ಕನ್ನಡ ಚಿತ್ರರಂಗ ಮುಚ್ಚುವ ಹಂತಕ್ಕೆ ಬಂದಿದೆಯಾ?
ಕನ್ನಡ ಚಿತ್ರರಂಗ ICUನಲ್ಲಿ ಇದೆಯಾ?
ಕನ್ನಡ ಚಿತ್ರರಂಗ ಕೊನೆಯ ದಿನಗಳನ್ನು ಎಣಿಸುತ್ತಿದೆಯೇ?
ಇಂಥದ್ದೊಂದು ಚರ್ಚೆ ಕೆಲವು ತಿಂಗಳುಗಳಿಂದ ನಡೆಯುತ್ತಲೇ ಇದೆ. ಅದಕ್ಕೆ ಕಾರಣ, ಈ ವರ್ಷದ ಮೊದಲ ಆರೂವರೆ ತಿಂಗಳಲ್ಲಿ 130ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗಿವೆ. ಆದರೆ, ಅದರಲ್ಲಿ ಹಾಕಿದ ಬಂಡವಾಳವನ್ನು ಕಂಡಿರುವುದು ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ. ಹಾಕಿದ ದುಡ್ಡು ಮಾಡುವ ಅಥವಾ ಲಾಭ ಮಾಡುವ ಮಾತು ಅತ್ಲಾಗಿರಲಿ, ಪ್ರೇಕ್ಷಕರು ಮೆಚ್ಚುಗೆ ಪಡೆದ ಚಿತ್ರಗಳು ಸಹ ಬೆರಳಣಿಕೆಯಷ್ಟೇ. ಹೀಗಿರುವಾಗ ಪ್ರೇಕ್ಷಕರು ಚಿತ್ರಗಳನ್ನು ನೋಡುವುದಕ್ಕೆ ಅದೆಷ್ಟು ಹಿಂದೇಟು ಹಾಕುತ್ತಿದ್ದಾರೋ, ಜನ ಚಿತ್ರ ನಿರ್ಮಿಸುವುದಕ್ಕೂ ಅಷ್ಟೇ ಹಿಂದೇಟು ಹಾಕುತ್ತಿದ್ದಾರೆ ಎಂಬುದು ನಿಜ. ನಿರ್ಮಾಪಕರು ಮತ್ತು ಪ್ರೇಕ್ಷಕರಿಲ್ಲದೆ ಚಿತ್ರರಂಗ ಉಳಿಯುವುದಾದರೂ ಹೇಗೆ? ಅದೇ ಕಾರಣಕ್ಕೆ ಚಿತ್ರರಂಗ ಮುಚ್ಚಿ ಹೋಗುವ ಪರಿಸ್ಥಿತಿ ಬಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ನಿಜಕ್ಕೂ ಇದು ನಿಜವೇ. ಅಂಕಿ-ಅಂಶಗಳು ಬೇರೆಯದೇ ಏನನ್ನೋ ಹೇಳುತ್ತವೆ. ಬಹುಶಃ ಯಾವ ವರ್ಷವೂ ಇಷ್ಟೊಂದು ಸಂಖ್ಯೆಯ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಉದಾಹರಣೆಗಳಿಲ್ಲ. ಈ ವರ್ಷ ತೆರೆಕಂಡ 130ಕ್ಕೂ ಹೆಚ್ಚು ಚಿತ್ರಗಳಲ್ಲಿ ಬೆರಳಣಿಕೆಯಷ್ಟು ಹಳಬರು ಬಿಟ್ಟರೆ, ಮಿಕ್ಕಂತೆ ಚಿತ್ರ ನಿರ್ಮಿಸಿದವರೆಲ್ಲಾ ಹೊಸ ನಿರ್ಮಾಪಕರೇ. ಕನ್ನಡ ಹಳೆಯ ನಿರ್ಮಾಪಕರು ಅಥವಾ ನಿರ್ಮಾಣ ಸಂಸ್ಥೆಗಳು ಚಿತ್ರ ಮಾಡುವ ಧೈರ್ಯ ತೋರುತ್ತಿಲ್ಲ. ಈ ವರ್ಷ ಚಿತ್ರ ನಿರ್ಮಿಸಿದವರ ಪೈಕಿ ಶೇ. 95ರಷ್ಟು ಹೊಸ ನಿರ್ಮಾಪಕರು. ಅವರಲ್ಲೂ ಹಳಬರನ್ನಿಟ್ಟುಕೊಂಡು ಚಿತ್ರ ಮಾಡಿದವರೆ ಸಂಖ್ಯೆ ಕಡಿಮೆಯೇ. ಬಹುತೇಕ ನಿರ್ಮಾಪಕರು ಹೊಸ ನಟ-ನಟಿಯರೊಂದಿಗೆ ಚಿತ್ರ ಮಾಡಿದ್ದಾರೆ ಎನ್ನುವುದು ಗಮನಾರ್ಹ ವಿಷಯ.
ಇವತ್ತು ಜನಪ್ರಿಯ ನಟರ ಚಿತ್ರಗಳೆಂದರೆ ಕನಿಷ್ಠ 10 ಕೋಟಿ ರೂ.ಗಳಾದರೂ ಬೇಕು ಎನ್ನುವಂತಹ ಪರಿಸ್ಥಿತಿ ಇದೆ. ಅದರ ಕಡಿಮೆ ಚಿತ್ರ ಮಾಡಿದರೆ ತಮ್ಮ ಲೆವೆಲ್ಲಿಗೆ ಕಡಿಮೆ ಎಂದು ಭಾವಿಸುವ ಹಲವು ಹೀರೋಗಳಿದ್ದಾರೆ. ಕೆಲವರು ಕಥೆ ಕೇಳುವುದಿಲ್ಲ. ತಮ್ಮ ಪಾತ್ರಗಳನ್ನು ಕೇಳುವುದಿಲ್ಲ. ತಮ್ಮ ಸಂಭಾವನೆ ಮೊದಲು ಹೇಳಿಬಿಡುತ್ತಾರಂತೆ. ಸಾಲದ್ದಕ್ಕೆ, ಚಿತ್ರಕ್ಕೆ ಇಷ್ಟೇ ಬಂಡವಾಳ ಹಾಕಬೇಕು ಎನ್ನುತ್ತಾರಂತೆ. ಬಜೆಟ್ ಹಾಕುವುದು ಕಥೆಗೆ ತಕ್ಕ ಹಾಗೆ. ಆದರೆ, ಇಲ್ಲಾಗುತ್ತಿರುವುದು ಉಲ್ಟ. ಬಜೆಟ್ ಮೊದಲು ಗೊತ್ತು ಮಾಡಿ, ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡಲಾಗುತ್ತಿದೆ. ಹೋಗಲಿ ಅಷ್ಟು ಬಜೆಟ್ ಹಾಕಿ ಸಿನಿಮಾ ಮಾಡಿದರೆ, ಮರಳಿ ದುಡ್ಡು ಕೊಡಿಸುವುದಕ್ಕೆ ಸಾಧ್ಯವಾ? ಹಾಕಿದ ಬಂಡವಾಳ ಬಿಡಿ, ಅದರರ್ಧಷ್ಟು recover ಮಾಡಲು ಜನಪ್ರಿಯ ನಟರಿಗೆ ಕಷ್ಟ. ಎಷ್ಟೋ ನಟರ ಚಿತ್ರಗಳ ಸ್ಯಾಟಿಲೈಟ್ ಅಥವ ಡಿಜಿಟಲ್ ಹಕ್ಕುಗಳು ಮಾರಾಟವಾಗುತ್ತಿಲ್ಲ. ಆದರೂ ಸಣ್ಣ ಮೊತ್ತಕ್ಕೆ ಆಗುತ್ತಿದೆ. ಇನ್ನು, ಅಭಿಮಾನಿಗಳು ಸಹ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುತ್ತಿಲ್ಲ. ಹಾಗಿರುವಾಗ, ಹಾಕಿದ ದುಡ್ಡು ಬರುವುದು ಹೇಗೆ? ಇದು ಎಲ್ಲಾ ಹೀರೋಗಳಿಗೂ ಗೊತ್ತಿದೆ. ಆದರೆ, ಒಣಪ್ರತಿಷ್ಠೆ ಬಿಡಬೇಕಲ್ಲಾ …

ಈ ಪರಿಸ್ಥಿತಿ ಬಹಳಷ್ಟು ಹೊಸ ನಿರ್ಮಾಪಕರಿಗೆ ಅರ್ಥವಾಗಿದೆ. ಹಾಗಾಗಿಯೇ ಅವರ್ಯಾರು ಜಪ್ಪಯ್ಯ ಎಂದರು ಹಳಬರ ಹತ್ತಿರ ಹೋಗುತ್ತಿಲ್ಲ. ಅವರೆಲ್ಲಾ ಹೊಸಬರ ಪರ ನಿಲ್ಲುತ್ತಿದ್ದಾರೆ. ಹೊಸಬರ ಕನಸುಗಳಿಗೆ ನೀರೆರೆಯುತ್ತಿದ್ದಾರೆ. ಈ ವರ್ಷ ಆಷಾಡಕ್ಕೂ ಮೊದಲು ಕನಿಷ್ಠ 40 ಚಿತ್ರಗಳು ಸೆಟ್ಟೇರಿವೆ. ‘ನಾರಿ’, ‘ಪ್ಯಾರಡಾಕ್ಸ್’, ‘ಫಾರೆವರ್’, ‘ರಾ ರಾ RX’, ‘ಕರ್ಣಾಟಬಲಂ ಅಜೇಯಂ’, ‘ಪಳಾರ್’, ‘ಸೈನಿಕ 2’, ‘ಮದರ್’, ‘ದೇವಿ’, ‘ಟಗರು ಪಲ್ಯ’ ನಿರ್ದೇಶಕ ಉಮೇಶ್ ಕೃಪ ಹೊಸ ಚಿತ್ರ, ‘ಕಡಲ್ ಕೋಟೆ’, ‘ರುದ್ರ ಕಾಲ’, ‘NH 66’, ‘ದೇವಿ ಮಹಾತ್ಮೆ’, ‘ಕವಳ’, ‘ತಮ್ಮ ಸುಖಾಗಮನ ಬಯಸುವ’, ‘ಡೈರೆಕ್ಟರ್ಸ್ ಕಟ್’, ‘ದರ್ಶನ’, ‘ಸೀತಾ ರಾಮ ರಾಜು’, ‘ಮಲ್ಕೊಳ್ಳೊ ಮಂಜುನಾಥ’, ‘ಸೆಲೆಬ್ರಿಟಿ’, ಆಯುಷ್ ಉಪೇಂದ್ರ ಹೊಸ ಚಿತ್ರ, ‘ನೆಕ್ಸ್ಟ್ ಲೆವೆಲ್’ … ಹೀಗೆ ಪಟ್ಟಿ ಸಾಗುತ್ತದೆ. ಇವೆಲ್ಲಾ ಸುದ್ದಿಯಾದ ಚಿತ್ರಗಳು. ಸುದ್ದಿಯೇ ಆಗದೇ ತೆರೆಮರೆಯಲ್ಲೇ ಪ್ರಾರಂಭವಾದ ಚಿತ್ರಗಳು ಅದೆಷ್ಟಿವೆಯೋ ಗೊತ್ತಿಲ್ಲ. ಈ ಪೈಕಿ, ಗಣೇಶ್, ಉಪೇಂದ್ರ, ಯೋಗಿ, ವಸಿಷ್ಠ ಸಿಂಹ, ದಿಗಂತ್‍ರಂತಹ ಹಳಬರ ಚಿತ್ರಗಳನ್ನು ಬಿಟ್ಟರೆ, ಮಿಕ್ಕೆಲ್ಲವೂ ಹೊಸಬರ ಚಿತ್ರಗಳೇ.
ಇದು ಹೊಸದಾಗಿ ಸೆಟ್ಟೇರಿರುವ ಚಿತ್ರಗಳಾದರೆ, ಬಿಡುಗಡೆಯಾದ ಚಿತ್ರಗಳಲ್ಲೂ ಒಂದು ಆಸಕ್ತಿಕರ ವಿಷಯವಿದೆ. ಈ ವರ್ಷ ಬಿಡುಗಡೆಯಾದ ಹಲವು ಚಿತ್ರಗಳು ಹೋಂ ಪ್ರೊಡಕ್ಷನ್ ಚಿತ್ರಗಳು. ತಮ್ಮನ್ನೋ, ತಮ್ಮ ಕುಟುಂಬದವರನ್ನೋ ಪರಿಚಯಿಸುವುದಕ್ಕೆ ಮಾಡಿಕೊಂಡ ಚಿತ್ರಗಳು. ತಮ್ಮ ಪ್ರತಿಭೆಗೆ ಚಿತ್ರರಂಗದಲ್ಲಿ ಮನ್ನಣೆ ಸಿಗುತ್ತಿಲ್ಲವೆಂಬ ಕಾರಣಕ್ಕೆ, ಅದನ್ನೇ ಸವಾಲಾಗಿ ಸ್ವೀಕರಿಸಿ, ತಮ್ಮ ದುಡ್ಡಲ್ಲೇ ಉತ್ತರ ಹುಡುಕುವ ಪ್ರಯತ್ನಗಳಿವು. ಕೆಲವರು ತಾವೇ ನಿರ್ಮಾಪಕರಾಗಿ, ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದರೆ, ಇನ್ನೂ ಕೆಲವರು ಚಿತ್ರರಂಗದಲ್ಲಿ ಸಾಕಷ್ಟು ಸೈಕಲ್ ಹೊಡೆದು, ಎಲ್ಲೂ ಬೆಲೆ ಸಿಗದೆ, ತಾವೇ ನಟನೆ-ನಿರ್ಮಾಣ-ನಿರ್ದೇಶನ ಮತ್ತು ಇನ್ನೂ ಏನೇನು ಜವಾಬ್ದಾರಿ ಹೊರುವುದಕ್ಕೆ ಸಾಧ್ಯವೋ ಅವೆಲ್ಲವನ್ನೂ ಮಾಡಿದ ಉದಾಹರಣೆಗಳೂ ಇವೆ.
ಎರಡು ವಾರಗಳ ಹಿಂದೆ ಬಿಡುಗಡೆಯಾದ ‘ಶ್ರೀಕೃಷ್ಣ’ ಚಿತ್ರದ ನಾಯಕ ಶಂಕರ್ ರಾಜ ವರ್ಮ, ಆ ಚಿತ್ರ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದರು. ‘ರಕ್ಕಿ’ ಚಿತ್ರದ ಮೂಲಕ ಸುರೇಶ್ ಸಾಲಿಗ್ರಾಮ ತಮ್ಮ ಮಗ ರಕ್ಕಿಯನ್ನು ಕನ್ನಡ ಚಿತ್ರರರಂಗಕ್ಕೆ ನಾಯಕನನ್ನಾಗಿ ಪರಿಚಯಿಸಿದರು. ಅದೇ ರೀತಿ ‘ಲವ್ ಸೀಸನ್ಸ್’ ಚಿತ್ರದ ಮೂಲಕ ತಮ್ಮ ಮಗ ಮುಕುಂದನನ್ನು ಪರಿಚಯಿಸಿದ್ದರು ಎನ್.ಆರ್ ಮಂಜುನಾಥ್. ಈ ಹಿಂದೆ ಎರಡು ಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ, ಆ ಚಿತ್ರಗಳಿಗೆ ನಾಯಕನಾಗಿದ್ದ ಹರೀಶ್ ಜಲಗೆರೆ, ಇತ್ತೀಚೆಗೆ ಬಿಡುಗಡೆಯಾದ ‘ಬಾಯ್ಸ್ ನೆವರ್ ಕಾಂಪ್ರೋಮೈಸ್’ ಚಿತ್ರದ ಮೂಲಕ ನಿರ್ದೇಶಕನಾಗಬೇಕೆಂಬ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ‘ದೊಡ್ಮನ್ಸ’, ‘ಮೃತ್ಯುದೇವತೆ’, ‘ಶೇರ್’, ‘ಕ್ಯಾಲೆಂಡರ್’, ‘ಆಲ್ಫಾ’, ‘ಘಾರ್ಗಾ’, ‘ಮತ್ತೆ ಮಳೆ ಹೊಯ್ಯುತಿದೆ’, ‘ಗೊಗ್ಗಯ್ಯ’, ‘ಕರಿಕಾಡ’, ‘ನಾನು ಕರುಣಾಕರ’, ‘ಸೂರಿ ಅಣ್ಣ’ … ಹೀಗೆ ಪಟ್ಟಿ ಬೆಳೆಯುತ್ತದೆ.

ಬರೀ ಬಿಡುಗಡೆಯಾದ ಚಿತ್ರಗಳಷ್ಟೇ ಅಲ್ಲ, ಇತ್ತೀಚೆಗೆ ಶುರುವಾದ ಚಿತ್ರಗಳಲ್ಲೂ ಈ ಟ್ರೆಂಡ್ ಗಮನಿಸಬಹುದು. ‘ನಾರಿ’ ಚಿತ್ರಕ್ಕೆ ನಾಯಕ ರವಿ ಕಲ್ಯಾಣ್ ತಂದೆ-ತಾಯಿಯೇ ನಿರ್ಮಾಪಕರು. ಅವರು ತಮ್ಮ ಮಗ ಹೀರೋ ಆಗಲಿ ಎಂದು ದುಡ್ಡು ಹಾಕಿ ನಿರ್ಮಾಪಕರಾಗುತ್ತಿದ್ದಾರೆ. ಶಾಸಕ-ನಟ ಸಿ.ಪಿ. ಯೋಗೀಶ್ವರ್ ತಮ್ಮ ಮಗನನ್ನು ‘ಕರ್ನಾಟಕ ಬಲಂ ಅಜೇಯಂ’ ಎಂಬ ತಮ್ಮ ಸಂಸ್ಥೆಯ ಹೊಸ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಅದು ಮುಗಿಯುತ್ತಿದ್ದಂತೆಯೇ, ‘ಸೈನಿಕ 2’ ಎಂಬ ಚಿತ್ರವನ್ನು ಪ್ರಾರಂಭಿಸಲಿದ್ದಾರೆ. ಅಶ್ವಿನ್ ಅಭಿನಯದ ‘ಸೆಲೆಬ್ರಿಟಿ’ ಚಿತ್ರದ ನಿರ್ಮಾಣದಲ್ಲಿ ಅವರ ಪತ್ನಿ ತೊಡಗಿಸಿಕೊಂಡಿದ್ದಾರೆ.
ಇವೆಲ್ಲವೂ ಕೆಲವು ಉದಾಹರಣೆಗಳಷ್ಟೇ. ಕಳೆದ ಎರಡು ವರ್ಷಗಳಲ್ಲಿ ಇಂಥ ಹಲವು ಉದಾಹರಣೆಗಳು ಸಿಗುತ್ತವೆ. ಈ ಪೈಕಿ ಬಹಳಷ್ಟು ಜನ ಮುಂದೆ ಚಿತ್ರಗಳನ್ನು ನಿರ್ಮಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಹೀಗೆ ಚಿತ್ರ ಮಾಡುವವರಿಗೂ ತಾವೆಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದ್ದೇವೆ ಎಂಬುದು ಗೊತ್ತಿದೆ. ಏಕೆಂದರೆ, ಹೊಸಬರ ಚಿತ್ರಗಳ ಸಂಖ್ಯೆ ಅತಿಯಾಗಿ ಪ್ರೇಕ್ಷಕರ ಮಟ್ಟದಲ್ಲಿ ಒಂದು ತಿರಸ್ಕಾರ ಭಾವನೆ ಮೂಡಿದೆ. ಅದು ಚಿತ್ರರಂಗಕ್ಕೆ ಬರುವವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಆದರೂ ಧೈರ್ಯ ತೋರಿ ಚಿತ್ರರಂಗಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗೆ ರಿಸ್ಕ್ ತೆಗೆದುಕೊಳ್ಳುವವರು ಸಾಕಷ್ಟು ಜನರಿರುವುದರಿಂದ, ನಿರಂತರವಾಗಿ ಚಿತ್ರಗಳು ನಿರ್ಮಾಣವಾಗುತ್ತಿರುವುದರಿಂದ ಚಿತ್ರರಂಗ ಮುಳುಗುತ್ತದೆ, ಮುಚ್ಚಿಹೋಗುತ್ತದೆ ಎಂಬ ಭಯ ಬೇಡ. ಆದರೆ, ಒಂದು ವಿಷಯ ಮರೆಯಬಾರದು. ಇಲ್ಲಿ ಸಂಖ್ಯೆ ಮಾತ್ರ ಮುಖ್ಯವಲ್ಲ. ಗುಣಮಟ್ಟ, ಸೃಜನಶೀಲತೆ, ಹೊಸ ಆಲೋಚನೆಗಳು, ಪ್ರಯೋಗಗಳು ಎಲ್ಲವೂ ಮುಖ್ಯ. ಕನ್ನಡದಲ್ಲಿ ಮಿಸ್ ಹೊಡೆಯುತ್ತಿರುವುದು ಅದೇ. ವಾರಂಪ್ರತಿ ಹೊಸಹೊಸ ಚಿತ್ರಗಳು ಬರುತ್ತಿವೆಯೇ ಹೊರತು, ಅಲ್ಲೇನೋ ಹೊಸದು ಕಾಣುತ್ತಿಲ್ಲ. ಬರೀ ನಮ್ಮ ಚಿತ್ರ ವಿಭಿನ್ನ ಎಂದು ಹೇಳಿಕೊಂಡರಷ್ಟೇ ಸಾಲದು, ನಿಜಕ್ಕೂ ವಿಭಿನ್ನವಾಗಿದ್ದರೆ ಮಾತ್ರ ಜನ ಬಂದು ಚಿತ್ರ ನೋಡುತ್ತಾರೆ ಎಂದು ನೆನಪಿದ್ದರೆ ಸಾಕು.


