ಅದೆಷ್ಟು ದಿನಗಳಾಗಿತ್ತೋ ಶ್ರೀನಗರ ಕಿಟ್ಟಿ ಸಿನಿಮಾದಲ್ಲಿ ಖುಷಿಯಿಂದ ನಗುತ್ತಾ ಕುಣಿದಾಡುವುದನ್ನು ನೋಡಿ. ಇತ್ತೀಚಿನ ದಿನಗಳಲ್ಲಿ ತೆರೆಯ ಮೇಲೆ ಗಂಭೀರ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿರುವ ಕಿಟ್ಟಿ, ಅಪರೂಪಕ್ಕೆಂಬಂತೆ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಗುತ್ತಾ ಕುಣಿದಾಡಿದ್ದಾರೆ. ಪ್ರೇಕ್ಷಕರಿಗೆ ಇಂಥಾ ಕಿಟ್ಟಿಯನ್‍ನು ಪರಿಚಯಿಸಿಕೊಡುತ್ತಿರುವ ಚಿತ್ರ ‘ಅಮರ್ಥ’.
ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಸಿರುವ, ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ನಿರ್ದೇಶನದ ಮತ್ತು ಶ್ರೀನಗರ ಕಿಟ್ಟಿ – ಮೇಘನಾರಾಜ್ ನಾಯಕ- ನಾಯಕಿಯಾಗಿ ನಟಿಸಿರುವ ‘ಅಮರ್ಥ’ ಚಿತ್ರ ಇದೇ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಹಾಗೂ ಹಾಡು ಬಿಡುಗಡೆ ಇತ್ತೀಚೆಗೆ ನಡೆಯಿತು. ಹಿರಿಯ ನಟ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಂದರರಾಜ್ ಅವರು ಚಿತ್ರದ ಬಿಡುಗಡೆ ದಿನಾಂಕವುಳ್ಳ ಮೋಷನ್ ಪೋಸ್ಟರ್ ಅನ್ನು ಅನಾವರಣ ಮಾಡಿದರು.
ಚಿತ್ರದ ಕುರಿತು ಮಾತನಾಡುವ ಗುರು ಹೆಗ್ಡೆ, ‘ನಾನು ಹಿರಿತೆರೆ ಹಾಗೂ ಕಿರುತೆರೆಯ ಕಲಾವಿದನಾಗಿ ಎರಡು ದಶಕಗಳಾಗಿದೆ. ಈಗ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. ವಿನಯ್ ಪ್ರೀತಮ್ ಹಾಗೂ ನಾನು ಇಬ್ಬರು ಜಂಟಿಯಾಗಿ ಈ ಚಿತ್ರ ನಿರ್ದೇಶನ ಮಾಡಿದ್ದೇವೆ. ನಾನು ಈ ಚಿತ್ರದ ನಿರ್ಮಾಪಕನಾದರೂ, ನನಗೆ ಬೆಂಬಲಕ್ಕೆ ನಿಂತವರು ಕನ್ಯಾನ ಸದಾಶಿವ ಶೆಟ್ಟಿ. ಈ ಚಿತ್ರ ಆರಂಭವಾಗಿ ಎರಡು ವರ್ಷಗಳಾಗಿದೆ. ಈಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ’ ಎಂದರು.

‘ಅಮರ್ಥ’ ಎಂದರೆ ನಮ್ಮೆಲ್ಲರನ್ನು ಮೀರಿದ ಒಂದು ಶಕ್ತಿ ಎನ್ನಬಹುದು ಎಂದು ವಿವರಿಸಿದ ಅವರು, ‘ನಾವು ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ಏನೇ ನಡೆದರೂ, ದೇವರ ದಯೆ, ಹಣೆಬರಹ, ಗ್ರಹಾಚಾರ ಅಂತೆಲ್ಲಾ ಅಂದುಕೊಳ್ಳುತ್ತೇವೆ. ಅದು ನಿಜ. ಆದರೆ, ಅದಕ್ಕೂ ಮೀರಿದ ಶಕ್ತಿಯೊಂದಿದೆ. ಅದೇ ‘ಅಮರ್ಥ’’ ಎಂದರು.
ನಾನು ಹಾಗೂ ಮೇಘನಾ ರಾಜ್ ಒಟ್ಟಾಗಿ ನಟಿಸಿರುವ ಮೂರನೇ ಚಿತ್ರವಿದು ಎಂದು ಮಾತು ಶುರು ಮಾಡಿದ ಕಿಟ್ಟಿ, ‘ಒಂದು ಮುದ್ದಾದ ಕಥೆ. ಎಲ್ಲರಿಗೂ ಪ್ರಿಯವಾಗುವ ಕಥೆಯೂ ಹೌದು. ಬಾಲ್ಯದಿಂದ ಒಬ್ಬ ಹುಡುಗನ ಜರ್ನಿ ಹೇಗಿರುತ್ತದೆ ಎಂಬುದರ ಸುತ್ತ ಕಥೆ ಸಾಗುತ್ತದೆ. ಗುರು ಹೆಗ್ಡೆ ಅವರೆ ಕಥೆ ಬರೆದಿದ್ದಾರೆ. ಚಿತ್ರಕಥೆ ಕೂಡ ಬಹಳ ಸೊಗಸಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ 48 ದಿನಗಳ ಕಾಲ ಚಿತ್ರೀಕರಣ ನಡೆದಿದೆ’ ಎಂದು ಹೇಳಿದರು.
ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಕುರಿತಾದ ಕೆಲವು ವಿಷಯಗಳನ್ನು ಹಂಚಿಕೊಂಡಾಗ ಎಲ್ಲರೂ ಯಾವಾಗ ಬಿಡುಗಡೆ ಎಂದು ಕೇಳುತ್ತಿದ್ದರಂತೆ. ಕೊನೆಗೂ ಆ ಸಮಯ ಬಂದಿದೆ ಎಂದ ಮೇಘನಾ, ‘ಸ್ನೇಹಿತರ ಶಾಲಾ ಜೀವನದಿಂದ ಆರಂಭವಾಗುವ ಕಥೆ ಇದು. ಅಲ್ಲಿಂದ ಎಲ್ಲರ ಜೀವನ ಬೇರೆ ಬೇರೆ ಕಡೆ ಹೋಗಿರುತ್ತದೆ. ಕೊನೆಗೆ ಎಲ್ಲರೂ ಒಂದು ಕಡೆ ಸೇರಿಕೊಂಡಾಗ ಏನಾಗುತ್ತದೆ ಎಂದು ಹೇಳುವ ಕಥೆಯೂ ಹೌದು. ನನ್ನ ಪಾತ್ರದ ಹೆಸರು ಲಕ್ಷ್ಮೀ. ಜೀವನದಲ್ಲಿ ಏರುಪೇರುಗಳನ್ನು ಕಂಡಿರುವ ಹುಡುಗಿ. ಆ ಹುಡುಗಿಗೆ ಕಿಟ್ಟಿ ಅವರ ಪಾತ್ರ ಹೇಗೆ ಜೊತೆಯಾಗಿ ನಿಲ್ಲುತ್ತದೆ ಎಂಬುದೇ ಈ ಚಿತ್ರದ ಕಥೆ’ ಎಂದರು ಮೇಘನಾರಾಜ್.
‘ಮಡಮಕ್ಕಿ’, ‘ನಾನು, ಅದು ಮತ್ತು ಸರೋಜ’ ಚಿತ್ರಗಳ ನಂತರ ವಿನಯ್ ಪ್ರೀತಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀನಗರ ಕಿಟ್ಟಿ, ಮೇಘನಾ ರಾಜ್ ಜೊತೆಗೆ ಕೃತಿ ಶೆಟ್ಟಿ, ಉಷಾ ಭಂಡಾರಿ, ಮಂಜು ಭಾಷಿಣಿ, ಗುರು ಹೆಗ್ಡೆ, ತಮ್ಮಣ್ಣ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಗುರುಪ್ರಶಾಂತ್ ರೈ ಛಾಯಾಗ್ರಹಣ, ಶಿನಾಯ್ ವಿ ಜೋಸೆಫ್, ಪಂಚಮ್ ಜೀವ ಸಂಗೀತ ಈ ಚಿತ್ರಕ್ಕಿದೆ.


