‘ಜೋಗಿ’ ಪ್ರೇಮ್ ನಿರ್ದೇಶನದ ‘ಕೆಡಿ – ಡೆವಿಲ್’ ಚಿತ್ರದ ‘ಸರಸೆ ನಿನ್ನ ಸೆರಗು ಸರಸೆ …’ ಹಾಡು ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ವಿವಾದವಾಗಿದ್ದು, ಅದನ್ನು ಕಿತ್ತು ಹಾಕಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಸಂಸತ್ತಿನಲ್ಲೂ ಈ ವಿಷಯ ಪ್ರಸ್ತಾಪವಾಗಿದ್ದರಿಂದ, ಹಾಡನ್ನು ಯೂಟ್ಯೂಬ್‍ನಿಂದ ಕಿತ್ತು ಹಾಕಲಾಗಿದೆ. ಮೊದಲು ಹಿಂದಿ ಹಾಡನ್ನು ಮಾತ್ರ ಕಿತ್ತುಹಾಕಲಾಗಿತ್ತು. ಈಗ ಕನ್ನಡ ಸೇರಿದಂತೆ ಬೇರೆ ಭಾಷೆಯ ಹಾಡನ್ನು ಸಹ ಡಿಲೀಟ್ ಮಾಡಲಾಗಿದೆ.
ಈ ಕುರಿತು ನಿರ್ದೇಶಕ ಪ್ರೇಮ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮಗೆ ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ ಎಂದು ಹೇಳುತ್ತಾ ಕ್ಷಮೆ ಕೋರಿದ್‍ದಾರೆ. ‘ಯಾರೂ ಉದ್ದೇಶಪೂರ್ವಕವಾಗಿ ತಪ್ಪುಗಳನ್ನು ಮಾಡುವುದಿಲ್ಲ. ನಾನು ತಾಯಿ, ದೇವರು, ಪ್ರೀತಿ, ಸಂಬಂಧಗಳು ಮತ್ತು ಜನಪದ ವಿಷಯಗಳ ಬಗ್ಗೆ ಹಾಡುಗಳನ್ನು ಬರೆದಿದ್ದೇನೆ’ ಎಂದಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಬಿಡುಗಡೆ ಮಾಡಿರುವ ಪ್ರೇಮ್, ‘ಪ್ರೇಕ್ಷಕರು ನನ್ನ ಸಿನಿಮಾಗಳಿಗೆ ಉತ್ತಮ ಸಂಗೀತದ ನಿರೀಕ್ಷೆಯಿಂದ ಬರುತ್ತಾರೆ, ಅದಕ್ಕಾಗಿ ನಾನು ಸದಾ ಕೃತಜ್ಞನಾಗಿದ್ದೇನೆ. ಈ ಹಾಡಿನ ಸಾಹಿತ್ಯವು ದೊಡ್ಡ ಚರ್ಚೆಗೆ ಕಾರಣವಾಯಿತು. ಈ ವಿಷಯವು ಸಂಸತ್ತಿನಲ್ಲಿಯೂ ಪ್ರಸ್ತಾಪವಾಯಿತು. ನಾನು ಈ ಹಾಡು ಬರೆಯುವಾಗ ಬೇರೆ ದೃಷ್ಟಿಕೋನದಿಂದ ಬರೆದೆ. ಅದರ ಚಿತ್ರಣ ಮದ್ಯದ ಬಾಟಲ್ ಮತ್ತು ಉಪ್ಪಿನಕಾಯಿಯ ಮೇಲೆ ಆಧಾರಿತವಾಗಿತ್ತು. ಕುತೂಹಲ ಮೂಡಿಸಲು ನಾನು ಸಾಲುಗಳನ್ನು ರೂಪಿಸಿದ್ದೆ. ನನ್ನ ಮನಸ್ಸಿನಲ್ಲಿ ಯಾವುದೇ ಅಶ್ಲೀಲತೆ ಇರಲಿಲ್ಲ. ಅದನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದಾರೆ. ಯಾರಿಗಾದರೂ ನೋವಾಗಿದೆ ಎಂದರೆ ಕ್ಷಮಿಸಿ. ನಾನು ಎಂದಿಗೂ ಅಶ್ಲೀಲ ಸಾಹಿತ್ಯ ಬರೆಯಲಿಲ್ಲ. ನಾನು ಈ ಹಾಡನ್ನು ಮತ್ತೆ ಬರೆದು ಅಪ್‍ಲೋಡ್ ಮಾಡಿಸುತ್ತೇನೆ’ ಎಂದಿದ್ದಾರೆ.
ನೋರಾ ಫತೇಹಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಪ್ರೇಮ್, ‘ಒಬ್ಬ ನಟ ಅಥವಾ ನಟಿ ಒಂದು ಚಿತ್ರ ಒಪ್ಪಿಕೊಳ್ಳುವುದು ಅದು ಸರಿಯೆಂದು ಭಾವಿಸಿದಾಗ ಮಾತ್ರ. ಸಾಹಿತ್ಯವನ್ನು ಅರ್ಥಮಾಡಿಕೊಂಡು ನಂತರವೇ ಪ್ರದರ್ಶನ ನೀಡುತ್ತಾರೆ. ಇಲ್ಲದಿದ್ದರೆ ಅಭಿವ್ಯಕ್ತಿ ಸಾಧ್ಯವಿಲ್ಲ’ ಎಂದಿದ್ದಾರೆ.
‘ಸರಸೆ …’ ಹಾಡು ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಯೂಟ್ಯೂಬ್‍ನ ಆನಂದ್ ಆಡಿಯೋ ಚಾನಲ್‍ನಿಂದ ಎಲ್ಲಾ ಆವೃತ್ತಿಗಳನ್ನೂ ಈಗ ತೆಗೆದುಹಾಕಲಾಗಿದೆ.


