ಚಿತ್ರ ವಿಮರ್ಶೆ: ಜೀವವಿ‍ಲ್ಲದ ಜೀಪ್‍ ಒಂದು ಪಾತ್ರವಾದಾಗ …

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

ಚಿತ್ರ: ಶಬರಿ
ನಿರ್ದೇಶನ: ‘ಒರಟ’ ಶ್ರೀ
ನಿರ್ಮಾಣ: ಭಾರವಿ ಫಿಲಂಸ್
ತಾರಾಗಣ: ಸಮರ್ಥ್, ಕೃತಿಕಾ ಗೌಡ, ಬೇಬಿ ಧ್ವನಿ, ಎಂ.ಕೆ. ಮಠ, ನೀನಾಸಂ ಅಶ್ವತ್, ಮಂಡ್ಯ ಸಿದ್ದು ಮುಂತಾದವರು

ಅವನಿಗೆ ಬಾಲ್ಯದಿಂದಲೂ ಜೀಪ್‍ ಅಂದರೆ ಅದೇನೋ ಹುಚ್ಚು. ಮನೆ ತುಂಬಾ ಜೀಪಿನ ಚಿತ್ರ ಬಿಡಿಸಿರುತ್ತಾನೆ. ಯಾರದ್ದೋ ಜೀಪ್‍ ತಂದು ಆಟ ಆಡುತ್ತಿರುತ್ತಾನೆ. ಹಾಗಿರುವಾಗಲೇ, ಅವನ ಮನೆಗೆ ಅನಿರೀಕ್ಷಿತವಾಗಿ ಒಂದು ಜೀಪ್‍ ಬರುತ್ತದೆ. ಆ ಜೀಪ್‍ನಿಂದ ಅವನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ, ಏನೆಲ್ಲಾ ಗಳಿಸುತ್ತಾನೆ ಮತ್ತು ಏನೆಲ್ಲಾ ಕಳೆದುಕೊಳ್ಳುತ್ತಾನೆ ಎಂಬುದು ಗೊತ್ತಾಗಬೇಕಿದ್ದರೆ ‘ಶಬರಿ’ ನೋಡಬೇಕು.

‘ಶಬರಿ’ ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳಿವೆ. ಒಂದು ಜೀಪ್‍. ಇನ್ನೊಂದು ರಾಮನ ಪಾತ್ರ. ಇವೆರಡೂ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ಅದರ ಜೊತೆಗೆ ಕ್ರಮೇಣ ಬೇರೆ ಬೇರೆ ಪಾತ್ರಗಳು ಬರುತ್ತವೆ. ಸೀತಾ, ಶಬರಿ, ಗೌಡ, ಪಟೇಲ … ಈ ಎಲ್ಲಾ ಪಾತ್ರಗಳು ರಾಮನ ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ನಿರ್ದೇಶಕ ‘ಒರಟ’ ಶ್ರೀ ಹೇಳಿದ್ದಾರೆ.

ಶ್ರೀ ಯಾವುದೇ ಒಂದು ಚೌಕಟ್ಟಿಗೆ ಅಂಟಿಕೊಳ್ಳದೆ, ಪ್ರತಿ ಚಿತ್ರದಲ್ಲೂ ಬೇರೆಬೇರೆ ತರಹದ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ. ಇದು ಸಹ ಒಂದು ಬೇರೆ ಪ್ರಯತ್ನವೇ. ಮೇಲ್ನೋಟಕ್ಕೆ ಇದೊಂದು ಹೀರೋ ಪ್ರಧಾನ ಚಿತ್ರವೆಂದನಿಸಿದರೂ, ಒಂದು ಪಕ್ಕಾ ಕಮರ್ಷಿಯಲ್ ಚಿತ್ರವೆಂದನಿಸಿದರೂ, ಒಂದು ಭಾವನಾತ್ಮಕ ಚಿತ್ರ. ಚಿತ್ರದಲ್ಲಿ ಸಾಕಷ್ಟು ಭಾವನೆಗಳಿವೆ. ಆದರೆ, ಅದನ್ನು ಕಟ್ಟಿಕೊಡುವಲ್ಲಿ ಇನ್ನಷ್ಟು ಶ್ರಮ ಮತ್ತು ಪಕ್ವತೆ ಬೇಕಿತ್ತು.

ಕುತೂಹಲಕಾರಿಯಾಗಿ ಶುರುವಾಗುವ ‘ಶಬರಿ’, ಹೋಗುತ್ತದೆ. ಕ್ರಮೇಣ ಮಂದಗತಿಯಲ್ಲಿ ಸಾಗುತ್ತದೆ. ಚಿತ್ರದ ದ್ವಿತೀಯಾರ್ಧದಲ್ಲಿ ಸಾಕಷ್ಟು ಭಾವನಾತ್ಮಕ ಸನ್ನಿವೇಶಗಳಿವೆ. ಆದರೆ, ನಾಯಕ ಸಮರ್ಥ್‍ ಹೊಸಬರಾದ್ದರಿಂದ ಅದನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸಲು ಸಾಧ್ಯವಾಗಿಲ್ಲ. ಅಭಿನಯವಷ್ಟೇ ಅಲ್ಲ, ಸನ್ನಿವೇಶಗಳು ಸಹ ಜಾಳುಜಾಳೆನಿಸುತ್ತವೆ. ಆ ಪಾತ್ರದಲ್ಲಿ ಒಬ್ಬ ಪಕ್ವ ಕಲಾವಿದರಿದ್ದರೆ, ಚಿತ್ರ ಇನ್ನೊಂದು ಹಂತಕ್ಕೆ ಹೋಗುತ್ತಿತ್ತು. ಇನ್ನು, ಚಿತ್ರಕಥೆಯೂ ಇನ್ನಷ್ಟು ಚುರುಕಾಗಿರಬೇಕಿತ್ತು. ಒಂದು ಕಡೆ ಪೊಲೀಸರು, ಇನ್ನೊಂದು ಕಡೆ ಕಿಡ್ನಾಪರ್‍ಗಳು ಹಿಂದೆ ಬಿದ್ದಿರುವಾಗ, ಚಿತ್ರ ನೀರಸವಾಗಿ ಸಾಗುತ್ತದೆ. ಈ ಹಂತದಲ್ಲಿ ಇರಬೇಕಿದ್ದ ರೋಚಕತೆ ಮಿಸ್‍ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಇಲ್ಲಿ ರಾಮ್‍ ಮತ್ತು ಶಬರಿಯ ನಡುವಿನ ಬಾಂಧವ್ಯವ ಬಹಳ ಮುಖ್ಯವಾದ ಅಂಶ. ಆ ಬಾಂಧವ್ಯ ಸಪ್ಪೆ ಅಂತನಿಸುತ್ತದೆ.

ನೀನಾಸಂ ಅಶ್ವತ್ಥ್ ಬಿಟ್ಟರೆ, ಚಿತ್ರದಲ್ಲಿ ಸಾಕಷ್ಟು ಹೊಸ ಕಲಾವಿದರಿದ್ದಾರೆ. ಈ ಪೈಕಿ ನಾಯಕ ಸಮರ್ಥ್‍, ಅಭಿನಯದಲ್ಲಿ ಬಹಳ ದೂರ ಸಾಗಬೇಕು. ಕೃತ್ತಿಕಾ ಇರುವ ಸ್ವಲ್ಪ ಹೊತ್ತೇ ಗಮನಸೆಳೆಯುತ್ತಾರೆ. ಬೇಬಿ ಧ್ವನಿ ಚುರುಕಾಗಿದ್ದಾರೆ. ಆಕೆಗೆ ಸವಾಲೊಡ್ಡುವ ಒಂದಿಷ್ಟು ದೃಶ್ಯಗಳು ಬೇಕಿತ್ತು. ಹೇಮಂತ್ ಕುಮಾರ್‍ ಸಂಗೀತದಲ್ಲಿ ಮೂಡಿಬಂದಿರುವ ‘ತಂದಾನಿ ತಾನೋ …’ ಮತ್ತು ‘ತಂಗಾಳಿಯು ಬೀಸುತಿದೆ’ ಹಾಡುಗಳು ಗಮನಸೆಳೆಯುತ್ತವೆ.

ನಟ್ಟು-ಬೋಲ್ಟು ಪರಿಣಾಮ: ನಾಡಹಬ್ಬ ದಸರಾದಲ್ಲಿ ಕನ್ನಡ ಚಿತ್ರರಂಗ

Discover more from KannadaScreens

Subscribe now to keep reading and get access to the full archive.

Continue reading