ವಿಷ್ಣುವರ್ಧನ್‍ ನೆನಪಲ್ಲಿ ಮಿಂದ ಕನ್ನಡ ಚಿತ್ರರಂಗ …

ಚಂದನವನ, ಸಿನಿ ಸುದ್ದಿ

ಕಳೆದ ವರ್ಷವೇ ನಡೆಯಬೇಕಿದ್ದ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಅಂತೂ ಭಾನುವಾರ (ಸೆ. 27) ನಗರದ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ತಮ್ಮ ನೆಚ್ಚಿನ ನಟನ ಸ್ಮರಣೆ ಮಾಡುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಿರಂತರವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ, ಸಂಗೀತ ಹಾಗೂ ವಿಶೇಷ ಕಾರ್ಯಕ್ರಮಗಳ ಮೂಲಕ ಡಾ. ವಿಷ್ಣುವರ್ಧನ್ ಅವರ ಕಲಾ ಬದುಕು, ವ್ಯಕ್ತಿತ್ವ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಹಿರಿಯ ನಟ ಶ್ರೀನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಷ್ಣುವರ್ಧನ್ ಅವರ ಕೊಡುಗೆ, ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿದರು.

ಕಾರ್ಯಕ್ರಮದ ಅಂಗವಾಗಿ ಅಭಿಮಾನಿಗಳಿಗಾಗಿ ಹಲವು ವಿಶೇಷ ಆಕರ್ಷಣೆಗಳನ್ನು ಕೂಡ ಸಿದ್ಧಪಡಿಸಲಾಗಿತ್ತು. ಪೋಸ್ಟರ್ ತೋಟ, ಡಾ. ವಿಷ್ಣುವರ್ಧನ್‍ ಧ್ವಜ ಮೆರವಣಿಗೆ, ಡಾ. ವಿಷ್ಣುವರ್ಧನ್ ಛಾಯಾಚಿತ್ರ ಪ್ರದರ್ಶನ … ಸೇರಿದಂತೆ ಹಲವು ವಿಶೇಷ ದೃಶ್ಯ ಹಾಗೂ ಕಲಾ ಆಕರ್ಷಣೆಗಳು ಸಮಾರಂಭದ ಮೆರುಗನ್ನು ಹೆಚ್ಚಿಸಿದವು. ಈ ಕಾರ್ಯಕ್ರಮದ ನೇತೃತ್ವವನ್ನು ಡಾ. ವಿಷ್ಣು ಸೇನಾ ಸಮಿತಿ ವಹಿಸಿಕೊಂಡಿತ್ತು. ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‍ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಇನ್ನಿತರ ಸಂಘ-ಸಂಸ್ಥೆಗಳ ಕೈ ಜೋಡಿಸಿದ್ದವು.

ಆರೂವರೆ ಕೋಟಿ ಜನರನ್ನು ಒಂದುಗೂಡಿಸುವ ಶಕ್ತಿ ಎಂದರೆ ಅದು ಸಾಹಸಸಿಂಹ ವಿಷ್ಣುವರ್ಧನ ಎಂದು ನಟ ರಮೇಶ್ ಅರವಿಂದ್ ಹೇಳಿದ್ದಾರೆ. ‘ನಾವು ಎಲ್ಲೇ ಇದ್ದರೂ ವಿಷ್ಣುವರ್ಧನ್ ಅವರ ನೆನಪುಗಳು ನಮ್ಮೊಂದಿಗೆ ಸದಾ ಇರುತ್ತವೆ. ಅವರು ಕಲಾವಿದರು, ಕೆಲಸಗಾರರ ಬಗ್ಗೆ ಬಹಳ ಕಾಳಜಿ ತೋರುತ್ತಿದ್ದರು. ಅವರ 200 ಪಾತ್ರಗಳು, ಚಿತ್ರಗಳು ನಮ್ಮೆಲ್ಲರ ನೆನಪಿನಲ್ಲಿರುತ್ತವೆ. ಸಾವಿರ ಜನರ ನಡುವೆ ವಿಷ್ಣು ಬರುತ್ತಿದ್ದರೆ ಅವರೇ ಎಂದು ಗೊತ್ತಾಗುತ್ತಿತ್ತು. ಏಕೆಂದರೆ, ಅವರ ನಡಿಗೆ ಶೈಲಿ, ಹಾವ ಭಾವ ಎಲ್ಲವೂ ಭಿನ್ನವಾಗಿತ್ತು. ಅವರ ಭಾಷೆ, ಮಾತನಾಡಿಸುವ ಶೈಲಿ, ಗೌರವ ಗುಣಗಳು ವಿಶೇಷ ಎನಿಸುತ್ತವೆ.’ ಎಂದರು.

‘ವಿಷ್ಣುವರ್ಧನ್ ಅವರ ಬಗ್ಗೆ ಇರುವ ಪ್ರೀತಿ ನಮಗೆ ಗೊತ್ತು, ನಿಮಗೆ ಗೊತ್ತು, ಬೇರೆ ಯಾರ್ಯಾರಿಗೋ ಗೊತ್ತಾಗಬೇಕು ಎಂದೆಲ್ಲ ಏನೂ ಇಲ್ಲ. ವಿಷ್ಣುವರ್ಧನ್ ಕಾರ್ಯಕ್ರಮಕ್ಕೆ ಇಂದು ಬಂದಿದ್ದೇನೆ. ಮುಂದೆಯೂ ಬರುತ್ತೇನೆ. ನೀವು ಕರೆದಾಗೆಲ್ಲ ಬರುತ್ತೇನೆ’ ಎಂದು ಶಿವರಾಜಕುಮಾರ್‍ ಹೇಳಿದರು.

ಈ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ ಜಯಮಾಲಾ, ರವಿಚಂದ್ರನ್, ಶಿವರಾಜಕುಮಾರ್, ಜಗ್ಗೇಶ್‍, ಗಣೇಶ್, ‘ದುನಿಯಾ’ ವಿಜಯ್, ಶರಣ್‍, ಶ್ರೀಮುರಳಿ, ರಮೇಶ್‍ ಭಟ್‍, ಶ್ರೀನಿವಾಸಮೂರ್ತಿ, ಸುಮಲತಾ ಅಂಬರೀಶ್‍, ಅಭಿಜಿತ್‍, ಅವಿನಾಶ್, ಮಾಳವಿಕಾ ಅವಿನಾಶ್, ಎಸ್. ನಾರಾಯಣ್, ಶ್ರುತಿ, ರಾಜೇಂದ್ರ ಸಿಂಗ್ ಬಾಬು, ಸುಂದರರಾಜ್, ಸಿಹಿಕಹಿ ಚಂದ್ರು, ಶಶಿಕುಮಾರ್, ಶ್ರೀನಗರ ಕಿಟ್ಟಿ, ಧನಂಜಯ್, ರಂಗಾಯಣ ರಘು, ರಾಕ್‍ಲೈನ್‍ ವೆಂಕಟೇಶ್‍, ಟಿ.ಎಸ್‍ ನಾಗಾಭರಣ, ಪಿ. ಶೇಷಾದ್ರಿ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಬೇರೆ ಭಾಷೆ ಮತ್ತು ರಾಜ್ಯಗಳಿಂದ ಹಿರಿಯ ನಟಿಯರಾದ ಅಂಬಿಕಾ, ಸುಹಾಸಿನಿ, ರೋಜಾ ಮುಂತಾದವರು ಹಾಜರಿದ್ದರು.

ಎಷ್ಟು ಪ್ರೀತಿಸುತ್ತೀಯ ಎಂಬ ಪ್ರಶ್ನೆಗೆ ಉತ್ತರ ಕೊಡುವ ಹಾಡು ಇದು …

Discover more from KannadaScreens

Subscribe now to keep reading and get access to the full archive.

Continue reading