ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ವೃತ್ತಿಜೀವನದಲ್ಲೇ ‘ಸ್ಪಾರ್ಕ್’ ಒಂದು ವಿಶೇಷವಾದ ಚಿತ್ರವಂತೆ. ಏಕೆ ಗೊತ್ತಾ? ಅವರ ವೃತ್ತಿಜೀವನದಲ್ಲೇ ಅತ್ಯಂತ ವೇಗವಾಗಿ ಚಿತ್ರೀಕರಣಗೊಂಡ ಚಿತ್ರ ಇದಂತೆ. ಕಳೆದ ವರ್ಷ ಪ್ರಾರಂಭವಾದ ಚಿತ್ರ, ಸೆ. 25ರಂದು ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.
‘ಶಕಲಕ ಭುಂ ಭೂಮ್ …’ ಎಂದು ಪ್ರಾರಂಭವಾಗುವ ಈ ಹಾಡಿಗೆ ನಿರಂಜನ್ ಮತ್ತು ರಚನಾ ಹೆಜ್ಜೆ ಹಾಕಿದ್ದು, ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಕನ್ನಡ ಹಾಡನ್ನು ಶರಣ್ ಮತ್ತು ಸಂಗೀತಾ ರವೀಂದ್ರನಾಥ್ ಹಾಡಿದ್ದಾರೆ. ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಡನ್ನು ಬಿಡುಗಡೆ ಮಾಡಿದ್ದಾರೆ.
‘ಸ್ಪಾರ್ಕ್’ನಲ್ಲಿ ನಾಯಕ ನಿರಂಜನ್ ಪತ್ರಕರ್ತನಪಾತ್ರದಲ್ಲಿದ್ದು ನ್ಯಾಯದ ಹೋರಾಟ ನಡೆಸುವ ಪಾತ್ರದಲ್ಲಿ ಪ್ರತ್ಯಕ್ಷಗೊಳ್ಳಲಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ನಿರಂಜನ್, ‘ಈ ಹಾಡನ್ನು ಚಿಕ್ಕಪ್ಪನಿಗೆ ತೋರಿಸಿದೆ. ದೊಡ್ಡ ಸ್ಟಾರ್ ಗೆ ಸಿಗುವಂಥ ಹಾಡು ನಿನಗೆ ಸಿಕ್ಕಿದೆ ಎಂದರು. ನನ್ನ ಅದೃಷ್ಟ ಎಂದುಕೊಂಡಿದ್ದೇನೆ. ನನ್ನ ವೃತ್ತಿ ಬದುಕಿನಲ್ಲಿ ತುಂಬ ವೇಗವಾಗಿ ಚಿತ್ರೀಕರಣಗೊಂಡಂಥ ಸಿನಿಮಾ ಇದು’ ಎಂದರು.

ನಿರಂಜನ್‌ಗೆ ಜೋಡಿಯಾಗಿರುವ ರಚನಾ ಇಂದರ್ ಮಾತನಾಡಿ, ‘ಇದು ನನ್ನ ಮೊದಲ ಕಮರ್ಷಿಯಲ್ ಹಾಡು. ಅಷ್ಟೇ ಅಲ್ಲ, ಮೊದಲ ಬಾರಿಗೆ ನಾನು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೇನೆ’ ಎಂದು ಖುಷಿಪಟ್ಟರು.
ಈ ಚಿತ್ರಕ್ಕೆ ಮಹಾಂತೇಶ್ ಹಂದ್ರಾಳ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಚಿನ್ ಬಸ್ರೂರು ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಧರ್ಮಣ್ಣ ಕಡೂರು, ಮಹಾಂತೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ನೆನಪಿರಲಿ’ ಪ್ರೇಮ್ ಈ ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಗರಿಮಾ ಮತ್ತು ಅವಿನಾಶ್ ವಸಿಷ್ಠ ನಿರ್ಮಿಸಿದ್ದಾರೆ. ಸ್ವಾಮಿ ಜೆ. ಗೌಡ ಈ ಚಿತ್ರದ ಛಾಯಾಗ್ರಾಹಕರು.


