ಚಿತ್ರ: ಲೋ ನವೀನ
ನಿರ್ಮಾಣ: ಕೀರ್ತಿ ಸ್ವಾಮಿ
ನಿರ್ದೇಶನ: ಧನುರ್ಧಾರಿ ಪವನ್
ತಾರಾಗಣ: ನವೀನ್ ಸಜ್ಜು, ವರ್ಷಾ ಗಿರಿಧರ್, ಪ್ರಕಾಶ್ ತುಮಿನಾಡು, ಅಪೂರ್ವ, ಧರ್ಮೇಂದ್ರ ಅರಸ್ ಮುಂತದವರು
ಅವಳಪ್ಪ ಅವಳ ಮದುವೆಯನ್ನು ಇನ್ನೊಬ್ಬನೊಂದಿಗೆ ನಿಶ್ಚಯ ಮಾಡಿರುತ್ತಾನೆ. ಆದರೆ, ಅವಳಿಗೆ ಮದುವೆ ಇಷ್ಟವಿಲ್ಲ. ಅತ್ತೆ ಮಗ ನವೀನನಿಗೆ ಹೇಗಾದರೂ ಮಾಡಿ ಮನೆಯಿಂದ ಕರೆದುಕೊಂಡು ಹೋಗುತ್ತಾಳೆ. ಸ್ನೇಹಿತರು ನವೀನನ ಬೆನ್ನ ಹಿಂದೆ ನಿಲ್ಲುತ್ತಾರೆ. ಆಶಾಳನ್ನು ಹಾರಿಸಿಕೊಂಡು ಹೋಗುವುದಕ್ಕೆ ನವೀನನಿಗೆ ಸಹಾಯ ಮಾಡುತ್ತಾರೆ. ಇನ್ನೇನು ಇಬ್ಬರೂ ರಾತ್ರೋರಾತ್ರಿ ಓಡಿ ಹೋಗಬೇಕು ಎನ್ನುವಷ್ಟರಲ್ಲಿ …
ಮಂಡ್ಯ ಪ್ರಾಂತ್ಯದ ಪರಿಸರದ ಹಿನ್ನೆಲೆಯಲ್ಲಿ ಹಲವು ಪ್ರೇಮಕಥೆಗಳು ಬಂದಿವೆ. ‘ಲೋ ನವೀನ’ ಸಹ ಅದೇ ಶೈಲಿಯ ಇನ್ನೊಂದು ಸಿನಿಮಾ. ಚಿತ್ರದಲ್ಲೊಂದು ಗಟ್ಟಿ ಕಥೆ ಅಂತೇನಿಲ್ಲ. ಪ್ರೇಕ್ಷಕರನ್ನು ಮನರಂಜಿಸುವುದಕ್ಕೆ ಏನೇನು ಬೇಕೋ ಅದೆಲ್ಲವನ್ನೂ ಸೇರಿಸಿ, ಎರಡು ತಾಸು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಈ ನಿಟ್ಟಿನಲ್ಲಿ ಅವರು ಬಹುತೇಕ ಯಶಸ್ವಿಯೂ ಆಗಿದ್ದಾರೆ. ಮೊದಲಾರ್ಧ ಹೋಗುವುದು ಗೊತ್ತಾಗುವುದಿಲ್ಲ. ದ್ವಿತೀಯಾರ್ಧ ಸ್ವಲ್ಪ ನಿಧಾನವಾಗಿದೆ, ಅಲ್ಲಲ್ಲಿ ಎಳೆದಂತಾಗಿದೆ ಎನ್ನುವುದು ಬಿಟ್ಟರೆ, ಚಿತ್ರ ನೋಡಿಸಿಕೊಂಡು ಹೋಗುತ್ತದೆ.
ಇಲ್ಲಿ ಪ್ರೀತಿಯ ಜೊತೆಗೆ ಸ್ನೇಹವಿದೆ, ಕಾಮಿಡಿ ಇದೆ, ಭಾವನೆಗಳಿವೆ, ಎಲ್ಲಕ್ಕಿಂತ ಹೆಚ್ಚಾಗಿ ನೋವಿನಲ್ಲಿ ಕೊರುಗತ್ತಿರುವ ಬದಲು ಮುನ್ನಡೆಯುತ್ತಿರು, ಜೀವನ ದೊಡ್ಡದು ಎಂಬ ಸಂದೇಶವಿದೆ. ಇವೆಲ್ಲವನ್ನೂ ಮನರಂಜನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಇತ್ತೀಚಿನ ಚಿತ್ರಗಳಲ್ಲಿ ಪ್ರೀತಿಸಿದವಳು ಕೈಕೊಟ್ಟಗ ಅವಳ ನೆನಪಿನಲ್ಲೇ ಕುಡಿದು ತೂರಾಡುವ ಹೀರೋಗಳನ್ನು ನೋಡಿ ಸುಸ್ತಾಗಿದ್ದ ಪ್ರೇಕ್ಷಕರಿಗೆ, ಪ್ರೀತಿಯನ್ನು ಪ್ರಬುದ್ಧವಾಗಿ ಕಾಣುವ ನವೀನ ಇಷ್ಟವಾಗುತ್ತಾನೆ. ಬರೀ ಪ್ರೀತಿಯಷ್ಟೇ ಅಲ್ಲ, ಜೊತೆಗಿದ್ದವರಿಂದಲೇ ಅನ್ಯಾಯವಾದಾಗ, ಅದೆಲ್ಲವನ್ನೂ ದಾಟಿ ಮುಂದಕ್ಕೆ ಸಾಗುವ ನವೀನನ ಕಥೆ ಆಪ್ತವಾಗುತ್ತದೆ.
ಇಷ್ಟು ದಿನ ಗಾಯಕ-ಸಂಗೀತ ನಿರ್ದೇಶಕರಗಿದ್ದ ನವೀನ್ ಸಜ್ಜು, ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಹಾಗಂತ ಅವರು ಪ್ರತಿಭಾ ಪ್ರದರ್ಶನ ಮಾಡುವುದಕ್ಕೆ ಹೋಗಿಲ್ಲ. ಸಾಕಷ್ಟು ಸಹಜವಾಗಿ ಕಾಣಿಸಿಕೊಂಡಿದ್ದಾರೆ. ಪಾತ್ರದಲ್ಲಿ ಜೀವಿಸಿದ್ದಾರೆ. ನಾಯಕಿ ವರ್ಷಾ ಗಿರಿಧರ್ ತಮ್ಮ ಚೆಲುವಿನಿಂದ ಇಷ್ಟವಾಗುತ್ತಾರೆ. ಧರ್ಮೇಂದ್ರ ಅರಸ್, ಅಪೂರ್ವ, ಪ್ರಕಾಶ್ ತುಮಿನಾಡು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನವೀನ್ ಸ್ನೇಹಿತರಾಗಿ ಅಭಿನಯಿಸಿರುವ ಪಾಲಾಕು, ನಾಥ, ನಿಂಗಣ್ಣ ಮುಂತಾದವರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ನವೀನ್ ಬರೀ ನಟನೆಯಲ್ಲಷ್ಟೇ ಅಲ್ಲ, ಸಂಗೀತದಲ್ಲೂ ಗಮನಸೆಳೆಯುತ್ತಾರೆ. ನವೀನ್ ಸಂಗೀತ ನಿರ್ದೇಶನದಲ್ಲಿ ‘ಕೋಣಾನೆ …’, ‘ಕೈ ತೊಳ್ಕೊಂಡ್ ಮುಟ್ಟಬೇಕು …’ ಮುಂತಾದ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಬರೀ ಹಾಡುಗಳನ್ನಷ್ಟೇ ಅಲ್ಲ, ಇಡೀ ಚಿತ್ರದ ಪರಿಸರವನ್ನು ಚೆನ್ನಾಗಿ ಹಿಡಿದಿಟ್ಟಿದ್ದಾರೆ ಛಾಯಾಗ್ರಾಹಕರಾದ ರಿಷಿಕೇಶ್, ಸತೀಶ್ ಸಾಕಾರ್ ಮತ್ತು ಜೀವನ್. ಅವರು ಚಿತ್ರಿಸಿರುವ ಸಾವಿರಾರು ಶಾಟ್‍ಗಳನ್ನು ಒಪ್ಪವಾಗಿ ಜೋಡಿಸಿರುವ ಸಂಕಲನಕಾರ ವಿಜಯ್ ಎಂ. ಕುಮಾರ್ ಅವರ ಶ್ರಮವೂ ಎದ್ದು ಕಾಣುತ್ತದೆ.


