ಪ್ರಜ್ವಲ್‍ಗೆ ಹಣ ಕೊಟ್ಟಾಗಿದೆ ಎಂದ ಗುರುದತ್‍ ಗಾಣಿಗ

ಚಂದನವನ, ಸಿನಿ ಸುದ್ದಿ

‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆಗೆ ಪ್ರಜ್ವಲ್‍ ದೇವರಾಜ್‍ ಗೈರಾಗಿದ್ದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಿರ್ಮಾಪಕ ಮತ್ತು ನಿರ್ದೇಶಕ ಗುರದತ್‍ ಗಾಣಿಗ ಬಾಕಿ ಸಂಭಾವನೆ ಕೊಡದೇ ಇದ್ದುದರಿಂದ ತಾವು ಸಮಾರಂಭಕ್ಕೆ ಬರಲಿಲ್ಲ ಎಂದು ಪ್ರಜ್ವಲ್‍ ಹೇಳಿದ್ದರು. ಆದರೆ, ಬಾಕಿ ಇದ್ದ ಹಣವನ್ನು ಘಟನೆ ನಡೆದ ಮರುದಿನವೇ ಅಧಿಕೃತವಾಗಿ ಪಾವತಿಸಲಾಗಿದೆ ಎಂದು ಗುರುದತ್‍ ಗಾಣಿಗ, ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜ್ವಲ್‍ ಅವರು ತಮ್ಮ ಪಾತ್ರಕ್ಕಾಗಿ ಸಿಕ್ಸ್ ಪ್ಯಾಕ್ ಆ್ಯಬ್‍ ಮಾಡುವುದಾಗಿ ಒಪ್ಪಿಕೊಂಡಿದ್ದರಂತೆ. ಅದೇ ಕಾರಣಕ್ಕಾಗಿ ಅಷ್ಟು ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಕೊಡಲು ನಿರ್ಮಾಣ ಸಂಸ್ಥೆ ಒಪ್ಪಿಕೊಂಡಿತ್ತಂತೆ. ಆದರೆ, ಪ್ರಜ್ವಲ್‍ಗೆ ದೈಹಿಕ ರೂಪಾಂತರ ಸಾಧ್ಯವಾಗದೆ ಇದ್ದಿದ್ದರಿಂದ ಬಾಕಿ ಹಣವನ್ನು ಉಳಿಸಿಕೊಳ್ಳಲಾಗಿತ್ತಂತೆ. ಆದರೆ, ಪ್ರಜ್ವಲ್‍ ತಮಗೆ ಬರಬೇಕಾದ ಬಾಕಿ ಹಣ ಕೊಡದೆ ಡಬ್ಬಿಂಗ್ ಮಾಡುವುದಿಲ್ಲ ಎಂದ ಹೇಳಿದ್ದರಿಂದ, ಅವರಿಗಾಗಿ ಎರಡು ತಿಂಗಳು ಕಾದ ನಂತರ, ಅನಿವಾರ್ಯವಾಗಿ ಬೇರೆಯವರಿಂದ ಡಬ್ಬಿಂಗ್‍ ಮಾಡಿಸಬೇಕಾಯಿತು ಎಂದು ಗಾಣಿಗ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಟ್ರೇಲರ್‍ನಲ್ಲಿ ತಮ್ಮ ಧ್ವನಿ ಇಲ್ಲವೆನ್ನುವುದು ಪ್ರಜ್ವಲ್‍ ಅವರಿಗೆ ಮೊದಲೇ ತಿಳಿದಿತ್ತಂತೆ. ಹಣ ತಲುಪಿದ ಮೇಲೂ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಖಾತೆಗಳಿಂದ ಇಲ್ಲ-ಸಲ್ಲದ್ದನ್ನೆಲ್ಲಾ ಆರೋಪ ಮಾಡುತ್ತಾ ‘ಕರಾವಳಿ’ ಸಿನಿಮಾ ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆಯ ಮೇಲೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ತನಿಖೆ ನಡೆಸುವಂತೆ ಪೋಲಿಸ್‍ ದೂರನ್ನು ದಾಖಲಿಸಲಾಗಿದೆ.

ಪ್ರಜ್ವಲ್‍ ಡಬ್ಬಿಂಗೂ ಮಾಡ್ಲಿಲ್ಲ; ಟ್ರೇಲರ್ ಬಿಡುಗಡೆಗೂ ಬರ್ಲಿಲ್ಲ …

Discover more from KannadaScreens

Subscribe now to keep reading and get access to the full archive.

Continue reading