‘ಟಾಕ್ಸಿಕ್’ ಚಿತ್ರವನ್ನು ಹಿಂದಿಕ್ಕಿ 100 ಕೋಟಿ ಕ್ಲಬ್‍ಗೆ ‘ಪ್ರೇಮದ ಊರಲಿ’

ಚಂದನವನ, ಸಿನಿ ಸುದ್ದಿ

‘ಪ್ರೇಮದ ಊರಲಿ’ ಚಿತ್ರವು 100 ಕೋಟಿ ಕ್ಲಬ್‍ಗೆ ಸೇರುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇದ್ದೇ ಇತ್ತು. ಅದೀಗ ನಿಜವಾಗಿದ್ದು, ಚಿತ್ರ ಬಿಡುಗಡೆಯಾದ 31ನೇ ದಿನವಾದ ಭಾನುವಾರದಂದು ಚಿತ್ರ ಅಧಿಕೃತವಾಗಿ 100 ಕೋಟಿ ರೂ. ಕ್ಲಬ್‍ಗೆ ಸೇರಿದೆ. ಈ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದ್ದ ‘ಟಾಕ್ಸಿಕ್‍’ ಚಿತ್ರವನ್ನು ಹಿಂದಿಕ್ಕಿದೆ.

ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂದರೆ ಅದು ಯಶ್‍ ಅಭಿನಯದ ‘ಟಾಕ್ಸಿಕ್‍’ ಆಗಿತ್ತು. ಚಿತ್ರವು ಕರ್ನಾಟಕದಲ್ಲಿ 60 ಕೋಟಿ ರೂ.ನಷ್ಟು ಗಳಿಸಿರಬಹುದು ಎಂದು ಹೇಳಲಾಗುತ್ತಿದೆ. ಈಗ 100 ಕೋಟಿ ರೂ. ಗಳಿಕೆ ಮಾಡುವ ಮೂಲಕ ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ‘ಪ್ರೇಮದ ಊರಲಿ’ ಪಾತ್ರವಾಗಿದೆ.

‘ಪ್ರೇಮದ ಊರಲಿ’ ಚಿತ್ರದ ಈ ಸಾಧನೆಯನ್ನು ಮೆಚ್ಚಿ ಯಶ್‍ ಸಹ ಇತ್ತೀಚೆಗೆ ಮಾತಾಡಿದ್ದರು. ‘ಪ್ರೇಮದ ಊರಲಿ’ ಚಿತ್ರವು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದಂತೆ, ಬಾಕ್ಸ್ ಆಫೀಸ್‍ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದಂತೆ, ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಚಿತ್ರತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಉಪೇಂದ್ರ, ರಮೇಶ್‍ ಅರವಿಂದ್‍, ರಚಿತಾ ರಾಮ್‍ ಮುಂತಾದವರು ‘ಪ್ರೇಮದ ಊರಲಿ’ ಚಿತ್ರತಂಡದವರಿಗೆ ಶುಭಾಶಯಗಳನ್ನು ತಿಳಿಸಿದ್ದರು. ‘ರಾಮಾಯಣ’ ಚಿತ್ರದ ಟ್ರೇಲರ್‍ ಬಿಡುಗಡೆ ಸಂದರ್ಭದಲ್ಲಿ ‘ಪ್ರೇಮದ ಊರಲಿ’ ಚಿತ್ರತಂಡದವರನ್ನು ಯಶ್‍ ಆಹ್ವಾನಿಸಿ, ಚಿತ್ರದ ಗೆಲುವಿಗೆ ಬೆನ್ನುತಟ್ಟಿ, ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದರು.

ಅಷ್ಟೇ ಅಲ್ಲ, ಟ್ರೇಲರ್‍ ಬಿಡುಗಡೆ ಸಮಾರಂಭದಲ್ಲೂ ಯಶ್‍, ‘ಪ್ರೇಮದ ಊರಲಿ’ ಚಿತ್ರದ ಕುರಿತು ಮಾತನಾಡಿದ್ದರು. ‘‘ಪ್ರೇಮದ ಊರಲಿ’ ದೊಡ್ಡ ಹಿಟ್‍ ಆಗಿದೆ. ಒಂದು ಹೊರಗಡೆ ಹೋಗಿ ಎಲ್ಲೆಲ್ಲಿ ಬೇಲಿಗಳಿದೆಯೋ, ಗೋಡೆಗಳಿವೆಯೋ ಅದನ್ನು ಒಡೆಯುವ ಕೆಲಸ ಮಾಡಬೇಕು. ಅದರ ಜೊತೆಗೆ ನಮ್ಮ ಅಡಿಪಾಯವನ್ನೂ ಗಟ್ಟಿ ಮಾಡಿಕೊಳ್ಲುವ ಕೆಲಸವನ್ನು ಮಾಡಬೇಕು. ಚಿತ್ರರಂಗಕ್ಕೆ ಎರಡೂ ಬೇಕು. ಹೊಸ ಪ್ರತಿಭೆಗಳು, ನಿರ್ದೇಶಕರು, ನಟರು ಬರಬೇಕು. ಚಿಕ್ಕ ಪ್ರಯತ್ನಗಳಾದರೂ ಗೆಲ್ಲಬೇಕು. ಕನ್ನಡಿಗರು ಈ ಮಟ್ಟದ ಯಶಸ್ಸು ಕೊಟ್ಟಿರುವುದು ನಮಗೆ ಧೈರ್ಯ ಮತ್ತು ಉತ್ಸಾಹ ಕೊಡುತ್ತದೆ’ ಎಂದು ಹೇಳಿದ್ದರು.

ವೆನಿಲ್ಲಾ ಎಂಟರ್ಟೇನ್ಮೆಂಟ್ಸ್ ಮತ್ತು ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಪ್ರೇಮದ ಊರಲಿ’ ಚಿತ್ರ ನಿರ್ಮಾಣಗೊಂಡಿದ್ದು, ಮನೋಜ್‍ ಕುಮಾರ್‍ ಕಥೆ-ಚಿತ್ರಕಥೆ ಬರೆದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶ್ರೀರಾಮ್‍, ತಪಸ್ವಿನಿ ಪೂಣಚ್ಚ, ರಮಿಕಾ ಶಿವು, ರಂಗಾಯಣ ರಘು ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಕೊರಗಜ್ಜ’ ಚಿತ್ರದ ಟ್ರೇಲರ್ ಬಿಡುಗಡೆ; ಸದ್ಯದಲ್ಲೇ ಚಿತ್ರ ತೆರೆಗೆ

Discover more from KannadaScreens

Subscribe now to keep reading and get access to the full archive.

Continue reading