‘ಜೋಗಿ’ ಪ್ರೇಮ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ಹಿಂದೊಮ್ಮೆ ‘ಕೇಳುವೆನು ವರವನ್ನು ಕೊಡೆ ತಾಯಿ ಜನ್ಮವನು …’ ಎಂಬ ಮನಮುಟ್ಟುವಂತಹ ಹಾಡನ್ನು ಬರೆದಿದ್ದ ಪ್ರೇಮ್, ಇದೀಗ ತಮ್ಮ ಕೆಟ್ಟ ಗೀತರಚನೆಯಿಂದ ಸುದ್ದಿಯಲ್ಲಿದ್ದಾರೆ. ಪ್ರೇಮ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.
ಪ್ರೇಮ್ ನಿರ್ದೇಶನದ ‘ಕೆಡಿ – ದಿ ಡೆವಿಲ್’ ಚಿತ್ರದ ‘ಸರಸೆ ನಿನ್ನ ಸೆರಗು ಸರಸೆ …’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡನ್ನು ಮಂಗಲಿ ಹಾಡಿದ್ದು, ಪ್ರೇಮ್ ಸಾಹಿತ್ಯ ರಚಿಸಿದ್ದಾರೆ. ನೋರಾ ಫತೇಹಿ, ಸಂಜಯ್ ದತ್ ಮುಂತಾದವರು ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಕೆಲವು ಸಾಲುಗಳು ಅಶ್ಲೀಲವಾಗಿದ್ದು, ಇಂಥ ಹಾಡು ರಚಿಸಿರುವ ಪ್ರೇಮ್ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.
ಈ ಹಾಡಿನ ಮೊದಲ ಚರಣದಲ್ಲಿ ‘ಮೇಲೆತ್ತಿ ಕೆಳಗೆ ಇಳಿಸಿ, ತೊಟ್ಟಿಕ್ಕದಂಗ್ ಒಳಗೆ ಇಳಿಸಿ, ಒಳಗ್ ಹೋಗಿ ಹೊರಗೆ ಬಂದ್ರೆ ಖಾಲಿ ಎಲ್ಲ ಖಾಲಿ, ಮೇಮೇಲಂತೂ ಚೆಲ್ಬೇಡ್ರಪ್ಪ ಬೇಜಾರಾಯ್ತದೆ, ಮನೆಗೆ ಹೋದ್ರೆ ನಿಮ್ಮ ಗುಟ್ಟು ರಟ್ಟಾಗೋಯ್ತದೆ, ಇಲ್ಲೇ ನೆಕ್ಕೊಂಡ್ ಹೋಗ್ಬಿಡಿ, ಇಲ್ಲೇ ಒರುಸ್ಬುಡಿ, ಕೈಯಲ್ ಬಾಟ್ಲಂತೂ ಮನೇವರೆಗೂ ತಕ್ಕೊಂಡ್ ಹೋಗ್ಬೇಡಿ …’ ಎಂಬ ಸಾಲುಗಳಿವೆ.
ಇನ್ನು, ಎರಡನೇ ಚರಣದಲ್ಲಿ ‘ಮೀಸೆ ಹೊತ್ತೋರಿಗೆಲ್ಲಾ ನಾನೊಂದು ಕ್ವೆಶ್ಚನ್ ಕೇಳ್ಲಾ, ಮನೇಲಿ ಎಲ್ಲಾ ಇದ್ರು ಯಾಕೆ ನಿಮ್ಗೆ ನಂದೇ ಬೇಕೆ, ತುಂಬಾ ಕಾಸ್ಟ್ಲಿ ಅಂತ ಬೇಜಾರ್ ಮಾಡ್ಕೋಬೇಡ್ರಪ್ಪಾ, ಅಳೆದು ತೂಗಿ ತೂಕ ಹಾಕಿ ನೋಡಿ ಕೊಡ್ರಪ್ಪ, ಮೆತ್ತ ಮೆತ್ತಗಿರ್ತದೆ ಮುಟ್ಟಿದಂಗೆ ಸೋರ್ತದೆ, ಬಾಯಿಗಿಟ್ರೆ ಉಪ್ಪಿನಕಯಿ ಬೆಚ್ಚಗಾಯ್ತದೆ …’ ಎಂಬ ಸಾಲುಗಳಿವೆ.
ಮೇಲ್ನೋಟಕ್ಕೆ ಈ ಹಾಡಿನಲ್ಲಿ ಮದ್ಯದ ಬಗ್ಗೆ ಈ ಸಾಲುಗಳಿವೆ ಎನಿಸಿದರೂ, ಬೇರೆ ಏನೇನೋ ಅರ್ಥಗಳು ಕೊಡುತ್ತವೆ. ಹಾಗಾಗಿ, ಈ ಹಾಡನ್ನು ಬ್ಯಾನ್ ಮಾಡಬೇಕು, ಸೆನ್ಸಾರ್‍ನವರು ನಿರ್ದಾಕ್ಷಿಣ್ಯವಾಗಿ ಈ ಹಾಡನ್ನು ಕತ್ತರಿಸಿ ಬಿಸಾಕಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‍ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನ ಕಾಮೆಂಟ್ ವಿಭಾಗದಲ್ಲಿ ಹಲವರು ಹಾಡಿನ ಕುರಿತು ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ‘ಈ ವರ್ಷದ best ಅಶ್ಲೀಲ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಏನಾದರೂ ಕೊಟ್ರೆ ಇದಕ್ಕೆ ಕೊಡಬಹುದೇನೋ …’ ಎಂದು ಅಭಿಪ್ರಾಯಪಟ್ಟರೆ, ‘ಇಷ್ಟು ಹೊಲಸು ಹಾಡು ಪ್ರೇಮ್ ಸಿನೆಮಾದಲ್ಲಿ ಇರುತ್ತೆ ಅಂತ ಅಂದುಕೊಂಡಿರಲಿಲ್ಲ …’ ಎಂದು ಇನ್ನೊಬ್ಬರು ಬರೆದಿದ್ದಾರೆ. ‘ಈಗಲೂ ಕಾಲ ಮಿಂಚಿಲ್ಲ ಹಾಡಿನ ಸಾಹಿತ್ಯ ಬದಲಿಸಿ ಕೊಳ್ಳಿ ನಿಮ್ಮ ಮರ್ಯಾದೆ ಉಳಿಸಿಕೊಳ್ಳಿ’ ಅಂತ ಒಬ್ಬರು ಹೇಳಿದರೆ, ‘ಕನ್ನಡ ಚಿತ್ರರಂಗ ಭೋಜಪುರಿ ಇಂಡಸ್ಟ್ರಿ ಆಗ್ತಾ ಇದೆ’ ಇನ್ನೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಈ ಹಾಡಿನ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಬರೀ ಕನ್ನಡವಷ್ಟೇ ಅಲ್ಲ, ಬೇರೆ ಅವತರಣಿಕೆಯ ಹಾಡುಗಳಿಗೂ ಟೀಕೆಗಳು ಬರುತ್ತಿವೆ.
‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ ಪ್ರೇಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.
‘ಕೆಡಿ – ದಿ ಡೆವಿಲ್’ ಚಿತ್ರವು ಏಪ್ರಿಲ್ 30ರಂದು ದೇಶಾದ್ಯಂತ ಬಿಡುಗಡೆ ಆಗುತ್ತಿದೆ.
ಚಿತ್ರ ತಡವಾಗಿಲ್ಲ; ಅಂದುಕೊಂಡಂತೆ ‘ಕೆಡಿ – ದಿ ಡೆವಿಲ್’ ಮುಗಿಸಿದ್ದೇವೆ: ಪ್ರೇಮ್


