‘ಸರಳ ಸುಬ್ಬರಾವ್’ ಚಿತ್ರದ ನಂತರ ಅಜೇಯ್ ರಾವ್, ‘ಪಾರ್ಟ್ನರ್’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಈಗಾಗಲೇ ಸುದ್ದಿಯಾಗಿದೆ. ಚಿತ್ರ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಚಿತ್ರದ ‘ಅಮೋರಾ, ಅಮೋರಾ …’ ಎಂಬ ಹಾಡನ್ನು ಸೋಮವಾರ ರಾತ್ರಿ, ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡಲಾಗಿದೆ. ನಿರ್ಮಾಪಕ ಹರೀಶ್ ದೇವಿತಂದ್ರೆ ಅವರಿಗೆ ಪಾಠ ಹೇಳಿಕೊಟ್ಟ ಗುರುಗಳಾದ ನಾಗಭೂಷಣ್ ದಂಪತಿ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.
‘ಪಾರ್ಟ್ನರ್’ ಚಿತ್ರವನ್ನು HPR ಎಂಟರ್‍ಪ್ರೈಸಸ್ ಬ್ಯಾನರ್ ಅಡಿ ಹರೀಶ್ ದೇವಿತಂದ್ರೆ ನಿರ್ಮಿಸುತ್ತಿದ್ದು, ಶಿವತೇಜಸ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಜೇಯ್ ರಾವ್‍ಗೆ ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸಿದ್ದಾರೆ. ನಾಗಾರ್ಜುನ ಶರ್ಮ ಬರೆದಿರುವ ‘ಅಮೋರಾ ಅಮೋರಾ …’ ಹಾಡಿನ ವಿಶೇಷತೆಯಂದರೆ, ಬಹಳ ವರ್ಷಗಳ ನಂತರ ಕುನಾಲ್ ಗಾಂಜಾವಾಲ ಈ ಹಾಡು ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ನಕುಲ್ ಅಭಯಂಕರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
‘ಪಾರ್ಟ್ನರ್’ Gen Zಗಳ ಲವ್, ಬ್ರೇಕಪ್, ಲಿವಿಂಗ್ ಟುಗೆದರ್ ನಂತಹ ವಿಷಯಗಳ ಸುತ್ತ ಸುತ್ತುತ್ತದೆ. ಜೀವನ ಎಂದರೆ ಇದಲ್ಲ, ಅದು ಬೇರೇನೇ ಇದೆ ಎಂದು ನಿರ್ದೇಶಕ ಶಿವತೇಜಸ್ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅಜೇಯ್ ರಾವ್, ‘ನನ್ನ ಮನಸಿಗೆ ತುಂಬಾ ಹತ್ತಿರವಾದ ಚಿತ್ರವಿದು. ನನ್ನ ಹೃದಯದ ಒಂದು ಭಾಗವನ್ನೇ ಇದರಲ್ಲಿ ಹಾಕಿದ್ದೇನೆ. ಕೆಲವು ಸಿನಿಮಾಗಳು ಆರಂಭದಿಂದಲೇ ಏನೋ ಒಂದು ಮ್ಯಾಜಿಕ್ ಮಾಡುತ್ತೆ ಅನಿಸುತ್ತದೆ. ಇದು ಸಹ ಅಂಥದ್ದೇ ಚಿತ್ರ. ಈ ಚಿತ್ರದ ಮೇಲೆ ನನಗೆ ತುಂಬಾ ನಂಬಿಕೆ ಇದೆ. ಮಾನವೀಯ ಮೌಲ್ಯಗಳನ್ನು, ಭಾವನೆಗಳನ್ನು ಬಹಳ ಚೆನ್ನಾಗಿ ಹೇಳಲಾಗಿದೆ’ ಎಂದರು.
ನಿರ್ದೇಶಕ ಶಿವತೇಜಸ್ ಮಾತನಾಡಿ, ‘‘ದಿಲ್ ಪಸಂದ್’ ಚಿತ್ರದಿಂದ ನನ್ನ ಮತ್ತು ಹರೀಶ್ (ನಿರ್ಮಾಪಕ) ಸ್ನೇಹ ಆರಂಭವಾಯ್ತು. ಎಲ್ಲರಿಗೂ ಒಬ್ಬ ಪಾರ್ಟ್ನರ್ ಇರುತ್ತಾರೆ. ಅದನ್ನೇ ಮೂಲವಾಗಿ ಇಟ್ಟುಕೊಂಡು, ಈ ಸಿನಿಮಾ ಮಾಡಿದ್ದೇನೆ. ಯಾವುದೇ ಮುಜುಗರ ಇಲ್ಲದೆ ಕುಟುಂಬ ಸಮೇತ ಕೂತು ನೋಡುವಂಥ ಸಿನಿಮಾ ನಿರ್ಮಿಸಿದ್ದೇವೆ. ಅಜೇಯ್ ಚಿತ್ರದ ಸ್ಯಾಟಲೈಟ್ ಹಕ್ಕುಗಳಿಗೆ ಸಿಗುವ ಮೊತ್ತದ ಅರ್ಧ ಹಣವನ್ನು ಆನಂದ್ ಆಡಿಯೋ ಕೊಟ್ಟು, ಹಕ್ಕುಗಳನ್ನು ಪಡೆದಿದೆ’ ಎಂದರು.
ನಾಯಕಿ ಬೃಂದಾ ಆಚಾರ್ಯ ಮಾತನಾಡಿ, ‘ನನ್ನ ಚಿತ್ರಜೀವನದಲ್ಲೇ ‘ಅಮೋರಾ …’ ಅತ್ಯುತ್ತಮವಾದ ಹಾಡು. ಒಂದೊಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ ಖುಷಿ ಇದೆ’ ಎಂದರು.
‘ಪಾರ್ಟ್ನರ್’ ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿದ್ದು, ಚಿತ್ರದಲ್ಲಿ ಅಜೇಯ್ ರಾವ್, ಬೃಂದಾ ಆಚಾರ್ಯ, ರಂಗಾಯಣ ರಘು, ಗೌರವ್ ಶೆಟ್ಟಿ, ಅರವಿಂದ ರಾವ್, ಚಿತ್ಕಲಾ ಬಿರಾದರ್ ಮುಂತಾದವರು.


