ಇದು ಪಂಪನ ಜೀವನವನ್ನಲ್ಲ, ಕಾವ್ಯಗಳನ್ನಾಧರಿಸಿದ ಚಿತ್ರ …

ಚಂದನವನ, ಸಿನಿ ಸುದ್ದಿ

ಕಲಾತ್ಮಕ ಚಿತ್ರಗಳು ಉತ್ತುಂಗದಲ್ಲಿದ್ದ ಕಾಲದಲ್ಲಿ ಚಿತ್ರರಂಗಕ್ಕೆ ಬಂದು ಅಲ್ಲಿಂದ ನಿರಂತರವಾಗಿ ಸಿನಿಮಾಗಳನ್ನು ನಿರ್ದೇಶಿಸುತ್ತಲೇ ಬಂದವರು ಡಾ. ಬರಗೂರು ರಾಮಚಂದ್ರಪ್ಪ. ಇದುವರೆಗೂ ಹಲವು ಪ್ರಯೋಗಗಳನ್ನು ಮಾಡಿರುವ ಅವರು, ಇದೀಗ ತಮ್ಮ ನಿರ್ದೇಶನದ ‘ಮಹಾಕವಿ’ ಎಂಬ 25ನೇ ಚಿತ್ರದಲ್ಲಿ ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ

‘ಮಹಾಕವಿ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು, ಅರ್ಜುನ್‍ ಜನ್ಯ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

‘ಮಹಾಕವಿ’ಯು ಬರಗೂರರ ನಿರ್ದೇಶನದ ಇಪ್ಪತ್ತೈದನೇ ಚಿತ್ರ ಎನ್ನುವುದು ಒಂದು ವಿಶೇಷ. ಚಿತ್ರದ ಕುರಿತು ಮಾತನಾಡಿದ ಅವರು, ‘‘ಮಹಾಕವಿ’ ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿದೆ. ಇದು ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಪರಿಕಲ್ಪನೆಗಳ ದೃಶ್ಯರೂಪಕ. ಅಂದರೆ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ. 10ನೇ ಶತಮಾನದ ಅಧಿಕೃತಗೆ ಧಕ್ಕೆ ಬಾರದ ಹಾಗೆ ಈ ಚಿತ್ರವನ್ನು ನಿರ್ದೇಶಿಸುವುದು ಅಷ್ಟು ಸುಲಭವಾಗಿರಲಿಲ್ಲ’ ಎಂದರು.

ತಮ್ಮ ವೃತ್ತಿಜೀವನದಲ್ಲಿ ಇದುವರೆಗೂ ಮಾಡದ ಒಂದು ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ ಎಂದ ಕಿಶೋರ್, ‘’ಮಹಾಕವಿ’, ಆದಿಕವಿ ಪಂಪನ ಕುರಿತಾದ ಚಿತ್ರ. ಇಂತಹ ಚಿತ್ರದಲ್ಲಿ ಅಭಿನಯಿಸಿರುವುದು ಬಹಳ ಹೆಮ್ಮೆ. ವಿಲನ್ ಪಾತ್ರಗಳಲ್ಲಿ ಹೆಚ್ಚು ಅಭಿನಯಿಸುವವರಿಗೆ ಹಾಡುಗಳು ಸಿಗುವುದು ಕಡಿಮೆ. ಆದರೆ, ನನಗೆ ಈ ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರ ಸಿಕ್ಕಿದೆ. ಹಾಡುಗಳೂ ಸಿಕ್ಕಿದೆ’ ಎಂದರು.

ಚಿತ್ರಕ್ಕೆ ಶಮಿತಾ ಮಲ್ನಾಡ್‍ ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಗಾಯಕಿಯಾಗಿದ್ದ ಅವರನ್ನು ‘ಬೆಕ್ಕು’ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯನ್ನಾಗಿ ಮಾಡಿದವರು ಬರಗೂರರು. ಆನಂತರ ಅವರ ನಿರ್ದೇಶನದ ಎಲ್ಲಾ ಚಿತ್ರಗಳಿಗೂ ನಾನೇ ಸಂಗೀತ ಸಂಯೋಜನೆ ಮಾಡಿರುವುದು ಹೆಮ್ಮೆಯ ವಿಚಾರ ಎಂದರು ಶಮಿತಾ ಮಲ್ನಾಡ್.

ಬೆಳಗಾವಿಯ ಪ್ರಭು ಯತ್ನಟ್ಟಿ, ಪಿ.ಆರ್.ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಿಸಿರುವ ಈ ಚಿತ್ರದಲ್ಲಿ ಕಿಶೋರ್ ಹಾಗೂ ಅನುಷಾ ರೈ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸುಂದರರಾಜ್, ಪ್ರಮೀಳಾ ಜೋಷಾಯ್, ವತ್ಸಲಾ ಮೋಹನ್, ಕುಮಾರ್‍ ಗೋವಿಂದ್‍, ರಾಜಪ್ಪ ದಳವಾಯಿ ಮುಂತಾದವರು ನಟಿಸಿದ್ದಾರೆ.

‘ಸಿನಿಮಾ ಬಿಡುಗಡೆ ತಡೆಯೋಕೆ ಇಷ್ಟವಿಲ್ಲ; ಅದು ನನ್ನ ಚಿತ್ರ …’

Discover more from KannadaScreens

Subscribe now to keep reading and get access to the full archive.

Continue reading