ಚಿತ್ರ: ಟಾಕ್ಸಿಕ್
ನಿರ್ಮಾಣ: ಕೆ. ವೆಂಕಟನಾರಾಯಣ ಮತ್ತು ಯಶ್
ನಿರ್ದೇಶನ: ಗೀತೂ ಮೋಹನ್ ದಾಸ್
ತಾರಾಗಣ: ಯಶ್, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ನಯನತಾರಾ, ಹ್ಯೂಮಾ ಖುರೇಷಿ ಮುಂತಾದವರು
‘ಉಸಿರಾಡುತ್ತಿರುವ ಶವ ನೀನು …’
ಆಕೆ ತನ್ನ ಬಗ್ಗೆ ಈ ಮಾತು ಹೇಳುತ್ತಿದ್ದಂತೆಯೇ ರಾಯನಿಗೆ ಸಿಟ್ಟು ಬರುತ್ತದೆ. ಆದರೆ, ನಿಜಕ್ಕೂ ಅವನು ಉಸಿರಾಡುತ್ತಿರುವ ಶವವೇ. ಏಕೆಂದರೆ, ಅವನ ಬಳಿ ಹಣ, ಶಕ್ತಿ, ಸಾಮ್ರಾಜ್ಯ ಎಲ್ಲವೂ ಇದೆ. ಆದರೆ, ತನ್ನನ್ನು ಪ್ರೀತಿಸುವವರು ಯಾರೂ ಇಲ್ಲ. ತಾಯಿಯಂತೆ ಪೊರೆದ ಅಕ್ಕ, ಇಷ್ಟಪಟ್ಟಿದ್ದ ಹುಡುಗಿ, ಮದುವೆಯಾಗಬೇಕಿದ್ದ ಹುಡುಗಿ … ಎಲ್ಲರೂ ಈಗ ಬರೀ ನೆನಪು ಮಾತ್ರ. ಇಂಥದ್ದೊಂದು ಸ್ಥಿತಿಗೆ ಅವನು ಬರಲು ಕಾರಣವೇನು?
‘ಟಾಕ್ಸಿಕ್’ ಒಂದು ರೆಟ್ರೋ ಕಥೆ ಹೊಂದಿರುವ ಚಿತ್ರ. 1947ರ ಗೋವಾದಲ್ಲಿ ಶುರುವಾಗಿ ಅಲ್ಲಿಂದ ಮುಂದಿನ ಕೆಲವು ವರ್ಷಗಳ ನಡೆಯುವ ಕಥೆ ಇರುವ ಚಿತ್ರ. ಮೇಲ್ನೋಟಕ್ಕೆ ಇದು ರಾಯ ಎಂಬುವವನ ಕುರಿತಾದ ಕಥೆಯಾದರೂ, ಅದು ಅವನಿಗೆ ಮಾತ್ರ ಸೀಮಿತವಲ್ಲ. ಇದೊಂದು ಕಥೆ ಎನ್ನುವುದಕ್ಕಿಂತ ಹಲವು ಉಪಕಥೆಗಳಿವೆ. ಅಕ್ಕ-ತಮ್ಮನ ಬಾಂಧವ್ಯವಿದೆ. ನಿಸ್ವಾರ್ಥ ಪ್ರೀತಿ ಇದೆ. ತಂದೆ-ಮಗನ ಸೇಡಿದೆ. ತ್ರಿಕೋನ ಪ್ರೇಮ ಕಥೆ ಇದೆ. ಡ್ರಗ್ಸ್, ಕೆಸಿನೋ ಜಾಲಗಳ ಅಧಿಪತ್ಯಕ್ಕಾಗಿ ನಡೆಯುವ ಸಂಘರ್ಷದ ಕಥೆ ಇದೆ. ಮಾನಸಿಕ ತೊಳಲಾಟವಿದೆ. ಹಾಗಾಗಿ, ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಷ್ಟೇ ಅಲ್ಲ, Psychological action crime thriller ಎನ್ನಬಹುದು. ಇದೆಲ್ಲವನ್ನೂ ಸೇರಿಸಿ 194 ನಿಮಿಷಗಳ ಚಿತ್ರ ಮಾಡಿದ್ದಾರೆ ನಿರ್ದೇಶಕಿ ಗೀತೂ ಮೋಹನ್ ದಾಸ್.
‘ಟಾಕ್ಸಿಕ್’ ಮೂಲತಃ ಯಾವ ಭಾಷೆಯ ಚಿತ್ರ ಎಂಬ ಪ್ರಶ್ನೆ ಬರುವುದು ಸಹಜ. ಏಕೆಂದರೆ, ಕನ್ನಡದ ನಟ-ನಿರ್ಮಾಪಕರು, ಮಲಯಾಳಂನ ನಿರ್ದೇಶಕಿ, ಹಿಂದಿಯ ನಟಿಯರು, ಹಾಲಿವುಡ್‍ನ ಸಾಹಸ ನಿರ್ದೇಶಕರು … ಹೀಗೆ ಹಲವು ಭಾಷೆಗಳ ಮತ್ತು ಪ್ರದೇಶದವರು ಸೇರಿ ಒಟ್ಟಿಗೆ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಹಾಗಾಗಿಯೇ ಇದು ಯಾವ ಭಾಷೆಯ ಚಿತ್ರ ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಸರಿಯಾಗಿ ಚಿತ್ರದಲ್ಲೊಂದು ಸಂಭಾಷಣೆ ಇದೆ. ‘ನನ್ನ ಮಾತೃಭಾಷೆ violence ಕಣೋ. ಅದೇ universal’ ಎಂಬ ಮಾತು ಬರುತ್ತದೆ. ಅದು ಈ ಚಿತ್ರಕ್ಕೂ ಬಹಳ ಚೆನ್ನಾಗಿ ಒಪ್ಪುತ್ತದೆ.
ಈ ಚಿತ್ರದ ಮೂಲ ಭಾಷೆಯೇ ಕ್ರೌರ್ಯ, ಹಿಂಸೆ ಮತ್ತು ರಕ್ತಪಾತ. ಅದರ ಸುತ್ತ ಹಲವು ಕಥೆಗಳನ್ನು ಹೇಳಿಕೊಂಡು ಹೋಗಿದ್ದಾರೆ ಗೀತೂ ಮೋಹನ್ ದಾಸ್. ಕೆಲವು ಹೇಳಲಾಗದ, ಊಹಿಸಲಾಗದ ಮತ್ತು ನೋಡಲಿಕ್ಕಾಗದ ಕ್ರೌರ್ಯವನ್ನು ಈ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ. ಈ ಕ್ರೌರ್ಯವನ್ನು ಅವರು ಎರಡು ರೀತಿಯಲ್ಲಿ ತೋರಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಒಂದು ದೈಹಿಕವಾಗಿ, ಇನ್ನೊಂದು ಮಾನಸಿಕವಾಗಿ. ಒಂದು ಕಡೆ ರಾಯ ಬೇರೆಯವರನ್ನು ಹಿಂಸಿಸುತ್ತಾ, ಕೊಲ್ಲುತ್ತಾ ದೊಡ್ಡ ಸಾಮ್ರಾಜ್ಯಕ್ಕೆ ಅಧಿಪತಿಯಾದರೆ, ಇನ್ನೊಂದು ಕಡೆ ಆ ಭರದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡು, ಸಂಬಂಧಗಳಿಂದ ದೂರವಾಗಿ ಮಾನಸಿಕವಾಗಿ ತನ್ನನ್ನು ತಾನೇ ಹಿಂಸಿಸಿಕೊಂಡು ಒಬ್ಬಂಟಿಯಾಗುತ್ತಾನೆ. ಆದರೆ, ಇಲ್ಲಿ ಮಾನಸಿಕ ಹಿಂಸೆಗಿಂತ ದೈಹಿಕ ಕ್ರೌರ್ಯ ಹೆಚ್ಚು ವಿಜೃಂಭಣೆಯಾಗಿದೆ. ಅದೇ ಕಾರಣಕ್ಕೆ ನೋವು, ಮೌನ, ನಿಟ್ಟುಸಿರು ಎಲ್ಲವೂ ಗಲಾಟೆ, ಅಬ್ಬರ, ಕುಡಿತ, ರಕ್ತಪಾತದಲ್ಲಿ ಕಳೆದು ಹೋಗಿದೆ. ಒಬ್ಬ ದೊಡ್ಡ ಸಾಮ್ರಾಜ್ಯದ ಹಿಂದಿರುವ ಡಾನ್‍ನ ಸಾಹಸ, ಕ್ರೌರ್ಯದ ಕುರಿತಾಗಿ ಚಿತ್ರ ಸಾಗುತ್ತದೆಯೇ ಹೊರತು, ಅವನ ನೋವು, ಯಾತನೆಯನ್ನು ಸಶಕ್ತವಾಗಿ ಹಿಡಿದಿಡುವುದಿಲ್ಲ.
‘ಟಾಕ್ಸಿಕ್’ ಚಿತ್ರದ ಕ್ಯಾನ್ವಾಸ್ ಬಹಳ ದೊಡ್ಡದು. ಪರಿಸರ, ಪಾತ್ರಗಳು, ಅದ್ದೂರಿತನ, ಕ್ರೌರ್ಯ, ಹಿಂಸೆ, ರಕ್ತಪಾತ್ರ ಎಲ್ಲವೂ ದೊಡ್ಡದು. ಕೆಲವೊಮ್ಮೆ ದೊಡ್ಡದು ಎನುವುದಕ್ಕಿಂತ ಅತಿ ಎಂಬ ಪದ ಹೆಚ್ಚು ಸರಿ ಎನಿಸಬಹುದು. ಇಲ್ಲಿ ಎಲ್ಲವೂ ಅತಿಯೇ. ಪ್ರೀತಿ, ಸೇಡು, ರಕ್ತಪಾತ, ಹಿಂಸೆ, ಹೊಡೆದಾಟ ಎಲ್ಲವೂ ಇನ್ನೊಂದು ಹಂತದಲ್ಲಿದೆ. ಆ ನಿಟ್ಟಿನಲ್ಲಿ ಇದೊಂದು larger than life ಚಿತ್ರ ಎಂದರೆ ತಪ್ಪಾಗಲಿಕ್ಕಿಲ್ಲ. ಇಂಥದ್ದೊಂದು ಚಿತ್ರವನ್ನು ಕಟ್ಟಿಕೊಡುವುದು ಅಷ್ಟು ಸುಲಭವೂ ಅಲ್ಲ. ಅಂಥದ್ದೊಂದು ಪ್ರಯೋಗ ಮಾಡಿರುವ ಯಶ್ ಮತ್ತು ಚಿತ್ರತಂಡದ ಪ್ರಯತ್ನವನ್ನು ಮೆಚ್ಚಿಕೊಳ್ಳುತ್ತಲೇ, ಇರುವ ಪ್ರತಿಭೆ ಮತ್ತು ಸೌಕರ್ಯಗಳನ್ನು ಬಳಸಿಕೊಂಡು ಇನ್ನಷ್ಟು ಸಶಕ್ತವಾದ ಚಿತ್ರ ಕಟ್ಟಿಕೊಡುವ ಸಾಧ್ಯತೆ ಇತ್ತು ಎಂಬ ಅಂಶವನ್ನು ತಳ್ಳಿಹಾಕುವಂತಿಲ್ಲ.
ಇಲ್ಲಿ ಮಾತುಮಾತಿಗೂ ಬಿಲ್ಡಪ್ ಇದೆ, ಪ್ರತಿ ದೃಶ್ಯದಲ್ಲೂ ನಾಯಕನ ವೈಭವೀಕರಣವಿದೆ. ಪ್ರತಿ ದೃಶ್ಯದಲ್ಲೂ ಅದ್ದೂರಿತನವಿದೆ. ಒಟ್ಟಾರೆ ವೈಭವ ಮತ್ತು ಸಾಹಸ ದೃಶ್ಯಗಳಿಗೆ ನೀಡಿರುವ ಪ್ರಾಮುಖ್ಯತೆಯನ್ನು ಭಾವನೆಗಳಿಗೂ ನೀಡಿದ್ದರೆ ಚೆನ್ನಾಗಿರುತ್ತಿತ್ತು. ಚಿತ್ರದ ಮೊದಲಾರ್ಧದ ಹೆಚ್ಚಿನ ಸಮಯವನ್ನು ಪಾತ್ರಗಳು ಮತ್ತು ಒಟ್ಟಾರೆ ಚಿತ್ರದ ಪರಿಸರವನ್ನು ಪರಿಚಯಿಸುವುದಕ್ಕೆ ಮೀಸಲಿಡಲಾಗಿದೆ. ಚಿತ್ರದ ಕಥೆ ಮತ್ತು ಸ್ವರೂಪವೇನು ಎಂಬುದು ಅರ್ಥವಾಗುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ, ಒಟ್ಟಾರೆ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧ ನಿಧಾನವಾಗಿದೆ. ಚಿತ್ರದಲ್ಲಿ ಸಾಕಷ್ಟು ಭಾವನಾತ್ಮಕ ಅಂಶಗಳಿದ್ದರೂ, ಪ್ರೇಕ್ಷಕರಿಗೆ ತಟ್ಟುವುದಿಲ್ಲ. ಚಿತ್ರವನ್ನು ಇನ್ನಷ್ಟು ಚುರುಕಾಗಿಸುವುದರ ಜೊತೆಗೆ, ಭಾವನೆಗಳಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿತ್ತು. ಇದೆಲ್ಲದರಿಂದ ಚಿತ್ರ ಅಪೂರ್ಣವಾಗಿದೆ, ಇನ್ನೂ ಏನೋ ಬೇಕಿತ್ತು ಎಂದನಿಸುವುದು ಹೌದು.
ಚಿತ್ರದ ಒಂದಿಷ್ಟು ವಿಷಯಗಳು ಮೆಚ್ಚುಗೆಗೆ ಪಾತ್ರವಾಗುವಂತಿವೆ. ಪ್ರಮುಖವಾಗಿ ಯಶ್ ಅಭಿನಯ. ಇಲ್ಲಿ ಯಶ್, ರಾಯ ಮತ್ತು ಟಿಕೆಟ್ ಎಂಬ ಎರಡು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಿರಲಿ, ಆ್ಯಕ್ಷನ್ ದೃಶ್ಯಗಳಿರಲಿ … ಎರಡರಲ್ಲೂ ಇಷ್ಟವಾಗುತ್ತಾರೆ ಯಶ್. ಹಾಗೆ ನೋಡಿದರೆ, ಚಿತ್ರವನ್ನು ಒಬ್ಬಂಟಿಯಾಗಿ ಹೆಗಲ ಮೇಲೆ ಹೊತ್ತು ಸಾಗುವವರು ಅವರೇ. ಅವರ ಜೊತೆಗೆ ಛಾಯಾಗ್ರಹಣ, ಸಾಹಸ ನಿರ್ದೇಶನ, ಕಲಾ ನಿರ್ದೇಶನ, ಗ್ರಾಫಿಕ್ಸ್ ವಿಭಾಗಗಳೂ ಗಮನಸೆಳೆಯುತ್ತವೆ.
ಚಿತ್ರದಲ್ಲಿ ಐದು ಮಹಿಳಾ ಪಾತ್ರಗಳಿರುವುದು ವೇಷ. ಒಂದೊಂದು ಭಾವನೆಯನ್ನು ಒಂದೊಂದು ಪಾತ್ರ ಹಿಡಿದಿಡುತ್ತದೆ. ಈ ಪೈಕಿ ಅಕ್ಕನಾಗಿ ಕಾಣಿಸಿಕೊಂಡಿರುವ ನಯನತಾರಾ, ಪ್ರೇಯಸಿಯರಾಗಿ ಕಾಣಿಸಿಕೊಂಡಿರುವ ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ಇಷ್ಟವಾಗುತ್ತಾರೆ. ಪುರುಷ ಪಾತ್ರಗಳು ಹೇರವಾಗಿವೆ. ಆದರೆ, ಯಶ್ ಮುಂದೆ ಅವರ್ಯಾರೂ ಕಾಣಿಸುವುದಿಲ್ಲ. ‘ತಬಾಹಿ’ ಸೇರಿದಂತೆ ಒಂದೆರಡು ಹಾಡುಗಳು ಖುಷಿಕೊಟ್ಟರೂ, ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತದ ಅಬ್ಬರ ಹೆಚ್ಚಿದೆ.
‘ಟಾಕ್ಸಿಕ್ – A Fairytale for the Grownups’ ಎಂಬ ಹೆಸರೇ ಹೇಳುವಂತೆ ಇದು ಅಪ್ಪಟ ವಯಸ್ಕರಿಗಾಗಿ ಮಾತ್ರ. ಯಶ್, ಅದ್ದೂರಿತನ, ಸಾಹಸ ಸನ್ನಿವೇಶಗಳನ್ನು ಇಷ್ಟಪಡುವವರು ಒಮ್ಮೆ ಚಿತ್ರ ನೋಡಬಹುದು. ಆದರೆ, ಅದಕ್ಕೂ ಮೊದಲು ವಯಸ್ಕರಾಗಿರಬೇಕು ಮತ್ತು ಕುಟುಂಬ ಸಮೇತ ನೋಡುವುದು ಕಷ್ಟವಾಗಬಹುದು ಎಂದು ನೆನಪಿರಲಿ.


