‘ಕೆಡಿ’ ಹಾಡಿನ ಬಗ್ಗೆ ಅರ್ಮಾನ್ ಮಲ್ಲಿಕ್ ಬೇಸರ; ಯೂಟ್ಯೂಬ್‍ನಿಂದ ಹಿಂದಿ ಹಾಡು ಡಿಲೀಟ್

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

‘ಕೆಡಿ – ದಿ ಡೆವಿಲ್‍’ ಚಿತ್ರದ ‘ಸರಸೆ ನಿನ್ನ ಸೆರಗು ಸರಸೆ …’ ಹಾಡಿನ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಹಾಡು ಬಿಡುಗಡೆಯಾದಾಗ ಇದೊಂದು ದ್ವಂದ್ವಾರ್ಥದ ಹಾಡು ಎಂಬ ಅಭಿಪ್ರಾಯ ಎಲ್ಲರಲ್ಲೂ ಇತ್ತು. ಆದರೆ, ಇದೀಗ ಹಾಡಿನಲ್ಲಿ ದ್ವಂದ್ವಾರ್ಥವಿದೆ ಎನ್ನುವುದಕ್ಕಿಂತ ಅಶ್ಲೀಲವಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿ ಹಾಡನ್ನು ಯೂಟ್ಯೂಬ್‍ನಿಂದ ಡಿಲೀಟ್‍ ಮಾಡಲಾಗಿದೆ.

‘ಸರಸೆ ನಿನ್ನ ಸೆರಗು ಸರಸೆ …’ ಹಾಡು ಕೆಲವು ದಿನಗಳ ಹಿಂದೆ ಕನ್ನಡ, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆ ಸಮಾರಂಭದಲ್ಲೇ ಸಾಹಿತ್ಯ ದ್ವಂದ್ವಾರ್ಥದಿಂದ ಕೂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಈ ಹಾಡು ಬರೆಯುವುದಕ್ಕೆ ಸ್ಫೂರ್ತಿ ಹೆಂಡ ಮತ್ತು ಉಪ್ಪಿನಕಾಯಿ ಎಂದು ನಿರ್ದೇಶಕ ಮತ್ತು ಗೀತರಚನೆಕಾರ ಪ್ರೇಮ್‍ ಸಮರ್ಥಿಸಿಕೊಂಡಿದ್ದರು. ಹೆಂಡ ಮತ್ತು ಉಪ್ಪಿನಕಾಯಿಯನ್ನು ಗಮನದಲ್ಲಿಟ್ಟುಕೊಂಡು ಬರೆದಿದ್ದೇ ಹೊರತು, ಬೇರೆ ಯಾವುದೇ ಯೋಚನೆ ಇರಲಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದರು.

ಈ ಹಾಡಿನ ಹಿಂದಿ ಅವತರಣಿಕೆಗೆ ಮೊದಲು ಟೀಕೆಗಳು ಹೆಚ್ಚಿದ್ದವು. ಬಾಲಿವುಡ್‍ ನಟರಾದ ನೋರಾ ಫತೇಹಿ ಮತ್ತು ಸಂಜಯ್‍ ದತ್‍ ನಟಿಸಿದ್ದಾರೆ ಎಂಬ ಕಾರಣಕ್ಕೆ ಹಾಡು ನೋಡಿದ್ದ ಹಿಂದಿ ಪ್ರೇಕ್ಷಕರು, ಹಾಡಿನ ದ್ವಂದ್ವಾರ್ಥದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಗಾಯಕ ಅರ್ಮಾನ್ ‍ಮಲ್ಲಿಕ್‍ ಸಹ ಕೀಳು ಅಭಿರುಚಿಯ ಹಾಡಿನ ಬಗ್ಗೆ ಬೇಸರ ಹೊರಹಾಕಿದ್ದರು. ‘ಈ ಹಾಡು ನನ್ನ ಸೋಷಿಯಲ್‍ ಮೀಡಿಯಾದಲ್ಲಿ ಕಂಡು ಬಂತು. ನಾನು ಸರಿಯಾಗಿ ಕೇಳಿಸಿಕೊಂಡಿದ್ದೀನೋ ಇಲ್ಲವೋ ಎಂದು ಮತ್ತೆ ಕೇಳಬೇಕಾಯಿತು. ಕಮರ್ಷಿಯಲ್‍ ಹಾಡುಗಳ ರಚನೆ ಈ ಹಂತಕ್ಕೆ ಬಂದಿದೆ ಎಂದು ನೋಡಿ ಬೇಸರವಾಯಿತು’ ಎಂದು ಹೇಳಿದ್ದರು.

ಯಾವಾಗ, ಸೋಷಿಯಲ್‍ ಮೀಡಿಯಾದಲ್ಲಿ ಹಾಡಿನ ಕುರಿತು ಟೀಕೆಗಳು ಹೆಚ್ಚಾದವೋ, ಆಗ ಯೂಟ್ಯೂಬ್‍ನ ಆನಂದ್ ಆಡಿಯೋ ಚಾನಲ್‍ನಿಂದ ಈ ಹಾಡನ್ನು ಡಿಲೀಟ್‍ ಮಾಡಲಾಗಿದೆ. ಕನ್ನಡ ಸೇರಿದಂತೆ ಬೇರೆ ಭಾಷೆಗಳ ಹಾಡುಗಳು ಹಾಗೆಯೇ ಇದ್ದು, ಈ ಹಾಡನ್ನು ಕಿತ್ತು ಹಾಕಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ.

ಅಲ್ಲದೆ, ಈ ಹಾಡಿನ ಕಾಮೆಂಟ್‍ ವಿಭಾಗದಲ್ಲಿ ಹಲವರು ಹಾಡಿನ ಕುರಿತು ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ‘ಈ ವರ್ಷದ best ಅಶ್ಲೀಲ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಏನಾದರೂ ಕೊಟ್ರೆ ಇದಕ್ಕೆ ಕೊಡಬಹುದೇನೋ …’ ಎಂದು ಅಭಿಪ್ರಾಯಪಟ್ಟರೆ, ‘ಇಷ್ಟು ಹೊಲಸು ಹಾಡು ಪ್ರೇಮ್ ಸಿನೆಮಾದಲ್ಲಿ ಇರುತ್ತೆ ಅಂತ ಅಂದುಕೊಂಡಿರಲಿಲ್ಲ …’ ಎಂದು ಇನ್ನೊಬ್ಬರು ಬರೆದಿದ್ದಾರೆ. ‘ಈಗಲೂ ಕಾಲ ಮಿಂಚಿಲ್ಲ ಹಾಡಿನ ಸಾಹಿತ್ಯ ಬದಲಿಸಿ ಕೊಳ್ಳಿ ನಿಮ್ಮ ಮರ್ಯಾದೆ ಉಳಿಸಿಕೊಳ್ಳಿ’ ಅಂತ ಒಬ್ಬರು ಹೇಳಿದರೆ, ‘ಕನ್ನಡ ಚಿತ್ರರಂಗ ಭೋಜಪುರಿ ಇಂಡಸ್ಟ್ರಿ ಆಗ್ತಾ ಇದೆ’ ಇನ್ನೊಬ್ಬರು ಹೇಳಿದ್ದಾರೆ.

‘ಕೆಡಿ – ದಿ ಡೆವಿಲ್‍’ ಚಿತ್ರಕ್ಕೆ ಪ್ರೇಮ್‍ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್‍ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್‍ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್‍ ಛಾಯಾಗ್ರಹಣ ಚಿತ್ರಕ್ಕಿದೆ.

‘ಕೆಡಿ – ದಿ ಡೆವಿಲ್‍’ ಚಿತ್ರವು ಏಪ್ರಿಲ್‍ 30ರಂದು ದೇಶಾದ್ಯಂತ ಬಿಡುಗಡೆ ಆಗುತ್ತಿದೆ.

ಏನಾಗಿದೆ ಪ್ರೇಮ್‍ಗೆ? ಈ ವರ್ಷದ ಅಶ್ಲೀಲ ಗೀತರಚನೆ ಪ್ರಶಸ್ತಿ ಈ ಹಾಡಿಗೆ ಕೊಡಬಹುದೇನೋ?

Latest Posts

Discover more from KannadaScreens

Subscribe now to keep reading and get access to the full archive.

Continue reading