ತನುಷ್ ಶಿವಣ್ಣ ಅಭಿನಯದ ‘ಬಾಸ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕೆಲವು ತಿಂಗಳುಗಳ ಹಿಂದೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆದಾಗಲೇ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿರುವ ಘಟನೆಯನ್ನಾಧರಿಸಿದ ಚಿತ್ರ ಎಂಬ ಗುಮಾನಿ ಹಲವರಿಗೆ ಬಂದಿತ್ತು. ಈಗ ಟೀಸರ್ ಬಿಡುಗಡೆಯ ನಂತರ ಅದು ಇನ್ನಷ್ಟು ಹೆಚ್ಚಾಗಿದೆ. ಟೀಸರ್‍ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೋಲುವ ಹಲವು ದೃಶ್ಯಗಳಿವೆ.
ಇದೊಂದು ನೈಜ ಘಟನೆ ಆಧಾರಿಸಿರುವ ಸಿನಿಮಾ ಎಂದು ಒಪ್ಪಿಕೊಳ್ಳುವ ನಿರ್ದೇಶಕ ಲವ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿರುವ ಘಟನೆಯನ್ನಾಧರಿಸಿದ ಚಿತ್ರ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಚಿತ್ರ ನೋಡಿದರೆ ಎಲ್ಲವೂ ಸ್ಪಷ್ಟವಾಗುತ್ತದೆ ಎನ್ನುತ್ತಾರೆ.
ಈ ಕುರಿತು ಮಾತನಾಡುವ ಅವರು, ‘ಸಮಾಜದಲ್ಲಿ ನಡೆಯುತ್ತಿರುವ ಹಲವು ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಿದ್ದೇವೆ. ಒಂದೆರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕೆಲವು ಕ್ರೈಮ್ ಹಿನ್ನೆಲೆಯ ಘಟನೆಗಳನ್ನು ಚಿತ್ರ ಆಧರಿಸಿದೆ. ನಾನು ಒಬ್ಬ ವಕೀಲ ಮತ್ತು ನಿರ್ದೇಶಕನಾಗಿ, ಸಮಾಜದಲ್ಲಿ ಏನು ವಿಷಯ ಇದೆಯೋ, ಅದನ್ನು ಆಧರಿಸಿ ಚಿತ್ರ ಮಾಡುತ್ತ ಬಂದಿದ್ದೇನೆ. ಮುಂದೆ ಸಹ ಕೆಲವು ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವೆ. ಇದು ಯಾವುದಾದರೂ ವ್ಯಕ್ತಿ ಅಥವಾ ಘಟನೆಯಲ್ಲಿ ಹೋಲಿದರೆ, ಅದು ಕಾಕತಾಳೀಯ ಅಷ್ಟೇ’ ಎಂದರು.

ಚಿತ್ರದಲ್ಲಿ ಯಾವ ವ್ಯಕ್ತಿಯ ಪರ ಅಥವಾ ವಿರುದ್ಧ ತೀರ್ಪು ನೀಡುತ್ತಿಲ್ಲ ಎನ್ನುವ ಲವ, ‘ಒಬ್ಬ ಸೆಲೆಬ್ರಿಟಿ ಜೀವನದಲ್ಲಿ ಆಕಸ್ಮಿಕವಾಗಿ ಒಂದು ಘಟನೆ ನಡೆದಾಗ, ಎಲ್ಲರೂ ತಮ್ಮ ದೃಷ್ಟಿಕೋನದಲ್ಲಿ ನೋಡುತ್ತಾರೆ. ನಾವು ಜನರಿಗೆ ಗೊತ್ತಿಲ್ಲದ ಕೆಲವು ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಸಿನಿಮಾದಲ್ಲಿ ನೋಡಿದರೆ, ಇದು ಆ ಘಟನೆಗೆ ಸಂಬಂಧಿಸಿದ್ದಾ ಅಥವಾ ಬೇರೆಯದಾ ಎಂಬುದು ಗೊತ್ತಾಗುತ್ತದೆ. ನಾವು ಯಾವ ವ್ಯಕ್ತಿಯ ಪರ ಅಥವಾ ವಿರುದ್ಧವಾಗಿ ತೀರ್ಪು ಕೊಡುತ್ತಿಲ್ಲ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ಮಾಡಿದ್ದೇವೆ ಅಷ್ಟೇ. ನಾವು ಯಾವುದೇ ವ್ಯಕ್ತಿಯ ಮನಸ್ಸು ನೋಯಿಸಲು ಸಿನಿಮಾ ಮಾಡಿಲ್ಲ. ನಮ್ಮ ಸಿನಿಮಾದಲ್ಲಿ ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳಿವೆ ಅಷ್ಟೇ. ಸದ್ಯ ಟೀಸರ್ ಬಿಡುಗಡೆ ಆಗಿದೆ. ಟ್ರೇಲರ್ ನೋಡಿದರೆ ಚಿತ್ರದ ಕಥೆ ಏನಿರಬಹುದು ಎಂಬ ಸ್ಪಷ್ಟತೆ ಸಿಗಲಿದೆ’ ಎಂದರು.
ನಾವು ಪ್ರಚಾರಕ್ಕಾಗಿ ಈ ಚಿತ್ರ ಮಾಡಿಲ್ಲ ಎನ್ನುವ ತನುಷ್, ‘ಕೆಲವು ವಿಷಯಗಳ ಹೋಲಬಹುದು. ಆದರೆ, ಒಂದು ನಿರ್ದಿಷ್ಟ ಪ್ರಕರಣ ಎನ್ನುವುದು ಕಷ್ಟ. ನಾವು ಪ್ರಚಾರಕ್ಕಾಗಿ ಸಿನಿಮಾ ಮಾಡಿಲ್ಲ. ಒಂದೊಳ್ಳೆಯ ಚಿತ್ರಕ್ಕೆ ಏನು ಬೇಕೋ ಅವೆಲ್ಲವೂ ಮಾಡಿದ್ದೇವೆ. ಸಿನಿಮಾ ನೋಡುವಾಗ, ಕೆಲವು ನೈಜ ಘಟನೆಗಳಿಗೆ ಹತ್ತಿರವಿದೆ ಎಂದನಿಸಬಹುದು. ಅದು ಕಾಕತಾಳೀಯ ಅಷ್ಟೇ’ ಎಂದರು.
ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ ‘ಬಾಸ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ತನುಷ್ ಶಿವಣ್ಣಗೆ ನಾಯಕಿಯರಾಗಿ ಮೋನಿಕಾ ಗೌಡ ಹಾಗೂ ಪಾಯಲ್ ಚಂಗಪ್ಪ ಅಭಿನಯಿಸಿದ್ದಾರೆ. ‘ಬಾಸ್’ ಚಿತ್ರಕ್ಕೆ ‘ಸತ್ಯಮೇವ ಜಯತೇ’ ಎಂಬ ಅಡಿಬರಹವಿದೆ. ಡೆವಿ ಸುರೇಶ್ ಸಂಗೀತ ನಿರ್ದೇಶನ, ಶರತ್ ಎನ್.ಆರ್ ಪುರ ಛಾಯಾಗ್ರಹಣ ಹಾಗೂ ಮಹೇಶ್ ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ.
‘ಸಂಗೀತ ಬಾರ್ ಅಂಡ್ ರೆಸ್ಟೋರೆಂಡ್ʼ ಚಿತ್ರೀಕರಣ ಪೂರ್ಣ; ಎರಡು ಶೇಡ್‍ಗಳ ಪಾತ್ರದಲ್ಲಿ ಕೋಮಲ್


