ಕಳೆದ 10 ವರ್ಷಗಳಿಂದ ಕನ್ನಡಿಗರು ಕೇಳುತ್ತಾ ಬಂದಿರುವ ಒಂದು ಹೆಸರೆಂದರೆ, ಅದು ‘ಕಾಗೆ ಬಂಗಾರ’. 2015ರಲ್ಲಿ ಬಿಡುಗಡೆಯಾದ ‘ಕೆಂಡ ಸಂಪಿಗೆ’ ಚಿತ್ರದ ನಂತರ ಈ ಹೆಸರು ಜನಪ್ರಿಯವಾಯ್ತು. ‘ಕೆಂಡ ಸಂಪಿಗೆ’ಯ ಪ್ರೀಕ್ವೆಲ್ ಹಾಗೂ ಸೀಕ್ವೆಲ್ ಆಗಿ ‘ಕಾಗೆ ಬಂಗಾರ’ ಮತ್ತು ‘ಬ್ಲಾಕ್ ಮ್ಯಾಜಿಕ್’ ಚಿತ್ರಗಳು ಬಿಡುಗಡೆಯಾಗಲಿವೆ ಎಂದು ಹೇಳಲಾಯ್ತು. ಆದರೆ, ಕಾರಣಾಂತರಗಳಿಂದ ‘ಕಾಗೆ ಬಂಗಾರ’ ಎಂಬ ಹೆಸರು ಪ್ರಚಲಿತದಲ್ಲಿತ್ತೇ ಹೊರತು ಚಿತ್ರ ಶುರುವಾಗಲೇ ಇಲ್ಲ. ‘ಪಾಪ್‍ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲೂ ‘ಕಾಗೆ ಬಂಗಾರ’ದ ಪ್ರಸ್ತಾಪವಿತ್ತು. ಆದರೆ, ಚಿತ್ರ ಮಾತ್ರ ಶುರುವಾಗಲಿಲ್ಲ. ಈ ಬಗ್ಗೆ ಕೇಳಿದಾಗಲೆಲ್ಲಾ, ಆ ಚಿತ್ರಕ್ಕೆ ನಿರ್ಮಾಪಕರು ಸಿಗುತ್ತಿಲ್ಲ, ಸಿಕ್ಕಿದ ನಂತರ ‘ಕಾಗೆ ಬಂಗಾರ’ ಶುರು ಮಾಡುವುದಾಗಿ ಸೂರಿ ಹೇಳುತ್ತಲೇ ಇದ್ದರು.
ಈಗ ಕೊನೆಗೂ ‘ಕಾಗೆ ಬಂಗಾರ’ ಚಿತ್ರಕ್ಕೆ ನಿರ್ಮಾಪಕರು ಸಿಕ್ಕಿದ್ದಾರೆ. ಅಷ್ಟೇ ಅಲ್ಲ, ‘ಕಾಗೆ ಬಂಗಾರ’ ಚಿತ್ರದ ಮುಹೂರ್ತವೂ ನಡೆದಿದೆ. ನಟ ಗಣೇಶ್ ಮುಹೂರ್ತಕ್ಕೆ ಆಗಮಿಸಿ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರವನ್ನು ಹರ್ಷಿತ್ ಗೌಡ ನಿರ್ಮಿಸುತ್ತಿದ್ದಾರೆ.

‘ಜೆಸಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸೂರ್ಯ ಪ್ರಖ್ಯಾತ್, ಈ ಚಿತ್ರದ ನಾಯಕ. ಜೊತೆಗೆ ‘ದುನಿಯಾ’ ವಿಜಯ್ ಮಗಳು ರಿತನ್ಯಾ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಪ್ರಶಾಂತ್ ಸಿದ್ದಿ, ನಟೇಶ್ ಹೆಗ್ಡೆ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು ಅಕ್ಟೋಬರ್ 11ರಂದು ಚಿತ್ರದ ಮೊದಲ ನೋಟ ಬಿಡುಗಡೆಯಾಗಲಿದೆ.
ಇನ್ನು, ಚಿತ್ರದ ಚಿತ್ರಕಥೆ ಮತ್ತು ಸಂಭಾಷೆಯಲ್ಲಿ ಸೂರಿ ಮತ್ತು ಆಮ್ರಿ ತೊಡಗಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ, ಶೇಖರ್ ಛಾಯಾಗ್ರಹಣ ಮತ್ತು ದೀಪು ಎಸ್. ಕುಮಾರ್ ಸಂಕಲನ ಈ ಚಿತ್ರಕ್ಕಿದೆ.


