ಯಾಕೆ ಹೀಗಾಗುತ್ತಿದೆ? ಕನ್ನಡ ಚಿತ್ರರಂಗದಲ್ಲಿ ಇಷ್ಟೊಂದು ಅಶಿಸ್ತು, ಗೊಂದಲದ ಮತ್ತು unprofessional ಆದ ವಾತಾವರಣ ಯಾಕೆ? ಮೊದಲೇನೋ ಮಾತಾಗುತ್ತದೆ, ಬರಬರುತ್ತಾ ಇನ್ನೇನೋ ಆಗುತ್ತದೆ. ಇಲ್ಲಿ Accountability ಎಂಬ ಪದಕ್ಕೆ ಬೆಲೆಯೇ ಇಲ್ಲ. ಏನಾದರೂ ಸಮಸ್ಯೆ ಎದುರಾದರೆ, ಒಬ್ಬರು ಇನ್ನೊಬ್ಬರ ಮೇಲೆ ಬೆರಳು ತೋರಿಸುವುದು, ಆರೋಪ ಹೊರಿಸುವುದು ಆಗುತ್ತದೆಯೇ ಹೊರತು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನವೇ ಮಾಡುತ್ತಿಲ್ಲ.
ಕಳೆದ ಕೆಲವು ವರ್ಷಗಳಲ್ಲಿ ಹಲವು ಪ್ರಕರಣಗಳನ್ನು ಉದಾಹರಿಸಬಹುದು. ‘ಸಂಜು ವೆಡ್ಸ್ ಗೀತಾ 2’, ‘ಮಾರ್ಟಿನ್’, ಕನಕಪುರ ಶ್ರೀನಿವಾಸ್ ವರ್ಸಸ್ ಪ್ರೇಮ್ ಮತ್ತು ಎ.ಪಿ. ಅರ್ಜುನ್ ಸೇರಿದಂತೆ ಕೆಲವು ಚಿತ್ರಗಳ ಸಮಸ್ಯೆಗಳು ನಿರ್ಮಾಪಕರ ಸಂಘ ಮತ್ತು ವಾಣಿಜ್ಯ ಮಂಡಳಿಯವರೆಗೂ ಹೋದವು. ಇನ್ನೂ ಕೆಲವು ಪ್ರಕರಣಗಳು ಅದನ್ನು ಮೀರಿ ನ್ಯಾಯಾಲಯದ ಮೆಟ್ಟಿಲೇರಿದವು. ಸೂಕ್ತ ಪುರಾವೆಗಳಿಲ್ಲದೆ, ಕೆಲವು ಪ್ರಕರಣಗಳು ವಿವಾದಗಳಾಗಿಯೇ ಮುಗಿದವೇ ಹೊರತು, ಒಂದು ತಾರ್ಕಿಕ ಅಂತ್ಯ ಸಿಗಲೇ ಇಲ್ಲ.

‘ಕರಾವಳಿ’ ಚಿತ್ರದ ವಿಷಯವನ್ನೇ ತೆಗೆದುಕೊಂಡರೆ, ಪ್ರಜ್ವಲ್‍ಗೆ ಒಂದೂಕಾಲು ಕೋಟಿ ಸಂಭಾವನೆ ಕೊಡುವ ಮಾತಾಗಿತ್ತಂತೆ. ಆದರೆ, ಮಧ್ಯೆ ಏನೇನೋ ಆಯಿತು. ಬಾಕಿ ದುಡ್ಡು ಕೊಡಲಿಲ್ಲ ಎಂದು ಪ್ರಜ್ವಲ್ ಡಬ್ಬಿಂಗ್ ಮಾಡಲಿಲ್ಲ, ಪ್ರಜ್ವಲ್ ಡಬ್ಬಿಂಗ್ ಮಾಡಲಿಲ್ಲ ಎಂದು ಅವರಿಗೆ ಸಂಭಾವನೆ ಉಳಿಸಿಕೊಳ್ಳಲಾಗಿದೆ ಎಂದು ನಿರ್ಮಾಪಕ-ನಿರ್ದೇಶಕ ಗುರುದತ್ ಗಾಣಿಗ ಹೇಳಿದರು. ಕೊನೆಗೆ ಸಂಭಾವನೆ ಸಂದಾಯ ಮಾಡಿದರೂ, ಚಿತ್ರದಲ್ಲಿ ಬೇರೆ ಯಾರದೋ ಧ್ವನಿ ಇತ್ತು. ಯಾಕಾಗಿ ಇಷ್ಟೊಂದು ಗೊಂದಲಗಳು, ವಿವಾದಗಳು? ಇಷ್ಟೆಲ್ಲಾ ವಿವಾದಗಳಿಂದ ಚಿತ್ರಕ್ಕೆ ಏನಾದರೂ ಅನುಕೂಲವಾಯಿತಾ? ಯಾರಿಗಾದರೂ ಒಳ್ಳೆಯದಾಯಿತಾ? ಖಂಡಿತಾ ಇಲ್ಲ. ಬಹುಶಃ ಚಿತ್ರತಂಡದವರ ನಡುವೆ ಒಂದು ಅಗ್ರೀಮೆಂಟ್ ಇದ್ದರೆ, ಇವೆಲ್ಲಾ ಆಗುತ್ತಲೇ ಇರಲಿಲ್ಲವೇನೋ? ನಟ-ನಿರ್ಮಾಪಕರ ನಡುವೆ ಕೆಲಸದ ವಿಷಯವಾಗಿ ಯಾವುದೇ ಒಪ್ಪಂದ ಇರಲಿಲ್ಲ. ಎಲ್ಲಾ ಲೆಕ್ಕಾಚಾರಗಳೂ ಬಾಯ್ಮಾತನಿಲ್ಲೇ ಆಗಿದ್ದು. ವಿವಾದ, ಗೊಂದಲ, ಗದ್ದಲಗಳಿಂದ ಚಿತ್ರಕ್ಕೆ ನೆಗೆಟಿವ್ ಪ್ರಚಾರ ಸಿಕ್ಕಿತೇ ಹೊರತು ಚಿತ್ರಕ್ಕೆ ಒಳ್ಳೆಯದಾಗುತ್ತದೆ ಎಂದು ನಿರೀಕ್ಷಿಸುವುದು ಕಷ್ಟ.
ಇಷ್ಟಕ್ಕೂ ಯಾಕೆ ಮೊದಲೇ ಒಪ್ಪಂದ ಮಾಡಿಕೊಳ್ಳಲಿಲ್ಲ? ಈ ಪ್ರಶ್ನೆಯನ್ನು ಪ್ರಜ್ವಲ್ ಮುಂದಿಟ್ಟರೆ, ‘ನಾನು ಸಂಭಾವನೆ ಕೇಳಿದ್ದೆ ದೊಡ್ಡ ಸುದ್ದಿಯಾಗುತ್ತಿದೆ. ಆ ಚಿತ್ರಕ್ಕಾಗಿ ಮೂರು ವರ್ಷ ಎತ್ತಿಟ್ಟೆ. ಈ ಮೂರು ವರ್ಷಗಳ ಕಾಲ ಬೇರೆ ಚಿತ್ರ ಮಾಡಲಿಲ್ಲ. ಇದರಿಂದ ಕೆಲವು ಚಿತ್ರಗಳನ್ನು ಬಿಡಬೇಕಾಯಿತು. ಈ ನಷ್ಟ ಯಾರು ಕೊಡುತ್ತಾರೆ. ಒಪ್ಪಿಕೊಂಡಿರುವ ಸಂಭಾವನೆಯನ್ನಾದರೂ ಕೊಡಿ ಎಂದರೆ ಅಲ್ಲೂ ಸಮಸ್ಯೆ. ಅಗ್ರೀಮೆಂಟ್ ಮಾಡಿಕೊಳ್ಳುವ ವಿಷಯ ಬರೀ ಮಾತಲ್ಲೇ ಉಳಿಯಿತೇ ಹೊರತು, ಕಾರ್ಯರೂಪಕ್ಕೆ ಬರಲೇ ಇಲ್ಲ’ ಎನ್ನುತ್ತಾರೆ.
ಈ ಸಮಸ್ಯೆ ಬರೀ ‘ಕರಾವಳಿ’ ಚಿತ್ರಕ್ಕೆ ಮಾತ್ರ ಸೀಮಿತವಲ್ಲ. ಒಪ್ಪಂದವಿಲ್ಲದೆ ಇತ್ತೀಚೆಗೆ ಪದೇಪದೇ ಕನ್ನಡ ಚಿತ್ರರಂಗದಲ್ಲಿ ಸಮಸ್ಯೆಗಳಾಗುತ್ತಲೇ ಇವೆ. ಆದರೆ, ಚಿತ್ರರಂಗ ಈ ವಿಷಯವಾಗಿ ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ. ಬೇರೆ ಚಿತ್ರರಂಗಗಳು ಈ ವಿಷಯದಲ್ಲಿ ಬಹಳ ವೃತ್ತಿಪರವಾಗಿವೆ. ರಾಮೋಜಿ ರಾವ್ ಅವರ ಉಷಾಕಿರಣ್ ಮೂವೀಸ್, ಸುಮಾರು 25 ವರ್ಷಗಳ ಹಿಂದೆ ಕನ್ನಡದಲ್ಲಿ ಕೆಲವು ಚಿತ್ರಗಳನ್ನು ನಿರ್ಮಿಸಿದ ಸಂದರ್ಭದಲ್ಲಿ ಕಲಾವಿದರು ಹಾಗೂ ತಂತ್ರಜ್ಞರ ಜೊತೆಗೆ ಅಗ್ರೀಮೆಂಟ್ ಮಾಡಿಕೊಂಡಿದ್ದರು ಎಂದು ಆ ಚಿತ್ರಗಳಿಗೆ ಕೆಲಸ ಮಾಡಿದವರು ನೆನಪಿಸಿಕೊಳ್ಳುತ್ತಾರೆ. ಕೆಲವು ಚಿತ್ರಗಳ ನಂತರ ಸಂಸ್ಥೆ ಕನ್ನಡದಲ್ಲಿ ಚಿತ್ರಗಳನ್ನು ನಿರ್ಮಿಸುವುದು ನಿಲ್ಲಿಸಿತು. ಅಲ್ಲಿಗೆ ಅಗ್ರೀಮೆಂಟ್ ಪದ್ಧತಿಯೂ ಅಲ್ಲಿಗೇ ನಿಂತು ಹೋಯಿತು. ಬಹುಶಃ ಅದು ವೃತ್ತಿಪರವಾಗಿ ಇನ್ನಷ್ಟು ಮುಂದುವರೆದರೆ, ಇಷ್ಟೊಂದು ಸಮಸ್ಯೆಗಳು ಆಗುತ್ತಿರಲಿಲ್ಲವೇನೋ? ಬೇರೆ ಭಾಷೆಗಳ ಚಿತ್ರಗಳು ಕನ್ನಡಕ್ಕೆ ಡಬ್ ಆದಾಗ, ಇಲ್ಲಿನ ತಂತ್ರಜ್ಞರ ಜೊತೆಗೆ ಕೆಲವೊಮ್ಮೆ ಒಪ್ಪಂದಗಳಾಗುತ್ತವಂತೆ. ಅದನ್ನು
ಗೊಂದಲಗಳನ್ನು ತಪ್ಪಿಸುವುದಕ್ಕೆ ಅಗ್ರೀಮೆಂಟ್‍ಗಳಿದ್ದರೆ ಅನುಕೂಲ ಎಂಬ ಮಾತುಗಳು ಕೆಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ಕಾರ್ಯರೂಪಕ್ಕೆ ಬರುತ್ತಿಲ್ಲ. ‘ಅಗ್ರೀಮೆಂಟ್, ಕಾಂಟ್ರಾಕ್ಟ್ಗಳೆಲ್ಲಾ ಇಲ್ಲಿ ಬಹಳ ಅಪರೂಪ. ನಾನಂತೂ ಒಂದು ಅಗ್ರೀಮೆಂಟ್ ಮಾಡಿಕೊಳ್ಳೋಣ ಎಂದು ಪ್ರತಿಯೊಬ್ಬ ನಿರ್ಮಾಪಕರಿಗೂ ಕೇಳಿಕೊಳ್ಳುತ್ತೇನೆ. ಇವತ್ತು, ನಾಳೆ ಎಂದು ಮುಂದೆ ಹಾಕುತ್ತಲೇ ಇರುತ್ತಾರೆ. ಶೇ. 99ರಷ್ಟು ಭಾಗ ಇಲ್ಲಿ ಅಗ್ರೀಮೆಂಟ್‍ಗಳಿರುವುದಿಲ್ಲ. ಎಲ್ಲವೂ ಬಾಯ್ಮಾತಿನಲ್ಲೇ ನಡೆಯುತ್ತದೆ’ ಎಂದು ಇತ್ತೀಚೆಗೆ ಅಜೇಯ್ ರಾವ್ ಸಹ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಈ ಅಗ್ರೀಮೆಂಟ್ ವ್ಯವಸ್ಥೆ ಬೇರೆಲ್ಲಾ ಚಿತ್ರರಂಗಗಳಲ್ಲೂ ಸಕ್ರಿಯವಾಗಿದೆ. ಕೆಲವು ಚಿತ್ರರಂಗಗಳಲ್ಲಿ ಅಗ್ರೀಮೆಂಟ್ ಇಲ್ಲದೆ, ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ.
ಈ ನಿಟ್ಟಿನಲ್ಲಿ ಮಲಯಾಳಂ ಕಲಾವಿದರ ಸಂಘ Association of Malayalam Movie Artists – AMMA ತಮ್ಮ ಕಲಾವಿದರಿಗಾಗಿ ಒಂದಿಷ್ಟು ನೀತಿ-ನಿಯಮಗಳನ್ನು ರೂಪಿಸಿದೆ. ಮಲಯಾಳಂ ಚಿತ್ರರಂಗದ ಉದಾಹರಣೆ ಕೊಟ್ಟರೆ, ಕೆಲವರಿಗೆ ಬೇಸರವಾಗಬಹುದು. ಈ ತರಹದ ಹೋಲಿಕೆಗಳು ಸರಿಯಲ್ಲ ಎಂದನಿಸಬಹುದು. ಆದರೆ, ನಮ್ಮ ಅಕ್ಕಪಕ್ಕದ ಚಿತ್ರರಂಗಗಳು ಎಷ್ಟು ವ್ಯವಸ್ಥಿತವಾಗಿ ಮತ್ತು ವೃತ್ತಿಪರವಾಗಿ ಕೆಲಸ ಮಾಡುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ. ಅಲ್ಲಿ ಪ್ರತಿ ಚಿತ್ರಕ್ಕೂ ಮುನ್ನ ನಟರ ಮತ್ತು ನಿರ್ಮಾಪಕರ ನಡುವೆ ಒಪ್ಪಂದವಾಗುತ್ತದೆ. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು. ಅದರಂತೆ ಎಲ್ಲರೂ ನಡೆದುಕೊಳ್ಳಬೇಕು. ಅದು ತಪ್ಪಿದರೆ ಬೇರೆ ಸಂಘಟನೆಗಳ ಮಧ್ಯಸ್ಥಿಕೆ, ನ್ಯಾಯ, ಪಂಚಾಯ್ತಿ ಎಲ್ಲವೂ ಇದ್ದೇ ಇದೆ. ಆದರೆ, ಮಾಡಿಕೊಂಡ ಕರಾರನ್ನು ಮುರಿಯುವಂತಿಲ್ಲ. ಎಲ್ಲರೂ ಅದಕ್ಕೆ ತಲೆಬಾಗುವುದರಿಂದಲೇ ಸಿನಿಮಾಗಳು ಸುಸೂತ್ರವಾಗಿ ತಯಾರಾಗುತ್ತಿವೆ ಮತ್ತು ಬಿಡುಗಡೆಯಾಗುತ್ತಿವೆ.

ಪ್ರಮುಖವಾಗಿ ನಟರು ಇಷ್ಟಬಂದ ಹಾಗೆ ದುಡ್ಡು ಪಡೆಯುವಂತಿಲ್ಲ ಅಥವಾ ಸಂಭಾವನೆಯನ್ನು ಚಿತ್ರದ ಮಧ್ಯೆ ಏರಿಸುವಂತಿಲ್ಲ. ಒಪ್ಪಿಕೊಂಡಿರುವ ತಮ್ಮ ಸಂಭಾವನೆಯ ಶೇ. 20ರಷ್ಟನ್ನು ಮೊದಲು ಅಡ್ವಾನ್ಸ್ ಆಗಿ ಪಡೆಯಬೇಕು. ಚಿತ್ರೀಕರಣ ಮುಗಿದ ಮೇಲೆ ಶೇ. 25ರಷ್ಟು, ಡಬ್ಬಿಂಗ್ ನಂತರ 25 ಪರ್ಸೆಂಟ್ ಮತ್ತು ಬಿಡುಗಡೆಗೆ ಮುನ್ನ ಬಾಕಿ ಹಣವನ್ನು ನಿರ್ಮಾಪಕರಿಂದ ಪಡೆಯಬೇಕು. ಕಲಾವಿದರು ಒಪ್ಪಿಕೊಂಡ ಡೇಟ್‍ಗಳ ಜೊತೆಗೆ ರೀಶೂಟ್, ಪ್ಯಾಚ್‍ವರ್ಕ್‍ಗೆಂದು ಐದು ದಿನಗಳ ಕಾಲ ಹೆಚ್ಚುವರಿ ದಿನಗಳನ್ನು ಮೀಸಲಿಡಬೇಕು. ಅನಾರೋಗ್ಯ ಮುಂತಾದ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಒಪ್ಪಿಕೊಂಡ ಸಮಯದಲ್ಲಿ ಚಿತ್ರೀಕರಣ ಮುಗಿಸಿಕೊಡಬೇಕು. ಚಿತ್ರದ ಪ್ರಚಾರಕ್ಕೆ ಸಹಕರಿಸಬೇಕು. ನಟರಿಗೆ ತಮ್ಮ ವಾಸ್ತವ್ಯದಿಂದ ಚಿತ್ರೀಕರಣ ಸ್ಥಳದವರೆಗೂ ಹೋಗುವುದಕ್ಕೆ ಒಂದು ಕಡೆ conveyance ಮಾತ್ರ ಕೊಡಲಾಗುವುದು. ಇನ್ನೊಂದನ್ನು ನಟರೇ ಭರಿಸಬೇಕು. ನಟರಿಗೆ ಯಾವ ರೂಮು ಕೊಡಬೇಕು, ಎಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಬೇಕು ಎಂಬುದು ನಿರ್ಮಾಪಕರ ವಿವೇಚನೆಗೆ ಬಿಟ್ಟಿದ್ದು. ಸಿಗರೇಟ್, ಮದ್ಯ ಸೇರಿದಂತೆ ಕಲಾವಿದರ ವೈಯಕ್ತಿಕ ಖರ್ಚಿಗೂ ನಿರ್ಮಾಪಕರಿಗೂ ಯಾವುದೇ ಸಂಬಂಧವಿಲ್ಲ. ಅದನ್ನು ಕಲಾವಿದರೇ ಭರಿಸಬೇಕು. ನಟಿಯರ ಜೊತೆಗೆ ಯಾರಾದರೂ ಸಂಬಂಧಿಕರು ಅಥವಾ ಸಹಾಯಕರು ಬಂದರೆ, ಅವರ ವಾಸ್ತವ್ಯ ಮತ್ತು ಊಟದ ಜವಾಬ್ದಾರಿ ಮಾತ್ರ ನಿರ್ಮಾಪಕರದ್ದು.
ನಟರ ಕಾಸ್ಟ್ಯೂಮ್ ಮತ್ತು ಮೇಕಪ್‍ಗೆ ನಿರ್ಮಾಪಕರು ವ್ಯವಸ್ಥೆ ಮಾಡಿಕೊಡಬೇಕು. ಒಂದು ಪಕ್ಷ ನಟರೇ ತಮಗೆ ಬೇಕಾದವರನ್ನು ಕರೆದುಕೊಂಡು ಬಂದರೆ, ಅವರಿಗೆ ಊಟದ ವ್ಯವಸ್ಥೆಯನ್ನು ಮಾತ್ರ ನಿರ್ಮಾಪಕರು ಮಾಡಬೇಕು. ಮಿಕ್ಕಂತೆ ಎಲ್ಲ ಖರ್ಚುಗಳನ್ನು ನಟರೇ ನೋಡಿಕೊಳ‍್ಳಬೇಕು. ಒಂದು ಪಕ್ಷ ನಟರಿಂದ ನಿರ್ಮಾಪಕರಿಗೆ ಯಾವುದೇ ನಷ್ಟವಾದರೂ ಅಥವಾ ಕಲಾವಿದರ ಅಸಹಕಾರದಿಂದ ಚಿತ್ರ ವಿಳಂಬವಾದರೆ, ಆ ನಷ್ಟವನ್ನು ಕಲಾವಿದರೇ ಭರಿಸಿಕೊಡಬೇಕು. ಕರಾರಿನಲ್ಲಿರುವ ಸಂಭಾವನೆಯನ್ನು ಹೊರತುಪಡಿಸಿ ಕಲಾವಿದರು, ನಿರ್ಮಾಪಕರಿಂದ ಬೇರೇನು ಸೌಲಭ‍್ಯಗಳನ್ನುನಿರೀಕ್ಷಿಸುವಂತಿಲ್ಲ. ನಟರಿಗೆ ಚಿತ್ರದ ಬೇರೆ ರಾಜ್ಯಗಳ, ಓವರ್‍ಸೀಸ್ ಅಥವಾ ಡಬ್ಬಿಂಗ್ ಮತ್ತು ಸ್ಯಾಟಿಲೈಟ್ ಹಕ್ಕುಗಳನ್ನು ಪಡೆಯುವ ಹಕ್ಕಿಲ್ಲ. ನಟರು ಬೇರೆ ಕಲಾವಿದರ ಆಯ್ಕೆಯಲ್ಲಿ ತಲೆತೂರಿಸುವಂತಿಲ್ಲ.
ಇದು ಕೆಲವು ಉದಾಹರಣೆಗಳು ಅಷ್ಟೇ. ಈ ತರಹದ ಹಲವು ಷರತ್ತುಗಳಿವೆ ಮತ್ತು ಅಗ್ರೀಮೆಂಟ್ ಅರ್ಜಿಯು AMMA ವೆಬ್‍ಸೈಟ್‍ನಲ್ಲೇ ಸಿಗುತ್ತದೆ. ಇದು ಬರೀ ಮಲಯಾಳಂ ಕಲಾವಿದರ ಸಂಘಕ್ಕೆ ಮಾತ್ರ ಸೀಮಿತವಲ್ಲ, ಬೇರೆ ಸಂಘ-ಸಂಸ್ಥೆಗಳಿಗೂ ಅದರದ್ದೇ ಆದ ಒಪ್ಪಂದಗಳಿವೆ. ಇಷ್ಟೊಂದು ಕರಾರುವಾಕ್ಕಾದ ಷರತ್ತುಗಳಿರುವುದರಿಂದ ಬಹಳಷ್ಟು ಗೊಂದಲಗಳು ನಿವಾರಣೆಯಾಗುತ್ತದೆ. ಇತ್ತೀಚೆಗೆ ನಡೆದ ರಣವೀರ್ ಸಿಂಗ್ ಪ್ರಕರಣದಲ್ಲಿ ಅಗ್ರೀಮೆಂಟ್ ಸೇರಿದಂತೆ ಹಲವು ಸಬೂತುಗಳನ್ನು ‘ಡಾನ್ 3’ ಚಿತ್ರತಂಡವು ನೀಡಿದ್ದರಿಂದಲೇ, ಸಿಂಗ್ ಈ ವಿಷಯದಲ್ಲಿ ತಪ್ಪೆಸಗಿದ್ದಾರೆ ಮತ್ತು ಅವರ ಚಿತ್ರಗಳಿಗೆ ಸಹಕಾರ ಕೊಡುವುದಿಲ್ಲ ಎಂದು Federation of Western India Cine Employees (FWICE) ಸಂಸ್ಥೆಯು ನಿರ್ಧಾರ ತೆಗೆದುಕೊಂಡಿತು. ಆ ನಂತರ ಶಿಕ್ಷೆಯನ್ನು ಕಾರಣಾಂತರಗಳಿಂದ ಹಿಂದಕ್ಕೆ ಪಡೆದಿದ್ದು ಬೇರೆ ಮಾತು.
ಚಿತ್ರರಂಗದಲ್ಲಿ ಗೊಂದಲ ಮತ್ತು ವಿವಾದಗಳನ್ನು ತಪ್ಪಿಸುವುದಕ್ಕೆ ಒಪ್ಪಂದಗಳಂತಹ ಕ್ರಮಗಳು ಅಗತ್ಯ. ಕನ್ನಡ ಚಿತ್ರರಂಗ ಈ ನಿಟ್ಟಿನಲ್ಲಿ ಬಹಳ ಹಿಂದುಳಿದಿದೆ. ಈ ವಿಷಯದಲ್ಲಿ ಕಳೆದ ವರ್ಷ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಕೆಲವು ನಿಯಮಾವಳಿಗಳನ್ನು ರೂಪಿಸುವುದಕ್ಕೆ ಮುಂದಾದರೂ, ಮುಂದೇನಾಯಿತೋ ಗೊತ್ತಾಗಲಿಲ್ಲ. ಇನ್ನಾದರೂ ವ್ಯವಸ್ಥಿತವಾದ ಮತ್ತು ವೃತ್ತಿಪರವಾದ ಒಂದಿಷ್ಟು ನಿಯಮಗಳು ಬಂದರೆ, ಆಗ ಗೊಂದಲಗಳನ್ನು ತಪ್ಪಿಸಬಹುದೇನೋ?


