ಕನ್ನಡದಲ್ಲಿ ಕುವೆಂಪು, ಡಿ.ವಿ. ಗುಂಡಪ್ಪ ಸೇರಿದಂತೆ ಕೆಲವು ಜನಪ್ರಿಯ ಸಾಹಿತಿಗಳು ಮತ್ತು ವಿದ್ವಾಂಸರ ಜೀವನಗಾಥೆ, ತೆರೆಗೆ ಬಂದಿದೆ. ಇದೀಗ ಪದ್ಮಶ್ರೀ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಜೀವನಗಾಥೆಯು ಸದ್ದಿಲ್ಲದೆ ಚಲನಚಿತ್ರವಾಗಿದೆ.
‘ಇಂದು ಎನಗೆ ಗೋವಿಂದ’ ಎಂಬ ಈ ಚಿತ್ರವನ್ನು ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ನಿರ್ಮಿಸಿದರೆ, ಕಾರ್ತಿಕ್ ಸರಗೂರು ನಿರ್ದೇಶಿಸಿದ್ದಾರೆ. ವೀಣಾ ಬನ್ನಂಜೆ ಅವರ ‘ಆತ್ಮನಿವೇದನೆ’ ಪುಸ್ತಕವನ್ನು (ಬನ್ನಂಜೆ ಗೋವಿಂದಾಚಾರ್ಯರ ಆತ್ಮಕಥನ) ಆಧರಿಸಿ ಈ ಚಿತ್ರ ಮಾಡಲಾಗಿದೆ. ಚಿತ್ರಕ್ಕೆ ಬಿ.ಆರ್ ವಿಶ್ವನಾಥ್ ಛಾಯಾಗ್ರಹಣ ಮತ್ತು ಪ್ರವೀಣ್ ಡಿ. ರಾವ್ ಅವರ ಸಂಗೀತವಿದೆ.
ಹಿರಿಯ ಬನ್ನಂಜೆಯವರಾಗಿ ಭಾಸ್ಕರ ರಾವ್ ನಟಿಸಿದ್ದಾರೆ. ಯುವ ಬನ್ನಂಜೆಯವರಾಗಿ ಕೃಷ್ಣರಾಜ ಕುತ್ಪಾಡಿ ನಟಿಸಿದ್ದಾರೆ. ಮಿಕ್ಕಂತೆ ಚಿತ್ರದಲ್ಲಿ ಲೀಲಾ ಕೃಷ್ಣ, ರಾಘವ, ಋತುಪರ್ಣ, ಸ್ನೇಹಾ ಹೆಗಡೆ, ರಘು ಬೀರೂರು, ಸುಮಾ ಶಾಸ್ತ್ರಿ, ರೋಹಿತ್ ಆಚಾರ್ ಮುಂತಾದವರು ಅಭಿನಯಿಸಿದ್ದಾರೆ.

ಮಹಾನ್ ಜ್ಞಾನಿಯೊಬ್ಬರ ಬದುಕಿನ ಕೆಲವು ಕ್ಷಣಗಳನ್ನು ಅವರು ಬೆಳೆದ ಉಡುಪಿ, ಅಂಬಲಪಾಡಿ, ಮಣಿಪಾಲದ ಸಹಜ ಪರಿಸರದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ. ಆಚಾರ್ಯರ ಬಾಲ್ಯ, ಯೌವನ, ವೈಚಾರಿಕ ವಿಚಾರಗಳ ನಡುವಿನ ಸಂಘರ್ಷ, ನಾಸ್ತಿಕತೆಯ ಭಾವ, ಸ್ವಾಧ್ಯಾಯ, ಸಂಶೋಧನೆ ಇತ್ಯಾದಿಗಳನ್ನು ಕಟ್ಟಿಕೊಡುತ್ತಲೇ ಯುವ ಬನ್ನಂಜೆಯವರು ಪತ್ರಕರ್ತರಾಗಿ, ಪ್ರವಚನಕಾರರಾಗಿ ಮಾತ್ರವಲ್ಲ ಮುಂದೆ ಮಹಾನ್ ವಿದ್ವಾಂಸರಾಗಿ ಬೆಳೆದುಬಂದ ಚಿತ್ರಣ ಇಲ್ಲಿದೆ.
ಹಾಗಾಗಿ ಈ ಚಿತ್ರವನ್ನು ಜೀವನಗಾಥೆ ಎಂಬುದಕ್ಕಷ್ಟೇ ಸೀಮಿತಗೊಳಿಸಲಾಗದು. ಅವರ ಅಂತರಂಗವನ್ನು, ಜ್ಞಾನ ಸಾಗರವನ್ನು, ಪ್ರಶ್ನಿಸುವ ಮನೋಭಾವವನ್ನು ಮತ್ತು ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನ ಎನ್ನಬಹುದು. ಸನಾತನ ಸಂಸ್ಕೃತಿಯ ಸಂಪ್ರದಾಯಗಳ ಅಂತರಾರ್ಥವನ್ನು ತಿಳಿದು ಆಚರಿಸಬೇಕು ಎಂಬುದು ಆಚಾರ್ಯರ ನಿಲುವಾಗಿತ್ತು. ಅದೆಲ್ಲವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅಷ್ಟಮಠಗಳ ಒಡನಾಟ, ಯತಿಗಳೊಡನೆ ಆತ್ಮೀಯತೆ, ದೇಶ ವಿದೇಶಗಳ ಅಧ್ಯಯನಕಾರರಿಗೆ ಜ್ಞಾನದ ನೆರವು, ಸಂಸ್ಕೃತ ಬೋಧನೆ, ಪುರಾಣಗಳಿಗೆ ವ್ಯಾಖ್ಯಾನಗಳು, ಅರ್ಥವಿವರಣೆ ಹೀಗೆ ಹಲವಾರು ದೀರ್ಘ ವಿಚಾರಗಳನ್ನು ಕಾಲಮಿತಿಯಲ್ಲಿ ತೋರಿಸುವ ಪ್ರಯತ್ನ ಇಲ್ಲಿ ನಡೆದಿದೆ.

ಸದ್ಯದಲ್ಲೇ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ಬನ್ನಂಜೆಯವರ ಅಭಿಮಾನಿಗಳಿಗಾಗಿ ಈ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.


