ಗುರುಕಿರಣ್ ಸಂಗೀತ ನಿರ್ದೇಶನ ಮಾಡಿರುವ ಚಿತ್ರವೊಂದು ಬಿಡುಗಡೆಯಾಗಿ ಐದು ವರ್ಷಗಳೇ ಕಳೆದಿವೆ. ಶಿವರಾಜಕುಮಾರ್ ಅಭಿನಯುದ ‘ಆಯುಷ್ಮಾನ್ ಭವ’, ಗುರು ಸಂಗೀತ ಸಂಯೋಜಿಸಿ, ಬಿಡುಗಡೆಯಾದ ಕೊನೆಯ ಚಿತ್ರ. ಈ ಚಿತ್ರ 2019ರಲ್ಲಿ ಬಿಡುಗಡೆಯಾಗಿತ್ತು. ಆ ನಂತರ ಅವರು ಕೆಲಸ ಮಾಡುತ್ತಿರುವುದು ಯೋಗಿ ಅಭಿನಯದ ‘ರೋಜಿ’ ಚಿತ್ರವೊಂದಕ್ಕೇ. ಹಾಗಿದ್ದರೂ, ಅವರು ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ‘ಉಪೇಂದ್ರ’ ಅಭಿನಯದ ‘ಏನಿಲ್ಲ ಏನಿಲ್ಲ …’ ಹಾಡಿನಿಂದ.
ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘ಉಪೇಂದ್ರ’ ಚಿತ್ರವು ಬಿಡುಗಡೆಯಾಗಿ 25 ವರ್ಷಗಳಾಗುತ್ತಿವೆ. ಈ ಸಂದರ್ಭದಲ್ಲಿ ಚಿತ್ರದ ‘ಏನಿಲ್ಲ ಏನಿಲ್ಲ …’ ಹಾಡು ಸಾಕಷ್ಟು ಜನಪ್ರಿಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹವಾ ಹುಟ್ಟುಹಾಕಿದೆ. ಎಲ್ಲಿ ನೋಡಿದರೂ, ಅದೇ ಹಾಡು ಎನ್ನುವಷ್ಟು ಜನಪ್ರಿಯವಾಗಿದೆ. ಯಾವಾಗಲೋ ಮಾಡಿದ ಹಾಡು ಈಗ ಜನಪ್ರಿಯವಾಗುತ್ತಿರುವುದಕ್ಕೆ ಕಾರಣವೇನು? ಬಹುಶಃ ಆ ಹಾಡು ಈಗ ಜನಪ್ರಿಯವಾಗಬೇಕು ಎಂದು ಇತ್ತೇನೋ ಎನ್ನುತ್ತಾರೆ ಅವರು.
ಈ ಕುರಿತು ಮಾತನಾಡುವ ಅವರು, ‘’ಉಪೇಂದ್ರ’ ಚಿತ್ರ ಬಿಡುಗಡೆಯಾದಾಗ ಒಂದು ಪತ್ರಿಕೆಯಲ್ಲಿ ‘ತೋಪೆದ್ದ ‘ಉಪೇಂದ್ರ’ ಹಾಡುಗಳು …’ ಎಂಬ ಲೇಖನ ಬಂದಿತ್ತು. ಆದರೆ, ಆ ಚಿತ್ರದ ‘ಉಪ್ಪಿಗಿಂತ ರುಚಿ ಬೇರೆ ಇಲ್ಲ …’, ‘2008 ಎಡಿ ಲೇಡಿಯೇ’, ‘ಓಳು ಬರಿ ಓಳು’ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈಗಲೂ ಆ ಹಾಡುಗಳು ಜನಪ್ರಿಯವಾಗಿವೆ. ಇದರ ಮಧ್ಯೆ, ‘ಏನಿಲ್ಲ ಏನಿಲ್ಲ …’ ಹಾಡು ಬಹಳ ಆವರೇಜ್ ಆಗಿತ್ತು. ಆದರೆ, Every dog has its day ಎನ್ನುವ ಹಾಗೆ, ಆ ಹಾಡು ಇಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈಗ ದೊಡ್ಡ ಟ್ರೆಂಡ್ ಆಗುತ್ತಿದೆ. ಹಿಂದೆ ಒಂದು ಹಾಡು ಜನಪ್ರಿಯವಾದರೆ, ಅದನ್ನು ರಾಜ್ಯೋತ್ಸವ, ಗಣೇಶೋತ್ಸವ ಮುಂತಾದ ಕಡೆ ಹಾಡುತ್ತಿದ್ದರು. ಆಟೋ, ಕಾರುಗಳಲ್ಲಿ ಜೋರಾಗಿ ಹಾಕಿಕೊಂಡು ಓಡಾಡೋರು. ಈಗ ಬಹಳ ದಿನಗಳ ನಂತರ ಅಂತದೊಂದು ಟ್ರೆಂಡ್ ಈ ಹಾಡಿನ ಮೂಲಕ ಕಾಣುತ್ತಿದ್ದೇನೆ. ಈ ಹಾಡು ಈಗ ಯಾಕೆ ಹಿಟ್ ಆಯ್ತು ಗೊತ್ತಿಲ್ಲ. ಬಹುಶ ಟೈಮ್ ಬರಬೇಕು ಅಂತಾರಲ್ಲ, ಅದು ಇದಕ್ಕೇ ಇರಬೇಕು’ ಎನ್ನುತ್ತಾರೆ ಗುರುಕಿರಣ್.
ಕರಿಮಣಿ ತರಹದ ಈ ಹಾಡಿಗೂ ಮೌಲ್ಯ ಬಂದಿದೆ ಎನ್ನುವ ಅವರು, ‘’ಉಪೇಂದ್ರ’ ಚಿತ್ರದ ಆಡಿಯೋ ಹಕ್ಕುಗಳನ್ನು ಆಕಾಶ್ ಆಡಿಯೋದವರು ದೊಡ್ಡ ಮೊತ್ತಕ್ಕೆ ಖರೀದಿಸಿದ್ದರು. ಬಹಳಷ್ಟು ಹಾಡುಗಳು ಹಿಟ್ ಆಗಿದ್ದವು. ಈಗ ಈ ಹಾಡು ಇಷ್ಟು ಚೆನ್ನಾಗಿ ಹೋಗುತ್ತಿದೆ ಎಂದರೆ, ಅದರ ಶಕ್ತಿ ಕಾರಣ. ಕರಿಮಣಿ ಅಂದರೆ ಒಂದು ಕಾಲಕ್ಕೆ ಬಹಳ ಮಹತ್ವ ಇತ್ತು. ಆದರೆ, ಇಂದು ಕರಿಮಣಿ ಅನ್ನೋದು ಇತ್ತೀಚಿಗೆ ಫ್ಯಾಷನ್ ಆಗ್ತಿದೆ. ಹಿಂದಿದ್ದ ಮೌಲ್ಯ ಈಗ ಈ ಕರಿಮಣಿಗೆ ಬಂದಿದೆ. ಯಾರಿಗೇ ಆಗಲಿ ತಮ್ಮ ಕೆಲಸಕ್ಕೆ ಬೆಲೆ ಸಿಕ್ಕಾಗ ಖುಷಿಯಾಗಿ ಆಗುತ್ತದೆ. ನನಗೂ ಸಹಜವಾಗಿ ಖುಷಿಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ನಾನು ಸಂಗೀತ ಸಂಯೋಜಿಸಿರುವ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಕರೋನಾ ನಂತರ ನಾನು ಸಂಗೀತ ಸಂಯೋಜಿಸುತ್ತಿರುವ ಒಂದೇ ಒಂದು ಚಿತ್ರ ಅಂದರೆ ಅದು ‘ರೋಜಿ’. ಹೀಗಿರುವಾಗ ನನ್ನದೊಂದು ಹಳೆಯ ಹಾಡು ಈಗ ದೊಡ್ಡ ಹಿಟ್ ಆಗುತ್ತಿದೆ ಅಂದರೆ ಬಹಳ ಖುಷಿಯ ವಿಚಾರ’ ಎನ್ನುತ್ತಾರೆ ಅವರು.
ಇತ್ತೀಚಿನ ದಿನಗಳಲ್ಲಿ ಯಾಕೆ ಹಾಡುಗಳು ಅಷ್ಟು ಜನಪ್ರಿಯವಾಗುತ್ತಿಲ್ಲ ಎಂದು ಕಾರಣ ನೀಡಿದ ಅವರು, ‘ಇವತ್ತಿನ ದಿನಗಳಲ್ಲಿ ಸಂಗೀತ ಅನ್ನೋದು ಫಿಲ್ಲರ್ ಆಗುತ್ತಿದೆ. ಆಗ ಸಂಗೀತ ಅನ್ನೋದು ಒಂದು ಚಿತ್ರದ ಹೆಮ್ಮೆಯಾಗಿತ್ತು ಈಗ ಆ ತರಹ ಪರಿಸ್ಥಿತಿ ಇಲ್ಲ. ಇವತ್ತು ಸಂಗೀತಕ್ಕೆ ಪ್ರಾಮುಖ್ಯತೆ ಕಡಿಮೆ ಆಗುತ್ತಿದೆ. ಮೇಲಾಗಿ ವರ್ಷಕ್ಕೆ 250 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಹಾಡುಗಳ ಸಂಖ್ಯೆಯನ್ನು ಜಾಸ್ತಿ ಇವೆ. ಹಾಗಿರುವಾಗ, ಯಾವ ಹಾಡು ಗಮನಕ್ಕೆ ಬರುತ್ತಿಲ್ಲ. ಆದರೂ ಗುಣಮಟ್ಟದ ಹಾಡುಗಳನ್ನು ಕೊಟ್ಟರೆ, ಅದಕ್ಕೆ ವ್ಯಾಲ್ಯೂ ಇದ್ದೇ ಇರುತ್ತದೆ. ಅದೇ ರೀತಿ ಸಿನಿಮಾ ಚೆನ್ನಾಗಿ ಮಾಡಿದರೆ ಓಡಿಯೇ ಓಡುತ್ತದೆ. ಒಳ್ಳೆಯ ಸಿನಿಮಾಗಳನ್ನು ಮಾಡಿದರೆ ಜನ ನೋಡುತ್ತಿಲ್ಲ ಅಂತ ಹೇಳುತ್ತಿದ್ದಾರೆ. ಆದರೆ, ಅದು 10 ಪರ್ಸೆಂಟ್ ಮಾತ್ರ. ಒಂದು ಸಿನಿಮಾ ಚೆನ್ನಾಗಿ ಓಡುತ್ತೋ, ಇಲ್ಲವೋ ನಂತರದ ಮಾತು. ನಾವಂತೂ ನಮ್ಮ ತೃಪ್ತಿಗೆ ಕೆಲಸ ಮಾಡಬೇಕು. ಎಲ್ಲಾ ವಿಭಾಗಗಳಿಗೂ ಬೆಲೆ ಕೊಡಬೇಕು. ಆದರೆ, ಇಂದು ಕೆಲವು ವಿಭಾಗಗಳಿಗೆ ಮಾತ್ರ ಹೆಚ್ಚು ಬೆಲೆ ಇದೆ. ಹಿಂದೆಲ್ಲಾ ಹಾಡುಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುತ್ತಿದ್ದವು. ಈಗ ಆ ಪರಿಸ್ಥಿತಿ ಇಲ್ಲ ಈಗ ಸಿನಿಮಾ ಹಿಟ್ ಆದರೂ, ಅದರಲ್ಲಿ ಯಾವುದೇ ಹಿಟ್ ಹಾಡುಗಳು ಇರುವುದಿಲ್ಲ ಎಂಬ ಪರಿಸ್ಥಿತಿ ಇದೆ’ ಎನ್ನುತ್ತಾರೆ ಗುರುಕಿರಣ್.


