ಈ ಹಿಂದೆ ಕೆಲವು ವಿಡಿಯೋ ಹಾಡುಗಳನ್ನು ನಿರ್ದೇಶಿಸಿದ್ದ ಗಿರಿ ಗೌಡ, ಇದೀಗ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅದೇ ಸಂಪಿಗೆ. ಈ ಚಿತ್ರವನ್ನು ರುದ್ರ ಕುಮಾರ್ ನಿರ್ಮಿಸುತ್ತಿದ್ದು, ವರ್ಧನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ಕಾಲಭೈರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ‘ಸಂಪಿಗೆ’ ಚಿತ್ರ ಇತ್ತೀಚೆಗೆ ಪ್ರಾರಂಭವಾಗಿದೆ. ಈ ಚಿತ್ರದ ಮಹೂರ್ತ ಸಮಾರಂಭಕ್ಕೆ ‘ಬಿಗ್ ಬಾಸ್’ ಖ್ಯಾತಿಯ ಸಾನಿಯಾ ಅಯ್ಯರ್ ಹಾಗೂ ಅವರ ತಾಯಿ ದೀಪಾ ಅಯ್ಯರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ಇದೊಂದು ಮರ್ಡರ್ ಮಿಸ್ಟ್ರಿ ಚಿತ್ರವಾಗಿದ್ದು, ಹೆಣ್ಣಿನ ಮೇಲಿನ ದೌರ್ಜನ್ಯದ ಸುತ್ತ ಕಥೆ ಸಾಗಲಿದೆಯಂತೆ. ಚಿತ್ರದಲ್ಲೊಂದು ಒಳ್ಳೆಯ ಸಂದೇಶವೂ ಇರಲಿದೆಯಂತೆ. ಚಿತ್ರದ ಕುರಿತು ಮಾತನಾಡಿದ ಗಿರಿ ಗೌಡ, ‘ಇದು ನನ್ನ ಮೊದಲ ಚಿತ್ರ. ಇದೊಂದು ಮರ್ಡರ್ ಮಿಸ್ಟ್ರಿ ಕಥಾನಕವಾಗಿದ್ದು, ಹೆಣ್ಣಿನ ಮೇಲಿನ ಅತ್ಯಾಚಾರ ದೌರ್ಜನ್ಯದ ಸುತ್ತ ಕಥೆ ಸಾಗಲಿದೆ. ಈ ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ. ಈ ಚಿತ್ರದಲ್ಲಿ ಹೆಚ್ಚಾಗಿ ಯುವ ಪ್ರತಿಭೆಗಳು ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ನಾಯಕಿ ಯಾರೆಂದು ಪರಿಚಯ ಮಾಡುತ್ತೇವೆ ಎಂದರು.

ಚಿತ್ರದ ನಿರ್ಮಾಪಕ ರುದ್ರ ಕುಮಾರ್ ಮಾತನಾಡತ್ತಾ, ‘ನನ್ನದು ಬ್ರೆಡ್ ಫ್ಯಾಕ್ಟರಿ ವ್ಯಾಪಾರವಿದೆ. ಚಿತ್ರ ನಿರ್ಮಿಸಬೇಕು ಎಂಬುದು ಸುಮಾರು 10 ವರ್ಷಗಳ ಕನಸು. ಈಗ ಒಳ್ಳೆಯ ಕಥೆ ಸಿಕ್ಕಿದೆ. ಕಾಲಭೈರವೇಶ್ವರ ಪ್ರೊಡಕ್ಷನ್ ಮೂಲಕ ಈ ಚಿತ್ರ ಆರಂಭಿಸಿದ್ದೇವೆ. ನಿರ್ದೇಶಕ ಗಿರಿ ನನ್ನ ಸಹೋದರ ಇದ್ದ ಹಾಗೆ. ಅವನಿಗಾಗಿ ಈ ಚಿತ್ರ ಮಾಡುತ್ತಿದ್ದೇನೆ’ ಎಂದರು.
ನಟ ವರ್ಧನ್ ಮಾತನಾಡುತ್ತಾ, ‘ನಾನು ಮೂಲತಃ ಹಾಸನದವನು. ಸುಮಾರು ಎಂಟು ವರ್ಷಗಳ ಹಿಂದೆ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ನಿರ್ದೇಶನ ವಿಭಾಗದಲ್ಲೂ ಕೆಲಸ ಮಾಡಿದ್ದೇನೆ. ಇದೊಂದು ಹೆಣ್ಣಿನ ಮೇಲೆ ನಡೆಯುವ ಕ್ರೌರ್ಯದ ಸುತ್ತ ನಡೆಯುವ ಚಿತ್ರವಾಗಿದ್ದು, ಆಕೆಯನ್ನು ನಾವು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬುವ ಅಂಶ ಒಳಗೊಂಡಿದೆ. ನನ್ನ ಪಾತ್ರವೂ ಬಹಳ ವಿಭಿನ್ನವಾಗಿದ್ದು, ಈ ಚಿತ್ರಕ್ಕಾಗಿ ರಿಹರ್ಸಲ್ ಮಾಡಿಕೊಂಡು ಚಿತ್ರೀಕರಣಕ್ಕೆ ಹೋಗಲು ಸಿದ್ಧರಾಗಿದ್ದೇವೆ’ ಎಂದರು.
‘ಸಂಪಿಗೆ’ ಚಿತ್ರಕ್ಕೆ ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮೇಲುಕೋಟೆ, ಕಣ್ಣೂರು ಸೇರಿದಂತೆ ಹಲವು ಸ್ಥಳಗಳಲ್ಲಿ 20 ದಿನಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಸಜ್ಜಾಗಿದೆ.


