ಕಳೆದ ಮೂರು ದಶಕಗಳಿಂದ ಕನ್ನಡಿಗರಿಗೆ ಮನರಂಜನೆ ನೀಡುತ್ತಾ ಬಂದಿರುವ ಉದಯ ಟಿವಿಯ ಹೆಸರು ಇದೀಗ ಬದಲಾಗಿದೆ. ತಮಿಳುನಾಡು ಮೂಲದ ಸನ್ ಸಮೂಹದ ಚಾನಲ್ ಆಗಿರುವ ಉದಯ, ಇದೀಗ ಯುಗಾದಿ ಹಬ್ಬದಿಂದ ಸನ್ ಉದಯ ಆಗಿ ಬದಲಾಗಿದೆ.
ಚಾನಲ್ ಬದಲಾಗುತ್ತಿದ್ದಂತೆ, ಹೊಸ ಹೊಸ ಕಾರ್ಯಕ್ರಮಗಳು ಮತ್ತು ಧಾರಾವಾಹಿಗಳು ಪ್ರೇಕ್ಷಕರನ್ನು ರಂಜಿಸುವುದಕ್ಕೆ ಬರುತ್ತಿವೆ. ಕೆಲವೇ ದಿನಗಳ ಹಿಂದೆ, ನಾಚಿಕೆ ಸ್ವಭಾವದ ಹುಡುಗ ಕೃಷ್ಣ ಹಾಗೂ ವಾಚಾಳಿ ಹುಡುಯ ಕುರಿತಾದ ‘ಕೃಷ್ಣ ವಂಶಿ’ ಎಂಬ ಧಾರಾವಾಹಿ ಪ್ರಸಾರ ಆರಂಭಿಸಿತ್ತು. ಇದೀಗ ಮಾರ್ಚ್ 23ರಿಂದ ರಾತ್ರಿ ಎಂಟು ಗಂಟೆಗೆ ‘ಮೂಗುತಿ ಮಲ್ಲಿ’ ಎಂಬ ಹೊಸ ಧಾರಾವಾಹಿ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ.

ಇದೊಂದು ಲವ್ ಸ್ಟೋರಿ. ಶ್ರೀಮಂತರು ಅಂದರೆ ದೂರ ಓಡಿ ಹೋಗೋ, ಕಷ್ಟದಲ್ಲಿ ಬೆಳೆದ ಹುಡುಗಿಗೂ, ಬಡವರನ್ನು ಕಡೆಗಣ್ಣಿನಿಂದಲೂ ನೋಡದೇ ಇರುವ ಶ್ರೀಮಂತ ಕುಟುಂಬದ ಹುಡುಗನಿಗೂ ನಡೆಯೋ ಪ್ರೇಮಕಥೆ. ನಾಯಕಿ ಮಲ್ಲಿ ಚೂಟಿ, ಘಾಟಿ ಮತ್ತು ಸ್ವಾಭಿಮಾನಿ. ಅಣ್ಣ ಉಂಡಾಡಿ ಗುಂಡ. ಹಾಗಾಗಿ ಮನೆ ಹೊಣೆಗಾರಿಕೆ ಇವಳ ಹೆಗಲ ಮೇಲೆ ಬಿದ್ದಿದೆ. ಅಪ್ಪನಿಂದ ಬಳುವಳಿಯಾಗಿ ಬಂದಿರೋ ಅಡುಗೆ ಕೆಲಸವೇ ಈಕೆಯ ಕೈಹಿಡಿದಿದೆ. ಮನೆ ಮನೆಗೆ ಹೋಗಿ ಅಡುಗೆ ಮಾಡೋ ಮಲ್ಲಿಯ ಕೈಯಲ್ಲಿ ಅದೇನೋ ಜಾದೂ ಇದೆ. ಹಸಿದವರಿಗಷ್ಟೇ ಅನ್ನದ ಬೆಲೆ ಗೊತ್ತಿರೋದು ಅನ್ನೋದು ಅವಳ ನಂಬಿಕೆ.
ಇನ್ನೊಂದು ಕಡೆ ಮಸಾಲೆ ಕಂಪನಿ ನಡೆಸುವ, ಹಸಿವೇ ನೋಡದ ಕುಟುಂಬದ ಹುಡುಗ ವಿರಾಜ್. ಈತನಿಗೆ ಮಲ್ಲಿಯನ್ನು ನೋಡಿದ ಕೂಡಲೇ ಲವ್ವಾಗುತ್ತದೆ. ಆಕೆಗೋ ಶ್ರೀಮಂತರನ್ನು ಕಂಡರಾಗದು. ಮಲ್ಲಿ ಮತ್ತು ವಿರಾಜ್ ಪ್ರೇಮಕಥೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬ ಕುತೂಹಲವಿದ್ದರೆ, ಮುಂದಿನ ಸೋಮವಾರದಿಂದ ರಾತ್ರಿ 8 ಗಂಟೆಗೆ ‘ಮೂಗುತಿ ಮಲ್ಲಿ’ ಧಾರಾವಾಹಿಯನ್ನು ನೋಢಬಹುದು.
‘ಅಂತರಪಟ’ ಖ್ಯಾತಿಯ ಚಂದನ್ ಗೌಡ ಈ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದರೆ, ‘ಕೋಟಿ’ ಸಿನಿಮಾದಲ್ಲಿ ಧನಂಜಯ ತಂಗಿಯಾಗಿ ನಟಿಸಿದ್ದ ತನುಜಾ ವೆಂಕಟೇಶ್ ನಾಯಕಿ. ಹಿರಿಯ ನಟಿ ಅಂಬಿಕಾ, ತೆಲುಗು ‘ಬಿಗ್ ಬಾಸ್’ ಖ್ಯಾತಿಯ ಕನ್ನಡತಿ ಕೀರ್ತಿ ಭಟ್, ಆರ್ಯ, ವೀಣಾ ಪೊನ್ನಪ್ಪ, ಪುನೀತ್, ಮರೀನಾ … ಹೀಗೆ ಹಲವು ಪ್ರತಿಭಾವಂತರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಈ ಹಿಂದೆ, ‘ಯಶೋದೆ’, ‘ಶ್ರೀಗೌರಿ’ ಮುಂತಾದ ಧಾರಾವಾಹಿಗಳಲ್ಲಿ ನಾಯಕನಾಗಿದ್ದ ಆರವ್ ಕಾರ್ತಿಕ್, ‘ಮೂಗುತಿ ಮಲ್ಲಿ’ ಧಾರಾವಾಹಿಯಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ. ಪುನೀತ್ ಅವರ ಛಾಯಾಗ್ರಹಣವಿರುವ ಈ ಧಾರಾವಾಹಿಗೆ ಈವೆಂಟೈನರ್ಸ್ ಸಂಸ್ಥೆಯ ಅಜಯ್ ರವಿ ನಿರ್ಮಾಪಕರು.
‘ಕ್ರೇಜಿ ಬ್ರಹ್ಮ’ ಹೆಸರಿನಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ ಹಂಸಲೇಖ ಮತ್ತು ರವಿಚಂದ್ರನ್


