ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕಳೆದ ವರ್ಷ ಕೇಳಿ ಬಂದಿತ್ತು. ಆದರೆ, ಆ ಚಿತ್ರ ಶುರುವಾದ ಸುದ್ದಿ ಇಲ್ಲ. ಹೀಗಿರುವಾಗಲೇ, ಭುವನ್ ಸದ್ದಿಲ್ಲದೆ ಇನ್ನೊಂದು ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅದೇ ‘Bully’.
‘ಬುಲ್ಲಿ’ ಎಂಬ ಹೆಸರು ಕೇಳುತ್ತಿದ್ದಂತೆಯೇ ಏನೇನೋ ಕಲ್ಪನೆ ಬೇಡ. ಇಲ್ಲಿ ನಾಯಕನ ಹೆಸರು ಬಲರಾಮನಂತೆ. ಸ್ನೇಹಿತರೆಲ್ಲರೂ ಅವನನ್ನು ಪ್ರೀತಿಯಿಂದ ಬುಲ್ಲಿ ಎಂದು ಕರೆಯುತ್ತಿರುತ್ತಾರಂತೆ. ಹಾಗಾಗಿ, ಚಿತ್ರಕ್ಕೆ ‘ಬುಲ್ಲಿ’ ಎಂದೇ ಹೆಸರಿಡಲಾಗಿದೆ. ಈ ಚಿತ್ರವನ್ನು ಅನೂಪ್ ಆ್ಯಂಟೋನಿ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ, ದಕ್ಷಿಣ ಭಾರತದ ಜನಪ್ರಿಯ ನಟಿ ಊರ್ವಶಿ, ಒಂದು ದಶಕದ ನಂತರ ಈ ಚಿತ್ರದ ಮೂಲಕ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ.
ಈ ಚಿತ್ರದ ಕುರಿತು ಮಾತನಾಡುವ ಹಿರಿಯ ನಟಿ ಊರ್ವಶಿ, ’10 ವರ್ಷಗಳ ನಂತರ ನಾನು ಕನ್ನಡ ಚಿತ್ರ ರಂಗಕ್ಕೆ ಮರಳಿದ್ದೇನೆ. ಹಲವಾರು ಕನ್ನಡ ಸಿನಿಮಾಗಳ ಆಫರ್ ಬಂದರೂ ನನಗೆ ಯಾವುದು ಹಿಡಿಸಿರಲಿಲ್ಲ. ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬ್ಯುಸಿ ಇದ್ದೆ. ಭುವನ್ ಮತ್ತು ಹರ್ಷಿಕಾ, ಚೆನೈಗೆ ಬಂದು ಸಿನಿಮಾದ ಬಗ್ಗೆ ಹಾಗೂ ಅವರ ಐಡಿಯ ಬಗ್ಗೆ ತಿಳಿಸಿದಾಗ ನನಗೆ ತುಂಬಾ ಖುಷಿ ಆಯಿತು. ಈಗ ಸಿನಿಮಾ ಮುಗಿಸಿದ ಮೇಲೆ ನಾನೇನಾದರೂ ಈ ಸಿನಿಮಾ ಮಾಡದಿದ್ದಿದ್ದರೆ ಇಂಥಾ ಒಂದು ಒಳ್ಳೆಯ ಸಿನಿಮಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದನಲ್ಲ ಎಂದು ಅನಿಸುತ್ತಿದೆ. ತುಂಬಾ ಅಚ್ಚುಕಟ್ಟಾಗಿ ಒಂದು ಕಾಮೆಡಿ ಸಿನಿಮಾವನ್ನು ಈ ತಂಡ ಮಾಡುತ್ತಿದೆ. ಭುವನ್ ಜೊತೆಗೆ ನಟಿಸಿದ್ದು ಖುಷಿ ಆಯಿತು’ ಎಂದರು.

ಭುವನ್ ಮಾತನಾಡಿ, ‘ಇದೊಂದು ಕಾಮಿಡಿ ಸಚಿತ್ರ. ಇದರಲ್ಲಿ ಯಾವುದೇ ಸಂದೇಶ ನೀಡಲು ಹೊರಟಿಲ್ಲ. ಚಿತ್ರದಲ್ಲಿ ಮನೋರಂಜನೆಯ ಪ್ರಧಾನ. ಇಲ್ಲಿಯವರೆಗೂ ಯಾವುದೇ ಸಿನಿಮಾದಲ್ಲಿ ಬಾರದ ತಾಯಿ – ಮಗನ ಒಂದು ಅಪರೂಪದ ಬಾಂಧವ್ಯವನ್ನು ಸಾರುವ ಕಥೆ ಈ ಚಿತ್ರದಲಲಿದೆ. ನಾನು ಈ ಚಿತ್ರದಲ್ಲಿ ಮಧ್ಯಮ ಕುಟುಂಬದ GEN Z ಹುಡುಗ. ಯಾವುದಕ್ಕೂ ತಲೆ ಕೆಡಸಿಕೊಳ್ಳದೆ, ಯಾವುದೇ ಗೊತ್ತು-ಗುರಿಯಿಲ್ಲದೆ, ತನ್ನಷ್ಟಕ್ಕೆ ತಾನು ಜೀವನ ನಡೆಸುವ ಹುಡುಗ ಕೂಡ. ನನ್ನ ಪಾತ್ರದ ಹೆಸರು ಬಲರಾಮ. ಸ್ನೇಹಿತರೆಲ್ಲಾ ಬುಲ್ಲಿ ಎಂದು ಕರೆಯುತ್ತಿರುತ್ತಾರೆ. ಹಾಗಾಗಿ ಚಿತ್ರಕ್ಕೆ ‘ಬುಲ್ಲಿ’ ಎಂದು ಹೆಸರಿಟ್ಟಿದ್ದೇವೆ. ಮೊದಲ ಹಂತದ ಚಿತ್ರೀಕರಣದಲ್ಲಿ ಊರ್ವಶಿ ಅವರ ಅಭಿನಯದ ಭಾಗದ ಚಿತ್ರೀಕರಣ ಪೂರ್ಣವಾಗಿದೆ’ ಎಂದರು.
‘ಕಥಾ ವಿಚಿತ್ರ’ ಚಿತ್ರದ ಮೂಲಕ ನಿರ್ದೇಶಕರಾದ ಅನೂಪ್ ಆ್ಯಂಟೋನಿಗೆ ಇದು ನಾಲ್ಕನೇ ಚಿತ್ರ. ಮನರಂಜನೆಯ ಜೊತೆಗೆ ತಾಯಿ-ಮಗನ ಬಾಂಧವ್ಯ ತೋರಿಸಲಾಗುತ್ತದೆ ಎಂದರು.
ಈ ಚಿತ್ರವನ್ನು ನವೀನ್ ನಿರ್ಮಿಸುತ್ತಿದ್ದು, ಹರ್ಷಿಕಾ ಪೂಣಚ್ಛ ಕಾರ್ಯಕಾರಿ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ಭುವನ್ ಮತ್ತು ಊರ್ವಶಿ ಜೊತೆಗೆ ಅಚ್ಯುತ ಕುಮಾರ್, ಓಂಪ್ರಕಾಶ್ ರಾವ್, ಪ್ರಕಾಶ್ ತುಮಿನಾಡು, ಹುಲಿ ಕಾರ್ತಿಕ್, ಆರ್ಯ ಸಂತೋಷ್ ಮುಂತಾದವರು ನಟಿಸುತ್ತಿದ್ದಾರೆ. ಊರ್ವಶಿ ಅವರ ಮಗಳು ತೇಜ, ಈ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ.


