ಬಾಲಿವುಡ್ ನಟಿಯರನ್ನು ಕನ್ನಡಕ್ಕೆ ಕರೆತಂದು ಐಟಂ ಡ್ಯಾನ್ಸ್ ಮಾಡಿಸುವುದರಲ್ಲಿ ‘ಜೋಗಿ’ ಪ್ರೇಮ್ ಪ್ರಖ್ಯಾತರು. ‘ಜೋಗಿ’ ಚಿತ್ರ ‘ಬಿನ್ ಲ್ಯಾಡನ್ ನಮ್ಮಾವ …’ ಹಾಡಿಗೆ ಅವರು ಯಾನಾ ಗುಪ್ತಾ ಅವರನ್ನು ಕರೆತಂದಿದ್ದರು. ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದ ‘ಮಗಳು ದೊಡ್ಡವಳಾದಳು …’ ಹಾಡಿಗೆ ಮಲ್ಲಿಕಾ ಶೆರಾವತ್ ಬಂದು ಕುಣಿದಿದ್ದರು. ‘ಡಿಕೆ’ ಚಿತ್ರದ ‘ಸೇಸಮ್ಮ …’ ಹಾಡಿಗೆ ಸನ್ನಿ ಲಿಯೋನ್‍ರಿಂದ ಕುಣಿಸಿದ್ದರು. ಇದೀಗ ‘ಕೆಡಿ – ದಿ ಡೆವಿಲ್’ ಚಿತ್ರದ ಐಟಂ ಹಾಡಿಗೆ ನೋರಾ ಫತೇಹಿ ಅವರನ್ನು ಕರೆತಂದಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಚಿತ್ರದ ‘ಅಣ್ತಮ್ಮ ಜೋಡೆತ್ತು ಕಣೋ …’ ಎಂಬ ಹಾಡು ಬಿಡುಗಡೆಯಾಗಿತ್ತು. ಈಗ ಚಿತ್ರದ ‘ಸರಸೆ ನಿನ್ನ ಸೆರಗು ಸರಸೆ …’ ಎಂಬ ಇನ್ನೊಂದು ಹಾಡು ಶುಕ್ರವಾರ ಬಿಡುಗಡೆ ಆಗಿದೆ. ವಿಶೇಷವೆಂದರೆ, ಈ ಹಾಡಿಗೆ ನೋರಾ ಫತೇಹಿ, ಸಂಜಯ್ ದತ್ ಮುಂತಾದವರು ಹೆಜ್ಜೆ ಹಾಕಿದ್ದಾರೆ.
ಹಾಡಿನಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ನೋರಾ, ಕಾರ್ಯಕ್ರಮಕ್ಕೆ ನೀಲಿ ರೇಶ್ಮೆ ಸೀರೆ ಉಟ್ಟು ಬಂದಿದ್ದರು. ಸುಮಾರು ಒಂದು ತಾಸು ಕಾರ್ಯಕ್ರಮಕ್ಕೆ ತಡವಾಗಿ ಬಂದ ಅವರು, ಸೀರೆ ಉಟ್ಟುಕೊಳ್ಳುವುದಕ್ಕೆ ತಡವಾದ್ದರಿಂದ, ಕಾರ್ಯಕ್ರಮಕ್ಕೆ ಬರುವುದು ತಡವಾಯಿತೆಂದು ಕ್ಷಮೆ ಕೇಳಿದರು. ನಂತರ ‘ಸರಸೆ …’ ಹಾಡಿಗೆ ಧ್ರುವ ಸರ್ಜಾ, ರೀಷ್ಮಾ ಮುಂತಾದವರ ಜೊತೆಗೆ ಹೆಜ್ಜೆ ಹಾಕಿದರು.

ಕನ್ನಡದಲ್ಲಿ ಈ ಹಾಡನ್ನು ಐಶ್ವರ್ಯ ರಂಗರಾಜನ್ ಹಾಡಿದರೆ, ತೆಲುಗು ಮತ್ತು ಹಿಂದಿಯಲ್ಲಿ ಮಂಗಲಿ ಹಾಡಿದ್ದಾರೆ. ಮಲಯಾಳಂನಲ್ಲಿ ಸಿತಾರಾ ಕೃಷ್ಣಕುಮಾರ್ ಮತ್ತು ತಮಿಳಿನಲ್ಲಿ ರಾಜಲಕ್ಷ್ಮೀ ಸೆಂಥಿಲ್‍ಗಣೇಶನ್ ಹಾಡಿದ್ದಾರೆ. ಈ ಐದು ಅವತರಣಿಕೆಯ ಹಾಡುಗಳು ಆನಂದ್ ಆಡಿಯೋದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.
‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ ಪ್ರೇಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.
‘ಕೆಡಿ – ದಿ ಡೆವಿಲ್’ ಚಿತ್ರವು ಏಪ್ರಿಲ್ 30ರಂದು ದೇಶಾದ್ಯಂತ ಬಿಡುಗಡೆ ಆಗುತ್ತಿದೆ.


