ಯಶ್ ಅಭಿನಯದ ‘ಟಾಕ್ಸಿಕ’ ಚಿತ್ರವು ದೊಡ್ಡ ಬ್ಲಾಕ್‍ಬಸ್ಟರ್ ಆಗಬಹುದು ಎಂಬ ನಿರೀಕ್ಷೆ ಮೊದಲ ವಾರವೇ ಸುಳ್ಳಾಗಿತ್ತು. 600 ಕೋಟಿ ಬಜೆಟ್‍ನಲ್ಲಿ ನಿರ್ಮಾಣವಾದ ಚಿತ್ರವು ಮೊದಲ ವಾರ ಕೇವಲ 312 ಕೋಟಿ ರೂ. ಮಾತ್ರ ಸಂಗ್ರಹಿಸುವಲ್ಲಿ ಯಶಸ್ವಿಯಾಗಿತ್ತು. ನಿರೀಕ್ಷಿತ ಗಳಿಕೆ ಆಗದಿರುವುದು ಪ್ರೇಕ್ಷಕರಿಂದ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಸಹ ಬಹಳ ನಿರಾಸೆ ಮೂಡಿಸಿತ್ತು.
ಇನ್ನು, ‘ಟಾಕ್ಸಿಕ್’ ಚಿತ್ರವು ಮೊದಲ ಪ್ಯಾನ್ ವರ್ಲ್ಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಚಿತ್ರವು ಕನ್ನಡವಲ್ಲದೆ, ಇಂಗ್ಲೀಷ್ ಭಾಷೆಯಲ್ಲೂ ತಯಾರಾಗಿತ್ತು. ಈ ಚಿತ್ರ ಸಹ ಆಗಸ್ಟ್ 26ರಂದು ಹೊರದೇಶಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವು ಮೊನ್ನೆ ಸೆ. 04ರಂದು ಭಾರತದಲ್ಲಿ ಬಿಡುಗಡೆಯಾಯಿತು. ‘ಟಾಕ್ಸಿಕ್’ ಭಾರತದ ಮೊದಲ ಪ್ಯಾನ್ ವರ್ಲ್ಡ್ ಚಿತ್ರವಾದ್ದರಿಂದ, ಈ ಚಿತ್ರಕ್ಕೆ ಹೇಗೆ ಪ್ರತಿಕ್ರಿಯೆ ಸಿಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ‘ಟಾಕ್ಸಿಕ್’ ಚಿತ್ರದ ಇಂಗ್ಲೀಷ್ ಅವತರಣಿಕೆ ನಿರಾಸೆ ಮೂಡಿಸಿದೆ.
‘ಟಾಕ್ಸಿಕ್’ನ ಇಂಗ್ಲೀಷ್ ಅವತರಣಿಕೆಯು ಭಾರತದ ನಾಲ್ಕು ನಗರಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಬೆಂಗಳೂರು, ಗುರುಗ್ರಾಮ, ನೋಯ್ಡಾ ಮತ್ತು ಮುಂಬೈನಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು, ಮೊದಲ ದಿನ ಬರೀ 11 ಪ್ರದರ್ಶನಗಳು ನಡೆದವು ಎಂದು ಹೇಳಲಾಗತ್ತಿದೆ. ಈ 11 ಪ್ರದರ್ಶನಗಳಿಂದ ಕೇವಲ 450 ಟಿಕೆಟ್‍ಗಳು ಮಾರಾಟವಾಗಿದ್ದು, ಒಂದು ಲಕ್ಷದ 40 ಸಾವಿರ ಮಾತ್ರ ಗಳಿಕೆ ಆಗಿದೆಯಂತೆ.
‘ಟಾಕ್ಸಿಕ್’ ಚಿತ್ರವನ್ನು KVN ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‍ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳಡಿ KVN ಮತ್ತು RSY ನಿರ್ಮಿಸಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್ ದಾಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹಾಲಿವುಡ್ ನಟ ಕೈಲ್ ಪಾಲ್, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


