನು ಹೀರೋ ಎಂದು ತೋರಿಸುವ ಮೂಲಕ ಸಮಾಜಕ್ಕೆ ಒಂದು ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಹಲವು ಟೀಕೆಗಳ ನಡುವೆಯೇ ಚಿತ್ರ ಸೂಪರ್ ಹಿಟ್ ಆಗಿತ್ತು.
1943ರ ಜನವರಿ 09ರಂದು ಬಿಡುಗಡೆಯಾದ ಈ ಚಿತ್ರ ಆಗಿನ ಬಾಂಬೆಯ ರಾಕ್ಸಿ ಟಾಕೀಸ್‍ನಲ್ಲಿ 50 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು ಎಂದು ಹೇಳಲಾಗುತ್ತದೆ. ಚಿತ್ರವು ಕೆಲವು ತಿಂಗಳುಗಳ ನಂತರ ಕಲ್ಕತ್ತಾದಲ್ಲಿ ಬಿಡುಗಡೆಯಾಗಿ 187 ವಾರಗಳ ಪ್ರದರ್ಶನ ಕಂಡಿತ್ತು ಮತ್ತು ಒಂದೇ ಚಿತ್ರಮಂದಿರದಲ್ಲಿ 12 ಲಕ್ಷ ಗಳಿಸಿತ್ತು ಎಂಬ ಮಾಹಿತಿ ಇದೆ. ಒಟ್ಟಾರೆ, ‘ಕಿಸ್ಮತ್’ ಚಿತ್ರವು ಭಾರತದ ಮೊದಲ ಸೂಪರ್ ಹಿಟ್ ಚಿತ್ರ ಎಂದು ಪರಿಗಣಿಸಲಾಗಿದ್ದು, ಆಗಿನ ಕಾಲಕ್ಕೆ ಒಂದು ಕೋಟಿ ರೂ. ಗಳಿಸಿದ ಚಿತ್ರವಾಗಿತ್ತು. ಈಗಿನ ಕಾಲಕ್ಕೆ ಹೋಲಿಸಿದರೆ, ಸುಮಾರು 500 ಕೋಟಿ ರೂ.ನಷ್ಟು ಎಂದು ಅಂದಾಜಿಸಲಾಗಿದೆ. ಈ ಚಿತ್ರದ ಯಶಸ್ಸಿನಿಂದಾಗಿ ಅಶೋಕ್ ಕುಮಾರ್, ಭಾರತದ ಮೊದಲ ಸ್ಟಾರ್ ನಟರಾದರು.
‘ಕಿಸ್ಮತ್’ನಿಂದ ಪ್ರಾರಂಭವಾದ ಈ ಪ್ರತಿನಾಯಕನ ಪರಂಪರೆ, ‘ಟಾಕ್ಸಿಕ್’ವರೆಗೂ ಮುಂದುವರೆದಿದೆ. ಯಾವಾಗಲೆಲ್ಲಾ ನಾಯಕನೇ ನೆಗಿಟಿವ್ ಪಾತ್ರ ಮಾಡಿದ್ದಾನೋ, ಆಗಲೆಲ್ಲಾ ಚಿತ್ರ ಬಹಳ ಯಶಸ್ವಿಯಾದ ಹಲವು ಉದಾಹರಣೆಗಳು ಸಿಗುತ್ತವೆ. ‘ಕಿಸ್ಮತ್’ ಬಿಡುಗಡೆಯಾದ ಮೂರು ದಶಕಗಳಲ್ಲಿ ಈ ತರಹದ ಪಾತ್ರಗಳು ಕಡಿಮೆ ಇದ್ದವು. ‘ಬಾಜಿ’ ಚಿತ್ರದಲ್ಲಿ ದೇವ್ ಆನಂದ್, ‘ಶ್ರೀ 420’ ಚಿತ್ರದಲ್ಲಿ ರಾಜ್ ಕಪೂರ್, ‘ಗಂಗಾ ಜಮುನಾ’ ಚಿತ್ರದಲ್ಲಿ ದಿಲೀಪ್ ಕುಮಾರ್ … ಹೀಗೆ ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ನಾಯಕನನ್ನು ನೆಗೆಟಿವ್ ಛಾಯೆಯಲ್ಲಿ ತೋರಿಸಲಾಗಿತ್ತು. ಯಾವಾಗ ‘ದೀವಾರ್’ ಚಿತ್ರ ಯಶಸ್ವಿಯಾಯಿತೋ, ಅಲ್ಲಿಂದ ಸ್ವರೂಪವೇ ಬದಲಾಯಿತು. ನಾಯಕ ಕೆಟ್ಟವನಾದರೂ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು, ಅವನೊಬ್ಬ ಆ್ಯಂಗ್ರಿ ಯಂಗ್ ಮ್ಯಾನ್ ಎಂದು ಬಿಂಬಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಭಾರತದ ಹಲವು ಭಾಷೆಗಳಲ್ಲಿ ನೂರಾರು Anti-Hero ಚಿತ್ರಗಳು ಬಿಡುಗಡೆಯಾಗಿವೆ. ‘ಡಾನ್’, ‘ಅಗ್ನಿಪಥ್’, ‘ಬಾಜಿಗರ್’, ‘ಢರ್’, ‘ಖಳನಾಯಕ್’, ‘ಸತ್ಯ’, ‘ವಾಸ್ತವ್’, ‘ಸರ್ಕಾರ್’ ‘ಅನಿಮಲ್’, ‘ಅರ್ಜುನ್ ರೆಡ್ಡಿ’, ‘ಕೆಜಿಎಫ್’, ‘ಪುಷ್ಪ’ ಮುಂತಾದ ಹಲವು ಚಿತ್ರಗಳನ್ನು ಹೆಸರಿಸಬಹುದು.

ವಿಶೇಷವೆಂದರೆ, ಬಹುತೇಕ ಎಲ್ಲಾ ನಾಯಕರು ತಮ್ಮ ವೃತ್ತಿಜೀವನದಲ್ಲಿ ಪ್ರತಿನಾಯಕನ ಪಾತ್ರ ಮಾಡಿದವರಿದ್ದಾರೆ ಮತ್ತು ಕೆಲವರು ನೆಗೆಟಿವ್ ಪಾತ್ರಗಳನ್ನು ಮಾಡಿಯೇ ಹೀರೋ ಆದ ಹಲವು ಉದಾಹರಣೆಗಳು ಸಿಗುತ್ತವೆ. ಜನಪ್ರಿಯ ನಾಯಕ ನಟರು ಯಾವಾಗೆಲ್ಲಾ ಪ್ರತಿನಾಯಕನಾಗಿ ನಟಿಸಿದ್ದಾರೋ, ಅದರಲ್ಲಿ ಬಹುತೇಕ ಚಿತ್ರಗಳು ಸೂಪರ್ ಹಿಟ್ ಆಗಿವೆ. ಹಿಂದೆ ನಾಯಕ ಪ್ರತಿನಾಯಕನಾದರೂ ಯಾವುದೋ ಒಂದು ಕಾರಣಕ್ಕೆ ಪ್ರೇಕ್ಷಕರಿಗೆ ಅವನ ಮೇಲೊಂದು ಸಿಂಪಥಿ ಇರುತ್ತಿತ್ತು. ಎಷ್ಟೇ ಆದರೂ ಆತ ಪರಿಸ್ಥಿತಿಯ ಶಿಶು ಎಂದು ಪರಿಗಣಿಸಲಾಗುತ್ತಿತ್ತು. ಸಮಾಜ ಮತ್ತು ಕಾನೂನಿನ ವಿರುದ್ಧ ನಿಲ್ಲುವ, larger than life ಆದಂತಹ ಪಾತ್ರಗಳು ಸಹಜವಾಗಿಯೇ ಪ್ರೇಕ್ಷಕರಿಗೆ ಇಷ್ಟವಾಗುತ್ತಿತ್ತು. ಮೇಲೆ ಹೆಸರಿಸಿರುವ ಎಲ್ಲಾ ಚಿತ್ರಗಳು ಬಿಡುಗಡೆಯಾದ ಸಂದರ್ಭದಲ್ಲಿ ದೊಡ್ಡ ಯಶಸ್ಸು ಕಂಡ ಚಿತ್ರಗಳೇ. ಹಾಗಾಗಿಯೇ, ಬಹುತೇಕ ಎಲ್ಲಾ ಹೀರೋಗಳು ಇಂಥಾ ಚಿತ್ರಗಳಿಗೆ ಆದ್ಯತೆ ನೀಡುತ್ತಾರೆ. ಬರೀ ನಾಯಕರಷ್ಟೇ ಅಲ್ಲ, ಪ್ರೇಕ್ಷಕರು ಸಹ ಅಂತಹ ಪಾತ್ರಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಆ ಚಿತ್ರದ ಯಶಸ್ಸುಗಳೇ ಸೂಚಿಸುತ್ತವೆ.
ಆದರೆ, ಇತ್ತೀಚಿನ ದಿನಗಳಲ್ಲಿ ಈ ಪ್ರತಿನಾಯಕ ಬದಲಾಗುತ್ತಿರುವ ರೀತಿ ಗಾಬರಿಗೊಳಿಸುತ್ತದೆ. ಆರಂಭದ ಕೆಲವು ಸಮಯ ಈ ಪ್ರತಿನಾಯಕ ಕಳ್ಳನಾಗಿದ್ದನು. ನಯವಂಚಕನಾಗಿದ್ದನು. ನಂತರ ಸುಲಿಗೆಗಳಿದನು. ರೌಡಿ, ಕ್ರಿಮಿನಲ್ ಎನಿಸಿಕೊಂಡನು. ಸ್ಮಗ್ಲರ್ ಆಗಿ ಬದಲಾದನು. ಎಷ್ಟೇ ಕ್ರಿಮಿನಲ್ ಆದರೂ, ಕೆಲವು ವಿಷಯಗಳಲ್ಲಿ ಅವನಿಗೆ ಬದ್ಧತೆ ಇರುತ್ತಿತ್ತು. ‘ಸರ್ಕಾರ್’ ಚಿತ್ರವನ್ನು ಉದಾಹರಿಸುವುದಾದರೆ, ಸರ್ಕಾರ್ ಸಮಾಜದ ದೃಷ್ಟಿಯಲ್ಲಿ ಏನೇ ಆದರೂ ತಾನು ಡ್ರಗ್ಸ್ ಮಾರುವುದಿಲ್ಲ, ಇನ್ನೊಬ್ಬರಿಗೂ ಮಾರಲು ಬಿಡುವುದಿಲ್ಲ ಎಂಬ ನಿಲುವಿದ್ದ ವ್ಯಕ್ತಿಯಾಗಿದ್ದನು. ಕನ್ನಡದ ‘ರವಿಚಂದ್ರ’ ಚಿತ್ರವನ್ನು ತೆಗೆದುಕೊಂಡರೆ, ಅಲ್ಲಿ ನಾಯಕನ ಜಾಗಕ್ಕೆ ಬರುವ ಅವನ ತದ್ರೂಪಿನಂತಿರುವ ಪ್ರತಿನಾಯಕ ನಾಯಕಿಯಿಂದ ಅಂತರ ಕಾಯ್ದುಕೊಳ್ಳುತ್ತಾನೆ. ಆಕೆಗೆ ತನ್ನಿಂದ ದ್ರೋಹ ಆಗಬಾರದು ಎಂದು ಬಯಸುತ್ತಾನೆ.
ಆಗ ಪ್ರತಿನಾಯಕ ಅದೆಷ್ಟೇ ಸಮಾಜಘಾತುಕ ಶಕ್ತಿಯಾದರೂ, ಏನೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ ಇಷ್ಟೊಂದು ಕ್ರೂರಿ, ಲಾಲಸಿ ಆಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ತೆರೆಯ ಮೇಲಿನ ಪ್ರತಿನಾಯಕ ಅಕ್ಷರಶಃ ಟಾಕ್ಸಿಕ್ (ವಿಷಕಾರಿ) ಆಗುತ್ತಿದ್ದಾನೆ. ತನ್ನ ನುಡಿಯಿಂದ, ಕ್ರಿಯೆಯಿಂದ ವಿಷ ಉಗುಳುತ್ತಿದ್ದಾನೆ. ನಾಯಕನಿಗಿರುವ ನೈತಿಕತೆ ಮತ್ತು ಆದರ್ಶಗಳನ್ನು ಪ್ರತಿನಾಯಕನಲ್ಲಿ ಹುಡುಕುವುದು ಕಷ್ಟ. ಆದರೆ, ‘ಅನಿಮಲ್’ನ ರಣವಿಜಯ್ ಸಿಂಗ್ ಆಗಲೀ, ‘ಪುಷ್ಪ’ದ ಪುಷ್ಪರಾಜ್ ಆಗಲೀ, ‘ಟಾಕ್ಸಿಕ್’ನ ರಾಯ ಆಗಲೀ … ಈ ಪ್ರತಿನಾಯಕನ ರೂಢಿಗತ ಕಲ್ಪನೆ ಏನಿತ್ತು, ಅದನ್ನೂ ಸುಳ್ಳು ಮಾಡುತ್ತಿದ್ದಾರೆ. ಒಂದು ಗಮನಾರ್ಹ ವಿಷಯವೆಂದರೆ, ಇತ್ತೀಚಿನ ದಿನಗಳಲ್ಲಿ ವಿಲನ್‍ಗಳಿಗಿಂತ anti heroಗಳೇ ಹೆಚ್ಚು ಆಕ್ರಮಣಕಾರಿ, ಅಪಾಯಕಾರಿ, ಕ್ರೂರಿಯಾಗುತ್ತಿದ್ದಾರೆ. ಅವರ ಕ್ರೌರ್ಯ ಮಿತಿಮೀರುತ್ತಿದೆ. ಚಿತ್ರಗಳಲ್ಲಿ ಹಿಂಸೆ, ರಕ್ತಪಾತ ವಿಜೃಂಭಿಸುತ್ತಿದೆ.

ಹಿಂದೊಮ್ಮೆ ಇಂಥ ಪ್ರತಿನಾಯಕನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದವರೂ ಸಹ ಇಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸೆನ್ಸಾರ್ ಬೋರ್ಡ್‍ನವರು ಸಹ ಏನೂ ಮಾಡಲಿಕ್ಕಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಆದರೂ ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮಾಡುತ್ತಿರುವ ಗಳಿಕೆ ಇದೆಯಲ್ಲಾ, ಅದು ಇನ್ನೂ ಆಶ್ಚರ್ಯ ಹುಟ್ಟಿಸುತ್ತದೆ. ‘ಅನಿಮಲ್’ ಚಿತ್ರ 900 ಕೋಟಿ ಗಳಿಕೆ ಮಾಡಿದರೆ, ‘ಪುಷ್ಪ 2’ ಚಿತ್ರವು 1650 ಕೋಟಿ, ‘ಕಬೀರ್ ಸಿಂಗ್’ 320 ಕೋಟಿ ಎಂದು ಹೇಳಲಾಗುತ್ತಿದೆ. ‘ಟಾಕ್ಸಿಕ್’ ಮೂರು ದಿನಗಳಲ್ಲೇ 200 ಕೋಟಿ ರೂ. ಗಳಿಕೆ ಮಾಡಿರುವ ಸುದ್ದಿ ಇದೆ. ಅಷ್ಟೇ ಅಲ್ಲ, ಕ್ರೌರ್ಯ ಬಿಂಬಿಸುವ, ರಕ್ತಪಾತ ಮತ್ತು ಹಿಂಸೆ ಹೆಚ್ಚಾಗಿರುವ ಚಿತ್ರಗಳು ಕ್ಲಾಸಿಕ್ ಚಿತ್ರಗಳು ಎಂಬ ಹಣೆಪಟ್ಟಿ ಹೊತ್ತಿರುವ ಉದಾಹರಣೆಗಳೂ ಇವೆ.
ಹಾಗಾದರೆ, ಪ್ರೇಕ್ಷಕರಿಗೂ ಅಂತಹ ಪಾತ್ರಗಳೇ ಇಷ್ಟವಾಗುತ್ತಿದೆಯಾ? ಇಷ್ಟಕ್ಕೂ ಇಂತಹ ಕಥೆಗಳು ಮತ್ತು ಪಾತ್ರಗಳು ಯಾಕೆ ಇಷ್ಟವಾಗುತ್ತಿವೆ? ತೆರೆಯ ಮೇಲೆ ಹೇರಳವಾಗಿ ರಕ್ತಪಾತ, ಹಿಂಸೆ ಮತ್ತು ಕ್ರೌರ್ಯವನ್ನು ತೋರಿಸುವಾಗ ನಿರ್ದೇಶಕರಿಗೆ ಸ್ವಲ್ಪ ಜವಾಬ್ದಾರಿ ಬೇಡವಾ? ಕ್ರಿಯೇಟಿವಿಟಿ ಹೆಸರಿನಲ್ಲಿ ಏನು ಬೇಕಾದರೂ ತೋರಿಸಬಹುದಾ? ಕ್ರೌರ್ಯ, ಹಿಂಸೆ ಮತ್ತು ರಕ್ತಪಾತವನ್ನು ಮನರಂಜನೆ ಎಂದು ಪರಿಗಣಿಸಬಹುದಾ? ಇಂಥಾ ಸಿನಿಮಾ ಮತ್ತು ನಾಯಕರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮಗಳು ಬೀರುವುದಿಲ್ಲವಾ? ಅಥವಾ demand ಅನುಸಾರವಾಗಿ ಇಂತಹ ಚಿತ್ರಗಳನ್ನು supply ಮಾಡುತ್ತಿದ್ದಾರಾ? ಇಲ್ಲಿ ಯಾರು ಸುಧಾರಿಸಬೇಕು? ಚಿತ್ರ ನೋಡುವವರಾ? ಚಿತ್ರ ಮಾಡುವವರಾ? ಈ ಪ್ರಶ್ನೆಗಳಿಗೆ ದೊರಕುವ ಉತ್ತರ ಏನಿರಬಹುದು?


