ಮತ್ತೆ ಕುಸಿದ ‘ಟಾಕ್ಸಿಕ್‍’; ಮೂರು ದಿನಗಳಲ್ಲಿ 165 ಕೋಟಿ ರೂ. ಗಳಿಕೆ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರವು ಬುಧವಾರ (ಆಗಸ್ಟ್ 26) ಜಗತ್ತಿನಾದ್ಯಂತ ಬಿಡುಗಡೆ ಆಗಿ, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರವು ದೊಡ್ಡ ಗಳಿಕೆ ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ರಜೆಗಳ ಹೊರತಾಗಿಯೂ ಚಿತ್ರದ ಗಳಿಕೆಯು ಕುಸಿಯುತ್ತಿದ್ದು, ಮೂರನನೇ ದಿನವಾದ ಶುಕ್ರವಾರ ಗಳಿಕೆಯಲ್ಲಿ ಇನ್ನಷ್ಟು ಕುಸಿತ ಕಂಡಿದೆ ಎಂದು ಹೇಳಲಾಗುತ್ತಿದೆ.

‘ಟಾಕ್ಸಿಕ್‍’ ಚಿತ್ರವು ಭಾರೀ ನಿರೀಕ್ಷೆಯೊಂದಿಗೆ ಬುಧವಾರ, ಜಗತ್ತಿನಾದ್ಯಂತ ಬಿಉಡಗಡೆ ಆಯಿತು. ಚಿತ್ರವು ಅಡ್ವಾನ್ಸ್ ಬುಕ್ಕಿಂಗ್‍ನಿಂದಲೇ ಸುಮಾರು ಒಂಬತ್ತು ಲಕ್ಷ ಟಿಕೆಟ್‍ ಮಾರಾಟವಾಗಿದ್ದು, ಅದರಿಂದಲೇ 41 ಕೋಟಿ ರೂ. ದುಡಿದಿದೆ ಎಂದು ಹೇಳಲಾಗಿತ್ತು. ಬಾಕ್ಸ್ ಆಫೀಸ್‍ ಟ್ರಾಕರ್‍ ಸಕ್ನಿಲ್ಕ್ ಡಾಟ್‍ಕಾಮ್‍ ಪ್ರಕಾರ, ಚಿತ್ರವು 17,780 ಪ್ರದರ್ಶನಗಳಿಂದ ಸುಮಾರು 9 ಲಕ್ಷ ಟಿಕೆಟ್‍ಗಳು ಮಾರಾಟವಾಗಿದೆಯಂತೆ. ಇದೆಲ್ಲದರಿಂದ ಚಿತ್ರದ ಬಿಡುಗಡೆಗೂ ಮೊದಲೇ 41. 36 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿತ್ತು.

ಅದರಂತೆ ಚಿತ್ರವು ಮೊದಲ ದಿನ ದೊಡ್ಡ ಓಪನಿಂಗ್‍ ಪಡೆದಿತ್ತು. ಸಕ್ನಿಲ್ಕ್ ಡಾಟ್‍ಕಾಮ್‍ ಪ್ರಕಾರ, ಚಿತ್ರದ ಮೊದಲ ದಿನ ಗಳಿಕೆ 101.10 ಕೋಟಿ ರೂ. ಆಗಿತ್ತು. ಆದರೆ, ಚಿತ್ರಕ್ಕೆ ಸಾಕಷ್ಟು ನೆಗೆಟಿವ್‍ ಪ್ರತಿಕ್ರಿಯೆಗಳು ಸಿಕ್ಕಿದ್ದರಿಂದ, ಸಂಜೆಯ ಹೊತ್ತಿಗೆ ಚಿತ್ರದ ಗಳಿಕೆಯಲ್ಲಿ ಇಳಿಕೆ ಕಂಡಿತ್ತು. ಎರಡನೆಯ ದಿನ ಪರಿಸ್ಥಿತಿ ಸುಧಾರಿಸಿಬಹುದು ಅಂದುಕೊಂಡರೆ, ಅದು ಸುಳ್ಳಾಯಿತು. ಮೊದಲ ದಿನ 101.10 ಕೋಟಿ ಇದ್ದ ಗಳಿಕೆ, ಎರಡನೆಯ ದಿನಕ್ಕೆ 37.65 ಕೋಟಿಯಾಗಿತ್ತು. ಅಂದರೆ, ಒಂದೇ ದಿನದ ಅಂತರದಲ್ಲಿ ಗಳಿಕೆಯಲ್ಲಿ ಶೇ. 70ರಷ್ಟು ಗಳಿಕೆ ಕಡಿಮೆಯಾಗಿತ್ತು. ಶುಕ್ರವಾರ ಅದು ಇನ್ನಷ್ಟು ಕುಸಿದಿದೆ. ಮೂರನೆಯ ದಿನ ಚಿತ್ರವು 26.60 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದ್ದು, ಒಟ್ಟಾರೆ ಮೂರು ದಿನಗಳಲ್ಲಿ ಚಿತ್ರವು 165 ಕೋಟಿ ಗಳಿಕೆ ಮಾಡಿದೆ.

ಇದು ಭಾರತದ ಲೆಕ್ಕವಾದರೆ, ಹೊರದೇಶಗಳಲ್ಲೂ ದೊಡ್ಡ ಗಳಿಕೆ ಏನೂ ಕಂಡಿಲ್ಲ. ಮೊದಲ ದಿನ ಹೊರದೇಶಗಳಲ್ಲಿ 20 ಕೋಟಿಯಷ್ಟು ಗಳಿಕೆಯಾದರೆ, ಎರಡನೆಯ ದಿನಕ್ಕೆ ಅದು ಎಂಟು ಕೋಟಿಗೆ ಇಳಿದಿತ್ತಂತೆ. ಮೂರನೆಯ ದಿನ ಅದು ನಾಲ್ಕು ಕೋಟಿವರೆಗೂ ಇಳಿದಿತ್ತು ಎಂದು ಕೆಲವು ರಾಷ್ಟ್ರೀಯ ಮಟ್ಟದ ವೆಬ್‍ಸೈಟ್‍ಗಳಲ್ಲಿ ವರದಿಯಾಗಿವೆ. ಇದೆಲ್ಲದರಿಂದ, ಚಿತ್ರವು ಮೂರು ದಿನಗಳಲ್ಲಿ 200 ಕೋಟಿ ರೂ. ಗಡಿ ದಾಟಿದೆ.

‘ಟಾಕ್ಸಿಕ್‍’ ಚಿತ್ರವು ಭಾರತದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಈ ಪೈಕಿ ಹಿಂದಿ ಮತ್ತು ಕನ್ನಡ ಅವತರಣಿಕೆಗು ಒಳ್ಳೆಯ ಪ್ರದರ್ಶನ ಕಂಡಿವೆ. ತಮಿಳು ನಾಡು, ಆಂಧ್ರ ಮತ್ತು ತೆಲಂಗಾಣದಲ್ಲಿ ಸಾಧಾರಣ ಪ್ರತಿಕ್ರಿಯೆ ಸಿಕ್ಕರೆ, ಮಲಯಾಳಂ ಅವತರಣಿಕೆಗೆ ಅಷ್ಟೇನೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹಾಗೆ ನೋಡಿದರೆ, ಈ ವರ್ಷ ಬಿಡುಗಡೆಯಾಗಿ, ಮೊದಲ ಮೂರು ದಿನಗಳಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ‘ಟಾಕ್ಸಿಕ್‍’ ಎರಡನೇ ಸ್ಥಾನದಲ್ಲಿದೆ. ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ‘ದುರಂಧರ್‍ 2’ ಚಿತ್ರವು ಮೊದಲ ಮೂರು ದಿನಗಳಲ್ಲಿ 339.27 ಕೋಟಿ ರೂ. ಗಳಿಸಿತ್ತು. ಎರಡನೆಯ ಸ್ಥಾನದಲ್ಲಿ ‘ಟಾಕ್ಸಿಕ್‍’ ಚಿತ್ರವಿದ. ನಂತರದ ಸ್ಥಾನಗಳಲ್ಲಿ ಸನ್ನಿ ಡಿಯೋಲ್‍ ಅಭಿನಯದ ‘ಬಾರ್ಡರ್ 2’ (121 ಕೋಟಿ), ರಾಮ್‍ ಚರಣ್‍ ಅಭಿನಯದ ಪೆದ್ದಿ’ (125.50 ಕೋಟಿ) ಮತ್ತು ವಿಜಯ್‍ ಅಭಿನಯದ ‘ಜನ ನಾಯಗನ್‍’ (92.75 ಕೋಟಿ) ಚಿತ್ರಗಳಿವೆ.

‘ಟಾಕ್ಸಿಕ್‍’ ಚಿತ್ರವನ್ನು KVN ಪ್ರೊಡಕ್ಷನ್ಸ್ ಮತ್ತು ಯಶ್‍ ಅವರ ಮಾನ್‍ಸ್ಟರ್‍ ಮೈಂಡ್‍ ಕ್ರಿಯೇಷನ್ಸ್ ಸಂಸ್ಥೆಗಳಡಿ KVN ಮತ್ತು RSY ನಿರ್ಮಿಸಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‍ ದಾಸ್‍ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಯಶ್‍, ಕಿಯಾರಾ ಅಡ್ವಾಣಿ, ನಯನತಾರಾ, ಹಾಲಿವುಡ್‍ ನಟ ಕೈಲ್‍ ಪಾಲ್‍, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು 2ಡಿ, ಎಪಿಕ್, ಐಮ್ಯಾಕ್ಸ್ 2ಡಿ, 4ಡಿಎಕ್ಸ್, ಡಾಲ್ಬಿ ಸಿನಿಮಾ 2ಡಿ ಮುಂತಾದ ವಿಭಾಗಗಳಲ್ಲಿ ಬಿಡುಗಡೆಯಾಗಿದೆ.

‘ಟಾಕ್ಸಿಕ್‍’ Review: ರಾಯನ ಪ್ರಪಂಚದಲ್ಲಿ ಕ್ರೌರ್ಯ ನರ್ತನ

Discover more from KannadaScreens

Subscribe now to keep reading and get access to the full archive.

Continue reading