ಚಿತ್ರ: ಬಾಸ್
ನಿರ್ಮಾಣ: ತನುಷ್ ಶಿವಣ್ಣ
ನಿರ್ದೇಶನ: ಲವ ವಿ
ತಾರಾಗಣ: ತನುಷ್ ಶಿವಣ್ಣ, ವಂದಿತಾ ಗೌಡ, ಪಾಯಲ್ ಚೆಂಗಪ್ಪ ಮುಂತಾದವರು
ಇದು ದರ್ಶನ್ – ರೇಣುಕಾಸ್ವಾಮಿ ಪ್ರಕರಣದ ಕುರಿತಾದ ಚಿತ್ರವಾ?
‘ಬಾಸ್’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆದಾಗಲೇ ಇಂಥದ್ದೊಂದು ಪ್ರಶ್ನೇ ಕೇಳಿ ಬಂದಿತ್ತು. ಹೀಗೆ ಪ್ರಶ್ನೆ ಬಂದಾಗಲೆಲ್ಲಾ ಚಿತ್ರ ನೋಡಿ ಎನ್ನುತ್ತಿದ್ದರು ನಿರ್ದೇಶಕ ಲವ. ಚಿತ್ರ ಕೊನೆಗೂ ಬಿಡುಗಡೆಯಾಗಿದೆ. ಅನುಮಾನವೇ ಬೇಡ. ಇದು ಅದೇ ಪ್ರಕರಣವನ್ನು ಆಧರಿಸಿ, ಸ್ವಲ್ಪ ಬದಲಾವಣೆಯೊಂದಿಗೆ ಮೂಡಿ ಬಂದಿರುವ ಚಿತ್ರ.
ಇಲ್ಲಿ ನಾಯಕ ತನುಷ್, ಅಭಿಮಾನಿಗಳ ವಲಯದಲ್ಲಿ ಬಾಸ್ ಎಂದೇ ಪ್ರಸಿದ್ಧ. ಆತ BCB ಕ್ರಿಕೆಟ್ ತಂಡದ ಜನಪ್ರಿಯ ಆಟಗಾರ. ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ, ಆತನ ಜೀವನದಲ್ಲಿ ಒಂದು ಅನಿರೀಕ್ಷಿತ ಘಟನೆ ನಡೆದು ಹೋಗುತ್ತದೆ. ಆತನ ಪ್ರೇಯಸಿಗೆ ಹಾಸನದ ಶಿವಸ್ವಾಮಿ ಎಂಬಾತ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿರುತ್ತಾನೆ. ಅವನಿಂದ ಬೇಸತ್ತ ಆಕೆ, ತನ್ನ ಆಪ್ತರೊಂದಿಗೆ ಅಳಲು ತೋಡಿಕೊಳ್ಳುತ್ತಾಳೆ. ಸರಿ, ಆತನನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗುತ್ತದೆ. ಆತನನ್ನು ಪ್ರಶ್ನಿಸುವ ಸಂದರ್ಭದಲ್ಲಿ ಹಿಂಸೆ ಕೊಡಲಾಗುತ್ತದೆ. ಅತಿಯಾದ ಹಿಂಸೆಯಿಂದ ಆತ ಸತ್ತು ಹೋಗುತ್ತಾನೆ. ಮುಂದೇನಾಗುತ್ತದೆ ಎಂಬ ವಿಷಯವನ್ನು ತೆರೆಯ ಮೇಲೆ ನೋಡಬೇಕು.
ರೇಣುಕಾಸ್ವಾಮಿಯ ಪ್ರಕರಣವನ್ನು ಫಾಲೋ ಮಾಡುತ್ತಿರುವವರಿಗೆ ಇದು ಅದೇ ಘಟನೆಯನ್ನಾಧರಿಸಿದ ಚಿತ್ರ ಎಂಬುದು ಸ್ಪಷ್ಟವಾಗುತ್ತದೆ. ಪ್ರಕರಣವಷ್ಟೇ ಅಲ್ಲ, ಚಿತ್ರದಲ್ಲಿರುವ ಘಟನೆ ಮತ್ತು ಪಾತ್ರಧಾರಿಗಳಿಗೂ ಮತ್ತು ನಿಜ ಜೀವನದ ಘಟನೆ ಮತ್ತು ಪಾತ್ರಧಾರಿಗಳಿಗೆ ಸಾಕಷ್ಟು ಸ್ವಾಮ್ಯತೆ ಇದೆ. ಹೆಸರುಗಳು ಬದಲಾಗಿರುವುದು ಬಿಟ್ಟರೆ, ಮಿಕ್ಕಂತೆ ಇಲ್ಲಿ ಕಲ್ಪನೆಗೆ ಅವಕಾಶ ಕಡಿಮೆಯೇ. ಹಾಗಾಗಿ, ಇದು ಕಾಲ್ಪನಿಕ ಕಥೆ ಎನ್ನುವುದು ಸೂಕ್ತವಲ್ಲ.
ಇಂಥದ್ದೊಂದು ಪ್ರಕರಣವನ್ನು ಆಧರಿಸಿ ಚಿತ್ರ ಮಾಡುವುದು ಸುಲಭವಲ್ಲ. ಅದರಲ್ಲೂ ಪ್ರಕರಣ ನ್ಯಾಯಾಲಯದಲ್ಲಿರುವಾಗ ಮತ್ತು ತೀರ್ಪು ಇನ್ನೂ ಹೊರಬಾರದೇ ಇರುವಾಗ, ಈ ಕಥೆಯನ್ನು ಹೇಳುವುದಕ್ಕೆ ಧೈರ್ಯ ಬೇಕು. ಆ ಧೈರ್ಯವನ್ನು ನಿರ್ದೇಶಕ ಲವ ತೋರಿಸಿದ್ದಾರಾದರೂ, ನಿಜವನ್ನು ತೋರಿಸಿದರೆ ಸಮಸ್ಯೆ ಎದುರಾಗಬಹುದು, ಅಭಿಮಾನಿಗಳು ಸಿಟ್ಟಾಗಬಹುದು ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ, ಆ ಪ್ರಕರಣವನ್ನೇ ಇಟ್ಟುಕೊಂಡು ಬ್ಯಾಲೆನ್ಸ್ ಮಾಡುವ ಪ್ರಯತ್ನ ಮಾಡಿದ್ದಾರೆ.
ಪ್ರಕರಣ ಸಾಗಿ ಬಂದ ಹಾದಿಯನ್ನು ತೋರಿಸುತ್ತಲೇ, ಇಲ್ಲಿ ನಾಯಕ ನಿರಪರಾಧಿ, ಯಾರದೋ ತಪ್ಪಿಗೆ ಬೆಲೆ ತೆರಬೇಕಾಯಿತು ಎಂದೇ ಚಿತ್ರದುದ್ದಕ್ಕೂ ತೋರಿಸಿಕೊಂಡೇ ಬರಲಾಗಿದೆ. ಇಲ್ಲಿ ‘ಬಾಸ್’ನ ಒಳ್ಳೆಯ ಗುಣಗಳನ್ನಷ್ಟೇ ತೋರಿಸಲಾಗಿದೆಯೇ ಹೊರತು, ಸಮಾಜದಲ್ಲಿ ಪ್ರಚಲಿತದಲ್ಲಿರುವ ಅವರ ಬೇರೆ ಯಾವುದೇ ವಿಷಯದ ಬಗ್ಗೆಯೂ ಪ್ರಸ್ತಾಪವಿಲ್ಲ. ಹಾಗಾಗಿ, ಇದು ಪೂರ್ವಾಗ್ರಹ ಎಂದು ಅಭಿಮಾನಿಗಳಲ್ಲದ, ಚಿತ್ರ ನೋಡುತ್ತಿರುವ ಇತರೆ ಪ್ರೇಕ್ಷಕರಿಗೆ ಅನಿಸಬಹುದು. ಅಭಿಮಾನಿಯ ದೃಷ್ಟಿಕೋನದಲ್ಲಿ ಪ್ರಕರಣವನ್ನು ಕಟ್ಟಿಕೊಟ್ಟರೆ ಹೇಗಿರುತ್ತದೋ, ಚಿತ್ರ ಅದೇ ರೀತಿ ಮೂಡಿಬಂದಿದೆ ಸಮತ್ತು ಅಭಿಮಾನಿಗಳನ್ನು ಖುಷಿಯಾಗಿಸುವುದಕ್ಕೇ ಹಾಗೆ ಮಾಡಲಾಗಿದೆ ಎಂಬುದು ಸ್ಪಷ್ಟ.
ಮಿಕ್ಕಂತೆ ಪ್ರಕರಣದ ಆರಂಭದಿಂದ ಕೊನೆಯವರೆಗೂ ಚಾಚೂತಪ್ಪದೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಒಂದು ಮೋರಿಯ ಪಕ್ಕ ಹೆಣ ಸಿಗುವುದರಲ್ಲಿಂದ ಚಿತ್ರ ಶುರುವಾಗಿ, ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸುವಲ್ಲಿಗೆ ಮತ್ತು ಅದರ ಹಿಂದಿನ ಕಾನೂನು ಪ್ರಕ್ರಿಯೆಗಳನ್ನು ತೋರಿಸುವಲ್ಲಿಗೆ ಚಿತ್ರ ಮುಗಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವದರಿಂದ ಚಿತ್ರವನ್ನು ಅಷ್ಟಕ್ಕೇ ಮುಗಿಸಲಾಗಿದೆ. ಕಟ್ ಮಾಡಿದರೆ, ಕೆಲವು ವರ್ಷಗಳ ನಂತರ ‘ಬಾಸ್’ ರಾಜಕೀಯದಲ್ಲಿ ಧ್ರುವತಾರೆಯಾಗಿ ಮೆರೆಯುವ ದೃಶ್ಯಗಳನ್ನು ತೋರಿಸಲಾಗಿದೆ.
ಚಿತ್ರದ ಮೊದಲಾರ್ಧ ರೋಚಕವಾಗಿದೆ. ಪ್ರಕರಣ ಬೆಳಕಿಗೆ ಬರುವುದಕ್ಕೆ ಮೊದಲು ಏನೆಲ್ಲಾ ಆಯಿತು, ಕೊಲೆಯ ಹಿಂದೆ ಏನೆಲ್ಲಾ ನಡೆಯಿತು ಎಂಬುದನ್ನು ರೋಚಕವಾಗಿ ತೋರಿಸಲಾಗಿದೆ. ಮೊದಲಾರ್ಧದಲ್ಲಿದ್ದ ವೇಗ ಮತ್ತು ಹಿಡಿತ ಕ್ರಮೇಣ ದ್ವಿತೀಯಾರ್ಧದಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ. ಸಾಕಷ್ಟು ಸುದ್ದಿಯಾದ ಈ ಪ್ರಕರಣದ ಸಣ್ಣಸಣ್ಣ ಮಾಹಿತಿ ಸಾರ್ವಜನಿಕವಾಗಿದೆ ಮತ್ತು ಈ ಪ್ರಕರಣದ ಬಗ್ಗೆ ಸಾಕಷ್ಟು ವಿಷಯಗಳು ಹೊರಬಿದ್ದಿವೆ. ಹಾಗಾಗಿ, ಈ ಕಥೆಯನ್ನು ಅಷ್ಟೇ ರೋಚಕವಾಗಿ ಹಿಡಿದಿಡುವುದು ಕಷ್ಟದ ವಿಷಯ. ಒಂದು ಹಂತದಲ್ಲಿ ತೆರೆ ಮೇಲೆ ಸಾಕಷ್ಟು ಘಟನೆಗಳು ನಡೆದರೂ, ಆ ರೋಚಕತೆ ಉಳಿಯುವುದಿಲ್ಲ.
ಚಿತ್ರದಲ್ಲಿ ಬಾಸ್ ಪಾತ್ರ ಮಾಡಿರುವುದು ತನುಷ್. ಅವರಿಗೆ ಇಲ್ಲಿ screen space ಕಡಿಮೆಯೇ. ಇದೇ ಮಾತು ಪಾಯಲ್ ಚೆಂಗಪ್ಪ ಮತ್ತು ವಂದಿತಾ ಗೌಡ ಅವರಿಗೂ ಸಲ್ಲುತ್ತದೆ. ಎಲ್ಲರೂ ಇರುವ ಸಮಯದಲ್ಲೇ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಗಮನ ಸೆಳೆಯುವುದು ಚಿತ್ರದುದ್ದಕ್ಕೂ ಕಾಣಸಿಗುವ ಡ್ರೋನ್ ಶಾಟ್‍ಗಳು.


