ಇನ್ನೊಮ್ಮೆ ‘ಶಾಂತಿ ಕ್ರಾಂತಿ’ ಮಾಡುವುದಕ್ಕೆ ನನಗೇ ಸಾಧ್ಯವಿಲ್ಲ: ರವಿಚಂದ್ರನ್

ಚಂದನವನ, ಸಿನಿ ಸುದ್ದಿ

‘ಶಾಂತಿ ಕ್ರಾಂತಿ’ ಚಿತ್ರದ ಮರುಬಿಡುಗಡೆಯ ಬಗ್ಗೆ ಕಳೆದೊಂದು ತಿಂಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಚಿತ್ರವನ್ನು ಸೆಪ್ಟೆಂಬರ್‍ ತಿಂಗಳಲ್ಲಿ, ಹೊಸ ತಂತ್ರಜ್ಞಾನದಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾತುಗಳು ಸೋಷಿಯಲ್‍ ಮೀಡಿಯಾದಲ್ಲಿ ಕೇಳಿ ಬಂದ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳಾದವು. ಕೊನೆಗೆ ಚಿತ್ರದ ಹಕ್ಕುಗಳನ್ನು ಹೊಂದಿರುವ ರವಿಚಂದ್ರನ್‍ ಅವರ ಸಹೋದರ ಬಾಲಾಜಿ, ಸದ್ಯಕ್ಕೆ ನೆಗೆಟಿವ್‍ ಪ್ರಿಂಟ್‍ ಇಲ್ಲವಾದ ಕಾರಣ ಚಿತ್ರ ಬಿಡುಗಡೆ ಆಗುವುದು ಕಷ್ಟ ಎಂದು ಹೇಳಿದ್ದರು. ಒಂದು ಪಕ್ಷ ಪ್ರಿಂಟ್‍ ಸಿಕ್ಕರೂ, ಅದನ್ನು ಹೊಸ ತಂತ್ರಜ್ಞಾನಕ್ಕೆ ಅಳವಡಿಸುವುದಕ್ಕೆ ಸಾಕಷ್ಟು ಸಮಯ ಮತ್ತು ಹಣ ಖರ್ಚಾಗುತ್ತದೆ ಎಂದು ಹೇಳಿದ್ದರು.

ಇದೀಗ ರವಿಚಂದ್ರನ್‍, ಈ ವಿಷಯವಾಗಿ ಮೊದಲ ಬಾರಿಗೆ ಮತನಾಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಚಿತ್ರವನ್ನು ಮರುಬಿಡುಗಡೆ ಮಾಡುವುದು ಅಷ್ಟು ಸುಲಭದ ವಿಷಯವಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಆ ಚಿತ್ರ ಈಗ ನನ್ನ ಬಳಿ ಇಲ್ಲ, ನನ್ನ ತಮ್ಮನ ಬಳಿ ಇದೆ. ಮೊದಲು ಆ ಚಿತ್ರವನ್ನು ಮರುಬಿಡುಗಡೆ ಮಾಡಬೇಕೋ, ಬೇಡವೋ ಎಂಬುದನ್ನು ಅವನು ನಿರ್ಧರಿಸಬೇಕು. ಇವತ್ತು ಆ ಚಿತ್ರದ ನೆಗೆಟಿವ್‍ ಇಲ್ಲ. ಪ್ರಸಾದ್‍ ಲ್ಯಾಬ್‍ನಲ್ಲಿ ಸಾಕಷ್ಟು ಚಿತ್ರದ ನೆಗೆಟಿವ್‍ಗಳಿದ್ದವು. ಅದರಲ್ಲಿ ‘ಶಾಂತಿ ಕ್ರಾಂತಿ’ ಸಹ ಇತ್ತು. ಅವೆಲ್ಲಾ ಕರಗಿ ಹಾಳಾಗಿವೆ. ಆದರೂ ಆಧುನಿಕ ತಂತ್ರಜ್ಞಾನದಿಂದ ಅದನ್ನು ಸರಿ ಮಾಡಬಹುದು. ಯಾರಾದರೂ ಹಳೆಯ ಪ್ರಿಂಟ್‍ಗಳನ್ನು ಇಟ್ಟುಕೊಂಡಿದ್ದರೆ, ಅದು ನಮಗೆ ಸಿಕ್ಕರೆ, ಅದರ ಮೇಲೆ ಕೆಲಸ ಮಾಡಬಹುದು. ಅದಕ್ಕೆ ಒಂದಿಷ್ಟು ಸಮಯ ಬೇಕಾಗುತ್ತದೆ. ಅದರ ಜೊತೆಗೆ ಅದನ್ನು ಸರಿ ಮಾಡಿ ಬಿಡುಗಡೆ ಮಾಡುವುದಕ್ಕೆ ಎರಡೂವರೆಯಿಂದ ಮೂರು ಕೋಟಿಯಷ್ಟು ಬೇಕಾಗುತ್ತದೆ’ ಎಂದಿದ್ದಾರೆ.

ಆಗಿನ ಕಾಲಕ್ಕೆ ‘ಶಾಂತಿ ಕ್ರಾಂತಿ’ ಅತೀ ದೊಡ್ಡ ಚಿತ್ರವಾಗಿತ್ತು ಎಂದಿರುವ ಅವರು, ‘ಪ್ರತಿ ದಿನದ ಖರ್ಚು ಆರು ಲಕ್ಷದಷ್ಟಾಗುತ್ತಿತ್ತು. ಸುಮಾರು 300 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೆ. ಪ್ರತಿ ದೃಶ್ಯದ ಬಗ್ಗೆ ಯೋಚಿಸಿದರೂ, ಈಗಲೂ ಮೈನವಿರೇಳುತ್ತದೆ. ಮೂರು ಸಾವಿರ ಮಕ್ಕಳ ಜೊತೆಗೆ ಮಾಡಿರುವಂತಹ ಸಿನಿಮಾ ಅದು. ಆ ಮಕ್ಕಳು ಎಲ್ಲಿದ್ದಾರೋ ಗೊತ್ತಿಲ್ಲ. ಎಷ್ಟೋ ಮಕ್ಕಳ ಮುಖವೇ ಕಾಣಿಸುತ್ತಿರಲಿಲ್ಲ. ಎಲ್ಲೋ ನಿಂತಿರುತ್ತಿದ್ದರು. ಆ ಮಕ್ಕಳಿಗೆ ಇವತ್ತು ಥ್ಯಾಂಕ್ಸ್ ಹೇಳುತ್ತೇನೆ. ಅವರಿಗೆ ಧನ್ಯವಾದ ಹೇಳುವುದಕ್ಕೆ ಆಗಿರಲಿಲ್ಲ. ಪ್ರತಿ ದಿನ ಅರಮನೆಯಲ್ಲಿ ಐದು ಸಾವಿರ ಜನ ಊಟ ಮಾಡುತ್ತಿದ್ದರು. ಇವತ್ತು ನಾವು ಆ ತರಹ ಶೂಟಿಂಗ್ ‍ಮಾಡುವುದಕ್ಕೆ ಆಗುವುದಿಲ್ಲ. ಇವತ್ತಿಗೆ ಆ ಎನರ್ಜಿ ಸಹ ಉಳಿದಿಲ್ಲ. ಒಂದು ದಿನ ಅಲ್ಲ, ಒಂದು ಶಾಟ್‍ ಸಹ ಮಾಡೋದು ಕಷ್ಟ. ನನಗೇ ಅದು ಸಾಧ್ಯವಿಲ್ಲ. ಅದನ್ನು ಒಂದು ಸವಾಲಾಗಿ ಸ್ವೀಕರಿಸುತ್ತೇನೆ. ಜನ ನೋಡಲಿಲ್ಲ ಅಂತ ನಾನು ಯಾವತ್ತೂ ಬೇಸರ ಮಾಡಿಕೊಳ್ಳಲಿಲ್ಲ. ಜನರಿಗೆ ಇಷ್ಟವಾಗುವಂತಹ ಸಿನಿಮಾ ಮಾಡಲಿಲ್ಲ ಎಂಬ ಬೇಸರ ಖಂಡಿತಾ ಇದೆ. ಆದರೆ, ಜನ ನೋಡಲಿಲ್ಲ ಎಂದು ಬೇಸರವಾಗಲಿಲ್ಲ’ ಎಂದಿದ್ದಾರೆ.

‘ಅದನ್ನೇ ಹಠವಾಗಿ ತೆಗೆದುಕೊಂಡು ‘ರಾಮಾಚಾರಿ’ ಮಾಡಿದೆ. ಅದನ್ನು ಜನರೇ ಗೆಲ್ಲಿಸಿದರು. ಅವತ್ತಿನ ಸಮಸ್ಯೆಯಿಂದ ಹೊರಬರುವುದಕ್ಕೆ ಆ ಚಿತ್ರ ಸಹಾಯ ಮಾಡಿತು. ಆಗ ನಮ್ಮ ತಂದೆಯ ಆರೋಗ್ಯ ಸರಿ ಇರಲಿಲ್ಲ. ದುಡಿಲ್ಲದೆ ಅಪ್ಪನನ್ನು ಉಳಿಸಿಕೊಳ್ಳುವುದಕ್ಕೆ ಆಗಲಿಲ್ಲ ಎಂಬ ಪರಿಸ್ಥಿತಿ ಬರಬಾರದು ಎಂಬ ಕಾರಣಕ್ಕೆ ರಾಮಾಚಾರಿ ಮಾಡಿದೆ. ಆ ಗೆಲುವನ್ನು ಪ್ರೇಕ್ಷಕರೇ ಕೊಟ್ಟರು’ ಎಂದು ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.

ಅಲ್ಲಿನ ನಿಯಮ ಇಲ್ಲಿದ್ದಿದ್ದರೆ, ಅರ್ಧದಷ್ಟೂ ಗಳಿಕೆ ಆಗುತ್ತಿರಲಿಲ್ಲ …

Discover more from KannadaScreens

Subscribe now to keep reading and get access to the full archive.

Continue reading