ಜಾನಪದ ಹಾಡಿಗೆ Rap ಟಚ್‌; ‘ಸಿಟಿ ಲೈಟ್ಸ್‌’ ಚಿತ್ರದ ಹಾಡು ಬಿಡುಗಡೆ

ಚಂದನವನ, ಸಿನಿ ಸುದ್ದಿ

‘ದುನಿಯಾ’ ವಿಜಯ್‍ ನಿರ್ದೇಶನದ ಪ್ರತಿ ಚಿತ್ರದಲ್ಲೂ ಜಾನಪದ ಅಥವಾ ಬುಡಕಟ್ಟು ಹಾಡುಗಳಿಗೆ ಹೊಸ ರೂಪ ನೀಡಲಾಗಿರುವ ಒಂದು ಹಾಡು ಇದ್ದೇ ಇರುತ್ತದೆ. ಅದು ಈ ಬಾರಿಯೂ ಮುಂದುವರೆದಿದೆ. ‘ಸಿಟಿ ಲೈಟ್ಸ್’ ಚಿತ್ರದಲ್ಲಿ ಈ ಬಾರಿ ಮಾದಪ್ಪನ ಜಾನಪದ ಹಾಡುಗಳ ಸಾಲುಗಳನ್ನ ಬಳಸಿಕೊಂಡು ಈಗಿನ ಟ್ರೆಂಡ್‍ಗೆ ತಕ್ಕಂತೆ Rap ಸ್ಪರ್ಶ ಕೊಟ್ಟು ಹೊಸ ಹಾಡನ್ನು ಮಾಡಿದ್ದಾರೆ.

‘ದುನಿಯಾ’ ನಿರ್ದೇಶಿಸುತ್ತಿರುವ ಮೂರನೇ ಚಿತ್ರ ‘ಸಿಟಿ ಲೈಟ್ಸ್’ ಬಿಡುಗಡೆಗೆ ಸಜ್ಜಾಗಿದೆ. ವಿನಯ್ ರಾಜ್‌ಕುಮಾರ್ ಮತ್ತು ಮೊನಿಷಾ ವಿಜಯ್‍ ಕುಮಾರ್ ನಾಯಕ-ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಎರಡು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ‘ಸಿಟಿ ಲೈಟ್ಸ್’ ಚಿತ್ರದ ಮೂರನೇ ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ.

‘ಕೆಂಡದೋಕುಳಿ ಗಂಡನಾ …’ ಹಾಡನ್ನು ಜಾನಪದ ಕಲಾವಿದ ಕಂಸಾಳೆ ಧನುಷ್‌ ಹಾಡಿದ್ದಾರೆ. ಇನ್ನು ಹಾಡಲ್ಲಿ ಬರುವ Rap ಸಾಲುಗಳನ್ನ ಅಮೋಘ್‌ ಬಾಲಾಜಿ ಹಾಡಿದ್ದಾರೆ. ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ವಿನಯ್ ರಾಜ್‌ಕುಮಾರ್, ‘ಇಬ್ಬರು ಮುಗ್ಧದು ಅನಿರೀಕ್ಷಿತವಾಗಿ ನಗರಕ್ಕೆ ಬಂದಾಗ ಎದುರಿಸಬೇಕಾಗಿ ಬರುವ ಸವಾಲುಗಳು ಮತ್ತು ಅವರ ಜೀವನದಲ್ಲಿ ನಡೆಯುವ ತಿರುವುಗಳೇ ಈ ಸಿನಿಮಾದ ಮುಖ್ಯ ಕಥಾವಸ್ತು. ಮಾದಪ್ಪನ ಹಾಡು ಹಾಗೂ ಮಹದೇಶ್ವರ ಬೆಟ್ಟದಲ್ಲಿ ಹಾಡು ಚಿತ್ರೀಕರಣ ಮಾಡಲು ಅವಕಾಶ ಸಿಕ್ಕಿದ್ದೆ ನನ್ನ ಪುಣ್ಯ’ ಎಂದರು.

ಮೊದಲ ಚಿತ್ರದಲ್ಲೇ ವಿಭಿನ್ನ ಪಾತ್ರ ಸಿಕ್ಕಿದೆ ಎನ್ನುವ ಮೊನಿಷಾ, ‘ನಾನು ಲಂಡನ್‌ನಲ್ಲಿ ನಟನಾ ತರಬೇತಿ ಪಡೆದಿದ್ದೇನೆ. ನನ್ನ ತಂದೆ ನನಗೆ ವಿಭಿನ್ನವಾದ ಪಾತ್ರವನ್ನು ನೀಡಿದ್ದು, ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಶ್ರಮ ಹಾಕಿದ್ದೇನೆ’ ಎಂದರು.

ಅಣ್ಣಾವ್ರ ಕುಟುಂಬದ ಕುಡಿಯನ್ನ ನಿರ್ದೇಶಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ‘ದುನಿಯಾ’ ವಿಜಯ್, ‘ನಾನು ಡಾ. ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಂದು ಅವರ ಮೊಮ್ಮಗನಿಗೆ ಆಕ್ಷನ್-ಕಟ್ ಹೇಳುತ್ತಿರುವುದು ನನಗೆ ಸಿಕ್ಕ ದೊಡ್ಡ ಗೌರವ ಹಾಗೂ ಅಪಾರ ಸಂತಸ ತಂದಿದೆ’ ಎಂದರು.

ವಿಜಯ್‍ ಜೊತೆಗೆ ‘ಸಲಗ’ ಮತ್ತು ‘ಭೀಮ’ ಚಿತ್ರಗಳಿಗೆ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಸಂಭಾಷಣೆಗಾರ ಮಾಸ್ತಿ ಉಪ್ಪಾರಳ್ಳಿ ಈ ಚಿತ್ರದಲ್ಲೂ ಮುಂದುವರೆದಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

ನಾವೆಲ್ಲಿ ದಾರಿ ತಪ್ಪಿದೆವು ಎಂದು ಹುಡುಕುತ್ತಾ ಹೊರಟಾಗ …

Discover more from KannadaScreens

Subscribe now to keep reading and get access to the full archive.

Continue reading