ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವು ಮೊದಲ ವಾರದಲ್ಲಿ 312 ಕೋಟಿ ರೂ. ಗಳಿಸಿದೆ ಎಂಬ ಮಾಹಿತಿ ಬಿದ್ದಿದೆ. ಎಂಟನೇ ದಿನದಂದು ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡಿದ್ದು, ಒಂದಂಕಿ ಇಳಿದಿದೆ ಎನ್ನಲಾಗಿದೆ. ಎಂಟನೆ ದಿನ ಭಾರತದಲ್ಲಿ ಚಿತ್ರದ ಗಳಿಕೆ ಸುಮಾರು ಐದು ಕೋಟಿಯಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.
‘ಟಾಕ್ಸಿಕ್’ ಚಿತ್ರದ ಮೊದಲ ವಾರದ ಗಳಿಕೆಯಾದ 312 ಕೋಟಿ ರೂ.ಗಳಲ್ಲಿ, ಉತ್ತರ ಭಾರತ ಮತ್ತು ಕರ್ನಾಟಕದ ದೊಡ್ಡ ಪಾಲು ಇದೆ. ಚಿತ್ರದ ಹಿಂದಿ ಅವತರಣಿಕೆಯು ಉತ್ತರ ಭಾರತದಲ್ಲಿ 140 ಕೋಟಿಯಷ್ಟು ಗಳಿಕೆ ಆಗಿದೆಯಂತೆ. ಇನ್ನು, ಕರ್ನಾಟಕದಲ್ಲಿ ಚಿತ್ರವು 60 ಕೋಟಿ ರೂ.ನಷ್ಟು ಗಳಿಸಿರಬಹುದು ಎಂದು ಹೇಳಲಾಗುತ್ತಿದೆ. ಅಲ್ಲಿಗೆ, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೆ ಟಾಕ್ಸಿಕ್ ಪಾತ್ರವಾಗಿದೆ.
‘ಟಾಕ್ಸಿಕ್’ ಚಿತ್ರದ ಮುಂಗಡ ಬುಕ್ಕಿಂಗ್ ವರಮಹಾಲಕ್ಷ್ಮೀ ಹಬ್ಬದಂದು (ಆಗಸ್ಟ್ 21) ಶುರುವಾಗಿತ್ತು. ಅಂದರೆ ಚಿತ್ರ ಬಿಡುಗಡೆಗೂ ಐದು ದಿನಗಳ ಮೊದಲೇ ಇಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿತ್ತು. ಅದಕ್ಕೆ ಸರಿಯಾಗಿ, ದೊಡ್ಡ ಮಟ್ಟದಲ್ಲಿ ಬುಕ್ಕಿಂಗ್ ಸಹ ನಡೆದಿತ್ತು. ಎರಡು ದಿನಗಳ ಬಳಿಕ ಕೇರಳ ಮತ್ತು ತಮಿಳುನಾಡಿನಲ್ಲೂ ಬುಕಿಂಗ್ ಶುರುವಾಯಿತು. ತೆಲಂಗಾಣ ಮತ್ತು ಆಂಧ್ರದಲ್ಲಿ ಹಿಂದಿನ ದಿನ ಬುಕ್ಕಿಂಗ್ ಪ್ರಾರಂಭವಾಯಿತು. ಅದಕ್ಕೆ ಕಾರಣ ಟಿಕೆಟ್ ದರ ಏರಿಕೆ. ನಮ್ಮಲ್ಲಿನ ತರಹ ಇಷ್ಟ ಬಂದ ಹಾಗೆ ಟಿಕೆಟ್ ದರವನ್ನು ಬೇರೆ ಕೇಡೆ, ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಏರಿಸುವಂತಿಲ್ಲ. ಅದಕ್ಕೆ ಸರ್ಕಾರದ ಅನುಮತಿಯನ್ನು ಪಡೆಯಬೇಕು.
‘ಟಾಕ್ಸಿಕ್’ ಚಿತ್ರದ ದರ ಏರಿಕೆಗೆ ಅನುಮತಿ ಕೋರಿ ಚಿತ್ರತಂಡದವರು ಅಲ್ಲಿನ ಸರ್ಕಾರಗಳಿಗೆ ಮನವಿ ಸಲ್ಲಿಸಿತ್ತು. ಸರ್ಕಾರಗಳು ಅನುಮತಿ ನೀಡಿದ ಮೇಲಷ್ಟೇ ಮುಂಗಡ ಬುಕಿಂಗ್ ಆರಂಭವಾಯಿತು. ಹಾಗೆ ಅನುಮತಿ ನೀಡುವುದಕ್ಕೆ ಮೊದಲು ಸರ್ಕಾರಗಳು ಕೆಲವು ಷರತ್ತುಗಳನ್ನು ವಿಧಿಸಿದ್ದವು. ಒಟ್ಟಾರೆ ಟಿಕೆಟ್ ದರವನ್ನು ಹೇಗೆಂದರೆ ಹಾಗೆ ಏರಿಸುವಂತಿರಲಿಲ್ಲ. ಬಿಡುಗಡೆಯ ದಿನ, ಅದರಲ್ಲೂ ಬೆಳಿಗ್ಗಿನ ವಿಶೇಷ ಪ್ರದರ್ಶನಕ್ಕೆ (ಆರು ಗಂಟೆಯ ಪ್ರದರ್ಶನ) ಮಾತ್ರ GST ಸೇರಿ 600 ರೂ. ಬೆಲೆಯನ್ನು ನಿಗದಿಪಡಿಸಬಹುದಾಗಿತ್ತು. ಆಗಸ್ಟ್ 26 ರಿಂದ ಮುಂದಿನ 10 ದಿನಗಳ ಕಾಲ, ಅಂದರೆ ಸೆಪ್ಟೆಂಬರ್ 4ರವರೆಗೆ, ದಿನಕ್ಕೆ ಐದು ಪ್ರದರ್ಶನಗಳಿಗೆ ಅನ್ವಯವಾಗುವಂತೆ ಏಕಪರದೆಯ ಚಿತ್ರಮಂದಿರಗಳಲ್ಲಿ 50 ರೂ. ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 100 ರೂ.ನಷ್ಟು ಟಿಕೆಟ್ ದರ ಹೆಚ್ಚಿಸಿಕೊಳ್ಳಲು ಅನುಮತಿ ನೀಡಲಾಗಿತ್ತು.
ಇದು ಆಂಧ್ರ ಪ್ರದೇಶದ ನಿಯಮವಾದರೆ, ತೆಲಂಗಾಣದಲ್ಲಿ ಇದೇ ನಿಯಮಗಳ ಜೊತೆಗೆ, ಚಿತ್ರತಂಡವು ತೆಲುಗು ಚಲನಚಿತ್ರೋದ್ಯಮ ನೌಕರರ ಕಲ್ಯಾಣ ನಿಧಿಗೆ ಕಡ್ಡಾಯವಾಗಿ ಒಂದು ಕೋಟಿ ರೂ. ದೇಣಿಗೆ ನೀಡಬೇಕೆಂದು ಸೂಚಿಸಲಾಗಿತ್ತು. ಜೊತೆಗೆ ಚಿತ್ರಮಂದಿರಗಳಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮ ಹಾಗೂ ಸೈಬರ್ ಅಪರಾಧಗಳ ಕುರಿತ ಜಾಗೃತಿ ಜಾಹೀರಾತುಗಳನ್ನು ಪ್ರದರ್ಶಿಸುವುದು ಕಡ್ಡಾಯ ಎಂದು ಸೂಚಿಸಿತ್ತು. ಇದೆಲ್ಲಾ ಮಾಡಿದರೂ ಟಿಕೆಟ್ ಬೆಲೆ 400 ರೂ. ದಾಟುವುದಿಲ್ಲ ಎಂಬುದು ಮುಖ್ಯ.
ಆದರೆ, ಕರ್ನಾಟಕದಲ್ಲಿ ಯಾವ ನಿಯಮವೂ ಇಲ್ಲ, ಯಾರನ್ನು ಕೇಳುವ ಅವಶ್ಯಕತೆಯೂ ಇಲ್ಲ. ಅಲ್ಲಿ 50 ರೂ. ಟಿಕೆಟ್ ದರ ಏರಿಸುವುದಕ್ಕೆ ಸರ್ಕಾರದ ಅನುಮತಿ ಪಡೆಯಬೇಕಾಯಿತು. ಇಲ್ಲಿ ಮೊದಲ ದಿನದ ಟಿಕೆಟ್ ದರ 400 ರೂ.ಗಳಿಂದ 2400ರವರೆಗೂ ನಿಗದಿಯಾಗಿತ್ತು. ಏಕಪರದೆಯ ಚಿತ್ರಮಂದಿರಗಳಲ್ಲೇ 400 ರೂ. ಇದ್ದರೆ, ಮಲ್ಟಿಪ್ಲೆಕ್ಸ್ಗಳಲ್ಲಂತೂ 500 ರೂ. ಮೇಲೆ ನಿಗದಿಪಡಿಸಲಾಗಿತ್ತು. ಚಿತ್ರದ ಬಗ್ಗೆ ಏನೇ ವಿಮರ್ಶೆಗಳು ಬಂದರೂ ಟಿಕೆಟ್ ದರ ಮಾತ್ರ ಕಡಿಮೆ ಆಗಲಿಲ್ಲ. ಸೋಮವಾರದ ನಂತರ ಸ್ವಲ್ಪ ಟಿಕೆಟ್ ದರಗಳು ತಗ್ಗಿದ್ದು, 200 ರೂ.ರಿಂದ 400ರವರೆಗಿದೆ. ಬಹುಶಃ ಅಕ್ಕಪಕ್ಕದ ರಾಜ್ಯಗಳ ತರಹ ಮೊದಲಿನಿಂದಲೂ ಟಿಕೆಟ್ ಬೆಲೆ ಕಡಿಮೆ ಇದ್ದರೆ, ಆಗ ಚಿತ್ರದ ಗಳಿಕೆಯಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿತ್ತು. ಮೊದಲ ವಾರದ ಗಳಿಕೆ 60 ಕೋಟಿ ರೂ. ಬದಲಾಗಿ ಅದರ ಅರ್ಧದಷ್ಟು ಇರುತ್ತಿತ್ತೇನೋ? ಎಂದು ವಿತರಕರೊಬ್ಬರು ಅಭಿಪ್ರಾಯಪಡುತ್ತಾರೆ.
ಬರೀ ಕರ್ನಾಟಕವಷ್ಟೇ ಅಲ್ಲ, ಮುಂಬೈ, ದೆಹಲಿ ಮುಂತಾದ ಕಡೆಗಳಲ್ಲೂ ಟಿಕೆಟ್ ದರ ಹೆಚ್ಚಳವಾಗಿದೆ. ದೆಹಲಿಯಲ್ಲಿ 2400, ಮುಂಬೂನಲ್ಲಿ 2250, ಕೊಲ್ಕತ್ತಾದಲ್ಲಿ 1750 ರೂ.ವರೆಗೂ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿತ್ತು. ಅಂದ ಹಾಗೆ, ಈ ಸೌಲಭ್ಯಗಳು Recliner ಸೀಟುಗಳಿಗೆ ಮಾತ್ರ ಸೀಮಿತವಾಗಿತ್ತು.
‘ಟಾಕ್ಸಿಕ್’ ಚಿತ್ರವನ್ನು KVN ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‍ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ನಿರ್ಮಿಸಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್ ದಾಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಯಶ್, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ಹೂಮಾ ಖುರೇಷಿ, ತಾರಾ ಸುತಾರಿಯಾ, ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ಮುಂದೆ ಗಣೇಶ್ ಜೊತೆಗೆ ಸಿನಿಮಾ ಮಾಡದಿದ್ದರೂ ಪರವಾಗಿಲ್ಲ: ಶ್ರೀನಿವಾಸ ರಾಜು


