‘ಕರಾವಳಿ’ ಚಿತ್ರದ ಸಮಸ್ಯೆಗಳು ಬಗೆಹರಿಯಬಹುದು, ಚಿತ್ರದ ಬಿಡುಗಡೆಯ ಹೊತ್ತಿಗೆ ಚಿತ್ರತಂಡದವರು ಮತ್ತು ಪ್ರಜ್ವಲ್ ನಡುವಿನ ಬಿರುಕು ಸರಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಸುಳ್ಳಾಗಿದೆ. ಚಿತ್ರದ ಬಿಡುಗಡೆಗೆ ಒಂದೇ ದಿನ ಇದೆ. ಆದರೆ, ವಿವಾದ ಮಾತ್ರ ಮುಗಿದಿಲ್ಲ. ಪ್ರಜ್ವಲ್‍ಗೆ ಕೊಡಬೇಕಿದ್ದ ಬಾಕಿ ದುಡ್ಡು ಕೊಟ್ಟಾಗಿದೆಯಂತೆ. ಆದರೆ, ಅವರ ನಡವಳಿಕೆಯಿಂದ ಬೇಸತ್ತಿರುವ ನಿರ್ಮಾಪಕ-ನಿರ್ದೇಶಕ ಗುರುದತ್ ಗಾಣಿಗ, ಪ್ರಜ್ವಲ್‍ರನ್ನು ಚಿತ್ರದ ಪ್ರಚಾರದಿಂದ ದೂರವೇ ಇಟ್ಟಿದ್ದಾರೆ. ಒಂದು ಕಡೆ ಚಿತ್ರತಂಡದವರು ಪ್ರಚಾರದಲ್ಲಿ ತೊಡಗಿಸಿಕೊಂಡರೆ, ಇನ್ನೊಂದು ಕಡೆ ಪ್ರಜ್ವಲ್ ತಮ್ಮ ಆಪ್ತರೊಂದಿಗೆಸ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿಗೆ ಪ್ರಜ್ವಲ್ ಅನುಪಸ್ಥಿತಿಯ ನಡುವೆಯೇ ಚಿತ್ರ ಬಿಡುಗಡೆಯಾಗುತ್ತಿದೆ.
ಬಹುಶಃ ಕನ್ನಡ ಚಿತ್ರರಂಗದಲ್ಲಿ ಈ ಘಟನೆ ಬಹಳ ಅಪರೂಪ ಎಂದರೆ ತಪ್ಪಿಲ್ಲ. ಪ್ರತೀ ಚಿತ್ರದಲ್ಲೂ ಸಂಭಾವನೆ ವಿಷಯವಾಗಿ ಒಂದಲ್ಲ ಒಂದು ತಕರಾರುಗಳು ಇದ್ದೇ ಇರುತ್ತವೆ. ಆದರೆ, ಅದು ಎಷ್ಟೋ ಬಾರಿ ಸುದ್ದಿಯಾಗುವುದಿಲ್ಲ. ಕೆಲವು ನಿರ್ಮಾಪಕರು ಕಷ್ಟದಲ್ಲಿರುವುದರಿಂದ ಚಿತ್ರಕ್ಕೆ ಸಮಸ್ಯೆಯಾಗದಿರಲಿ ಎಂದು ತಮಗೆ ಬರಬೇಕಿದ್ದ ಸಂಭಾವನೆಯನ್ನು ಹೀರೋಗಳು ಬಿಟ್ಟ ಉದಾಹರಣೆಗಳು ಸಿಗಬಹುದು. ಆಮೇಲೆ ಸಂಭಾವನೆ ಸಿಗಬಹುದು ಎಂದು ನಂಬಿಕೊಂಡು, ಚಿತ್ರಕ್ಕೆ ಸಮಸ್ಯೆ ಆಗದಿರುವಂತೆ ಕೆಲಸ ಮಾಡಿಕೊಟ್ಟಿರುವ ಉದಾಹರಣೆಗಳು ಸಿಗಬಹುದು. ಚಿತ್ರದ ಬಿಡುಗಡೆಗೆ ಸಂಕಷ್ಟಗಳು ಎದುರಾದಾಗ, ಹೀರೋಗಳೇ ಮುಂದೆ ನಿಂತು ಸಮಸ್ಯೆಗಳನ್ನು ಬಗೆಹರಿಸಿದ ಉದಾಹರಣೆಗಳು ಸಿಗಬಹುದು.
ಆದರೆ, ನಾಯಕನಟರೊಬ್ಬರು ತಮಗೆ ಪೂರ್ತಿ ಸಂಭಾವನೆ ಬರುವವರೆಗೂ ಡಬ್ಬಿಂಗ್ ಮಾಡುವುದಿಲ್ಲ ಎಂದು ಚಿತ್ರತಂಡದಿಂದ ಅಂತರ ಕಾಯ್ದುಕೊಂಡಿದ್ದು, ತಮ್ಮದೇ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಗೈರಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲಿರಬೇಕೇನೋ? ಇದು ಪ್ರಜ್ವಲ್ ವೃತ್ತಿಜೀವನಕ್ಕೆ ಒಂದು ಕಪ್ಪು ಚುಕ್ಕೆ ಎಂದು ಹೇಳಲಾಗುತ್ತಿದೆ. ಬರೀ ಅವರ ವೃತ್ತಿಜೀವನಕ್ಕಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೂ ಒಂದು ಕೆಟ್ಟ ಅಧ್ಯಾಯ. ಅದರಲ್ಲೂ ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯಲ್ಲಿ ಇಂಥದ್ದೊಂದು ಘಟನೆ, ಉದಾಹರಣೆ ಬೇಕಾಗಿರಲಿಲ್ಲ. ಈ ಚಿತ್ರದಲ್ಲಿ ನಟಿಸುವುದಕ್ಕೆ ಪ್ರಜ್ವಲ್ ಒಂದೂಕಾಲು ಕೋಟಿ ಸಂಭಾವನೆ ಕೇಳಿದ್ದರಂತೆ. ಈ ಪೈಕಿ ಒಂದು ಕೋಟಿಯನ್ನು ನಿರ್ಮಾಪಕ-ನಿರ್ದೇಶಕ ಗುರುದತ್ ಗಾಣಿಗ ಕೊಟ್ಟಿದ್ದರಂತೆ. ಬಾಕಿ 25 ಲಕ್ಷ ಕೊಡಲಿಲ್ಲ ಎಂದು ಡಬ್ಬಿಂಗ್ ಮಾಡಲಿಲ್ಲ ಎಂದು ಸ್ವತಃ ಪ್ರಜ್ವಲ್ ಹೇಳಿಕೊಂಡಿದ್ದಾರೆ. ಯಾವಾಗ ಪ್ರಜ್ವಲ್ ಡಬ್ಬಿಂಗ್ ಮಾಡಲಿಲ್ಲವೋ, ಅವರನ್ನು ಬಿಟ್ಟು ಬೇರೆಯವರಿಂದ ಡಬ್ಬಿಂಗ್ ಮಾಡಿಸಲಾಗಿದೆ. ಈ ಬಗ್ಗೆ ಕನಿಷ್ಠ ತಮಗೆ ಒಂದು ಮಾತು ಸಹ ಹೇಳಲಿಲ್ಲ ಎಂದು ಪ್ರಜ್ವಲ್‍ಗೆ ಬೇಸರವಾಗಿ ಅವರು ಟ್ರೇಲರ್ ಬಿಡುಗಡೆಯಿಂದ ದೂರವೇ ಉಳಿದಿದ್ದಾರೆ.

ಚಿತ್ರತಂಡದವ ಕೆಲವರ ಪ್ರಕಾರ, ‘ಕರಾವಳಿ’ ಚಿತ್ರದ ಬಜೆಟ್ ಒಂಬತ್ತು ಕೋಟಿಯಷ್ಟಾಗಿದೆಯಂತೆ. ಮೊದಲು ಅಂದುಕೊಂಡಿದ್ದ ಬಜೆಟ್ ಹೆಚ್ಚಾಗಿದ್ದರಿಂದ ಚಿತ್ರತಂಡದವರು ಪ್ರಜ್ವಲ್‍ಗೆ ಬಾಕಿ ಉಳಿಸಿದ್ದ ಸಂಭಾವನೆಯನ್ನು ಮುಂದೂಡುತ್ತಲೇ ಬಂದಿದ್ದಾರೆ. ಅದನ್ನು ಪಡೆದುಕೊಳ್ಳುವುದು ದೊಡ್ಡ ವಿಷಯವೇನಾಗಿರಲಿಲ್ಲ. ಅದನ್ನು ಚಿತ್ರತಂಡದವರ ಜೊತೆಗೆ ಮಾತಾಡಿ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಪ್ರಜ್ವಲ್ ಅಸಹಕಾರ ಚಳವಳಿ ತೋರಿದರು. ಇದರಿಂದ ಸಿಟ್ಟಿಗೆದ್ದ ಚಿತ್ರತಂಡ, ಪ್ರಜ್ವಲ್ ಅವರನ್ನು ಪಕ್ಕಕ್ಕಿಟ್ಟು, ಬಾಕಿ ಇದ್ದ ಕೆಲಸಗಳನ್ನು ಮುಗಿಸಿಕೊಂಡಿದೆ. ತಮಗೆ ದುಡ್ಡಿನ ಅವಶ್ಯಕತೆ ಹೆಚ್ಚಾಗಿದ್ದರಿಂದ ಡಬ್ಬಿಂಗ್ ಮಾಡಲಿಲ್ಲ ಎಂದು ಪ್ರಜ್ವಲ್ ಹೇಳಿಕೊಂಡಿದ್ದಾರೆ. ಪ್ರಜ್ವಲ್‍ಗೆ ದುಡ್ಡಿನ ಅವಶ್ಯಕತೆ ಏನಿತ್ತು, ಎಷ್ಟಿತ್ತು ಗೊತ್ತಿಲ್ಲ. ಆದರೆ, ಎಲ್ಲದಕ್ಕಿಂತ ಸಿನಿಮಾ ದೊಡ್ಡದು ಎಂಬ ವಿಷಯವನ್ನು ಎರಡೂ ಕಡೆಯವರು ಯೋಚಿಸಿದ್ದರೆ ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲವೇನೋ? ಎಲ್ಲದಕ್ಕಿಂತ ಸಿನಿಮಾ ದೊಡ್ಡದು ಎಂಬ ವಿಷಯವನ್ನು ಪ್ರಜ್ವಲ್ ಸೇರಿದಂತೆ ಹಲವರು ಆಗಾಗ ಹೇಳುತ್ತಲೇ ಇರುತ್ತಾರೆ. ಹಾಗಿದ್ದೂ ಈ ರೀತಿಯ ಘಟನೆಗಳೇಕಾಗುತ್ತವೆ ಎಂಬುದು ಚಿತ್ರರಂಗದ ಹಲವರ ಪ್ರಶ್ನೆ.
ಪ್ರಜ್ವಲ್ ಅನುಪಸ್ಥಿತಿಯ ನಡುವೆ ‘ಕರಾವಳಿ’ ಬಿಡುಗಡೆಯಾಗುತ್ತಿರುವುದು ಚಿತ್ರತಂಡಕ್ಕೆ ಒಂದು ಕಡೆ ಮೈನಸ್ ಆದರೆ, ಇದೆಲ್ಲದರಿಂದ ಪ್ರಜ್ವಲ್ ಇಮೇಜ್‍ಗೂ ಧಕ್ಕೆಯಾಗಿದೆ. ಒಂದು ಕಾಲಕ್ಕೆ ಪ್ರಜ್ವಲ್ ಅವರನ್ನು ‘ನಿರ್ಮಾಪಕರ ನಟ’ ಎಂದು ಕರೆಯಲಾಗುತ್ತಿತ್ತು. ಆದರೆ, ಅದೇ ಪ್ರಜ್ವಲ್ ಈಗ 25 ಲಕ್ಷಕ್ಕೋಸ್ಕರ, ಅಸಹಕಾರ ತೋರುವ ಮೂಲಕ ಬರೀ ಚಿತ್ರತಂಡದವರಷ್ಟೇ ಅಲ್ಲ, ಚಿತ್ರರಂಗದವರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಈ ವಿಷಯವಾಗಿ ಸಹಜವಾಗಿಯೇ ಎರಡು ಗುಂಪುಗಳಾಗಿವೆ. ಕೆಲವು ನಟ-ನಟಿಯರು ಬಹಿರಂಗವಾಗಿಯೇ ಪ್ರಜ್ವಲ್ ಅವರನ್ನು ಬೆಂಬಲಿಸಿದ್ದಾರೆ. ಅವರು ಮಾಡಿದ್ದು ಸರಿ ಎನ್ನುವಂತೆ ಮಾತನಾಡಿದ್ದಾರೆ. ಇನ್ನೊಂದು ಕಡೆ ಕೆಲವು ತಂತ್ರಜ್ಞರು ಮತ್ತು ನಿರ್ಮಾಪಕರು ಗುರುದತ್ ಗಾಣಿಗ ಮಾಡಿದ್ದು ಸರಿ ಎನ್ನುತ್ತಿದ್ದಾರೆ. ಏಕೆಂದರೆ, ಸಾಮಾನ್ಯವಾಗಿ ಒಬ್ಬ ನಾಯಕನ ವಿರುದ್ಧ ಯಾವುದೇ ನಿರ್ಮಾಪಕ ಮತ್ತು ನಿರ್ದೇಶಕ ಎದುರಾಡುವುದಿಲ್ಲ. ಹಾಗಿರುವಾಗ, ಗುರುದತ್ ಧೈರ್ಯವಾಗಿ ಪ್ರಜ್ವಲ್ ವಿರುದ್ಧ ನಿಂತಿರುವುದಷ್ಟೇ ಅಲ್ಲ, ಅವರನ್ನು ಪಕ್ಕಕ್ಕಿಟ್ಟು ಬೇರೆಯವರಿಂದ ಡಬ್ಬಿಂಗ್ ಮಾಡಿಸುವ ಧೈರ್ಯ ತೋರಿರುವ ಬಗ್ಗೆ ಚಿತ್ರರಂಗದಲ್ಲಿ ತೆರೆಮರೆಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು, ಈ ಪ್ರಕರಣದ ಕುರಿತು ಮಾಧ್ಯಮದಗಳಲ್ಲಿ ಪರ-ವಿರೋಧದ ಕುರಿತು ಚರ್ಚೆಯಾಗುತ್ತಿದೆಯೇ ಹೊರತು, ಚಿತ್ರರಂಗದ ಯಾವುದೇ ಸಂಸ್ಥೆಯಲ್ಲಿ ದೂರ ದಾಖಲಾದ ಸುದ್ದಿ ಇಲ್ಲ. ಆದರೂ ಇಷ್ಟೆಲ್ಲಾ ಆಗುತ್ತಿರುವಾಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಥವಾ ನಿರ್ಮಾಪಕರ ಸಂಘವು ಪ್ರಜ್ವಲ್ ಮತ್ತು ಗುರುದತ್ ಅವರನ್ನು ಕೂರಿತು ಮಾತನಾಡಿಸಬಹುದಿತ್ತು. ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬಹುದಿತ್ತು. ಏಕೆಂದರೆ, ಇದು ಬರೀ ಇಬ್ಬರ ನಡುವಿನ ಜಿದ್ದಾಜಿದ್ದಿಯಲ್ಲ, ಒಂದು ಚಿತ್ರದ ವಿಷಯ. ಪ್ರಜ್ವಲ್ ಬಂದು ಚಿತ್ರದ ಬಗ್ಗೆ ಪ್ರಚಾರ ಮಾಡುವುದರಿಂದ ಆ ಚಿತ್ರದ ಗೆದ್ದುಬಿಡುತ್ತದೆ ಎಂದು ಹೇಳುವುದು ಕಷ್ಟ. ‘ಜೋಗಿ’ ಪ್ರೇಮ್ ತಮ್ಮ ‘ಕೆಡಿ – ದಿ ಡೆವಿಲ್’ ಚಿತ್ರದ ಬಗ್ಗೆ ಅಷ್ಟೆಲ್ಲಾ ಪ್ರಚಾರ ಮಾಡಿದರೂ, ಆ ಚಿತ್ರ 60 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ ಎಂದು ಹೇಳಲಾಗುತ್ತಿದೆ. ಇವತ್ತಿನ ಪರಿಸ್ಥಿತಿ ಹೇಗಿದೆ ಎಂದರೆ, ಚಿತ್ರದ ಬಜೆಟ್ ವಾಪಸ್ಸು ಪಡೆಯುವುದು ನಂತರದ ಮಾತು. ಚಿತ್ರದ ಬಜೆಟ್‍ನ ಅರ್ಧ ಭಾಗವಾದರೂ ಬಂದರೆ ಅದೇ ಭಾಗ್ಯವೆನ್ನುವಂತಹ ಪರಿಸ್ಥಿತಿ ಇದೆ. ಅದರಲ್ಲೂ ಪ್ರಜ್ವಲ್ ಅಭಿನಯದ ಹಿಂದಿನ ಐದಾರು ಚಿತ್ರಗಳು ಸತತವಾಗಿ ಸೋತಿವೆ. ಹೀಗಿರುವಾಗ, ಪ್ರಜ್ವಲ್ ಸ್ವಲ್ಪ ಸುಧಾರಿಸಿಕೊಂಡು ಹೋಗಬಹುದಿತ್ತು, ಚಿತ್ರತಂಡದ ಮತ್ತು ಚಿತ್ರದ ಪರವಾಗಿ ನಿಲ್ಲಬೇಕಿತ್ತು ಎಂಬ ಅಭಿಪ್ರಾಯ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ.

ಬರೀ ‘ಕರಾವಳಿ’ ಚಿತ್ರವಷ್ಟೇ ಅಲ್ಲ, ಇತ್ತೀಚಿಗೆ ಈ ತರಹದ ಪ್ರಕರಣಗಳು ಕನ್ನಡ ಚಿತ್ರರಂಗದಲ್ಲಿ ಮಾಮೂಲಿ ಆಗಿಬಿಟ್ಟಿವೆ. ಚಿತ್ರ ಪ್ರಾರಂಭವಾಗುವ ಹೊತ್ತಿಗೆ ಒಂದೇ ತಟ್ಟೆಯಲ್ಲಿ ತಿನ್ನುವ ನಿರ್ಮಾಪಕರು ಮತ್ತು ನಟರ ನಡುವಿನ ಸಂಬಂಧ, ಚಿತ್ರ ಮುಗಿಯುವ ಹೊತ್ತಿಗೆ ಹಳಸಿರುತ್ತದೆ. ಆರಂಭದಲ್ಲಿ ಪರಸ್ಪರ ಹೊಗಳಾಡಿಕೊಳ್ಳುವ ನಿರ್ಮಾಪಕ ಮತ್ತು ನಟ, ಚಿತ್ರ ಮುಗಿಯುವ ಹೊತ್ತಿಗೆ ಮಾತನಾಡದೆ ದೂರಾಗಿರುತ್ತದೆ. ಕಳೆದ ತಿಂಗಳು ಬಿಡುಗಡೆಯಾದ ‘ಬಲರಾಮನ ದಿನಗಳು’ ವಿಷಯದಲ್ಲೂ ಇದೇ ಆಗಿತ್ತು. ಇದು ಹೆಚ್ಚು ಸುದ್ದಿಯಾಗದಿದ್ದರೂ, ನಟ ವಿನೋದ್ ಪ್ರಭಾಕರ್ ಮತ್ತು ನಿರ್ಮಾಪಕ ಶ್ರೇಯಸ್ ನಡುವೆ ಬಿರುಕು ಏರ್ಪಟ್ಟಿದೆ ಎಂಬ ಮಾತು ಕೇಳಿ ಬಂದಿತ್ತು. ‘ಲ್ಯಾಂಡ್‍ಲಾರ್ಡ್’ ಚಿತ್ರದ ವಿಷಯದಲ್ಲಿ ನಿರ್ಮಾಪಕ ಸತ್ಯಪ್ರಕಾಶ್ ಮತ್ತು ನಟ ‘ದುನಿಯಾ’ ವಿಜಯ್ ನಡುವೆ ತೆರೆಮರೆಯಲ್ಲಿ ಮನಸ್ಥಾಪವಾದ ಸುದ್ದಿ ಇತ್ತು. ‘ಕಾಂತಾರ – ಚಾಪ್ಟರ್ 1’ ನಂತರ ಹೊಂಬಾಳೆ ಫಿಲಂಸ್‍ನ ವಿಜಯ್‍ಕುಮಾರ್ ಮತ್ತು ರಿಷಭ್ ಶಟ್ಟಿ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮಾತಿದೆ. ‘ಲವ್ ಯೂ ರಚ್ಚು’ ಚಿತ್ರದ ಪ್ರಚಾರದ ವಿಷಯವಾಗಿ ಅಜೇಯ್ ರಾವ್ ಮತ್ತು ನಿರ್ಮಾಪಕ ಗುರು ದೇಶಪಾಂಡೆ ನಡುವೆ ವಿವಾದವೆದ್ದಿತ್ತು. ಈ ಎಲ್ಲಾ ಜಗಳ ಅಥವಾ ಮನಸ್ಥಾಪದ ಹಿಂದೆ ದುಡ್ಡಿದೆ ಎಂಬ ವಿಷಯ ಮಾತ್ರ ಗುಟ್ಟಾಗಿ ಉಳಿದಿಲ್ಲ. ಇದು ಕೆಲವು ಉದಾಹರಣೆಗಳಷ್ಟೇ. ಇತ್ತೀಚಿನ ಬಹಳಷ್ಟು ಜನಪ್ರಿಯ ನಟರ ಚಿತ್ರಗಳ ಹಿಂದೆ ಒಂದಲ್ಲ ಒಂದು ವಿವಾದ, ತೆರೆಮರೆಯ ಸಮಸ್ಯೆ ಇದ್ದೇ ಇರುತ್ತದೆ. ಆದರೆ, ಕೆಲವು ಹೆಚ್ಚು ಸುದ್ದಿಯಾಗುವುದಿಲ್ಲ ಅಷ್ಟೇ.
ಇದಕ್ಕೆಲ್ಲಾ ಕಾರಣ ಚಿತ್ರರಂಗದ ಬದಲಾಗಿರುವ ಪರಿಸ್ಥಿತಿ. ಹಿಂದೊಮ್ಮೆ ಚಿತ್ರದ ಕುರಿತು ನಿರ್ಮಾಪಕರು ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಆದರೆ, ಈಗ ಎಲ್ಲವನ್ನೂ ಹೀರೋಗಳೇ ನಿಯಂತ್ರಿಸುವಂತಹ ಪರಿಸ್ಥಿತಿ ಇದೆ. ಒಂದು ಚಿತ್ರದ ಮುಖವಾಡ ಹೀರೋ ಆಗಿರಬಹುದು. ಆದರೆ, ಅದರ ಹಿಂದೆ ನೂರಾರು ಕಾಣದ ಕೈಗಳು ಕೆಲಸ ಮಾಡಿರುತ್ತವೆ. ಹೀರೋ ಪ್ರಭೆಯ ಮುಂದೆ ಅವರು ಕಾಣದಿರಬಹುದು. ಹಾಗಂತ ಅವರನ್ನು ಪಕ್ಕಕ್ಕೆ ಸರಿಸುವುದಕ್ಕೆ ಮುಂದಾದರೆ, ಇವೆಲ್ಲಾ ಸಹಜ. ಎಲ್ಲಕ್ಕಿಂತ ಸಿನಿಮಾ ದೊಡ್ಡದು ಎಂದು ಬಾಯ್ಮಾತಿನಲ್ಲಿ ಹೇಳಿದರೆ ಸಾಲದು, ಅದನ್ನು ಕಾರ್ಯರೂಪಕ್ಕೂ ತಂದರೆ, ಈ ತರಹದ ಘಟನೆಗಳು ಕಡಿಮೆಯಾಗಬಹುದೇನೋ?
ಶಿವಣ್ಣ ಅಭಿಮಾನಿಗಳಿಗಾಗಿ ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್


