‘ಗಂಟುಮೂಟೆ’ ಚಿತ್ರದ ನಂತರ ನಿರ್ದೇಶಕ ರೂಪಾ ರಾವ್ ಅವರ ಮುಂದಿನ ಹೆಜ್ಜೆ ಏನು? ಅವರ ನಿರ್ದೇಶನದ ಹೊಸ ಚಿತ್ರ ಯಾವುದು? ಎಂಬ ಕುತೂಹಲವಿದ್ದವರಿಗೆ, ರೂಪಾ ನಿರ್ದೇಶಕಿಯಾಗಿ ಬರುವ ಬದಲು ನಿರ್ಮಾಪಕಿಯಾಗಿ ಬಂದರು. ‘ಕೆಂಡ’ ಎಂಬ ಚಿತ್ರವನ್ನು ನಿರ್ಮಿಸಿದರು. ಆ ಚಿತ್ರ ಎರಡು ವರ್ಷಗಳ ಹಿಂದೆ ಬಿಡುಗಡೆಯಾದರೂ, ಹೆಚ್ಚು ಸದ್ದಾಗಲಿಲ್ಲ.
ಇದೀಗ ರೂಪಾ, ತಮ್ಮ ಎರಡನೇ ನಿರ್ದೇಶನದ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಇದೀಗ ಆ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆಗೊಂಡಿದೆ. ‘ಭಯಂಕರ ಪ್ರೀತಿ’ ಎಂಬ ಈ ಶೀರ್ಷಿಕೆಯೇ, ಈ ಬಾರಿ ರೂಪಾ ಇನ್ನೊಂದು ವಿಭಿನ್ನ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂಬ ಸುಳಿವನ್ನು ನೀಡುತ್ತದೆ.
ಪ್ರೇಮ ಕಥನಗಳು ಹೊಸದಲ್ಲ. ಆದರೆ, ಇದು ಮಾಮೂಲಿ ಪ್ರೇಮ ಕಥನವಲ್ಲ ಎಂಬ ಸೂಕ್ಷ್ಮ ಸಂದೇಶವನ್ನು ‘ಭಯಂಕರ ಪ್ರೀತಿ’ ಎಂಬ ಶೀರ್ಷಿಕೆಯೇ ಸ್ಪಷ್ಟಪಡಿಸುವಂತಿದೆ. ಇಲ್ಲಿ ತೇಜು ಬೆಳವಾಡಿ ಮತ್ತು ಪ್ರಣವ್ ಶ್ರೀಧರ್ ನಾಯಕ-ನಾಯಕಿಯರಾಗಿ ನಟಿಸುತ್ತಿದ್ದಾರೆ. ಅವರಿಬ್ಬರ ಪಾತ್ರಗಳ ಜೊತೆಗೆ ಟೈಟಲ್ ಮೋಷನ್ ಪೋಸ್ಟರ್ ಅನ್ನು ರೂಪಾ ರಾವ್ ರೂಪಿಸಿದ್ದಾರೆ.
ಈ ಹಿಂದೆ ‘ಕೆಂಡ’ ಚಿತ್ರವನ್ನು ರೂಪಾ ರಾವ್, ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ನಿರ್ಮಿಸಿದ್ದರು. ‘ಭಯಂಕರ ಪ್ರೀತಿ’ ಚಿತ್ರ ಕೂಡಾ ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿಯೇ ನಿರ್ಮಾಣಗೊಳ್ಳುತ್ತಿದೆ. ಈ ಚಿತ್ರಕ್ಕೆ ಸಹದೇವ್ ಕೆಲವಡಿ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ.
‘ಭಯಂಕರ ಪ್ರೀತಿ’ ಚಿತ್ರದಲ್ಲಿ ಆಶಿತ್, ಅನನ್ಯಾ ಮೋಹನ್, ವಿನಯ್ ಭಾರದ್ವಾಜ್, ಶೀತಲ್ ರಾವ್, ಸುಧಾ ಪ್ರಸಾದ್, ಅನಘ, ಚಂದ್ರಶೇಖರ್, ಪೃಥ್ವಿ ಬನವಾಸಿ, ರಾಮ್ ಮಂಜೊನಾಥ್, ವಿಶಾಲ್, ವೈಭವ್ ಶೆಟ್ಟಿ, ಚೇತನ್, ನಿತಿನ್, ಗಗನಶ್ರೀ ಮುಂತಾವರ ನಟಿಸಿದ್ದು, ಈ ಚಿತ್ರಕ್ಕೆ ಪ್ರದೀಪ್ ನಾಯಕ್ ಸಂಕಲನ, ಶಿಬಿ ಶ್ರೀನಿವಾಸನ್ ಸಂಗೀತವಿದೆ.


