‘ಜೋಡೆತ್ತು’ ಚಿತ್ರಕ್ಕೆ ಮಾತು ಮುಗೀತು; ಹಾಡಷ್ಟೇ ಬಾಕಿ

ಚಂದನವನ, ಸಿನಿ ಸುದ್ದಿ

ನಟ ಚಿಕ್ಕಣ್ಣ ಮದುವೆಗೆ ಸಜ್ಜಾಗುತ್ತಿದ್ದಾರೆ. ಇದೇ ತಿಂಗಳ 20ರಂದು ಮೈಸೂರಿನಲ್ಲಿ ಅವರ ಮದುವೆ ನಡೆಯಲಿದೆ. ಅದಕ್ಕೂ ಮೊದಲು ಅವರು, ಇತ್ತೀಚೆಗೆ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ. ಅದು ನಿಜಜೀವನದಲ್ಲಲ್ಲ, ಸಿನಿಮಾದಲ್ಲಿ.

ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ ‘ಜೋಡೆತ್ತು’ ಚಿತ್ರ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಚಿಕ್ಕಣ್ಣ, ಸುನೀಲ್ (ತೆಲುಗು) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ‘ಜೋಡೆತ್ತು’ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮೈಸೂರಿನ ಹೊರ ಭಾಗದ ಇಮ್ಮಾವು ಬಳಿ ನಡೆಯುತ್ತಿದೆ. ಅಲ್ಲಿ ಛಾಯಾಗ್ರಾಹಕ ಕಮ್ ನಿರ್ದೇಶಕ ಸುಧಾಕರ್ ಎತ್ತಿನಗಾಡಿ ಚೇಸಿಂಗ್ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು‌. ಸಾವಿರಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಮತ್ತು ನೂರಾರು ಎತ್ತಿನ ಗಾಡಿಗಳನ್ನು ಬಳಸಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿತ್ತು.

ಚಿತ್ರದ ಕುರಿತು ಮಾತನಾಡಿದ ಚಿಕ್ಕಣ್ಣ, ‘ಕಳೆದ ಒಂದು ವಾರದಿಂದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುತ್ತಿದ್ದೇವೆ‌. ಇದರೊಂದಿಗೆ ಮಾತಿನ ಭಾಗದ ಚಿತ್ರೀಕರಣಮುಕ್ತಾಯವಾಗಿದ್ದು, ಎರಡು ಹಾಡುಗಳು ಮಾತ್ರ ಬಾಕಿ ಇವೆ. ಈ ರೇಸ್ ಗಾಗಿ ನಿರ್ಮಾಪಕರು ಸುತ್ತಮುತ್ತಲ ಊರುಗಳಿಂದ ಎತ್ತಿನ ಗಾಡಿಗಳನ್ನು ತರಿಸಿದ್ದರು. ಇನ್ನೆರಡು ಗೀತೆಗಳನ್ನು ಮುಂದಿನ ತಿಂಗಳು ಶೂಟ್ ಮಾಡುತ್ತೇವೆ’ ಎಂದರು.

ನಿರ್ದೇಶಕ ಸುಧಾಕರ್ ಮಾತನಾಡಿ, ‘ನಮ್ಮ ಚಿತ್ರದ ಶೇ. 95ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಸಾವಿರಕ್ಕೂ ಹೆಚ್ಚು ಜೂನಿಯರ್ ಕಲಾವಿದರನ್ನು ಬಳಸಿ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣ ಮಾಡಿದ್ದೇವೆ. ಚಿತ್ರದ ಎಲ್ಲಾ ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಮೈಸೂರು, ಮಂಡ್ಯ,ಮದ್ದೂರು, ಚನ್ನಪಟ್ಟಣ ಮುಂತಾದ ಕಡೆ ನೈಜವಾಗಿ ಚಿತ್ರೀಕರಣ ಮಾಡಲಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮುಗಿದಿದ್ದು, ಇನ್ನೆರಡು ಬಾಕಿ ಸಾಂಗ್ ಬಾಕಿಯಿದೆ. ಜೋಡೆತ್ತು ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, 1990-95ರ ಕಾಲಘಟ್ಟದ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಕಾಮಿಡಿ, ಲವ್‍, ಸೆಂಟಿಮೆಂಟ್‍ ಜೊತೆಗೆ ಗ್ರಾಮೀಣ ಸೊಗಡಿನ ಕಥೆ ಇದೆ’ ಎಂದರು.

ತೆಲುಗು ನಟ ಸುನೀಲ್ ಮಾತನಾಡುತ್ತಾ, ‘ಗ್ರಾಮೀಣ ಸೊಗಡಿನ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡುತ್ತಿದ್ದೇನೆ‌. ಗಂಭೀರವಾಗಿರುವುದರ ಜೊತೆಗೆ ಕಾಮಿಡಿಯಾಗಿಯೂ ಸಾಗುವ ಪಾತ್ರ ಇದು’ ಎಂದರು.

ಸುನಿಲ್ ಅವರ ಪತ್ನಿ ಪಾತ್ರ ಮಾಡುತ್ತಿರುವ ಜಯಶ್ರೀ, ಕಲಾವಿದರಾದ ‘ಉಗ್ರಂ’ ಮಂಜು, ಕುರಿ ಪ್ರತಾಪ್, ಶಿವರಾಜ್ ಕೆ.ಆರ್ ಪೇಟೆ, ಹುಲಿ ಕಾರ್ತಿಕ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಜಾನಪದ ಹಾಡಿಗೆ Rap ಟಚ್‌; ‘ಸಿಟಿ ಲೈಟ್ಸ್‌’ ಚಿತ್ರದ ಹಾಡು ಬಿಡುಗಡೆ

Discover more from KannadaScreens

Subscribe now to keep reading and get access to the full archive.

Continue reading