ಚಿತ್ರ: ಕಾಮನ್ ಮ್ಯಾನ್
ನಿರ್ಮಾಣ: ಎನ್. ನರಸಿಂಹ ಮೂರ್ತಿ
ನಿರ್ದೇಶನ: ಸಾಯಿಪ್ರಕಾಶ್
ತಾರಾಗಣ: ಗೌರಿಶಂಕರ್, ಸೋನಾ ಲಾಡ್ವಾ, ಎನ್. ನರಸಿಂಹ ಮೂರ್ತಿ, ಅಶೋಕ್, ನಾಗೇಂದ್ರ ಅರಸ್, ರಮೇಶ್ ಭಟ್ ಮುಂತಾದವರು
ರಾಜಕೀಯದ ಕುರಿತು ಹಲವು ಸಿನಿಮಾಗಳು ಬಂದಿವೆ. ಅದರಲ್ಲೂ ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಾಮಾನ್ಯ ಮನುಷ್ಯರು ತಮ್ಮದೇ ರೀತಿ ಹೋರಾಡುವ ಹಲವು ಸಿನಿಮಾಗಳು ಬಂದಿವೆ. ಗೌರಿಶಂಕರ್ ಅಭಿನಯದ ‘ಕಾಮನ್ ಮ್ಯಾನ್’ ಸಹ ಅದೇ ಸಾಲಿಗೆ ಸೇರುವ ಚಿತ್ರ.
ಇಲ್ಲಿ ನಾಯಕ ಕುಮಾರ್ ಕಂಸಾಳೆ (ಗೌರಿಶಂಕರ್) ಒಬ್ಬ ಚಾಣಾಕ್ಷ ವಕೀಲ. ವಿಧಾನ ಸೌಧದಲ್ಲೂ ತನಗೆ ಪಾಲು ಸಿಗಬೇಕು ಎಂದು ಕೇಸ್ ಹಾಕಿ, ವಾದ ಮಾಡಬಲ್ಲಂತಹ ಕಿಲಾಡಿ ಆತ. ಹೀಗಿರುವಾಗಲೇ, ಮುಖ್ಯಮಂತ್ರಿಗಳ ಜೀವಕ್ಕೆ ಕಂಟಕ ಇದೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿಯುತ್ತಾರೆ. ತಾತ್ಕಾಲಿಕವಾಗಿ ಕೆಲವು ದಿನಗಳ ಮಟ್ಟಿಗೆ ಯಾರನ್ನಾದರೂ ಮುಖ್ಯಮಂತ್ರಿ ಮಾಡಿದರೆ ಕಂಟಕ ಕಳೆಯುತ್ತದೆ, ಆ ನಂತರ ಆತನನ್ನು ಇಳಿಸಿ ಮತ್ತೆ ಮುಖ್ಯಮಂತ್ರಿ ಆಗಬಹುದು ಎಂಬ ಸಲಹೆ ಬಂದ ಹಿನ್ನೆಲೆಯಲ್ಲಿ ಕುಮಾರ್‍ಗೆ ಮುಖ್ಯಮಂತ್ರಿ ಪಟ್ಟ ಕಟ್ಟಲಾಗುತ್ತದೆ. ಮೊದಲೇ ಆತ ಚಾಣಾಕ್ಷ. ತನಗೆ ಸಿಕ್ಕ ಹೊಸ ಜವಾಬ್ದಾರಿಯನ್ನು ಆತ ಹೇಗೆ ಬಳಸಿಕೊಳ್ಳುತ್ತಾನೆ ಮತ್ತು ತನಗೆ ಉಚಿತವಾಗಿ ಸಿಕ್ಕ ಪದವಿಯನ್ನು ಬಿಟ್ಟುಕೊಡುತ್ತಾನಾ? ಎಂಬ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಚಿತ್ರ ನೋಡಬೇಕು.
ಪ್ರತಿಯೊಬ್ಬರಿಗೂ ಈ ಭ್ರಷ್ಟ ವ್ಯವಸ್ಥೆಯ ಮೇಲೆ ಸಿಟ್ಟು ಇರುತ್ತದೆ. ಹಾಗೆಯೇ, ತನಗೆ ಮುಖ್ಯಮಂತ್ರಿ ಆಗುವುದಕ್ಕೆ ಏನಾದರೂ ಅವಕಾಶ ಸಿಕ್ಕರೆ ಏನೆಲ್ಲಾ ಬದಲಾವಣೆ ತರಬಹುದು ಎಂಬ ಕಲ್ಪನೆಯೊಂದಿಗೆ ಮಾಡಿದ ಚಿತ್ರವದು. ಇಲ್ಲೂ ಈ ಕಲ್ಪನೆ ಕೇಳುವುದಕ್ಕೇನೋ ಚೆನ್ನಾಗಿರುತ್ತದೆ. ಆದರೆ, ಕಾರ್ಯತಃ ಸಾಧ್ಯವಾ? ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ತಮಿಳಿನ ‘ಮುದಲ್ವನ್’ ಚಿತ್ರವು ಇಂಥದ್ದೇ ಕಲ್ಪನೆಯೊಂದಿಗೆ ರೂಪುಗೊಂಡಿತ್ತು. ಒಬ್ಬ ಸಾಮಾನ್ಯ ಮನುಷ್ಯ ಒಂದು ದಿನದ ಮುಖ್ಯಮಂತ್ರಿಯಾದರೆ, ಏನೆಲ್ಲಾ ಮಾಡುತ್ತಾನೆ ಎಂದು ಮನರಂಜನಾತ್ಮಕವಾಗಿ ಹೇಳಲಾಗಿತ್ತು.
ಇಲ್ಲೂ ಸಹ ಒಬ್ಬ ಸಾಮಾನ್ಯ ಮನುಷ್ಯ, ಮೂರು ‘ಖ’ಗಳ ವಿರುದ್ಧ ಸಮರ ಸಾರುತ್ತಾನೆ. ಮೂರು ‘ಖ’ ಎಂದರೆ, ಇಂದಿನ ಸಜಾಜವನ್ನು ಆವರಿಸಿಕೊಳ್ಳುವುದರ ಜೊತೆಗೆ, ಎಲ್ಲರನ್ನೂ ಗೊಂಬೆಗಳಂತೆ ಆಡಿಸುತ್ತಿರುವ ಖಾದಿ, ಖಾವಿ ಮತ್ತು ಖಾಕಿಯ ವಿರುದ್ಧ ಆತ ಸಮರ ಸಾರುತ್ತಾನೆ. ಇವೆಲ್ಲವನ್ನೂ ಬಳಸಿಕೊಂಡು ತನ್ನ ಚಾಣಾಕ್ಷತನದಿಂದ, ಆತ ಹೇಗೆ ಗೆಲ್ಲುತ್ತಾನೆ ಎನ್ನುವುದು ಚಿತ್ರದ ತಿರುಳು. ಕಲ್ಪನೆ ಕೇಳುವುದಕ್ಕೆ ಚೆನ್ನಾಗಿದೆ. ಆದರೆ, ಅದನ್ನು ತೆರೆಯ ಮೇಲೆ ಕಟ್ಟಿಕೊಡುವುದಕ್ಕೆ ಗಟ್ಟಿ ಚಿತ್ರಕಥೆ ಬೇಕಿತ್ತು.
ಚಿತ್ರಕಥೆ ಒಂದು ಮಟ್ಟಕ್ಕೆ ಓಕೆ. ಪ್ರಸಕ್ತ ಸನ್ನಿವೇಶಗಳು ಮತ್ತು ನಮ್ಮ ವ್ಯವಸ್ಥೆಯ ಬಗ್ಗೆ ಒಂದಿಷ್ಟು ಸಂಶೋಧನೆ ಮಾಡಿಯೇ ಚಿತ್ರಕಥೆ ಬರೆಯಲಾಗಿದೆ. ಚಿತ್ರ ನೋಡುತ್ತಿದ್ದರೆ, ರಾಜ್ಯದಲ್ಲಿ ಈ ಹಿಂದೆ ನಡೆದ ಹಲವು ಸನ್ನಿವೇಶಗಳು ಮತ್ತು ಪಾತ್ರಗಳು ನೆನಪಿಗೆ ಬರುತ್ತವೆ. ವಿಡಂಬನೆ ಮಾಡುತ್ತಲೇ ರಾಜಕೀಯ ಎತ್ತ ಸಾಗುತ್ತಿದೆ ಎಂದು ತೋರಿಸಲಾಗಿದೆ. ಆದರೂ ಒಟ್ಟಾರೆ ಚಿತ್ರಕಥೆಯಲ್ಲಿ ಒಂದಿಷ್ಟು ಗಟ್ಟಿತನ ಬೇಕಿತ್ತು. ರಾಜಕೀಯದ ಜೊತೆಗೆ, ಪ್ರೀತಿ, ಪ್ರಣಯ, ಮೋಜು, ಮಸ್ತಿ, ಹಾಡು, ಕುಣಿತ, ಕಾಮಿಡಿ ಎಂದೆಲ್ಲಾ ಸೇರಿ, ಇಂಥದ್ದೊಂದು ಚಿತ್ರಕ್ಕಿರಬೇಕಿದ್ದ ಗಂಭೀರತೆ ಮತ್ತು ವೇಗ ಕಡಿಮೆಯಾಗಿದೆ. ಚಿತ್ರದಲ್ಲಿ ಹೇಳಿರುವ ವಿಷಯ ಇವತ್ತಿನ ಸನ್ನಿವೇಶಕ್ಕೆ ಬಹಳ ಪ್ರಸ್ತುತವಾಗಿದ್ದರೂ, ಅದನ್ನು ಕಟ್ಟಿಕೊಟ್ಟಿರುವ ರೀತಿಯಲ್ಲಿ ಹೊಸತನ ಕಾಣುವುದಿಲ್ಲ.
‘ಕೆರೆಬೇಟೆ’ಯ ಗೌರಿಶಂಕರ್, ಇಲ್ಲಿ ಇನ್ನೊಂದು ವಿಭಿನ್ನ ಪಾತ್ರದೊಂದಿಗೆ ವಾಪಸ್ಸಾಗಿದ್ದಾರೆ. ಚಿತ್ರದ ನಿರ್ಮಾಪಕ ಮತ್ತು ಕಥೆ ಬರೆದಿರುವ ನರಸಿಂಹಮೂರ್ತಿ ಅವರೇ ಮುಖ್ಯಮಂತ್ರಿಯ ಪಾತ್ರವನ್ನೂ ಮಾಡಿದ್ದಾರೆ. ಚಿಕ್ಕ ಪಾತ್ರವಾದರೂ ಬಲ ರಾಜ್ ವಾಡಿ ನೆನಪಿನಲ್ಲುಳಿಯುತ್ತಾರೆ. ಹಿರಿಯರಾದ ರಮೇಶ್ ಭಟ್, ಅಶೋಕ್ ಮುಂತಾದವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿನಯ್ ಚಂದ್ರ ಸಂಗೀತ ನಿರ್ದೇಶನದ ಎರಡು ಹಾಡುಗಳು ಗುನುಗುವಂತಿವೆ.


